ಗುರುವಾರ , ಮೇ 13, 2021
40 °C

ಕುತೂಹಲದ ವಸ್ತು (ಚಿತ್ರ: ಮೌಸಮ್)

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಭಯೋತ್ಪಾದಕರ ಕರಿನೆರಳು, ಕೋಮು ಗಲಭೆಗಳ ಭೀತಿಯ ನಡುವೆಯೇ ಋತುಮಾನಕ್ಕೆ ಬದಲಾಗುವ ಪ್ರಕೃತಿಯಂತೆ ಬದಲಾವಣೆಗೆ ಪಕ್ಕಾಗುವ ಪ್ರೇಮ ಕಥೆಯ `ಮೌಸಮ್~ ಚಿತ್ರ (ನಿರ್ದೇಶನ: ಪಂಕಜ್ ಕಪೂರ್)ಈ ವಾರ ತೆರೆಗೆ ಕಂಡಿದೆ.ಭಯೋತ್ಪಾದಕರ ಭೀತಿಯಲ್ಲೇ ಜೀವನ ನಡೆಸುತ್ತಿದ್ದ ಅಯಾತ್ (ಸೋನಂ ಕಪೂರ್) ಎಂಬ ಕಾಶ್ಮೀರಿ ಸುಂದರಿ ಹಾಗೂ ಅವಳ ಕುಟುಂಬ ಊರು, ಮನೆಯನ್ನು ತೊರೆದು ಪಂಜಾಬ್‌ನಲ್ಲಿರುವ ಸಂಬಂಧಿಕರ ಮನೆಗೆ ಬಂದು ನೆಲೆಸುತ್ತದೆ.

 

ಅಲ್ಲಿನ `ಹಳ್ಳಿಹೈದ~ ಹ್ಯಾರಿ (ಶಾಹೀದ್ ಕಪೂರ್) ಅಯಾತ್‌ಳ ರೂಪಕ್ಕೆ ಮನಸೋಲುತ್ತಾನೆ. ಆದರೆ ವಿಧಿಯ ನಿರ್ಧಾರವೇ ಬೇರೆ ಇರುತ್ತದೆ. ಬಾಬರಿ ಮಸೀದಿ ಧ್ವಂಸದ ನಂತರ ಅಯಾತ್ ಕುಟುಂಬ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತದೆ.

 

ಈ ನಡುವೆ ಹ್ಯಾರಿ ಸ್ಕಾಟ್‌ಲೆಂಡ್‌ಗೆ ತೆರಳಿ ಅಲ್ಲಿ ವಾಯುಸೇನೆಯ ಪೈಲೆಟ್ ಆಗಿ, ಅಯಾತ್‌ಳನ್ನು ಭೇಟಿಯಾಗಲು ಬರುತ್ತಾನೆ. ಆದರೆ ಕಾರ್ಗಿಲ್ ಯುದ್ಧ ಈ ಇಬ್ಬರ ಭೇಟಿಗೆ ಅಡ್ಡಿಯಾಗುತ್ತದೆ. ಹೀಗೇ ದೇಶದಲ್ಲಿ ನಡೆದ ಭಯೋತ್ಪಾದಕ ಕೃತ್ಯ ಅಥವಾ ಕೋಮುಗಲಭೆ ಖಳನಾಯಕನಂತೆ ಪ್ರೇಮಿಗಳನ್ನು ಕಾಡುತ್ತವೆ.ಪಂಜಾಬ್‌ನ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ಪಂಕಜ್‌ಕಪೂರ್ ಗೆದ್ದಿದ್ದಾರೆ. ಆದರೆ ಅಲ್ಲಿ ನಡೆಯುವ ಘಟನೆಗಳನ್ನು ಹೇಳಲು ಹಳೆಯ ಸಿದ್ಧಸೂತ್ರಕ್ಕೇ ಕಟ್ಟುಬಿದ್ದಿದ್ದಾರೆ.ನಾಯಕ-ನಾಯಕಿ ನಡುವೆ ಪ್ರೇಮಾಂಕುರವಾಗುವ ರೀತಿಯನ್ನು ಹೇಳಲು ಈಗಾಗಲೇ ನೂರಾರು ಸಿನಿಮಾಗಳಲ್ಲಿ ಬಂದು ಹೋಗಿರುವ ಮದುವೆಯನ್ನೇ ವೇದಿಕೆಯಾಗಿಸಿಕೊಂಡಿದ್ದಾರೆ.ಪ್ರೇಮಿಗಳು ಅಗಲುವ ದೃಶ್ಯವನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿರುವ ನಿರ್ದೇಶಕರು ಯಾವುದೇ ಮುನ್ಸೂಚನೆ ನೀಡದೆ ಏಳು ವರ್ಷ ಮುಂದಕ್ಕೆ ಜಿಗಿಯುತ್ತಾರೆ.ಏಳು ವರ್ಷಗಳ ನಂತರ ಪ್ರೇಮಿಗಳಿಬ್ಬರೂ ಪ್ರಬುದ್ಧರಾಗಿರುತ್ತಾರೆ. ಅದನ್ನು ಶಾಹೀದ್ ನಟನೆಯಲ್ಲಿ ಕಾಣಬಹುದು. ಆದರೆ ಗಂಭೀರ ಪಾತ್ರಕ್ಕೆ ಸೋನಂ ನ್ಯಾಯ ಒದಗಿಸಿಲ್ಲ. ಅಗಲಿಕೆಯಲ್ಲೇ ಮುಂದುವರೆಯುವ ಚಿತ್ರದಲ್ಲಿ ಇಬ್ಬರ ನಡುವೆ ಇರಬೇಕಾದ ಹೊಂದಾಣಿಕೆ ಎಲ್ಲಿಯೂ ಕಾಣುವುದಿಲ್ಲ.ನಾಯಕನದ್ದು ಉತ್ಕಟ ಪ್ರೇಮದ ಬಯಕೆ, ನಾಯಕಿಯದ್ದು ಅದರ ಅರಿವೇ ಇಲ್ಲದಂತಹ ನಿರ್ಲಿಪ್ತಭಾವ. ಹೀಗೆ ಸಾಗುವ ಈ ಪ್ರೇಮ ಕಥೆಯ ಮೊದಲ ಭಾಗದಲ್ಲಿ ಲವಲವಿಕೆ ಇದೆ. ಮಧ್ಯಂತರದ ನಂತರ ಆಮೆಗತಿಯಲ್ಲಿ ಸಾಗುತ್ತದೆ.ನಟನೆಯಲ್ಲಿ ಶಾಹೀದ್ ಅವರಿಗೆ ಪೂರ್ಣ ಅಂಕ. ಪಾತ್ರಕ್ಕೆ ಅಗತ್ಯವಾದ ಹಾವಭಾವಗಳನ್ನು  ಅವರು ಆವಾಹಿಸಿಕೊಂಡು  ಅಭಿನಯಿಸಿದ್ದಾರೆ. ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅದಿತಿ ಶರ್ಮ ನಟನೆ ಉತ್ತಮ.ಪ್ರೀತಂ ಸಂಗೀತ ಹಾಗೂ ವಿನೋದ್ ಪ್ರಧಾನ್ ಅವರ ಛಾಯಾಗ್ರಹಣ ಚಿತ್ರದಲ್ಲಿ ಇಷ್ಟವಾಗುವ ಕೆಲವು ಸಂಗತಿಗಳು. ಮೂರು ಗಂಟೆಗಳ ಈ ದೀರ್ಘ ಚಿತ್ರವನ್ನು ಚಿಕ್ಕದಾಗಿ, ಚೊಕ್ಕವಾಗಿಸಲು ಸಾಧ್ಯವಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.