ಶನಿವಾರ, ಮೇ 21, 2022
24 °C

`ಕುರುಬರನ್ನು ಸಿಎಂ ಮಾಡಿದ್ದು ಕಾಂಗ್ರೆಸ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕುರುಬರನ್ನು ಸಿಎಂ ಮಾಡಿದ್ದು ಕಾಂಗ್ರೆಸ್'

ವಿಜಾಪುರ: `ಮಹಾರಾಷ್ಟ್ರದಲ್ಲಿ ಅಂಬೇಡ್ಕರ್‌ಮತ್ತು ಕರ್ನಾಟಕದಲ್ಲಿ ಬಸವಣ್ಣನವರು ಸಮಾನತೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅಂತಹ ನೆಲದ ನಾವು ಸಾಮರಸ್ಯದಿಂದ ಬದುಕಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಮಹಾರಾಷ್ಟ್ರದ ಸೋಲಾಪುರದಲ್ಲಿ ಅಲ್ಲಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.`ಇತರ ರಾಜ್ಯಗಳಲ್ಲಿ ಧನಗರ ಎಂದು ಕರೆಯುವ ಕುರುಬ ಸಮಾಜದಿಂದ ಮುಖ್ಯಮಂತ್ರಿ ಹುದ್ದೆಗೆ ಏರಿದ ದೇಶದ ಮೊದಲ ವ್ಯಕ್ತಿ ನಾನು. ಇಂತಹ ಹಿಂದುಳಿದ ಜಾತಿಗಳಿಗೂ ಪ್ರಾತಿನಿಧ್ಯ ನೀಡಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಕರ್ನಾಟಕದಲ್ಲಿ ವೀರಪ್ಪ ಮೊಯ್ಲಿ, ಧರ್ಮಸಿಂಗ್, ಎಸ್.ಬಂಗಾರಪ್ಪ ಮತ್ತು ಮಹಾರಾಷ್ಟ್ರದಲ್ಲಿ ಸುಶೀಲ್‌ಕುಮಾರ ಶಿಂಧೆ ಅವರು ಮುಖ್ಯಮಂತ್ರಿ ಆಗಿದ್ದು ಇದಕ್ಕೆ ನಿದರ್ಶನ' ಎಂದರು.`ದೇಶದ ಭದ್ರತೆ ಮತ್ತು ಜಾತ್ಯತೀತ ವ್ಯವಸ್ಥೆಯ ರಕ್ಷಣೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಮೂಲತಃ ಕಾಂಗ್ರೆಸ್ಸಿಗನಲ್ಲ. ಸಮಾಜವಾದಿ ಹಿನ್ನೆಲೆಯ ನಾನು ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ 2007ರಲ್ಲಿ ಕಾಂಗ್ರೆಸ್  ಸೇರಿದೆ. ಪಕ್ಷದ ಹೈಕಮಾಂಡ್ ನನಗೆ ಅತ್ಯುನ್ನತ ಹುದ್ದೆ ನೀಡಿದೆ' ಎಂದು ಹೇಳಿದರು.`ಬಡವ-ಬಲ್ಲಿದ, ಜಾತಿ ತಾರತಮ್ಯ ಇಲ್ಲದ ಸಮಾನತೆಯ ಸಮಾಜ ನಿರ್ಮಿಸುವ ಮೂಲಕ ದೇಶದಲ್ಲಿ ಪರಿವರ್ತನೆ ತರಲು ಕಾಂಗ್ರೆಸ್ ಮುಂದಾಗಿದೆ. ಹಿಂದುಳಿದ ವರ್ಗದವರಿಗೆ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ನೀಡಿ ಅವರ ಅಭ್ಯುದಯಕ್ಕೆ ನಾಂದಿ ಹಾಡಿದ್ದೇ ಕಾಂಗ್ರೆಸ್' ಎಂದು ಸ್ಮರಸಿದರು.ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ರಾಜು ಆಲಗೂರ, ಎಂ.ಎಂ. ಬಾಗವಾನ, ರೇವಣ್ಣ, ಮಹಾರಾಷ್ಟ್ರದ ಸಚಿವರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.