ಗುರುವಾರ , ಮೇ 13, 2021
39 °C

ಕುರಿಗಳಲ್ಲಿ ತಾಮ್ರದ ವಿಷಬಾಧೆ

ಡಾ. ಎನ್.ಬಿ. ಶ್ರೀಧರ Updated:

ಅಕ್ಷರ ಗಾತ್ರ : | |

ತಾಮ್ರವೂ ಸಹ ಜಾನುವಾರುಗಳಲ್ಲಿ ವಿಷವನ್ನು ಉಂಟು ಮಾಡುತ್ತದೆ ಎಂದರೆ ಹಲವರಿಗೆ ಆಶ್ಚರ್ಯವಾಗುತ್ತದೆ. ಆದರೂ ಇದು ಸತ್ಯ. ತಾಮ್ರದ ಅಂಶವು ಪಶುವಿನ ಜೈವಿಕ ಪದ್ಧತಿಯಲ್ಲಿ ಪೋಷಕಾಂಶವಾಗಿ ಒಂದು ಮುಖ್ಯವಾದ ಪಾತ್ರ ವಹಿಸುತ್ತದೆ.

 

ರಕ್ತ ಕಣಗಳ ಉತ್ಪಾದನೆ, ವಿವಿಧ ಅಂಗಾಂಶಗಳ ರಕ್ಷಣೆ, ವಿವಿಧ ಕಿಣ್ವಗಳ ಉತ್ಪಾದನೆ ಮತ್ತು ನಿರ್ವಹಣೆ ಇತ್ಯಾದಿಗಳಲ್ಲಿ ಇದು ಬೇಕೇ ಬೇಕು. ಆದರೆ ಅತಿಯಾದರೆ ನೀರೂ ಸಹ ವಿಷವೆಂಬ ಹಾಗೆ ನಿಗದಿತ ಪ್ರಮಾಣಕ್ಕಿಂತ ಜಾಸ್ತಿ ತಾಮ್ರವು ಶರೀರವನ್ನು ಸೇರಿದರೆ ಅದು ವಿಷವಾಗಿ ಜಾನುವಾರನ್ನು ಬಲಿ ತೆಗೆದುಕೊಳ್ಳುತ್ತದೆ.ಇದರ ವಿಷಬಾಧೆಗೆ ಕುರಿಗಳು ಸಾಮಾನ್ಯವಾಗಿ ಬಲಿಯಾದರೂ ಇತರ ಪ್ರಾಣಿಗಳಲ್ಲಿಯೂ ಸಾವು ಕಂಡು ಬರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತಾಮ್ರದ ಲವಣಗಳನ್ನು ಸೇವಿಸಿದಾಗ ತೀವ್ರತರವಾದ ವಿಷಬಾಧೆಯನ್ನು ಗುರುತಿಸಲಾಗಿದೆ.

 

ಬಹಳಷ್ಟು ಅಂಶಗಳು ತಾಮ್ರದ ವಿಷಬಾಧೆಯ ಪರಿಣಾಮವನ್ನು ಪ್ರಾಣಿಗಳಲ್ಲಿ ಬದಲಿಸುತ್ತವೆ. ಉದಾಹರಣೆಗೆ ಕೆಲವು ಅಂಶಗಳು ಕರುಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಹೀರಿ ಕೊಳ್ಳುವಂತೆ ಮಾಡಬಹುದು. ರಕ್ತದಲ್ಲಿ ಕಡಿಮೆ ಪ್ರಮಾಣದಲ್ಲಿ ಇರುವ ಮಾಲಿಬ್ಡಿನಿಯಂ ಅಥವಾ ಸಲ್ಫೇಟ್ ಅಂಶಗಳು ತಾಮ್ರದ ವಿಷಬಾಧೆಯನ್ನು ಹೆಚ್ಚಿಸಬಹುದು.

 

ಆದರೆ ಪ್ರಮುಖವಾಗಿ ಕುರಿಗಳಲ್ಲಿ ಹೆಚ್ಚಿನ ಪ್ರಮಾಣದ ತಾಮ್ರದ ಅಂಶವನ್ನು ಬಹಳ ಕಾಲದವರೆಗೆ ಸೇವಿಸಿದರೆ ವಿಷಬಾಧೆ ಉಂಟಾಗುತ್ತದೆ. ಅಲ್ಲದೇ ಪಿತ್ತಜನಕಾಂಗಕ್ಕೆ ವಿಷವಾಗುವ ಅನೇಕ ಸಸ್ಯಗಳಲ್ಲಿ ತಾಮ್ರದ ಅಂಶವು ಜಾಸ್ತಿ ಹೀರಲ್ಪಟ್ಟು, ಅವುಗಳನ್ನು ಕುರಿಗಳು  ಬಹಳ ಕಾಲದ ವರೆಗೆ ಸೇವಿಸಿದರೆ ವಿಷಬಾಧೆಯುಂಟಾಗಬಹುದು. ಈ ಸಸ್ಯಗಳು ಕಡಿಮೆ ಮಾಲಿಬ್ಡಿನಿಯಂ ಅಂಶವನ್ನು ಹೊಂದಿದ್ದರೂ ಸಹ ತಾಮ್ರದ ವಿಷಬಾಧೆಯು ಉಂಟಾಗುತ್ತದೆ.ತಾಮ್ರದ ಆಕರ

ಮುಖ್ಯವಾಗಿ ವಿಷಬಾಧೆಯು ಮೈಲುತುತ್ತ ಅಥವಾ ಕಾಪರ್ ಸಲ್ಫೇಟ್ ಲವಣವನ್ನು ಸೇವಿಸಿದಾಗ ಉಂಟಾಗುತ್ತದೆ. ಅಲ್ಲದೇ ತಾಮ್ರದ ವಿವಿಧ ಲವಣಗಳಾದ ಕಾಪರ್ ಸಬ್‌ಅಸಿಟೇಟ್, ಕಾಪರ್ ಕ್ಲೋರೈಡ್ ಅಲ್ಲದೇ ಕಾಪರ್ ಈಡೀಟೇಟ್ ಲವಣಗಳಿಂದ ಸಹ ಬರಬಹುದು. ಮೇಲಿನ ಲವಣಗಳು ಅದರಲ್ಲೂ ಮುಖ್ಯವಾಗಿ ಮೈಲುತುತ್ತವು ಅಕಸ್ಮಾತ್ತಾಗಿ ಕುರಿಯ ಶರೀರವನ್ನು ಸೇರಿದಾಗ ಖಂಡಿತವಾಗಿ ವಿಷಬಾಧೆಯನ್ನುಂಟು ಮಾಡುತ್ತದೆ.ಅಲ್ಲದೇ ಮೈಲುತುತ್ತವನ್ನು ವಿವಿಧ ಚಿಕಿತ್ಸೆಗಳಲ್ಲಿ ಬಳಸುತ್ತಿದ್ದು ಇದರಿಂದ ಸಹ ತಾಮ್ರದ ವಿಷಬಾಧೆ ಉಂಟಾಗಬಹುದು. ಉದಾಹರಣೆಗೆ ಕುರಿಗಳಲ್ಲಿ ಸಾಮಾನ್ಯವಾಗಿ ಬರುವ ಕಾಲ್ಗೊರಸಿನ ಕೊಳೆಯುವಿಕೆಯಲ್ಲಿ ಮೈಲುತುತ್ತದ ದ್ರಾವಣವನ್ನು ಬಳಸುತ್ತಿದ್ದು ಇದನ್ನು ಅಕಸ್ಮಾತ್ತಾಗಿ ಕುರಿಯು ಕುಡಿದಾಗಲೂ ವಿಷಬಾಧೆ ಆಗಬಹುದು.ಕೆಲವು ಸಲ ಕುರಿಗಳು ತಾಮ್ರದ ತ್ಯಾಜ್ಯವು  ಜಾಸ್ತಿ ಇರುವ ಕೈಗಾರಿಕಾ ಪ್ರದೇಶದಲ್ಲಿ ಬೆಳೆದ ಹುಲ್ಲನ್ನು ಮೇಯ್ದೊಗ ಸಹ ವಿಷಬಾಧೆಯು ಉಂಟಾಗಬಹುದು. ಜಾನುವಾರುಗಳಲ್ಲಿ ಪೀನಾಸಿ ರೋಗವನ್ನು ಉಂಟು ಮಾಡುವ ಹುಳಗಳ ಲಾರ್ವಾಗಳನ್ನು ಹೊತ್ತೊಯ್ಯುವ ಬಸವನ ಹುಳ ಗಳನ್ನು ನಾಶಮಾಡಲು ಮೈಲುತುತ್ತದ ದ್ರಾವಣವನ್ನು  ಕೆರೆಯ ಸುತ್ತ ಇರುವ ಹುಲ್ಲಿಗೆ ಸಿಂಪರಿಸುವ ಪದ್ಧತಿಯಿದೆ.

 

ಇದನ್ನು ತಿಂದು ಕುರಿಗಳು ವಿಷಬಾಧೆಗೆ ಒಳಗಾಗಬಹುದು. ಕೋಳಿಗೊಬ್ಬರದಲ್ಲಿ ಸಹ ಅತೀ ಹೆಚ್ಚಿನ ಪ್ರಮಾಣದಲ್ಲಿ ತಾಮ್ರದ ಅಂಶವು ಇರುತ್ತದೆ. ಇದನ್ನು ಹಾಕಿ ಬೆಳೆದ ಬೆಳೆಯನ್ನು ತಿಂದಾಗ ಸಹ ವಿಷಬಾಧೆಯಾಗಬಹುದು.

 

ಕೆಲವು ಸಸ್ಯಗಳು ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಹೀರಿಕೊಳ್ಳುವ ಸ್ವಭಾವವನ್ನು ಹೊಂದಿದ್ದು ಇದನ್ನು ಬಹಳ ಕಾಲ ಸೇವಿಸಿದರೆ ವಿಷಬಾಧೆಯಾಗಬಹುದು. ಸಾಮಾನ್ಯವಾಗಿ ತಾಮ್ರ: ಮಾಲಿಬ್ಡಿನಿಯಂ ಅಂಶವು 3:1 ರಷ್ಟು ಇರಬೇಕು. ಮಾಲಿಬ್ಡಿನಿಯಂ ಅಂಶ ಕಡಿಮೆಯಾದಾಗ ಸಹ ತಾಮ್ರದ ವಿಷಬಾಧೆಯಾಗಬಹುದು.ತಾಮ್ರವು ಕರುಳಿನ ಮೂಲಕ ಹೀರಲ್ಪಟ್ಟು  ದೇಹವನ್ನು ಸೇರುತ್ತದೆ. ರಕ್ತಕಣಗಳಲ್ಲಿ ಮತ್ತು ರಕ್ತ ಸಾರದಲ್ಲಿ ಅದು ಸಲೀಸಾಗಿ ಮಿಶ್ರವಾಗುತ್ತದೆ. ಪಿತ್ತಜನಕಾಂಗವು ಹೆಚ್ಚಿನ ತಾಮ್ರವನ್ನು ನಿರ್ವಿಷಗೊಳಿಸಿ ದೇಹದಿಂದ ಹೊರಹಾಕಲು ಪ್ರಯತ್ನಿಸುತ್ತದೆ. ಈ ಅಂಗದಲ್ಲೆೀ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವು ಸೇರಿಕೊಳ್ಳುತ್ತದೆ. ಪಿತ್ತಜನಕಾಂಗದ ಮೂಲಕ ಕರುಳಿನಲ್ಲಿ ಸ್ರವಿಸಲ್ಪಟ್ಟ ತಾಮ್ರವು ಪುನಃ ಶರೀರವನ್ನು ಸೇರಿಕೊಳ್ಳುತ್ತದೆ.ಬೆಳೆದ ಕುರಿಗಳಲ್ಲಾದರೆ ಪ್ರತಿ ಕಿಲೋ ತೂಕಕ್ಕೆ ಸುಮಾರು 25-30 ಮಿಲಿಗ್ರಾಂ ಮತ್ತು ಕುರಿ ಮರಿಗಳಲ್ಲಾದರೆ 130 ಮಿಲಿಗ್ರಾಂ ಮೈಲುತುತ್ತ ಅಪಾಯಕಾರಿ. ಜಾನುವಾರುಗಳಲ್ಲಿ ಇದರ ಪ್ರಮಾಣ ಪ್ರತಿ ಕಿಲೋಗೆ 200 ಮಿಲಿಗ್ರಾಂ. ಹಂದಿಗಳ ಆಹಾರದಲ್ಲಿ 250 ಪಿಪಿಎಂಗಿಂತ ಜಾಸ್ತಿ ಪ್ರಮಾಣದಲ್ಲಿ ತಾಮ್ರದ ಅಂಶವಿದ್ದರೆ ಅದು ವಿಷವಾಗಿ ಪರಿಣಮಿಸುತ್ತದೆ.ತಾಮ್ರವು ಪಿತ್ತಜನಕಾಂಗವನ್ನು ಹಾಳುಗೆಡವಿ ತನ್ನ ಅಂಶವನ್ನು ಹೊರಸೂಸಲು ಪ್ರಾರಂಭಿಸುತ್ತದೆ. ರಕ್ತ ಕಣಗಳನ್ನು ಸೇರಿಕೊಳ್ಳುತ್ತದೆ. ಸಾಕಷ್ಟು ರಕ್ತ ಕಣಗಳನ್ನು ಹಾಳು ಮಾಡಿ ರಕ್ತ ಹೀನತೆಗೆ ಕಾರಣವಾಗುತ್ತದೆ. ರಕ್ತಕಣಗಳು ತಾಮ್ರದ ಅಂಶವನ್ನು ಸುಲಭವಾಗಿ ಬಿಡುಗಡೆ ಮಾಡುವುದಿಲ್ಲ. ಹೀಗಾಗಿ ಹೀಮೋಗ್ಲೋಬಿನ್ ಅಂಶವು ಮೆಥ್‌ಹೀಮೋಗ್ಲೋಬಿನ್ ಆಗಿ ಪರಿವರ್ತನೆಯಾಗುತ್ತದೆ. ಇದು ಶೇ 35ಕ್ಕಿಂತ ಹೆಚ್ಚಾದರೆ ಅಪಾಯಕರ.ಆಮ್ಲಜನಕವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ರಕ್ತ ಕಳೆದುಕೊಳ್ಳುತ್ತದೆ. ತಾಮ್ರದ ಅಂಶವು ಜಾಸ್ತಿಯಾಗುತ್ತಾ ಹೋದಂತೆ ರಕ್ತಕಣದ ಪದರವು ತೆಳುವಾಗುತ್ತಾ ಹೋಗುತ್ತದೆ.ಇದರಿಂದ ರಕ್ತಕಣ ಒಡೆಯಲೂ ಬಹುದು. ಒಡೆದ ರಕ್ತ ಕಣಗಳು ಮೂತ್ರಜನಕಾಂಗದ ಮೂಲಕ ವಿಸರ್ಜನೆಯಾಗಬೇಕು. ಆದರೆ ಅವು ಮೂತ್ರನಾಳಗಳಲ್ಲಿ ಕಟ್ಟಿಕೊಳ್ಳುತ್ತವೆ. ಇದರಿಂದ ಈ ನಾಳಗಳು ಕೊಳೆಯಲು ಪ್ರಾರಂಭಿಸುತ್ತವೆ.ಲಕ್ಷಣಗಳು


ವಿಷಬಾಧೆಯ ಪ್ರಾಥಮಿಕ ಲಕ್ಷಣಗಳೆಂದರೆ ಜೊಲ್ಲು ಸುರಿಸುವಿಕೆ, ವಾಂತಿ, ಭೇದಿ, ತೀವ್ರವಾದ ಹೊಟ್ಟೆ ನೋವು, ನಿರ್ಜಲೀಕರಣ, ಹೃದಯ ಬಡಿತದ ಏರಿಳಿತ, ಆಘಾತ. ಪ್ರಾಣಿಯ ಮಲದಲ್ಲಿ ಕಡು ಹಸಿರು ಬಣ್ಣದ ಸಿಂಬಳದಂತ ವಸ್ತುವು ತಾಮ್ರ-ಕ್ಲೋರೊಫಿಲ್ ಅಂಶದಿಂದ ಕಂಡು ಬರುತ್ತದೆ.ಮೊದಲ ಹಂತ ಸುಮಾರು 2-3 ತಿಂಗಳುಗಳಲ್ಲಿ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೇವು ಚೀಲದ ನಿಷ್ಕ್ರಿಯತೆಯನ್ನು ಹೊರತು ಪಡಿಸಿ ಯಾವುದೇ ತೆರನಾದ ವಿಷಬಾಧೆಯ ಲಕ್ಷಣಗಳು ಇರುವುದಿಲ್ಲ.ಎರಡನೇ ಹಂತ ಸುಮಾರು 14-25  ದಿನಗಳಲ್ಲಿ ಕೊನೆಗೊಳ್ಳಬಹುದು. ಈ ಹಂತದಲ್ಲಿ ಪಿತ್ತಜನಕಾಂಗದ ಕಾರ್ಯದಲ್ಲಿನ ಏರುಪೇರಿನಿಂದ ಮೇವು ತಿನ್ನದಿರುವಿಕೆ, ಖಿನ್ನತೆ, ನಿಶ್ಚಲತೆ, ಬಾಯಾರಿಕೆ, ಮತ್ತು ಭೇದಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು.ಮೂರನೇ ಹಂತ ಸುಮಾರು 2-5 ದಿನಗಳಲ್ಲಿ ಕಾಣಿಸಿಕೊಳ್ಳಬಹುದು. ಇದರಲ್ಲಿ ರಕ್ತಕಣಗಳು ಸಹಸ್ರ ಸಂಖ್ಯೆಯಲ್ಲಿ ಒಡೆದು ರಕ್ತ ಹೀನತೆ ಸಂಭವಿಸಬಹುದು. ಇದರಿಂದ ಕಾಮಾಲೆ, ರಕ್ತ ಮೂತ್ರ, ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ.

 

ಈ ಹಂತದಿಂದ ಚೇತರಿಸಿಕೊಂಡ ಕುರಿಗಳೂ ಸಹ ನಂತರ  ಮೂತ್ರಜನಕಾಂಗದ ನಿಷ್ಕ್ರಿಯತೆಯಿಂದ ಮರಣವನ್ನಪ್ಪುತ್ತವೆ. ಒಂದು ಕುರಿದೊಡ್ಡಿಯಲ್ಲಿ ಶೇ 50- 75 ರಷ್ಟು ಸಾವು ಸಂಭವಿಸಬಹುದು. ಅಹಾರವನ್ನು ಸರಿಪಡಿಸದಿದ್ದರೆ, ಸಾವಿನ ಸಂಖ್ಯೆಯು ಸುಮಾರು ಎರಡು ತಿಂಗಳವರೆಗೂ ಸಹ ಮುಂದುವರಿಯಬಹುದುಅಂಗಾಂಶಗಲ್ಲಿ ತಾಮ್ರದ ಅಂಶ ಜಾಸ್ತಿ ಇದ್ದರೆ, ವಿಷಬಾಧೆಯ ವೃತ್ತಾಂತ, ಲಕ್ಷಣಗಳು ಇತ್ಯಾದಿಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ ಮತ್ತು ಮರಣೋತ್ತರ ಪರೀಕ್ಷಾ ವಿಧಾನದಿಂದ ವಿಷಬಾಧೆಯನ್ನು ಪತ್ತೆ ಹಚ್ಚಬಹುದು. ಸಾಮಾನ್ಯವಾಗಿ ರಕ್ತದಲ್ಲಿ ಮತ್ತು ಪಿತ್ತಜನಕಾಂಗದಲ್ಲಿ ತಾಮ್ರದ ಅಂಶವು ಗಣನೀಯವಾಗಿ ಹೆಚ್ಚುತ್ತದೆ.ಹೊಟ್ಟೆಯಲ್ಲಿ ನೀಲಿ ಮಿಶ್ರಿತ ಹಸಿರು ಮೇವು, ಕಡು ಹಸಿರು ಬಣ್ಣದ ಮಲ, ಮಲದಲ್ಲಿ 8000-10000 ಪಿಪಿಎಂ ಮತ್ತು ಮೂತ್ರಜನಕಾಂಗ ಮತ್ತು ಪಿತ್ತಜನಕಾಂಗಗಳಲ್ಲಿ 15 ಪಿಪಿಎಂ ಪ್ರಮಾಣಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ತಾಮ್ರವು ಇದ್ದಲ್ಲಿ ಇದನ್ನು ವಿಷಬಾಧೆಯ ಮಹತ್ವದ ಸುಳಿವು ಎಂದು ಪರಿಗಣಿಸಬಹುದು.ವಿಷಬಾಧೆ  ಪತ್ತೆ ಹಚ್ಚುವಾಗ ಇದೇ ರೀತಿಯ ಲಕ್ಷಣಗಳನ್ನು ಉಂಟು ಮಾಡುವ ಇತರ ವಿಷಬಾಧೆಗಳು, ಬ್ಯಾಕ್ಟಿರಿಯಾ ಇತ್ಯಾದಿಗಳಿಂದ ಬರುವ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಮುಖವಾಗಿ ತಾಮ್ರದ ಅಂಶವು ಅಂಗಾಂಶಗಳಲ್ಲಿ ಎಷ್ಟಿದೆ ಎನ್ನುವುದು ಬಹಳ ಮುಖ್ಯ.ಚಿಕಿತ್ಸೆ

ಸಾಮಾನ್ಯವಾಗಿ ಚಿಕಿತ್ಸೆಯು ಫಲಕಾರಿಯಾಗುವುದಿಲ್ಲ. ವಿಷಬಾಧೆಯ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ತಜ್ಞ ಪಶುವೈದ್ಯರು ಮಾಡುವುದು ಒಳಿತು. ಅಮೊನಿಯಂ ಟೆಟ್ರಾಮೋಲಿಬ್ಡೇಟ್ ( 50-500 ಮಿಲಿಗ್ರಾಂ) ಮತ್ತು ಸೋಡಿಯಂ ಥಯೋಸಲ್ಫೇಟ್‌ನ್ನು (300-1000ಮಿಲಿಗ್ರಾಂ) ನೀಡುವುದರಿಂದ ರೋಗದ ತೀವ್ರತೆ ಕಡಿಮೆ ಮಾಡಬಹುದು.ಅಲ್ಲದೆ ಆಹಾರದಲ್ಲಿ ಸತುವಿನ ಅಂಶ ಬಳಸುವುದರಿಂದಲೂ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.ರೈತರು ಮುಂಜಾಗ್ರತೆಯಾಗಿ ತಾಮ್ರದ ಯಾವುದೇ ಲವಣಗಳು ಕುರಿಗಳಿಗೆ ದೊರಕದಂತೆ ನೋಡಿಕೊಳ್ಳಬೇಕು.ತಾಮ್ರವನ್ನು ಹೀರಿಕೊಳ್ಳುವ ಸಸ್ಯಗಳನ್ನು ಪಶುವೈದ್ಯರ ಸಹಾಯದಿಂದ ಗುರುತಿಸಿಕೊಂಡು ಅವುಗಳನ್ನು ಕುರಿಗಳು ಅಥವಾ ಜಾನುವಾರುಗಳು ತಿನ್ನದಂತೆ ನೋಡಿಕೊಳ್ಳಬೇಕು.ಹುಲ್ಲುಗಾವಲಿಗೆ ಮಾಲಿಬ್ಡಿನಿಯಂ ಅಂಶವನ್ನು ಹೊಂದಿದ ಸೂಪರ್ ಫಾಸ್ಪೇಟ್ ಗೊಬ್ಬರವನ್ನು ಹಾಕುವುದರಿಂದ ತಾಮ್ರದ ವಿಷಬಾಧೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಹುದು.(ಲೇಖಕರು ಹೆಬ್ಬಾಳದ ಪಶು ವೈದ್ಯ ವಿವಿಯ ಸಹಾಯಕ ಪ್ರಾಧ್ಯಾಪಕರು. ಮಾಹಿತಿಗೆ ಅವರ ಸಂಖ್ಯೆ 94480 59777)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.