ಶನಿವಾರ, ಮೇ 15, 2021
24 °C

ಕುಡಿಯುವ ನೀರು ಪೂರೈಕೆ- ಡಿಸಿ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೂನ್ 15ರವರೆಗೂ ಕಠಿಣ ದಿನಗಳನ್ನು ಎದುರಿಸಬೇಕಾಗುತ್ತದೆ. ಎಲ್ಲದಕ್ಕೂ ಸಿದ್ಧರಾಗಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಗ್ರಾಮದಲ್ಲಿ ನೀರಿಲ್ಲ ಎಂಬ ದೂರುಗಳು ಬಂದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಎಚ್ಚರಿಸಿದರು.ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರದಿಂದ ಬರಬೇಕಾಗಿರುವ ಅನುದಾನ ಪಡೆಯಲು ಪ್ರಯತ್ನ ನಡೆದಿದೆ. ಸಚಿವ ಶೆಟ್ಟರ್ ಬುಧವಾರ ಈ ಸಂಬಂಧ ನವದೆಹಲಿಯಲ್ಲಿ ಕೇಂದ್ರದೊಂದಿಗೆ ಚರ್ಚಿಸಲಿದ್ದಾರೆ ಎಂದರು.ಕೆಲ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವ ಬರುವುದು ತಡವಾಗಿರುವ ಕಾರಣ ಭೂ ಕಂದಾಯ ಮನ್ನಾ ಆದೇಶ ಹೊರಡಿಸುವುದು ವಿಳಂಬವಾಗಿದೆ. ಪ್ರಸ್ತಾವ ಬಂದ ಕೂಡಲೇ ಆದೇಶ ಹೊರಬೀಳಲಿದೆ. ಸಕಾಲ ಯೋಜನೆ ಅನುಷ್ಠಾನಕ್ಕೆ ಮೂರು ತಿಂಗಳ ಕಾಲ ಹೆಚ್ಚಿನ ಕಾಳಜಿ ವಹಿಸಿ. ಬರುವ ದಿನಗಳಲ್ಲಿ ಇದರಿಂದ ಕಡತಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು. ಸಕಾಲ ಯೋಜನೆಯಡಿ ಶೇ 100ರಷ್ಟು ಸಾಧನೆ ಮಾಡುವ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.ವಿದ್ಯುತ್ ಕೊರತೆಯಿಂದ ಪಂಪ್‌ಸೆಟ್ ಚಾಲನೆ ಮಾಡಲು ಸಾಧ್ಯವಾಗದಿದ್ದರೆ ಡೀಸೆಲ್ ಜನರೇಟರ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಹತ್ತು ಲಕ್ಷ ರೂಪಾಯಿವರೆಗಿನ ಕಾಮಗಾರಿಗಳನ್ನು ಮೇ ತಿಂಗಳವರೆಗೂ ಟೆಂಡರ್ ಇಲ್ಲದೆ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು.ಸಕಾಲ, ಬರ ಪರಿಸ್ಥಿತಿ, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಕೆ ವಿಷಯಗಳ ಬಗ್ಗೆ ಸುಮಾರು ಮೂರು ಗಂಟೆ ಕಾಲ ಮುಖ್ಯಮಂತ್ರಿಗಳು ಸಂವಾದ ನಡೆಸಿದರು.

`ಪ್ರಜಾವಾಣಿ~ಗೆ ಸಿಎಂ ಶ್ಲಾಘನೆತುಮಕೂರು ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ `ಪ್ರಜಾವಾಣಿ~ಯಲ್ಲಿ ಬಂದಿರುವ ವರದಿಯನ್ನು ಓದಿದ್ದೀರಾ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಆ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಕೆ.ರಾಜು ಅವರನ್ನು ವಿಡಿಯೊ ಸಂವಾದದಲ್ಲಿ ಪ್ರಶ್ನಿಸಿದರು.ಸ್ವಲ್ಪಹೊತ್ತು ತಬ್ಬಿಬ್ಬಾದ ರಾಜು, ಸಾವರಿಸಿಕೊಂಡು `ಓದಿದ್ದೇನೆ~ ಎಂದರು. `ಪ್ರಜಾವಾಣಿ~ ರಾಜ್ಯಮಟ್ಟದ ಒಳ್ಳೆಯ ಪತ್ರಿಕೆ. ಅದರಲ್ಲಿ ಬರುವ ವರದಿಗಳಿಗೆ ಸ್ಪಂದಿಸಬೇಕು. ಒಂದು ವೇಳೆ ವರದಿ ಸತ್ಯಕ್ಕೆ ದೂರವಾಗಿದ್ದರೆ ಸ್ಪಷ್ಟನೆ ನೀಡಿ ಎಂದು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.