ಶುಕ್ರವಾರ, ಮೇ 14, 2021
25 °C

ಕಿರ್ಲೋಸ್ಕರ್ ಕಾರ್ಮಿಕರಿಗೆ ಬಾಕಿ ಹಣ ಸಂದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹನ್ನೆರಡು ವರ್ಷಗಳ ಹಿಂದೆ ಮುಚ್ಚಿ ಹೋಗಿದ್ದ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ ಕಾರ್ಮಿಕರಿಗೆ ಬರಬೇಕಿದ್ದ ಬಾಕಿ ಹಣದ ಶೇ. 75ನ್ನು 2012ರ ಮೇ 10ರಿಂದ ನವೆಂಬರ್ 9ರವರೆಗೆ ನೀಡುವಂತೆ ಹೈಕೋರ್ಟ್ ಆದೇಶಿಸಿದೆ ಎಂದು ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ ಕಾರ್ಮಿಕರ ಹಿತರಕ್ಷಣಾ ಸಂಘದ ವಕೀಲ ಮಲ್ಲಿಕಾರ್ಜುನ್ ಜಿ. ಕಾಂಟ್ರೆಕ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಹರಿಹರದ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯು 2001ರ ಜ. 1ರಂದು ಶಾಶ್ವತವಾಗಿ ಮುಚ್ಚಿತ್ತು. ಹೈಕೋರ್ಟ್ 2004ರ ಏ. 1ರಂದು ಕಿರ್ಲೋಸ್ಕರ್ ಕಂಪೆನಿಗೆ ಸಮಾಪನ ಅಧಿಕಾರಿ (ಅಫೀಷಿಯಲ್ ಲಿಕ್ವಿಡೇಟರ್) ನೇಮಿಸಿ ಕಂಪೆನಿಯನ್ನು ಸಂಪೂರ್ಣವಾಗಿ ಮುಚ್ಚಲಾಯಿತು. 2005ರ ಮೇ 10ರಂದು ಕಂಪೆನಿಯ ಆಸ್ತಿಯನ್ನು ರೂ70 ಕೋಟಿಗೆ ಹರಾಜು ಮಾಡಲಾಯಿತು.ಆದರೆ, ಬಿಡ್‌ದಾರರು ಹಣ ಸಂದಾಯ ಮಾಡದ ಕಾರಣ 2006ರ ನ. 16ರಂದು ಮರುಹರಾಜು ಪ್ರಕ್ರಿಯೆಗೆ ಹೈಕೋರ್ಟ್ ಆದೇಶ ನೀಡಿತು ಎಂದರು.2008ರ ಡಿಸೆಂಬರ್ 2ರಂದು ರೂ45 ಕೋಟಿಗೆ ಮರುಹರಾಜು ಆಯಿತು. ಆದರೆ, ಸದರಿ ಹರಾಜನ್ನು ವಾಸುದೇವ್ ಹೋವಳೆ ನೇತೃತ್ವದಲ್ಲಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆ ಕಾರ್ಮಿಕರ ಹಿತರಕ್ಷಣಾ ಸಂಘವು ಪ್ರಶ್ನಿಸಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿತು. ನಂತರ ಮರುಹರಾಜಿನಲ್ಲಿ ಮೆ. ನಿಜನೈ ಟ್ರೇಡಿಂಗ್ ಕಂಪೆನಿಯು ರೂ65 ಕೋಟಿಗೆ ಆಸ್ತಿ ಪಡೆದುಕೊಂಡಿತು.ಸದರಿ ಬಿಡ್ ಮಾಡಿದ ಕಂಪೆನಿಯು 2009ರ ಫೆ. 28ರಂದು ಹರಾಜಿನ ಸಂಪೂರ್ಣ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡಿದೆ. ಸಮಾಪನ ಅಧಿಕಾರಿ ಎಲ್ಲ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡಲು ಕ್ರಮ ಕೈಗೊಂಡಿದ್ದಾರೆ. ಕಾರ್ಮಿಕರು ಕಂಪೆನಿ ಕಾಯ್ದೆಯ ಅರ್ಜಿ ನಮೂನೆ 138ನ್ನು ಸಲ್ಲಿಸಿ ಹಣ ಪಡೆಯಬೇಕಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ವಾಸುದೇವ್ ಹೋವಳೆ, ಕೆ. ನಾಗರಾಜ್, ವಕೀಲ ಆರ್.ಬಿ. ಕಾಂಟ್ರಾಕ್ಟರ್, ಉಪಾಧ್ಯಕ್ಷ ವೆಂಕಟರಾಮ ರೆಡ್ಡಿ, ಎ.ಎಸ್. ನರಸಿಂಹಮೂರ್ತಿ, ಎಲ್ಲಪ್ಪ ಭೂತೆ ಮುಂತಾದವರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.