ಶುಕ್ರವಾರ, ಮೇ 7, 2021
26 °C

ಕೆಎಸ್‌ಡಿಎಲ್ ಲಾಭ 16 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ, 2011-12ನೇ ಸಾಲಿನಲ್ಲಿ 16.03 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. 262.56 ಕೋಟಿ ರೂಪಾಯಿ ವಹಿವಾಟು ನಡೆಸಿದ್ದು, 2010-11ನೇ ಸಾಲಿಗೆ ಹೋಲಿಸಿದರೆ ಶೇ. 28ರ ಪ್ರಗತಿ ದಾಖಲಿಸಿದೆ.10 ವರ್ಷಗಳ ಹಿಂದೆ ರೂ. 90 ಕೋಟಿ ನಷ್ಟದಲ್ಲಿದ್ದ ನಿಗಮ, ಇತ್ತೀಚಿನ ವರ್ಷಗಳಲ್ಲಿ ನಿರಂತರ ಲಾಭ ಗಳಿಸುತ್ತಿದೆ. ಸರ್ಕಾರಕ್ಕೆ 1.59 ಕೋಟಿ ರೂಪಾಯಿ ಲಾಭಾಂಶ ಸಹ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷ ಶಿವಾನಂದ ನಾಯ್ಕ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ದೇಶದ ಸಾಬೂನು ಮಾರುಕಟ್ಟೆಯಲ್ಲಿ ನಿಗಮದ ಪಾಲು ಶೇ. 4ರಷ್ಟಿದೆ. ತಮಿಳುನಾಡು ಮಾರುಕಟ್ಟೆಯಲ್ಲಿ ಶೇ. 14ರಷ್ಟು ಮತ್ತು ಕರ್ನಾಟಕದ ಮಾರುಕಟ್ಟೆಯಲ್ಲಿ ಶೇ. 12ರಷ್ಟು ಪಾಲು ಹೊಂದಿದೆ ಎಂದರು.ಶ್ರೀಗಂಧ ಬರ: ನಿಗಮ ಸದ್ಯ ಶ್ರೀಗಂಧದ ಕೊರತೆ ಎದುರಿಸುತ್ತಿದ್ದು, ಕೇರಳ, ತಮಿಳುನಾಡಿನಿಂದ ಶ್ರೀಗಂಧ ತರಿಸಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯೂ ಮೈಸೂರಿನಲ್ಲಿ 20 ಎಕರೆಯಲ್ಲಿ ಶ್ರೀಗಂಧ ಬೆಳೆಸುತ್ತಿದೆ. ಶ್ರೀಗಂಧ ಬೆಳೆದು ಸಂಸ್ಥೆಗೇ ಮಾರಾಟ ಮಾಡುವುದಾಗಿ ಲಿಖಿತ ಭರವಸೆ ನೀಡಿದರೆ ರೈತರಿಗೆ ಉಚಿತವಾಗಿ ಶ್ರೀಗಂಧದ ಸಸಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.ರಾಜ್ಯದ ಅತಿ ಹಿಂದುಳಿದ ಗ್ರಾಮಗಳನ್ನು ದತ್ತು ಪಡೆದು, ಅವುಗಳನ್ನು `ಶ್ರೀಗಂಧ ನಗರ~ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.ಶೀಘ್ರ ಒಪ್ಪಂದ: ದ್ರವೀಕೃತ ಅನಿಲ ಇಂಧನವನ್ನು ಕೊಳವೆ ಮೂಲಕ ನಿಗಮಕ್ಕೆ ನೇರವಾಗಿ ತಲುಪಿಸುವ ಬಗ್ಗೆ ಭಾರತೀಯ ಅನಿಲ ಪ್ರಾಧಿಕಾರದ ಜತೆ ಶೀಘ್ರ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ಯೋಜನೆ ಅನುಷ್ಠಾನಗೊಂಡ ನಂತರ ನಿಗಮಕ್ಕೆ ವಾರ್ಷಿಕ 2 ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಯೋಜನೆಗೆ ಅಂದಾಜು 22 ಕೋಟಿ ರೂಪಾಯಿ ಬೇಕಾಗಬಹುದು ಎಂದು ವ್ಯವಸ್ಥಾಪಕ ನಿರ್ದೇಶಕ ಎಸ್. ಶೇಖರ್ ಹೇಳಿದರು.ಜೂನ್‌ನಲ್ಲಿ ರೈತರ ಸಮಾವೇಶ ಆಯೋಜಿಸಿ, ಜಮೀನಿನಲ್ಲಿ ಶ್ರೀಗಂಧ ಬೆಳೆಯುವ ಕುರಿತು ಪ್ರೋತ್ಸಾಹ ನೀಡಲಾಗುವುದು.ಆರ್ಥಿಕ ಸಹಾಯ ನೀಡಿ, ರೈತರಿಂದ ಶ್ರೀಗಂಧ ಬೆಳೆಸಿ ಮಾರುಕಟ್ಟೆ ಬೆಲೆಗೆ ಸಂಸ್ಥೆಯೇ ಖರೀದಿ ಮಾಡಲಿದೆ ಎಂದರು.

720ಕ್ಕೆ `ಪ್ರೀಮಿಯಂ~ ಬೇಡಿಕೆ

ಇತ್ತೀಚೆಗಷ್ಟೇ ಕರ್ನಾಟಕ, ತಮಿಳುನಾಡು ಮಾರುಕಟ್ಟೆಗೆ ಬಿಡುಗಡೆಯಾದ ರೂ. 720ರ `ಮೈಸೂರ್ ಸ್ಯಾಂಡಲ್ ಪ್ರೀಮಿಯಂ~ ಸೋಪಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಬೇಡಿಕೆ ಪೂರೈಸಲೇ ಆಗುತ್ತಿಲ್ಲ ಎಂದು ಶಿವಾನಂದ ನಾಯ್ಕ ಹೇಳಿದರು.ಸೋಪನ್ನು ಹೈದರಾಬಾದ್, ಮುಂಬೈ, ದೆಹಲಿ, ಕೋಲ್ಕತ್ತಾ ಮಾರುಕಟ್ಟೆಗೂ ಶೀಘ್ರ ಬಿಡುಗಡೆ ಮಾಡಲಾಗುವುದು. ವಿದೇಶಕ್ಕೂ ರಫ್ತು ಮಾಡಲಾಗುವುದು. ನಿಗಮದ ಉತ್ಪನ್ನಗಳ ಪ್ರಚಾರಕ್ಕೆ ಮುಂದಿನ ತಿಂಗಳಿನಿಂದ ತಾಲ್ಲೂಕು ಮಟ್ಟದಲ್ಲಿ `ಸೋಪು ಸಂತೆ~ ಆರಂಭಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.