ಭಾನುವಾರ, ಜನವರಿ 19, 2020
28 °C

ಕಿರು ಅರಣ್ಯ ಅಭಿವೃದ್ಧಿ ಯೋಜನೆ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಯಾರಣ್ಯಗಳತ್ತ ಜನರು ಹೋಗುವುದನ್ನು ತಡೆಯುವ ಉದ್ದೇಶದಿಂದ ಕಿರು ಅರಣ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಈ ಸಲುವಾಗಿಯೇ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಇಲ್ಲಿ ಹೇಳಿದರು.ಅಭಯಾರಣ್ಯಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗುತ್ತಿರುವ ಕಾರಣದಿಂದ ವನ್ಯಜೀವಿಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಅವು ನಾಡಿನತ್ತ ಬರುತ್ತಿದ್ದು, ಇದನ್ನು ತಡೆಯಲು ಜನರು ಅರಣ್ಯದತ್ತ ಹೋಗದಂತೆ ಮಾಡಲು ಪ್ರತ್ಯೇಕವಾಗಿ ಕಿರು ಅರಣ್ಯ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕಿರು ಅರಣ್ಯ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ಮಾಡುವಂತೆ ಮಾಡುವುದು ಮತ್ತು ಅದಕ್ಕೆ ಪೂರಕವಾಗಿ ಮೂಲಸೌಲಭ್ಯ ಕಲ್ಪಿಸುವ ಕೆಲಸವನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಅಭಯಾರಣ್ಯಗಳಿಗೆ ಜನರ ಪ್ರವೇಶವನ್ನು ನಿಷೇಧಿಸಿದರೂ ಆಶ್ಚರ್ಯ ಇಲ್ಲ. ಹೀಗಾಗಿ ಅದಕ್ಕೆ ಪ್ರತ್ಯೇಕ ತಯಾರಿ ನಡೆಸುತ್ತಿದ್ದು, ಕಿರು ಅರಣ್ಯದಲ್ಲೇ ಅರಣ್ಯದ ವಾತಾವರಣ ನಿರ್ಮಿಸಲಾಗುವುದು. ಕಾರ್ಪೂರೇಟ್ ವಲಯದ ಸಿಬ್ಬಂದಿ ಇತ್ತೀಚೆಗೆ ಅರಣ್ಯದತ್ತ ತೆರಳುವುದು ಜಾಸ್ತಿಯಾಗಿದೆ ಎಂದರು.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿನ ಸಿಂಹ, ಚಿರತೆ ಸೇರಿದಂತೆ ಇತರ ಪ್ರಾಣಿಗಳಿಗೆ ಪ್ರತ್ಯೇಕ ವಲಯಗಳನ್ನು ನಿರ್ಮಿಸಬೇಕಾಗಿದ್ದು, ಇದಕ್ಕೆ ಸುಮಾರು ರೂ 50 ಕೋಟಿ ಖರ್ಚು ಮಾಡಲಾಗುವುದು. ಮೃಗಾಲಯ ಅಭಿವೃದ್ಧಿ ಪ್ರಾಧಿಕಾರ ಈ ಕೆಲಸ ನಿರ್ವಹಿಸಲಿದೆ ಎಂದು ಹೇಳಿದರು.ತಂತಿಬೇಲಿ: ವನ್ಯಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯುವ ಉದ್ದೇಶದಿಂದ ಕೊಡಗು- ಬಂಡೀಪುರ ಮಧ್ಯೆ ಸುಮಾರು 360 ಕಿ.ಮೀ ಉದ್ದದ ತಂತಿ ಬೇಲಿಯನ್ನು ಹಾಕಿದ್ದು, ಇದೇ ರೀತಿಯ ತಂತಿ ಬೇಲಿಯನ್ನು ಆನೆಕಲ್- ಚಾಮರಾಜನಗರದವರೆಗಿನ 200 ಕಿ.ಮೀ ವ್ಯಾಪ್ತಿಯಲ್ಲೂ ಅಳವಡಿಸಲಾಗುವುದು. ಇದಕ್ಕೆ ಸಮೀಕ್ಷೆ ಕೂಡ ಮಾಡಿಸಲಾಗಿದೆ ಎಂದು ಅವರು ವಿವರಿಸಿದರು.ಬಿದಿರು: ಅರಣ್ಯದಲ್ಲಿ ಬಿದಿರಿನ ಕೊರತೆ ಹೆಚ್ಚಾಗಿರುವ ಕಾರಣದಿಂದ ಆನೆಗಳು ನಾಡಿಗೆ ಬರುತ್ತಿವೆ. ತ್ವರಿತವಾಗಿ ಬೆಳೆಯುವಂತಹ ಬಿದಿರು ಆಸ್ಟ್ರೇಲಿಯಾದಲ್ಲಿದ್ದು, ಅದರ ತಳಿಯನ್ನು ರಾಜ್ಯದ ಕಾಡಿನಲ್ಲೂ ಬೆಳೆಸುವ ಚಿಂತನೆ ನಡೆದಿದೆ ಎಂದರು.ಕರ್ನಾಟಕ- ಕೇರಳದ ಗಡಿಭಾಗದ ಕೊಡಗು ಜಿಲ್ಲೆಯಲ್ಲಿ ಏಲಕ್ಕಿ ತೋಟ ಇರುವ 7000 ಎಕರೆ `ಜಮ್ಮಾ ಮಲೆ~ ಜಾಗವನ್ನು ಸ್ಥಳೀಯ ಜನರೇ ಅರಣ್ಯ ಇಲಾಖೆಗೆ ನೀಡಲು ಮುಂದೆ ಬಂದಿದ್ದು, ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಈ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

 

ಪ್ರತಿಕ್ರಿಯಿಸಿ (+)