ಶುಕ್ರವಾರ, ಮೇ 20, 2022
21 °C
ಡಾ.ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ `ರಾಜಕೀಯ ಸಂಗೀತ'

ಕುಟುಂಬ ಸದಸ್ಯರನ್ನು ಸೇರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರ ಸ್ಮರಣಾರ್ಥ ಸ್ಥಾಪಿಸಿರುವ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ  ಹಾನಗಲ್ ಕುಟುಂಬದ ಸದಸ್ಯರನ್ನು ಟ್ರಸ್ಟಿಯಾಗಿ ತೆಗೆದುಕೊಳ್ಳಬೇಕು ಹಾಗೂ ಗಂಗಜ್ಜಿಯ ವಸ್ತು ಸಂಗ್ರಹಾಲಯಕ್ಕೆ ಗುರುಕುಲದಲ್ಲಿ ಸ್ಥಳಾವಕಾಶ ನೀಡಬೇಕು ಎಂದು ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ  ಮನೋಜ ಹಾನಗಲ್ ಆಗ್ರಹಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ ಇರುವುದು ಶಾಸ್ತ್ರೀಯ ಸಂಗೀತಕ್ಕಾಗಿ ಆದರೆ ರಾಜಕಾರಣಿಗಳು ಟ್ರಸ್ಟ್ ನೆಪದಲ್ಲಿ `ರಾಜಕೀಯ ಸಂಗೀತ' ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸರ್ಕಾರ  ರಾಜ್ಯದ ಗಣ್ಯಮಾನ್ಯರ ಹೆಸರಲ್ಲಿ 25ಕ್ಕೂ ಹೆಚ್ಚು ಟ್ರಸ್ಟ್‌ಗಳಿವೆ. ಪ್ರತಿಯೊಂದು ಟ್ರಸ್ಟ್‌ನಲ್ಲಿಯೂ ಅವರ ಕುಟುಂಬದ ಕನಿಷ್ಠ ಒಬ್ಬರಾದರೂ ಸದಸ್ಯರನ್ನು ಸೇರಿಸಿಕೊಳುತ್ತಾರೆ. ಆದರೆ ಗಂಗಜ್ಜಿ ಗುರುಕುಲ ಟ್ರಸ್ಟ್‌ನಲ್ಲಿ ಹಾನಗಲ್ ಕುಟುಂಬದ ಯಾವೊಬ್ಬ ಸದಸ್ಯರನ್ನೂ ಸೇರ್ಪಡೆ ಮಾಡಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ, ಉಳಿದಂತೆ ಐವರು ಅಧಿಕಾರಿಗಳು  ಮಾತ್ರವೇ ಟ್ರಸ್ಟ್‌ನ ಸದಸ್ಯರಾಗಿದ್ದಾರೆ ಎಂದು ದೂರಿದರು.ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರದ ಮುಖಾಂತರ ಮನವಿ ಮಾಡಿಕೊಳ್ಳಲಾಗಿದೆ. ಡಾ.ಗಂಗೂಬಾಯಿ ಹಾನಗಲ್ ಟ್ರಸ್ಟ್‌ನಲ್ಲಿ ಅವರ ಪುತ್ರರಾದ ಬಾಬುರಾವ್ ಹಾನಗಲ್ ಹಾಗೂ ನಾರಾಯಣ ರಾವ್ ಹಾನಗಲ್ ಅವರನ್ನು ಟ್ರಸ್ಟಿಗಳಾಗಿ ಸರ್ಕಾರ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ಯಾವ ಮಟ್ಟದಲ್ಲಿ ಗುರುಕುಲ ಬೆಳೆಯಬೇಕಾಗಿತ್ತೋ ಆ ಮಟ್ಟದಲ್ಲಿ ಗುರುಕುಲ ಬೆಳೆದಿಲ್ಲ.

ಇದಕ್ಕೆ ಮುಖ್ಯ ಕಾರಣ  ಸಂಗೀತಗಾರರು, ಸಂಗೀತ ಶಿಕ್ಷಕರು, ಸಂಗೀತ ತಜ್ಞರು ಗುರುಕುಲ ಸಮಿತಿಯಲ್ಲಿ ಇಲ್ಲದೇ ಇರುವುದು. ಹೀಗಾಗಿ ಅನುಭವಿ ಹಾಗೂ ಯೋಗ್ಯವಾದ ಜನರನ್ನು ಗುರುಕುಲದ 10 ಸದಸ್ಯರ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.ವಸ್ತು ಸಂಗ್ರಹಾಲಯಕ್ಕೆ ಸ್ಥಳಾವಕಾಶ ನೀಡಿ: ಗಂಗಜ್ಜಿ ನಿವಾಸದಲ್ಲಿ ಇದ್ದ ಭಾರತೀಯ ಶಾಸ್ತ್ರೀಯ ಸಂಗೀತ ವಸ್ತು ಸಂಗ್ರಹಾಲಯವನ್ನು ಸ್ಥಳಾಂತರಿಸಲು ಇದುವರೆಗೂ ಸರ್ಕಾರ ಸ್ಥಳ ನೀಡಿಲ್ಲ.  ಗಂಗಜ್ಜಿ 97 ವರ್ಷ ಬದುಕಿ ಸಾಧಿಸಿದ ಎಲ್ಲ ವಸ್ತುಗಳು ಅವರ ಸಮಾಧಿಯ ಹತ್ತಿರವೇ ಇರಬೇಕು ಎನ್ನುವುದು ಕುಟುಂಬದ ಸದಸ್ಯರ ಇಚ್ಛೆಯಾಗಿದ್ದು ಬೆಲೆ ಕಟ್ಟಲಾಗದ  ಅಮೂಲ್ಯ ವಸ್ತುಗಳನ್ನು ಕುಟುಂಬದ ಸದಸ್ಯರು ನೀಡುತ್ತಿದ್ದು ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ ಎಂದು ದೂರಿದರು.ಸಮಾಧಿ ಸಂರಕ್ಷಿಸಿ

ಗಂಗಜ್ಜಿ ನಿಧನವಾಗಿ ನಾಲ್ಕು ವರ್ಷ ಕಳೆದರೂ ಗುರುಕುಲದಲ್ಲಿ ಗಂಗಜ್ಜಿಯ ಸಮಾಧಿಗೆ ಮೇಲ್ಛಾವಣಿ ಹಾಕಿಲ್ಲ, ಸಮಾಧಿ ಮೇಲೆ ಗಂಗೂಬಾಯಿ ಹಾನಗಲ್ ಅವರ ಜನನ ಮತ್ತು ಮರಣದ ದಿನಾಂಕ ಕೂಡ ಬರೆದಿಲ್ಲ. ವರ್ಷಕ್ಕೆ ರೂ 1 ಕೋಟಿ ಅನುದಾನವನ್ನು ಗುರುಕುಲ ಟ್ರಸ್ಟ್ ಪಡೆಯುತ್ತಿದ್ದರೂ ಕೂಡ ಗಂಗಜ್ಜಿ ಸಮಾಧಿ ರಕ್ಷಣೆ ಮಾಡದೇ ಇರುವುದು ವಿಷಾದಕರ ಎಂದು ಅವರು ಆಕ್ಷೇಪಿಸಿದರು.ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಗುರುಕುಲದ ಆಡಳಿತಾಧಿಕಾರಿ ಬದರೀನಾಥ ಲಕ್ಷ್ಮೇಶ್ವರ ಇವರಿಗೆ ಅನೇಕ ಬಾರಿ ಈ ವಿಷಯವನ್ನು ಮೌಖಿಕವಾಗಿ ತಿಳಿಸಿದ್ದರೂ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದು ಅತ್ಯಂತ ದುಃಖದ ಸಂಗತಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.