ಶನಿವಾರ, ಏಪ್ರಿಲ್ 10, 2021
33 °C

ಕುಷ್ಟಗಿ: ಶೇ 90ರಷ್ಟು ಕೊಳವೆಬಾವಿ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಮಳೆ ಅಭಾವದಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ತೀವ್ರಗೊಂಡಿದ್ದು ಕೊಳವೆ ಬಾವಿಗಳನ್ನು ಕೊರೆದರೂ ಶೇ 90ರಷ್ಟು ವಿಫಲವಾಗುತ್ತಿವೆ ಎಂಬ ಆತಂಕದ ಅಂಶ ಸೋಮವಾರ ತಾಲ್ಲೂಕು ಪಂಚಾಯಿತಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವ್ಯಕ್ತವಾಯಿತು.`ಹೊಸ ಕೊಳವೆ ಬಾವಿಗಳ ಅಗತ್ಯವಿದೆ~ ಎಂದು ಸದಸ್ಯರು ಸಮಸ್ಯೆ ವಿವರಿಸಿದರು. `ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಹಾಗಾಗಿ ನೀರು ಬರುವ ಸಾಧ್ಯತೆ ಇರುವ ಹಳೆಯ ಕೊಳವೆ ಬಾವಿಗಳನ್ನೇ ರೀಫ್ಲೆಶ್ ಮಾಡಲಾಗುತ್ತದೆ~ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.`50 ಕೊಳವೆಬಾವಿಗಳನ್ನು ತೋಡಿದರೆ 40 ವಿಫಲವಾಗಿವೆ. ಅಂತರ್ಜಲ ಕಡಿಮೆಯಾಗಿದೆ~ ಎಂದು  ಪಂಚಾಯತ್‌ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಂಜಿನಿಯರ್ ವಾಸ್ತವ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.ಅಗತ್ಯವಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಗೆ ಜಿಲ್ಲಾಡಳಿತವನ್ನು ಸಂಪರ್ಕಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.ಸರ್ಕಾರದ ಕಾರ್ಯದರ್ಶಿಯವರನ್ನು ಭೇಟಿಮಾಡಿ ಜಿಲ್ಲೆಗೆ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ರೂ. 3 ಕೋಟಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಸುವರ್ಣಗ್ರಾಮ ಯೋಜನೆ ಕುಂಟುತ್ತ ಸಾಗಿರುವುದಕ್ಕೆ ಸಭೆಯಲ್ಲಿ ಸದಸ್ಯರು ಮತ್ತು ಶಾಸಕ ಅತೃಪ್ತಿ ವ್ಯಕ್ತಪಡಿಸಿ, ವಿಳಂಬ ನೀತಿ ಅನುರಿಸುವ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪಂ.ರಾ ಇಲಾಖೆಗೆ ಸೂಚಿಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಯೋಜನೆಗಳ ಮಾಹಿತಿ ಜನರಿಗೆ ತಿಳಿಯುತ್ತಿಲ್ಲ, ಏಜೆಂಟರ ಹಾವಳಿ ಮಿತಿಮೀರಿದೆ, ಅವರಿಂದಲೇ ಎಲ್ಲ ಕೆಲಸ ನಡೆಯಬೇಕು ಎಂಬ ಅಲಿಖಿತ ನಿಯಮವಿದೆ ಎಂದು ತಾ.ಪಂ ಅಧ್ಯಕ್ಷ ಶರಣು ತಳ್ಳಿಕೇರಿ ಆಕ್ಷೇಪ ವ್ಯಕ್ತಪಡಿಸಿದರು.ವರ್ಗವಾದರೂ ಬೇರೆಯವರಿಗೆ ಚಾರ್ಜ್ ನೀಡದ ಸಾಮಾಜಿಕ ಅರಣ್ಯ ಇಲಾಖೆ ಹಿಂದಿನ ಅಧಿಕಾರಿ ವೇತನ ತಡೆಹಿಡಿಯುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಬೇಕು. ಅಲ್ಲದೇ ಅವರ ಅವಧಿಯಲ್ಲಿನ ನೂನ್ಯತೆಗಳ ಪಟ್ಟಿಯನ್ನು ಕಳಿಸುವಂತೆ ಹಾಲಿ ಆರ್‌ಎಫ್‌ಒಗೆ ಶಾಸಕ ಸೂಚಿಸಿದರು.ಜಿ.ಪಂ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ವಾಲ್ಮೀಕಿ, ತಾ.ಪಂ ಅಧ್ಯಕ್ಷ ಶರಣು ತಳ್ಳಿಕೇರಿ, ಉಪಾಧ್ಯಕ್ಷೆ ಶರಣಮ್ಮ ಅಂಗಡಿ, ಜಿ.ಪಂ ಸದಸ್ಯರ, ಕಾರ್ಯನಿರ್ವಹಣಾಧಿಕಾರಿ ಎಂ.ಜಯಪ್ಪ ಇತರರು ಸಭೆಯಲ್ಲಿದ್ದರು.ಅವಹೇಳನ: ಖಂಡನೆ

ಗಂಗಾವತಿ: ವಿಶ್ವ ಕಂಡ ಭಾರತದ ಶ್ರೇಷ್ಠ ದಾರ್ಶನಿಕ ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ದೇಶದ ಕ್ಷಮೆ ಯಾಚಿಸಬೇಕು ಎಂದು ನಗರದ ಸ್ವಾಮಿ ವಿವೇಕಾನಂದ ಯುವಕ ಸಂಘ ಆಗ್ರಹಿಸಿದೆ. ವಿಶ್ವ ಮಾನವ ಸ್ವಾಮಿ ವಿವೇಕಾನಂದರನ್ನು ಭೂಗತ ಪಾತಕಿ, ದೇಶದ್ರೋಹಿ ದಾವೂದ್ ಇಬ್ರಾಹಿಂಗೆ ಹೋಲಿಸಿ ಮಾತನಾಡುವ ಮೂಲಕ ಗಡ್ಕರಿ ತಮ್ಮ ಅಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಎ.ಜೆ. ರಂಗನಾಥ, ಕಾರ್ಯದರ್ಶಿ ನವೀನ್ ದೂರಿದ್ದಾರೆ.ಪ್ರಕರಣದಿಂದ ಎಸ್‌ಎಫ್‌ಐ ಖುಲಾಸೆ

ಗಂಗಾವತಿ: ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಕಪ್ಪುಬಾವುಟ ಪ್ರದರ್ಶಿಸಿ ದೊಂಬಿ ನಡೆಸಲು ಯತ್ನಿಸಿದ್ದರೆಂಬ ಆರೋಪದ ಮೇಲೆ ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯ ಯುವಕರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಸ್ಥಳೀಯ ಕೋರ್ಟ್ ಸೋಮವಾರ ಖುಲಾಸೆಗೊಳಿಸಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಗರದಲ್ಲಿ ನಡೆದ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ್ದ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಸಂಘಟನೆಯ ಯುವಕರು ಕಪ್ಪುಬಾವುಟ ಪ್ರದರ್ಶಿಸಿ ವೇದಿಕೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಸಂಘಟನೆಯ ರಾಜ್ಯಾಧ್ಯಕ್ಷ ಅನಂತನಾಯ್ಕ ಮತ್ತು ಕೊಪ್ಪಳ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯಿ ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.