ಮಂಗಳವಾರ, ಮೇ 11, 2021
21 °C

`ಕೆಂಪು ಹಚ್ಚಿದ್ದಾಯ್ತು; ನೀರಿಗೆ ಏನ್ ಮಾಡೋದು?'

ಚಿದಂಬರಪ್ರಸಾದ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೆಂಪು ಹಚ್ಚಿದ್ದಾಯ್ತು; ನೀರಿಗೆ ಏನ್ ಮಾಡೋದು?'

ಯಾದಗಿರಿ: ಜಿಲ್ಲೆಯ 19 ಹಳ್ಳಿಗಳಲ್ಲಿ ಆರ್ಸೆನಿಕ್‌ಯುಕ್ತ ನೀರಿನ ಜಲಮೂಲಗಳ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಅಧಿಕಾರಿಗಳೂ ಕೊಳವೆಬಾವಿ, ತೆರೆದ ಬಾವಿಗಳಿಗೆ ಕೆಂಪು ಬಣ್ಣ ಹಚ್ಚುವ ಕಾರ್ಯವನ್ನೂ ಆರಂಭಿಸಿದ್ದಾರೆ. ಆದರೆ ನಮ್ಮ ನಿತ್ಯದ ಬಳಕೆಗೆ ನೀರು ಎಲ್ಲಿಂದ ತರಬೇಕು ಎನ್ನುವ ಪ್ರಶ್ನೆ ಈ ಗ್ರಾಮಗಳ ಜನರನ್ನು ಕಾಡುತ್ತಿದೆ.ಆರ್ಸೆನಿಕ್ ನೀರು ಹೊಂದಿರುವ ಕೊಳವೆ ಬಾವಿಗಳನ್ನು ಜೂ.30 ರೊಳಗೆ ಮುಟ್ಟುಗೋಲು ಹಾಕುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಸುರಪುರ ತಾಲ್ಲೂಕಿನ 19 ಹಳ್ಳಿಗಳ ಕೊಳವೆ ಬಾವಿ ಹಾಗೂ ತೆರೆದ ಬಾವಿಗಳನ್ನುಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ.ಇತ್ತೀಚೆಗೆ ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಿಗೆ ಭೇಟಿ ನೀಡಿದ್ದ ಸಚಿವ ಎಚ್.ಕೆ. ಪಾಟೀಲರು, ರಾಯಚೂರು ಜಿಲ್ಲೆಯ 44 ಹಾಗೂ ಯಾದಗಿರಿ ಜಿಲ್ಲೆಯ 19 ಗ್ರಾಮಗಳ ಆರ್ಸೆನಿಕ್ ಅಂಶ ಇರುವ ಎಲ್ಲ ಕೊಳವೆ ಬಾವಿಗಳನ್ನು ಜೂ.30 ರೊಳಗಾಗಿ ಮುಟ್ಟುಗೋಲು ಹಾಕಬೇಕು. ಆ ಕೊಳವೆಬಾವಿಯ ಹತ್ತಿರ ಕೆಂಪು ಅಕ್ಷರದಲ್ಲಿ ನೀರು ಉಪಯೋಗಿಸದಂತೆ ಸೂಚನಾ ಫಲಕ ಹಾಕಲು ಸೂಚಿಸಿದ್ದರು. ಆ ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಪಂಚಾಯಿತಿಗೆ ರೂ. 1 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದರು.ಸುರಪುರ ತಾಲ್ಲೂಕಿನ ಕಿರದಳ್ಳಿ, ಕಿರದಳ್ಳಿ ತಾಂಡಾ, ಗೋಡ್ರಿಹಾಳ, ಮಾವಿನಮಟ್ಟಿ, ಚಿಗರಳ್ಳಿ, ಪೇಠ್ ಅಮ್ಮೋಪೂರ, ಹಾವಿನಾಳ, ಮಂಗಳೂರು, ಜೈನಾಪೂರ, ಗೌಡಗೇರಾ, ಮಾಲಗತ್ತಿ, ಕರಡಕಲ್, ಅರಕೇರಾ(ಕೆ), ಮುದ್ನೂರು, ಖಾನಾಪೂರ ಎಸ್,ಹೆಗ್ಗನದೊಡ್ಡಿ, ಪರಸನಳ್ಳಿ ಗ್ರಾಮಗಳಲ್ಲಿನ ಕೊಳವೆ ಬಾವಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಈ ಎಲ್ಲ ಗ್ರಾಮಗಳಿಗೆ ಜೂ 30 ರ ನಂತರ ಶುದ್ಧ ಕುಡಿಯುವ ನೀರು ಒದಗಿಸಲು ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಬೇಕಿದೆ. ಆದರೆ ಅಲ್ಲಿಯವರೆಗೆ ನಮ್ಮ ನಿತ್ಯದ ಬದುಕಿಗೆ ಎಲ್ಲಿಂದ ನೀರು ತರಬೇಕು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.`ಈಗ ಕೆಂಪ ಬಣ್ಣ ಹಚ್ಚಿ ಹೋಗ್ಯಾರ. ಟ್ಯಾಂಕರ್‌ಲಿಂದ ನೀರ ಕೊಡ್ತಿವಿ ಅಂತ ಹೇಳ್ತಾರ. ಆದ್ರ ಟ್ಯಾಂಕರ್ ನೀರು ಕುಡ್ಯಾಕ ಸಾಲ್ತಾವ. ಆದ್ರ ಸ್ನಾನ, ಬಟ್ಟಿ ತೊಳೊದಿಕ್ಕ, ಪಾತ್ರಿ ತೊಳೆದುಕ್ಕ ಎಲ್ಲಿಂದ ನೀರ ತರಬೇಕು ಅನ್ನೂದ ತಿಳಿವಾಲ್ತ ನೋಡ್ರಿ' ಎನ್ನುತ್ತಾರೆ ಕಿರದಳ್ಳಿ ತಾಂಡಾದ ತೇನಸಿಂಗ್.

ರೂ.13 ಕೋಟಿ ಯೋಜನೆ: ಈ ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಮೀಕ್ಷೆ, ಯೋಜನೆ, ಅಂದಾಜು ಹೀಗೆ ನಾನಾ ಹಂತದಲ್ಲಿ ಕಾಲ ಕಳೆಯುತ್ತಿದ್ದ ಸರ್ಕಾರ ಈಗ ಎಚ್ಚೆತ್ತುಕೊಂಡಿದ್ದು, ಶುದ್ಧ ಕುಡಿಯುವ ನೀರು ಸರಬರಾಜಿಗೆ ರೂ. 13 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಗೆ ಹಸಿರು ನಿಶಾನೆ ನೀಡಿದೆ.ಕುಡಿಯುವ ನೀರು ಪೂರೈಸಲು ಕಾಲುವೆ ಬಳಿ ನೀರು ಸಂಗ್ರಹಾಲಯ, ನೀರು ಶುದ್ಧೀಕರಣ ಘಟಕ, ಸಿಬ್ಬಂದಿ ವಸತಿಗೃಹಕ್ಕೆ ಸುಮಾರು 35 ಎಕರೆ ಜಮೀನು ಅಗತ್ಯವಿದೆ. ಎಡದಂಡೆ ಕಾಲುವೆ 73ನೇ ಕಿ.ಮೀ. ಬಲಭಾಗದಲ್ಲಿ ಇದಕ್ಕೆ ಜಮೀನು ಗುರುತಿಸಲಾಗಿದೆ. ಈ ಜಮೀನು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೇರಿದ್ದು, ಭೂ ಸ್ವಾಧೀನಕ್ಕೆ ನಿಗಮ ಹಾಗೂ ಜಿಲ್ಲಾಧಿಕಾರಿಗಳಿಗೆ ಯಾದಗಿರ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಮನವಿ ಮಾಡಿದೆ.

ಯೋಜನೆ ಸಮೀಕ್ಷಾ ಕಾರ್ಯ ಪೂರ್ಣವಾಗಿದೆ. ವರದಿ ಮತ್ತು ಅಂದಾಜು ಪಟ್ಟಿಗೆ ಅನುಮೋದನೆ ಮಾಡಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.