ಸೋಮವಾರ, ಮೇ 17, 2021
28 °C

ಕೃಷ್ಣನಾ... ಕೊಳಲಿನಾ ದನಿ...

ಸಾಕ್ಷಿ Updated:

ಅಕ್ಷರ ಗಾತ್ರ : | |

ಡಾ. ಡಿ.ಟಿ. ಕೃಷ್ಣಮೂರ್ತಿ ವೃತ್ತಿಯಿಂದ ವೈದ್ಯರು. ಮೂಗು, ಗಂಟಲು, ಕಿವಿ ರೋಗತಜ್ಞರಂತೆ. ಜೋಗ, ಶಿವಮೊಗ್ಗ ಇಲ್ಲೆಲ್ಲ ಅವರ ಕಾರ್ಯಾಚರಣೆ. ಇಂಜೆಕ್ಷನ್, ಗುಳಿಗೆಗಳಾಚೆಗೂ ವೈದ್ಯರ ಜಗತ್ತು ದೊಡ್ಡದಾಗಿರುವಂತಿದೆ. ಆ ಜಗತ್ತಿನ ದರ್ಶನಕ್ಕೆ `ಕೊಳಲು~ (http://dtkmurthy.blogspot.in) ಬ್ಲಾಗಿಗೆ ಎಡತಾಕಬೇಕು.ತಮ್ಮ ಕೊಳಲನ್ನು `ಕನ್ನಡದ ಕೊರಳು~ ಎಂದು ಡಾ. ಮೂರ್ತಿ ಕರೆದುಕೊಂಡಿದ್ದಾರೆ. ಈ ಕೊರಳಿನಿಂದ ಏನೆಲ್ಲ ಪ್ರಕಟಗೊಂಡಿದೆ ಎಂದು ಹುಡುಕಾಡಿದರೆ ಬರಹಗಳ ಸುಗ್ಗಿಯ ಕಣವೇ ಎದುರಾಗುತ್ತದೆ. ಎಲ್ಲೋ ಓದಿದ ಬರಹದ ನೆನಪು, ಕೇಳಿದ ಸ್ವಾರಸ್ಯಕರ ಸಂಗತಿಗಳ ನಿರೂಪಣೆ, ಒಂದು ಹಾಸ್ಯದ ಪ್ರಸಂಗ, ಪುಸ್ತಕ-ಪತ್ರಿಕೆಯೊಂದರ ಬರಹದ ತುಣುಕು-ಹೀಗೆ, `ಕೊಳಲು~ ಬ್ಲಾಗು ಸಂಪದ್ಭರಿತ. ಕಾಲೇಜು ದಿನಗಳಲ್ಲಿ ಓದಿದ ಗೊರೂರರ ಕಥೆಯನ್ನು ನೆನಪಿನಿಂದಲೇ ಮರು ನಿರೂಪಿಸುವ ಡಾಕ್ಟ್ರು, `ನಿಮ್ಮ ಮನಸ್ಸು ಸುಂದರವಾಗಿದ್ದರೆ ಜಗತ್ತೂ ಸುಂದರ~ ಎಂದು ಹೇಳಬಲ್ಲರು. ಹೇಳಿಕೇಳಿ, ಅಧ್ಯಾತ್ಮ ಎಂದರೆ ಅವರಿಗೆ ಇಷ್ಟವಂತೆ. ಆ ಕಾರಣದಿಂದಲೇ ವ್ಯಕ್ತಿತ್ವವನ್ನು ಸುಂದರಗೊಳಿಸಿಕೊಳ್ಳುವ ಬಗ್ಗೆ ಅವರ ಬರಹಗಳು ತುಡಿಯುತ್ತವೆ.ಓದು, ಬರಹ, ಚಿತ್ರಕಲೆ, ಸಂಗೀತವೂ ಕೃಷ್ಣಮೂರ್ತಿ ಅವರಿಗೆ ಇಷ್ಟವಂತೆ. ಕನ್ನಡದಲ್ಲಿ ರಾಜಕುಮಾರರ ಸಿನಿಮಾ ಅಂದರೆ, ಹಿಂದಿಯಲ್ಲಿ ಶಮ್ಮಿ ಕಪೂರನ ಚಿತ್ರಗಳೆಂದರೆ ಮೈಯೆಲ್ಲಾ ಕಣ್ಣಾಗುತ್ತಾರಂತೆ. ಈ ಆಸಕ್ತಿಗಳೆಲ್ಲ ಅವರ ಬರಹಗಳಲ್ಲೂ ಮೂಡಿಬಂದಿವೆ, `ಕೊಳಲು~ ಬ್ಲಾಗನ್ನು ಚೆಲುವಾಗಿಸಿವೆ.ಕೃಷ್ಣಮೂರ್ತಿ ಡಾಕ್ಟ್ರಿಗೆ ಹಾಸ್ಯಪ್ರಜ್ಞೆ ಹರಿತವಾಗಿದೆ ಅನ್ನೋದಕ್ಕೆ ಒಂದು ಉದಾಹರಣೆ ನೋಡಿ: “ಮೊನ್ನೆ ಓ.ಪಿ.ಡಿ.ಗೆ ರೋಗಿಯೊಬ್ಬ ಬಂದ. ಸ್ಟೂಲ್ ತೋರಿಸಿ ಕೂತ್ಕೊಳಪ್ಪಾ ಎಂದೆ. `ಪರವಾಗಿಲ್ಲಾ ಬುಡಿ ಸಾ~ ಎಂದ. ಎಷ್ಟು ಬಲವಂತ ಮಾಡಿದರೂ ಕುಳಿತುಕೊಳ್ಳಲಿಲ್ಲ.ಕಾರಣ ಕೇಳಿದರೆ `ಹಾಸನದಲ್ಲಿ ಮಳೆ ಆಗೈತೆ ಸಾ...!~ ಎಂದ. ನಾನು, `ಅರೆ... ಹಾಸನದಲ್ಲಿ ಮಳೆ ಆದರೆ ನೀನು ಇಲ್ಲಿ ಕುಳಿತು ಕೊಳ್ಳೋಕೆ ಏನು ತೊಂದರೆಯಪ್ಪಾ~ ಎಂದೆ. ಅದಕ್ಕವನು `ಅಯ್ಯೋ... ನಿಮಗೆ ಎಂಗೆ ಎಳಾದು ಸಾ...! ಪೈಲ್ಸ್... ಆಗೈತೆ~  ಎಂದ. `ಆಸನದಲ್ಲಿ ಮೊಳೆ~ ಅನ್ನೋದು ಅವನ ಬಾಯಲ್ಲಿ `ಹಾಸನದಲ್ಲಿ ಮಳೆ~ ಆಗಿತ್ತು.

`ಕೊಳಲು~ ಬರಹಗಳ ಕಣದಿಂದ ಮತ್ತೊಂದು ತುಣುಕು ಇಲ್ಲಿದೆ ನೋಡಿ:“ಇದು ಬಹಳ ವರ್ಷಗಳ ಹಿಂದೆ ನಡೆದ ಘಟನೆ. ಪರಿಚಿತರೊಬ್ಬರು ಹೇಳಿದ್ದು. ಮೂಲಾ ನಕ್ಷತ್ರದ ಹುಡುಗಿಯೊಬ್ಬಳಿಗೆ ಮದುವೆ ಆಗುವುದು ಕಷ್ಟವಾಗಿತ್ತು. ಹುಡುಗಿಯ ಚಿಕ್ಕಪ್ಪ ಬುದ್ಧಿವಂತ, ಗಟ್ಟಿಗ ಮತ್ತು ಒಳ್ಳೆಯ ಮಾತುಗಾರ. ಹೇಗೋ ಮಾಡಿ ಒಂದು ಒಳ್ಳೆಯ ಸಂಬಂಧ ಕುದುರಿಸಿದರು. ಮದುವೆಯೂ ಆಗಿ ಹೋಯಿತು.

 

ಸುಖ ಸಂಸಾರ. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟರಲ್ಲಿ ಹುಡುಗಿಯ ಅತ್ತೆ ಹೃದಯಾಘಾತದಿಂದ ತೀರಿ ಹೋದರು. `ಹುಡುಗಿಯ ಕಾಲ್ಗುಣ ಸರಿ ಇಲ್ಲ, ಅದಕ್ಕೇ ಹೀಗಾಯಿತು~ ಅಂತ ಹುಡುಗನ ಮನೆಯವರು ಕಿರಿ ಕಿರಿ ಶುರು ಮಾಡಿ, ಮದುವೆ ಮಾಡಿಸಿದ ಹುಡುಗಿಯ ಚಿಕ್ಕಪ್ಪನನ್ನು ಕರೆಸಿ ಕ್ಯಾತೆ ತೆಗೆದರು.

ಹುಡುಗಿಯ ಚಿಕ್ಕಪ್ಪ ಸ್ವಲ್ಪವೂ ವಿಚಲಿತನಾಗದೆ- `ಈಗೇನಾಯಿತು? ಒಳ್ಳೆಯದೇ ಆಗಿದೆಯಲ್ಲ! ಹುಡುಗಿಯ ಕಾಲ್ಗುಣದಿಂದ ಹುಡುಗಿಯ ಅತ್ತೆಗೆ ಮುತ್ತೈದೆ ಸಾವು ಬಂದಿದೆ! ಇದಕ್ಕಿಂತ ಪುಣ್ಯ ಬೇಕೇ?~ ಎಂದು ಬಾಂಬ್ ಹಾಕಿ ಎಲ್ಲರ ಬಾಯಿ ಮುಚ್ಚಿಸಿದರಂತೆ.

 

ಅವರ ಬುದ್ಧಿವಂತಿಕೆ ಮತ್ತು ಸಮಯ ಪ್ರಜ್ಞೆಗೆ `ವಾಹ್~ ಎನಬೇಕು! ಆ ವ್ಯಕ್ತಿ ಈಗ ಇಲ್ಲ. ಆದರೆ ಅವರು ಬಾಳು ಹಸನಾಗಿಸಿದ ಆ ಹೆಣ್ಣು, ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಸುಖವಾಗಿದ್ದಾರೆ~.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.