ಸೋಮವಾರ, ಮಾರ್ಚ್ 8, 2021
31 °C

ಕುದುರೆಮುಖ: ಹುಲಿ ಸಂರಕ್ಷಿತ ಪ್ರದೇಶ

ಹೊನಕೆರೆ ನಂಜುಂಡೇಗೌಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುದುರೆಮುಖ: ಹುಲಿ ಸಂರಕ್ಷಿತ ಪ್ರದೇಶ

ನವದೆಹಲಿ: ಜೀವ ವೈವಿಧ್ಯತೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು `ಹುಲಿ ಸಂರಕ್ಷಿತ ಪ್ರದೇಶ~ವೆಂದು ಘೋಷಿಸಲು ಕೇಂದ್ರ ಸರ್ಕಾರ ಸರ್ವ ಸಿದ್ಧತೆ ಮಾಡಿಕೊಂಡಿದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು `ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ~ (ಎನ್‌ಟಿಸಿಎ) ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದೆ. ಈ ಸಂಬಂಧ ರಾಜ್ಯಕ್ಕೆ ಅಧಿಕೃತ ಪತ್ರ ಬರೆಯಲಾಗಿದೆ, ಹುಲಿ ಸಂರಕ್ಷಣೆಗೆ ಸಂಬಂಧಿಸಿದ ವಿವರವಾದ ಯೋಜನೆ ಕರ್ನಾಟಕ ಸರ್ಕಾರದಿಂದ ಬಂದ ತಕ್ಷಣ ಅಧಿಕೃತ ಘೋಷಣೆ ಹೊರಬೀಳಲಿದೆ.`ಕರ್ನಾಟಕ ವಿವರವಾದ ಯೋಜನೆ ಕಳುಹಿಸಿದ ತಕ್ಷಣ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗುವುದು. ನಮ್ಮ ಪಾಲಿನ ಎಲ್ಲ ಕೆಲಸ ಮುಗಿದಿದ್ದು, ರಾಜ್ಯದ ಪತ್ರಕ್ಕಾಗಿ ಕಾಯಲಾಗುತ್ತಿದೆ~ ಎಂದು ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.ಪರಿಸರ ಹಾಗೂ ಅರಣ್ಯ ಸಚಿವಾಲಯದ ನಿಯಂತ್ರಣದ ಅಡಿ ಕೆಲಸ ಮಾಡುವ (ಎನ್‌ಟಿಸಿಎ) ದೇಶದ 6 ರಾಷ್ಟ್ರೀಯ ಉದ್ಯಾನಗಳಿಗೆ ಹುಲಿ ಸಂರಕ್ಷಿತ ಪ್ರದೇಶವೆಂದು ಪ್ರಕಟಿಸಲು ತಾತ್ವಿಕ ಒಪ್ಪಿಗೆ ನೀಡಿದೆ.ಯೋಜನೆ ಪ್ರದೇಶ, ಮೂಲ ಸೌಲಭ್ಯ ಒಳಗೊಂಡ ಪ್ರಸ್ತಾವ ಸಚಿವಾಲಯದ ಕೈಸೇರುತ್ತಿದ್ದಂತೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಅನಂತರ ಕೇಂದ್ರ ಸರ್ಕಾರ ಯೋಜನೆಗೆ ಅಗತ್ಯವಿರುವ ಹಣ ಬಿಡುಗಡೆ ಮಾಡಲಿದೆ.ಕುದುರೆಮುಖ ಹುಲಿ ಸಂರಕ್ಷಿತ ಯೋಜನೆ ಪ್ರದೇಶದ ಸುಮಾರು 750 ಕುಟುಂಬಗಳ ಪುನರ್ವಸತಿಗೆ ಉದ್ದೇಶಿಸಲಾಗಿದೆ. ಕೆಲ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ದೇಶದ 41 ಮತ್ತು ರಾಜ್ಯದ 5ನೇ ಹುಲಿ ಸಂರಕ್ಷಿತ ಪ್ರದೇಶ. ಬಂಡೀಪುರ, ನಾಗರಹೊಳೆ, ಭದ್ರಾ, ದಾಂಡೇಲಿಯ ಅನಸಿ ಮತ್ತು ಬಿಳಿಗಿರಿ ರಂಗನಬೆಟ್ಟದ ಸಾಲಿಗಿದು ಸೇರ್ಪಡೆ ಆಗಲಿದೆ.ಚಿಕ್ಕಮಗಳೂರಿನ 110 ಚದರ ಕಿ.ಮೀ, ಹಾಸನದ 130 ಚದರ ಕಿ.ಮೀ, ದಕ್ಷಿಣ ಕನ್ನಡದ ಚದರ 70 ಕಿ.ಮೀ ಮತ್ತು ಉಡುಪಿಯ 50 ಚದರ ಕಿ.ಮೀ ಒಳಗೊಂಡು ಸುಮಾರು 600 ಚದರ ಕಿ.ಮೀ. ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಒಳಪಡಿಸಬಹುದು ಎಂದು ರಾಜ್ಯ ಅರಣ್ಯ ಇಲಾಖೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಈ ಮೊದಲು ಪತ್ರ ಬರೆದಿದೆ.ಜೀವವೈವಿಧ್ಯತೆಯ ಸೂಕ್ಷ್ಮ ತಾಣ ಕುದುರೆಮುಖ ರಾಷ್ಟ್ರೀಯ ಉದ್ಯಾನ ಅವನತಿ ಅಂಚಿನಲ್ಲಿರುವ ಅಪರೂಪದ ಪ್ರಾಣಿ-ಪಕ್ಷಿಗಳ ತವರು. ಹುಲಿ, ಚಿರತೆ, ಸಿಂಹ ಬಾಲದ ಕಪ್ಪು ಮುಸುಡಿಯ ಸಿಂಗಲೀಕ, ಕಾಳಿಂಗ ಸರ್ಪಗಳು ನೆಲೆ ನಿಂತಿವೆ. ಇತ್ತೀಚಿನ ರಾಷ್ಟ್ರೀಯ ಹುಲಿ ಗಣತಿ ಪ್ರಕಾರ ಕರ್ನಾಟಕ ಮೂರು ವಿವಿಧ ಬಗೆಯ ಹುಲಿ ಸಂತತಿ ಆಶ್ರಯ ತಾಣ. ಇವು ಮಹಾರಾಷ್ಟ್ರದ ಭೀಮಾಶಂಕರದವರೆಗೂ ವ್ಯಾಪಿಸಿವೆ.ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪೊಲೀಸ್ ಕಮಾಂಡೋ ತರಬೇತಿ ಕೇಂದ್ರ ಸ್ಥಾಪಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದ್ದು, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಜೈರಾಂ ರಮೇಶ್ ಸ್ಪಷ್ಟಪಡಿಸಿದ್ದಾರೆ.ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್) ಈ ಪ್ರದೇಶದಲ್ಲಿ ನಡೆಸುತ್ತಿದ್ದ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ಆದೇಶದ ಅಡಿ ನಿಷೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.