ಶುಕ್ರವಾರ, ಜೂನ್ 18, 2021
20 °C

ಕುಡಿಯುವ ನೀರು: ತೊಂದರೆಯಾಗದಂತೆ ನಿಗಾ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಡಿಯುವ ನೀರು ವ್ಯವಸ್ಥೆ ವಿಚಾರದಲ್ಲಿ ಬರಪೀಡಿತ ಹಾಗೂ ಬರಪೀಡಿತವಲ್ಲದ ಪ್ರದೇಶ ಎಂಬ ತಾರತಮ್ಯ ಸಲ್ಲದು. ಹರಿಹರ, ಚನ್ನಗಿರಿ ತಾಲ್ಲೂಕಿನಲ್ಲಿಯೂ ಕುಡಿಯುವ ನೀರಿಗೆ ತೊಂದರೆ ಇದೆ. ಕೊಳವೆಬಾವಿಗಳು ಬತ್ತಿವೆ. ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಎಲ್ಲ ಪ್ರದೇಶವನ್ನು ಸಹ ಸಮನಾಗಿ ಕಂಡು, ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು.ಉಪಾಧ್ಯಕ್ಷೆ ಪ್ರೇಮಾ ಸಿದ್ದೇಶ್, ವಿವಿಧ ಹಳ್ಳಿಗಳಲ್ಲಿ ದೂರದ ಹಳ್ಳಿಗಳಿಗೆ ಹೋಗಿ ನೀರು ತರುವಂಥ ಸ್ಥಿತಿ ಇದೆ. ಕೊಳವೆಬಾವಿಗಳನ್ನು ಕೂಡಲೇ ದುರಸ್ತಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು ಎಂದು ಸೂಚಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ  ಎಚ್.ಎಸ್. ವಿಜಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಜಗಳೂರು, ಹರಪನಹಳ್ಳಿ, ದಾವಣಗೆರೆ ಹಾಗೂ ಹೊನ್ನಾಳಿ ತಾಲ್ಲೂಕುಗಳನ್ನು `ಬರಪೀಡಿತ~ ಎಂದು ಗುರುತಿಸಲಾಗಿದೆ. ಎಲ್ಲ ತಾಲ್ಲೂಕುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿಯೂ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ.ಮೊದಲ ಹಂತದಲ್ಲಿ, 519 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಈ ಪೈಕಿ, 151 ಗ್ರಾಮಗಳಿಗೆ ಪ್ರಥಮ ಆದ್ಯತೆಯಲ್ಲಿ ನೀರಿ ಪೂರೈಕೆಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಪಂಚಾಯ್ತಿಯ ರೂ 2.30 ಕೋಟಿ ಸೇರಿದಂತೆ ರೂ4.30 ಕೋಟಿ ಹಣವಿದೆ ಎಂದು ತಿಳಿಸಿದರು.ಪ್ರತಿ ತಾಲ್ಲೂಕಿಗೂ ನೋಡೆಲ್ ಅಧಿಕಾರಿ ನೇಮಿಸಲಾಗಿದೆ. ಅವರು ಪ್ರತಿ ಶನಿವಾರ ಗ್ರಾಮಗಳಿಗೆ ಭೇಟಿ ನೀಡಿ, ನೀರು, ಮೇವು, ಜಾನುವಾರಗಳಿಗೆ ರೋಗರುಜಿನ, ಔಷಧಿ ಪ್ರಮಾಣ ಮತ್ತಿತರ ಅಂಶಗಳನ್ನು ಪರಿಶೀಲಿಸಿ ಜಿ.ಪಂ.ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಗುರುಸಿದ್ದಾಪುರ ಗ್ರಾಮದಲ್ಲಿ ವಾರದ ಒಳಗೆ ಗೋಶಾಲೆ ತೆರೆಯಲಾಗುವುದು. ಇದಕ್ಕಾಗಿ ರೂ 2.25 ಲಕ್ಷ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

ದಾವಣಗೆರೆ ತಾಲ್ಲೂಕಿಗೆ 49, ಹರಿಹರಕ್ಕೆ 35, ಹೊನ್ನಾಳಿಯಲ್ಲಿ 37, ಚನ್ನಗಿರಿಯಲ್ಲಿ 39, ಹರಪನಹಳ್ಳಿ ತಾಲ್ಲೂಕಿಗೆ 16 ವಾರಗಳ ಕಾಲ ಮೇವಿಗೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಜಿಪಂ ಸಿಇಒ ಗುತ್ತಿ ಜಂಬುನಾಥ್, ಕುಡಿಯುವ ನೀರಿನ ವಿಚಾರದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಭಾಗಕ್ಕೂ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡುವಂತಹ ಸ್ಥಿತಿ ಬಾರದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಎಲ್ಲ ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆ ಕೇಳಿಬರುತ್ತಿದೆ. ಟ್ರಾನ್ಸ್‌ಫಾರ್ಮರ್ ಬದಲಾವಣೆ ವಿಳಂಬ ಆಗುತ್ತಿದೆ ಎಂದು ರೈತರು ತಿಳಿಸುತ್ತಿದ್ದಾರೆ. ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗೆ ಸೂಚಿಸಿದರು.ಕೈಗಾರಿಕಾ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಬಿಕಾ ರಾಜಪ್ಪ ಮಾತನಾಡಿ, ಪ್ರಸ್ತುತ ಹಳ್ಳಿಗಳಲ್ಲಿ ಪಂಪ್‌ಸೆಟ್‌ಗಳಿಗೆ 3 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಮನಬಂದ ಸಮಯದಲ್ಲಿ ನೀಡಬಾರದು. ನಿಗದಿಯಾದ ಸಮಯ ಪಾಲಿಸಬೇಕು ಎಂದು ಅಧಿಕಾರಿಗೆ ತಿಳಿಸಿದರು.ಯಾವುದೇ ಸಭೆ, ಸಮಾರಂಭಗಳಲ್ಲಿ ಆಹಾರ ಪದಾರ್ಥ ಅಪವ್ಯಯ ಆಗುವುದಕ್ಕೆ ಕಡಿವಾಣ  ಹಾಕಬೇಕು. ಈ ಬಗ್ಗೆ ಅರಿವು ಮೂಡಿಸಲು ವ್ಯವಸ್ಥಿತಿ ಕಾರ್ಯಕ್ರಮ ರೂಪಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೆ. ರಾಮೇಶ್ವರಪ್ಪ ಅವರಿಗೆ ಸೂಚಿಸಿದರು. ಮೊದಲಿಗೆ ಬಿಸಿಯೂಟ ಮೊದಲಾದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಆಹಾರ ಅಪವ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದರು.ಶಾಲೆಗಳಲ್ಲಿ ಆಹಾರ ಪದಾರ್ಥ `ರುಚಿ ಇಲ್ಲದಿದ್ದರೆ~ ಮಾತ್ರ ವ್ಯರ್ಥವಾಗುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ, ಜಯಲಕ್ಷ್ಮೀ, ತಾಪಂ ಇಒ ಪ್ರಭುದೇವ್, ಮುಖ್ಯ ಯೋಜನಾಧಿಕಾರಿ ಜಿ.ಆರ್. ಓಂಕಾರಪ್ಪ, ಉಪ ಕಾರ್ಯದರ್ಶಿ ಜಿ.ಎಸ್. ಷಡಾಕ್ಷರಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.