ಮಂಗಳವಾರ, ಮೇ 24, 2022
26 °C

ಕೆಐಎಡಿಬಿಯಿಂದ ಅನ್ಯಾಯ:ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡುವಲ್ಲಿ ಕೈಐಎಡಿಬಿ ಸಂಸ್ಥೆ ಅನ್ಯಾಯವೆಸಗಿದ್ದು, ಸುಮಾರು ಇನ್ನೂರು ಕುಟುಂಬಗಳಿಗೆ ತೀವ್ರ ನಷ್ಟವಾಗಿದೆ ಎಂದು ತಾಲ್ಲೂಕು ಚಲವಾದಿ ಸಂಘದ ಕಾರ್ಯದರ್ಶಿ ಎಸ್.ಶ್ರಿನಿವಾಸ್ ಆರೋಪಿಸಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಗಂಗಮುತ್ತನಹಳ್ಳಿ ಮತ್ತು ಅರಿಶಿನಕುಂಟೆ ಹಾಗೂ ಭಾವಪುರ ಗ್ರಾಮಗಳಲ್ಲಿನ ದಾಖಲೆ ಹೊಂದಿರುವ ರೈತರಿಗೆ ಮಾತ್ರ ಐದು ಲಕ್ಷ ಪರಿಹಾರ ನೀಡಲಾಗಿದೆ. ಆದರೆ ಕೆಲವರಿಗೆ ದಾಖಲೆ ಸರಿಯಿಲ್ಲವೆಂದು ಪರಿಹಾರ ನೀಡಿಲ್ಲ. ಅಂಥವರು ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದರೂ  ಸಮಸ್ಯೆ ಇತ್ಯರ್ಥವಾಗಿಲ್ಲ. ಅಲ್ಲದೆ ಬಗರ್‌ಹುಕ್ಕುಂ ಸಾಗುವಳಿ ಮಾಡುತ್ತಿದ್ದ ರೈತರಿಗೂ ಸಮರ್ಪಕ ದಾಖಲೆ ಇಲ್ಲದೆ ಇದೇ ಪರಿಸ್ಥಿತಿ ಉದ್ಭವಿಸಿದೆ ಎಂದು ಆರೋಪಿಸಿದರು.ಗ್ರಾಮದ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ಸ್ವಾಧೀನಪಡಿಸಿಕೊಂಡ ಭೂಮಿಯ ಪ್ರತಿ ಚದರಡಿಗೆ ಕೇವಲ 22ರೂ. ಪರಿಹಾರ ನೀಡಿದೆ. ಉಳಿದ ಶೇ 50ರಷ್ಟು ನೀಡಿಲ್ಲ, ಪರಿಹಾರ ನೀಡಿಕೆಯಲ್ಲಿ ಮಧ್ಯವರ್ತಿಗಳಿಂದ ಅನ್ಯಾಯವಾಗಿದೆ, ಸ್ಥಳಾಂತರಗೊಂಡ ನಂತರ ಬಡಾವಣೆಯಲ್ಲಿ ಅನಿವಾರ್ಯವಿಲ್ಲದೆ ಗುಡಿಸಲು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ.ಮನೆ ಹಾಗೂ ಭೂಮಿ ಕಳೆದುಕೊಂಡವರಿಗೆ  ಐದುಲಕ್ಷರೂ ಪರಿಹಾರಧನ ನೀಡಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವುದಾಗಿ ಈ ಹಿಂದೆ ಕೆ.ಐ.ಎ.ಡಿ.ಬಿ ಭರವಸೆ ನೀಡಿತ್ತು. ಆದರೆ ಅದನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.`ಸ್ಥಳಾಂತರಗೊಂಡ ಕುಟುಂಬಗಳಿಗೆ ಚನ್ನರಾಯಪಟ್ಟಣ ಹೊಬಳಿ, ಬಾಲೆಪುರ ಗ್ರಾಮದ ಸ.ನಂ 62ರಲ್ಲಿ ನಿವೇಶನ ನೀಡಿದ್ದು, ಅದು ವಾಸಕ್ಕೆ ಯೋಗ್ಯವಾಗಿಲ್ಲ. ಬಡಾವಣೆ ನಿರ್ಮಾಣವಾಗಿರುವ ಸ್ಥಳದಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಿಲ್ಲ. ಶವ ಸಂಸ್ಕಾರಕ್ಕೆ ಅವಕಾಶವಿಲ್ಲದಿದ್ದರೆ ಅಲ್ಲಿನ ಜನತೆ ಸ್ಥಿತಿ ಹೇಗೆ ಎಂಬುದನ್ನು ಸಂಬಂಧಪಟ್ಟ ಇಲಾಖೆ ಅರ್ಥಮಾಡಿಕೊಳ್ಳಬೇಕು~ ಎಂದರು.`ಫಲವತ್ತಾದ ಭೂಮಿ ನೀಡಿ, ಮನೆ ಕಳೆದುಕೊಂಡು ಸೂಕ್ತ ಪರಿಹಾರವೂ ದೊರೆಯದೇ ಇಲ್ಲಿನ ಕುಟುಂಬಗಳಿಗೆ ಜೀವನ ಕಷ್ಠಕರವಾಗಿದೆ. ಸ್ಥಳಾಂತರ ಮಾಡಿ ಬೀದಿ ಪಾಲು ಮಾಡಿರುವ ಇಲಾಖೆ ಖುದ್ದು ಪರಿಶೀಲನೆ ನಡೆಸಿ ಬಡಾವಣೆಯ ಜನರ ಸಮಸ್ಯೆಗಳ ಬಗ್ಗೆ ಕೂಡಲೇ ಗಮನ ಹರಿಸಬೇಕು~ ಎಂದು ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.