ಶುಕ್ರವಾರ, ಫೆಬ್ರವರಿ 26, 2021
18 °C

ಕುಡಿಯಲು ಯೋಗ್ಯವಲ್ಲದ ನೀರೇ ಗತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯಲು ಯೋಗ್ಯವಲ್ಲದ ನೀರೇ ಗತಿ!

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ, ಪಿ.ಹೊಸಹಳ್ಳಿ, ಬಿ.ಅಗ್ರಹಾರ, ಮೊಗರಹಳ್ಳಿ ಮಂಟಿ ಮತ್ತು ಹೊಸ ಆನಂದೂರು ಗ್ರಾಮಗಳಿಗೆ ಬೆಳಗೊಳ ಪಂಪ್‌ಹೌಸ್‌ನಿಂದ ಸರಬರಾಜು ಮಾಡುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ ಎಂಬ ಅಂಶ ಆರೋಗ್ಯ ಕೇಂದ್ರದ ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದೆ.  ಕಾಲುವೆಯ ನೀರನ್ನು ನೇರವಾಗಿ ಈ ಗ್ರಾಮಗಳ ಟ್ಯಾಂಕ್‌ಗಳಿಗೆ ತುಂಬಿಸಲಾಗುತ್ತಿದ್ದು ಇದರಿಂದ ಕಾಲರಾ, ಕರುಳು ಬೇನೆ, ಅರಿಶಿನ ಕಾಮಾಲೆಯಂತಹ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ರವೀಂದ್ರ ತಹಶೀಲ್ದಾರ್ ಮತ್ತು ತಾ.ಪಂ. ಇಓ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ ಮಾ.3ರಂದು ವರದಿ ಮಾಡಿದ್ದಾರೆ. ಕುಡಿಯುವ ನೀರನ್ನು 4 ಹಂತಗಳಲ್ಲಿ ಶುದ್ಧೀಕರಿಸಬೇಕು. ಆದರೆ ಇಲ್ಲಿ ಕನಿಷ್ಠ ಟ್ಯಾಂಕುಗಳ ಶುದ್ಧೀಕರಣ ಕೂಡ ನಡೆಯುತ್ತಿಲ್ಲ. ತ್ಯಾಜ್ಯ ಮಿಶ್ರಿತ ನೀರಿನ ಸೇವನೆಯಿಂದ 6 ಮಂದಿಗೆ ವಾಂತಿ, ಭೇದಿ ಮತ್ತು ಮೊಗರಹಳ್ಳಿ ಗ್ರಾಮದ ರಾಮಲಮ್ಮ ಎಂಬವರಿಗೆ ಕಾಲರಾ ಸೋಂಕು ತಗುಲಿದೆ ಎಂದು ಹೇಳಿದ್ದಾರೆ.  30 ಮಂದಿಗೆ ಜಾಂಡೀಸ್: ಪಾಲಹಳ್ಳಿ ಗ್ರಾಮ ಒಂದರಲ್ಲೇ 30ಕ್ಕೂ ಹೆಚ್ಚು ಮಂದಿಗೆ ಜಾಂಡೀಸ್ ತಗುಲಿದೆ. ಪಾಲಹಳ್ಳಿ ಪ್ರಾಥಮಿಕ ಕೇಂದ್ರದಲ್ಲಿ 15 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಮತ್ತೆ ಕೆಲವರು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗೊಳ ಪಂಪ್‌ಹೌಸ್‌ನಿಂದ ಮೈಸೂರಿಗೆ ಕಚ್ಚಾ ನೀರು ಸರಬರಾಜು ಮಾಡುತ್ತಿದ್ದು, ಅಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಡಾ.ರವೀಂದ್ರ ಹೇಳಿದ್ದಾರೆ.  ಪಾಲಹಳ್ಳಿಯಲ್ಲಿ ರೂ.1.30 ಕೋಟಿ ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಿದೆ. ಕಾಮಗಾರಿ ಮುಗಿದು 6 ತಿಂಗಳಾದರೂ ನೀರು ತುಂಬಿಸುವ, ಶುದ್ಧೀಕರಣ ಮಾಡುವ ಪ್ರಕ್ರಿಯೆ ಶುರುವಾಗಿಲ್ಲ. ರಾಜಕೀಯ ಮೇಲಾಟದಿಂದ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಎ.ಶ್ರೀನಿವಾಸ್ ಇತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.