ಸೋಮವಾರ, ಮೇ 23, 2022
21 °C

ಕೃಷಿ ಮಹೋತ್ಸವ-11 ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉ.ಕ. ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ಕೃಷಿ ಅಭಿವೃದ್ಧಿ ಇಲಾಖೆ, ಕೃಷಿ ಮೇಳ ವ್ಯವಸ್ಥಾಪನಾ ಸಮಿತಿಯ ಆಶ್ರಯದಲ್ಲಿ  ‘ಕೃಷಿ ಮಹೋತ್ಸವ-2011’ ಕಾರ್ಯಕ್ರಮವು ತಾಲ್ಲೂಕಿನ ಬಿಳಗಿಯ ಮಾರಿಕಾಂಬಾ ಗದ್ದುಗೆಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಫೆ. 26 ಮತ್ತು 27ರಂದು ನಡೆಯಲಿದೆ.ಫೆ. 26 ರಂದು ಬೆಳಿಗ್ಗೆ 10ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿ.ಪಂ. ಅಧ್ಯಕ್ಷೆ ಸುಮಾ ಆರ್. ಲಮಾಣಿ  ವಸ್ತು ಪ್ರದರ್ಶನ ಮಳಿಗೆಯನ್ನು ಉದ್ಘಾಟಸಲಿದ್ದಾರೆ. ಸಂಸದ ಅನಂತಕುಮಾರ ಹೆಗಡೆ, ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತಿತರರು ಉಪಸ್ಥಿತರಿರುವರು. ತಾ.ಪಂ.ಅಧ್ಯಕ್ಷೆ ಶಾಂತಿ ಹಸ್ಲರ ಅಧ್ಯಕ್ಷತೆ ವಹಿಸುವರು.ಮಧ್ಯಾಹ್ನ 12ಕ್ಕೆ ‘ವಿಚಾರಗೋಷ್ಠಿ-1’ ನಡೆಯಲಿದ್ದು, ಡಾ.ಪಿ.ಸುರೇಂದ್ರ (ಭತ್ತದಲ್ಲಿ ಬೀಜಗಳ ಆಯ್ಕೆಯ ಮಹತ್ವ) ಉಪನ್ಯಾಸ ನೀಡುವರು. ಪ್ರಗತಿಪರ ಕೃಷಿಕ ರವಿಲೋಚನ ಮಡಗಾಂವಕರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2ಕ್ಕೆ ‘ವಿಚಾರಗೋಷ್ಠಿ-2’ ನಡೆಯಲಿದ್ದು, ಡಾ, ಮಂಜಪ್ಪ (ಭತ್ತದಲ್ಲಿ ಸುಧಾರಿತ ಬೇಸಾಯ), ಡಾ.ರಾಜಕುಮಾರ (ಸಾವಯವ ಕೃಷಿ ಮತ್ತು ಮಣ್ಣು ಸಂರಕ್ಷಣೆ),  ಡಾ.ಗುರುದತ್ ಹೆಗಡೆ (ತೋಟಗಾರಿಕಾ ಬೆಳೆಯಲ್ಲಿ ರೋಗ ನಿವಾರಣೆ) ಉಪನ್ಯಾಸ ನೀಡುವರು. ಕುಮಟಾದ ಕೃಷಿ ತರಬೇತಿ ಕೇಂದ್ರದ ಕೃಷಿ ಉಪನಿರ್ದೇಶಕ ಡಾ. ಕಿರಣಕುಮಾರ ನಾಯ್ಕ ಅಧ್ಯಕ್ಷತೆ ವಹಿಸುವರು.ಫೆ. 27ರಂದು ಬೆಳಿಗ್ಗೆ 9.30ಕ್ಕೆ ‘ವಿಚಾರಗೋಷ್ಠಿ-3’ರಲ್ಲಿ ಜಾನುವಾರು ಪ್ರದರ್ಶನವನ್ನು ವಕೀಲ ಶಶಿಭೂಷಣ ಹೆಗಡೆ ಉದ್ಘಾಟಿಸಲಿದ್ದು, ಡಾ.ಆರ್.ಆರ್.ಪಿ. ಗೌಡ ಕುಂಬಾರಕುಳಿ ಅಧ್ಯಕ್ಷತೆ ವಹಿಸಲಿದ್ದಾರೆ.  ಡಾ.ಗೋವಿಂದ ಭಟ್ಟ (ಲಾಭದಾಯಕ ಹೈನುಗಾರಿಕೆ), ಶ್ರೀಪಾದ ಭಾಸ್ಕರ ಹೆಗಡೆ ಹೊನ್ನೇಕೈ (ಪುಷ್ಪ ಬೇಸಾಯ), ಸತೀಶ ಹೆಗಡೆ (ಭತ್ತದಲ್ಲಿ ದೇಸಿಯ ತಳಿ ಸಂರಕ್ಷಣೆ) ಉಪನ್ಯಾಸ ನೀಡುವರು. ಮಧ್ಯಾಹ್ನ 2ಕ್ಕೆ ನಡೆಯುವ ‘ವಿಚಾರಗೋಷ್ಠಿ-4’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶು ಮತ್ತು ಮಹಿಳಾ ಅಭಿವೃದ್ಧಿ ಅಧಿಕಾರಿ ಜಿ.ಪದ್ಮಾವತಿ ವಹಿಸುವರು.ವಿನುತಾ ಮುಕ್ತಾಮಠ ಮತ್ತು ಅಂಜನಾ ಭಟ್ಟ (ಮಹಿಳೆಯರ ಸ್ವಉದ್ಯೋಗದ ಮಹತ್ವ ಮತ್ತು ಅವಕಾಶ) ಉಪನ್ಯಾಸ ನೀಡುವರು. ಮಧ್ಯಾಹ್ನ 3ಕ್ಕೆ ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮವಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾರೋಪ ಭಾಷಣ ಮಾಡುವರು. ಬಿಳಗಿ ಗ್ರಾ.ಪಂ. ಅಧ್ಯಕ್ಷ ಆದರ್ಶ ಪೈ ಅಧ್ಯಕ್ಷತೆ ವಹಿಸುವರು. ಕೆಎಸ್‌ಡಿಎಲ್ ಅಧ್ಯಕ್ಷ ಶಿವಾನಂದ ನಾಯ್ಕ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಮತ್ತಿತರರು ಉಪಸ್ಥಿತರಿರುವರು. ಎರಡೂ ದಿನ ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಫೆ. 28ರಂದು ಕೃಷಿ ಇಲಾಖೆಯ ಆಶ್ರಯದಲ್ಲಿ ಮಾದರಿ ರೈತರ ಕ್ಷೇತ್ರ ಸಂದರ್ಶನ ಮತ್ತು ವಿಡಿಯೋ ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.