ಗುರುವಾರ , ಜೂಲೈ 9, 2020
21 °C

ಕೆ.ಆರ್.ನಗರ ಘನತ್ಯಾಜ್ಯ ತಂದ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ ಘನತ್ಯಾಜ್ಯ ತಂದ ಸಂಕಟ

ಕೆ.ಆರ್.ನಗರ: ಪಟ್ಟಣದ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜು ಹಿಂಭಾಗದಲ್ಲಿ ಹಾಕಲಾದ   ಪಟ್ಟಣದ ಘನ ತ್ಯಾಜ್ಯದಿಂದ ವಿದ್ಯಾರ್ಥಿಗಳು ಸೇರಿದಂತೆ ಸುತ್ತಲಿನ ನಿವಾಸಿಗಳು ಪರಿತಪಿಸುವಂತಾಗಿದೆ.

ಪಟ್ಟಣದ ಹೃದಯ ಭಾಗವಾದ ಕಾಲೇಜು ಹಿಂಭಾಗದ ಆವರಣ ಸೇರಿದಂತೆ ಕಸ್ತೂರಬಾ ಗಾಂಧಿ  ಬಾಲಿಕಾ ವಸತಿ ವಿದ್ಯಾಲಯ, ರೋಟರಿ ಭವನ, ಪೊಲೀಸ್ ವಸತಿ ಗೃಹಗಳು, ಡಾ.ಬಿ.ಆರ್.ಅಂಬೇಡ್ಕರ್  ಸಮುದಾಯ ಭವನ, ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯ, ಮಸೀದಿ, ಪಟ್ಟಣಕ್ಕೆ ನೀರೊದಗಿಸುವ ನೀರಿನ ಟ್ಯಾಂಕ್ ಪಕ್ಕದಲ್ಲಿಯೇ ಘನತ್ಯಾಜ್ಯವನ್ನು ಹಾಕಲಾಗುತ್ತಿದೆ.

ಅವಧಿ ಮುಗಿದ ಔಷಧಿ ಮಾತ್ರೆಗಳು, ಬಳಸಿದ ಸೂಜಿಗಳು ಸೇರಿದಂತೆ ನಾನಾ ತರಹದ ವಸ್ತುಗಳನ್ನು  ಹೊಂದಿರುವ ಘನತ್ಯಾಜ್ಯಕ್ಕೆ ಬೆಂಕಿ ಬಿದ್ದು ಕಾಲೇಜು ಆವರಣ ಸೇರಿದಂತೆ ಇಡೀ ಸುತ್ತಲಿನ ಪ್ರದೇಶದಲ್ಲಿ  ವಿಷಯುಕ್ತ ಗಾಳಿ ಆವರಿಸಿದೆ. ಅಲ್ಲದೇ ವಿದ್ಯಾರ್ಥಿಗಳು ವಿಷಯುಕ್ತ ಗಾಳಿಯಲ್ಲಿಯೇ ಪರೀಕ್ಷೆ ಎದುರಿಸುವಂತಾಗಿದೆ.

ಘನತ್ಯಾಜ್ಯವನ್ನು ಪಟ್ಟಣದಿಂದ ಸುಮಾರು 5ಕಿ.ಮೀ ದೂರ ಹಾಕಬೇಕು ಎಂಬ ನಿಯಮವಿದೆ. ಆದರೆ ಈ ನಿಯಮ ಕೆ.ಆರ್.ನಗರಕ್ಕೆ ಮಾತ್ರ ಅನ್ವಯಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಮತ್ತು ಸುತ್ತಲಿನ ನಿವಾಸಿಗಳು ಅನಾರೋಗ್ಯದಿಂದ ಬಳಲಿದರೂ ಸಹ ನಿಯಮ ಪಾಲಿಸಲು ಪುರಸಭೆಯವರಿಗೆ  ಸಾದ್ಯವಾಗುತ್ತಿಲ್ಲ.

ಶಾಸಕ ಸಾ.ರಾ.ಮಹೇಶ್ ಮತ್ತು ಪುರಸಭೆ ಅಧ್ಯಕ್ಷ ತಮ್ಮನಾಯಕ ಅವರು ಈಚೆಗೆ ಕಾಲೇಜಿನ ಸಮಾರೋಪ ಸಮಾರಂಭಕ್ಕೆ ಆಗಮಿಸಿದಾಗ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಕಾಲೇಜು ಹಿಂಭಾಗ  ಘನತ್ಯಾಜ್ಯ ಸಂಗ್ರಹವಾದ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನ ಸೆಳೆದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಮಾತಿಗೆ ಸ್ಪಂದಿಸಿದ ಶಾಸಕರು, ಪುರಸಭೆ ಅಧ್ಯಕ್ಷರು, ಇಲ್ಲಿ ಹಾಕಲಾದ ಘನತ್ಯಾಜ್ಯ ಬೇರೆಡೆ ಸಾಗಿಸಿ ಕಾಲೇಜಿನ ಸುತ್ತ ತಡೆಗೋಡೆ ನಿರ್ಮಿಸುವುದಾಗಿ ಹೇಳಿದರು. ಶಾಸಕರು, ಪುರಸಭೆ ಅಧ್ಯಕ್ಷರು ಹೀಗೆ ಹೇಳಿ ಹೋದ ಎರಡು ದಿನಗಳಲ್ಲಿಯೇ ಪುರಸಭೆ ಸಿಬ್ಬಂದಿ ಪಟ್ಟಣದ ಘನತ್ಯಾಜ್ಯ ಬೇರೆಡೆ ಸಾಗಿಸುವ ಬದಲು ಮತ್ತೆ ಅಲ್ಲಿಯೇ ಸುರಿಯುತ್ತಿರುವುದನ್ನು ನೋಡಿ ವಿದ್ಯಾರ್ಥಿಗಳು ಮತ್ತು ಸುತ್ತಲಿನ ನಿವಾಸಿಗಳು ದಿಗಿಲುಗೊಂಡರು.

ಈ ಬಗ್ಗೆ ಪುರಸಭೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅಧಿಕಾರಿಗಳು ಸೂಚಿಸಿದ ಸ್ಥಳಕ್ಕೆ ಬೇಲಿ ಹಾಕಲಾಗಿದೆ. ಇದರಿಂದ ಘನತ್ಯಾಜ್ಯ ಹಾಕಲು ಬೇರೆ ಸ್ಥಳವೇ ಇಲ್ಲದಂತಾಗಿದೆ. ವಿಧಿಯಿಲ್ಲದೇ ಇಲ್ಲಿಯೇ ಸುರಿಯಬೇಕಾಗಿದೆ ಎಂಬ ಉತ್ತರ ಬಂದಿತು. ಈ ಬಗ್ಗೆ ಪುರಸಭೆ ಅಧಿಕಾರಿಗಳನ್ನು ವಿಚಾರಿಸಿದರೆ ಘನತ್ಯಾಜ್ಯ ಸುರಿಯಲು ಸಿಬ್ಬಂದಿಗೆ ಬೇರೆ ಸ್ಥಳ ತೋರಿಸಿಲಾಗಿದೆ. ಆದರೆ ಪಟ್ಟಣದಿಂದ ದೂರ ಹೋಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಇಲ್ಲಿಯೇ ಸುರಿಯುತ್ತಿರಬಹುದು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇಲ್ಲಿ ಎಲ್ಲರಿಂದಲೂ ಆಶ್ವಾಸನೆ ಸಿಕ್ಕಿತೇ ಹೊರತಾಗಿ ಕಾಲೇಜು ಹಿಂಭಾಗದಲ್ಲಿ ಘನತ್ಯಾಜ್ಯ ಸುರಿಯುವುದನ್ನು ಮಾತ್ರ ಯಾರಿಂದಲೂ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇನ್ನೂ ಘನತ್ಯಾಜ್ಯ ಇಲ್ಲಿಂದ ಬೇರೆಡೆ ಸ್ಥಳಾಂತರ ಮಾಡುತ್ತಾರೆ ಎಂದು ಎಷ್ಟರ ಮಟ್ಟಿಗೆ ನಂಬಬಹುದು?

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.