ಶನಿವಾರ, ಮೇ 28, 2022
26 °C

ಕೆಐಎಡಿಬಿ ಹಗರಣ: ಜಗ್ಗಯ್ಯ, ವೆಂಕಯ್ಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿಗಳಾದ ಜಗ್ಗಯ್ಯ ಮತ್ತು ಬಿ.ಎಲ್.ವೆಂಕಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇಬ್ಬರೂ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಡೆದಿರುವ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಸಹಕರಿಸಿದ ಆರೋಪ ಇಬ್ಬರ ಮೇಲಿದೆ. ಇಟಾಸ್ಕಾ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಂಪೆನಿಗೆ ನಿಗದಿ ಮಾಡಿದ ಭೂಮಿಯ ಪರಿಹಾರ ಹಂಚಿಕೆ ಹಗರಣದಲ್ಲಿ ಇವರು ಭಾಗಿಯಾಗಿದ್ದರು. ಇಂದು ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಎಂಬ ಬೇನಾಮಿ ಕಂಪೆನಿ ಸ್ಥಾಪಿಸಿ, ರೈತರಿಗೆ ದೊರೆಯಬೇಕಾದ ಪರಿಹಾರದ ಮೊತ್ತವನ್ನು ವರ್ಗಾವಣೆ ಮಾಡಿಕೊಂಡಿದ್ದರು.ಇಂದು ಡೆವಲಪರ್ಸ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕುಟುಂಬದ ಬೇನಾಮಿ ಕಂಪೆನಿ. ಅವರದೇ ಒಡೆತನದ ಪೆಟ್ರೋಲ್ ಬಂಕ್‌ನ ಕಾರ್ಮಿಕರಾಗಿದ್ದ ಜಗ್ಗಯ್ಯ ಮತ್ತು ವೆಂಕಯ್ಯ ಬೇನಾಮಿ ಕಂಪೆನಿಯ ಪಾಲುದಾರರ ಪಾತ್ರ ನಿರ್ವಹಿಸಿದ್ದರು. ಕೆಐಎಡಿಬಿ ರೈತರ ಹೆಸರಿಗೆ ನೀಡಿದ ಚೆಕ್‌ಗಳನ್ನು ನಕಲಿ ಸಹಿ ಮಾಡುವ ಮೂಲಕ ನಗದೀಕರಿಸುತ್ತಿದ್ದರು. ಪರಿಹಾರದ ಮೊತ್ತವನ್ನು ಇಂದು ಡೆವಲಪರ್ಸ್‌ಗೆ ವರ್ಗಾವಣೆ ಮಾಡುತ್ತಿದ್ದರು ಎಂಬುದು ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಪತ್ತೆಯಾಗಿತ್ತು.ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು ಜಗ್ಗಯ್ಯ ಮತ್ತು ವೆಂಕಯ್ಯ ಸೇರಿದಂತೆ 11 ಜನರ ವಿರುದ್ಧ 2011ರ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಆರೋಪಪಟ್ಟಿ ಸಲ್ಲಿಕೆಗೂ ಕೆಲ ದಿನಗಳ ಮೊದಲೇ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.ಈ ಇಬ್ಬರ ಗೈರು ಹಾಜರಿ ಪ್ರಕರಣದ ವಿಚಾರಣೆಗೆ ತೊಡಕಾಗಿತ್ತು. ಇದನ್ನು ಮನಗಂಡ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು, ಜಗ್ಗಯ್ಯ ಮತ್ತು ವೆಂಕಯ್ಯ ವಿರುದ್ಧದ ಆರೋಪಪಟ್ಟಿಯನ್ನು ಮುಖ್ಯ ಪ್ರಕರಣದಿಂದ ಬೇರ್ಪಡಿಸಿದ್ದರು. ಬಳಿಕ ಇಬ್ಬರ ಪತ್ತೆಗೆ ವಾರೆಂಟ್‌ಗಳನ್ನು ಹೊರಡಿಸಿದ್ದರು. ಇಬ್ಬರೂ ಪತ್ತೆಯಾಗದಿದ್ದಾಗ ಘೋಷಿತ ಆರೋಪಿಗಳೆಂದು ಪ್ರಕಟಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.ಆಂಧ್ರಪ್ರದೇಶ ಸಂಪರ್ಕ: ಆರೋಪಿಗಳ ಪತ್ತೆಗಾಗಿ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿದ್ದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್, ನಿರಂತರ ಕಾರ್ಯಾಚರಣೆಗೆ ಸೂಚಿಸಿದ್ದರು. ಆರೋಪಿಗಳು ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಸುಳಿವು ಹಿಡಿದಿದ್ದ ತನಿಖಾ ತಂಡ ಪತ್ತೆಗೆ ಪ್ರಯತ್ನ ನಡೆಸಿತ್ತು.ಈ ಮಧ್ಯೆ ಜಗ್ಗಯ್ಯ ಬೆಂಗಳೂರಿನ ಕೋಣನಕುಂಟೆಗೆ ಬಂದಿರುವ ಮಾಹಿತಿ ಪಡೆದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಚ್.ಎಸ್.ಗಿರೀಶ್ ಶನಿವಾರ ಬೆಳಿಗ್ಗೆ ಆತನನ್ನು ಬಂಧಿಸಿದರು. ನಂತರ ಜಗ್ಗಯ್ಯ ನೀಡಿದ ಮಾಹಿತಿ ಆಧರಿಸಿ ಚಿತ್ತೂರಿಗೆ ತೆರಳಿ ವೆಂಕಯ್ಯನ ಬಂಧನಕ್ಕೆ ಶೋಧ ನಡೆಸಿದರು. ಆದರೆ, ಅಷ್ಟರಲ್ಲಿ ಆತ ತಿರುಪತಿಗೆ ತೆರಳಿರುವ ಮಾಹಿತಿ ದೊರೆಯಿತು. ತಕ್ಷಣ ಅಲ್ಲಿಗೆ ತೆರಳಿದ ಗಿರೀಶ್ ಆರೋಪಿಯನ್ನು ಬಂಧಿಸಿದರು ಎಂದು ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.ಇಬ್ಬರೂ ಆರೋಪಿಗಳನ್ನು ಪ್ರಾಥಮಿಕ ತನಿಖೆಯ ಬಳಿಕ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.