ಕೆನಡಾಕ್ಕೆ ಅಚ್ಚರಿಯ ಗೆಲುವಿನ ಕನಸು
ಮುಂಬೈ: ಬಾಂಗ್ಲಾದೇಶ ಹಾಗೂ ಐರ್ಲೆಂಡ್ ತಂಡದವರು ಇಂಗ್ಲೆಂಡ್ ವಿರುದ್ಧ ವಿಜಯ ಸಾಧಿಸಿರುವಾಗ ನಾವೇಕೆ ನ್ಯೂಜಿಲೆಂಡ್ ಎದುರು ಅಚ್ಚರಿಯ ಗೆಲುವು ಪಡೆಯಲು ಸಾಧ್ಯವಿಲ್ಲ?-ಇದು ಕೆನಡಾ ತಂಡದ ನಾಯಕ ಆಶಿಶ್ ಬಾಗೈ ಎಸೆದಿರುವ ಸವಾಲು. ಭಾನುವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಎದುರಿಸಲಿರುವ ಕೆನಡಾ ಅನಿರೀಕ್ಷಿತವನ್ನು ಸಾಧಿಸಿ ತೋರಿಸುವ ಮಹತ್ವಾಕಾಂಕ್ಷೆ ಹೊಂದಿದೆ.
ಆದರೆ ಎದುರಾಳಿ ನ್ಯೂಜಿಲೆಂಡ್ ಬಲಾಢ್ಯ ತಂಡ. ಅನಿರೀಕ್ಷಿತವೊಂದು ನಡೆಯುವುದಕ್ಕೆ ಅವಕಾಶ ಸಿಗದಂತೆ ಆಡುವ ಛಲವನ್ನೂ ಹೊಂದಿದೆ. ಆದರೂ ಆಸೆಯ ಎಳೆಯನ್ನು ಹಿಡಿದು ನಿಂತಿದೆ ಕೆನಡಾ. ನಾಯಕ ಬಾಗೈ ಅವರಂತೂ ತಮ್ಮ ತಂಡವೂ ಈ ಬಾರಿಯಲ್ಲಿ ಭಾರಿ ಬೆರಗಾಗುವಂಥ ಒಂದು ಫಲಿತಾಂಶ ಪಡೆಯಬೇಕೆಂದು ಯೋಚಿಸುತ್ತಿದ್ದಾರೆ.ವಾಂಖೇಡೆ ಕ್ರೀಡಾಂಗಣ ನವೀಕರಣಗೊಂಡ ನಂತರ ನಡೆಯುತ್ತಿರುವ ಮೊಟ್ಟ ಮೊದಲ ಅಂತರರಾಷ್ಟ್ರೀಯ ಪಂದ್ಯದ ವೇಳೆ ಪಿಚ್ ಹೇಗೆ ಸ್ಪಂದಿಸುತ್ತದೆ ಎನ್ನುವುದು ನಿಗೂಢ. ಆದ್ದರಿಂದ ಕಿವೀಸ್ ವೇಗಿಗಳಿಗೆ ಸಹಕಾರಿ ಆಗುತ್ತದೋ ಇಲ್ಲವೋ ಎನ್ನುವ ಸವಾಲಿಗೆ ಭಾನುವಾರವೇ ಉತ್ತರ ಸಿಗಬೇಕು. ಫೈನಲ್ ಪಂದ್ಯವು ಇಲ್ಲಿಯೇ ನಡೆಯಲಿರುವುದರಿಂದ ಅಂತಿಮ ಹಣಾಹಣಿಯಲ್ಲಿ ಕಾಣಿಸಿಕೊಳ್ಳುವ ಛಲ ಹೊಂದಿರುವ ತಂಡಗಳ ಆಟಗಾರರೂ ಈ ಪಂದ್ಯದ ಕಡೆಗೆ ಆಸಕ್ತಿಯಿಂದ ನೋಡುವುದು ಸಹಜ.
ಕೀನ್ಯಾ, ಜಿಂಬಾಬ್ವೆ ಹಾಗೂ ಪ್ರಬಲ ಪಾಕಿಸ್ತಾನದ ವಿರುದ್ಧ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ನ್ಯೂಜಿಲೆಂಡ್ಗೆ ನಿರಾಸೆಯಾಗಿದ್ದು ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಮಾತ್ರ. ಆರು ಪಾಯಿಂಟುಗಳನ್ನು ತನ್ನ ಖಾತೆಯಲ್ಲಿ ಹೊಂದಿರುವ ವೆಟೋರಿ ಬಳಗವು ಭಾನುವಾರದ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಬಯಸಿದೆ.
ನ್ಯೂಜಿಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿರುವುದು ಸಹಜ. ಆದರೂ ‘ಅಚ್ಚರಿ’ಯೊಂದು ಸಾಧ್ಯವಾಗಬೇಕು ಎನ್ನುವ ಕನಸು ಕಂಡಿರುವ ಕೆನಡಾ ಯಾವ ಮಟ್ಟದಲ್ಲಿ ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಂಡು ಅಂಗಳದಲ್ಲಿ ಹೋರಾಡುತ್ತದೆಂದು ಕಾಯ್ದು ನೋಡಬೇಕು.
ನ್ಯೂಜಿಲೆಂಡ್
ಡೇನಿಯಲ್ ವೆಟೋರಿ (ನಾಯಕ), ಹ್ಯಾಮಿಷ್ ಬೆನ್ನೆಟ್, ಜೇಮ್ಸ್ ಫ್ರಾಂಕ್ಲಿನ್, ಮಾರ್ಟಿನ್ ಗುಪ್ಟಿಲ್, ಜ್ಯಾಮಿ ಹೌವ್, ಬ್ರೆಂಡನ್ ಮೆಕ್ಲಮ್, ನಥಾನ್ ಮೆಕ್ಲಮ್, ಕೇಲ್ ಮಿಲ್ಸ್, ಜೇಕಬ್ ಓರಾಮ್, ಜೆಸ್ಸಿ ರೈಡರ್, ಟಿಮ್ ಸೌಥೀ, ಸ್ಕಾಟ್ ಸ್ಟೈರಿಸ್, ರಾಸ್ ಟೇಲರ್, ಕೇನ್ ವಿಲಿಯಮ್ಸನ್, ಲುಕ್ ವುಡ್ಕಾಕ್.
ಕೆನಡಾ
ಆಶಿಶ್ ಬಾಗೈ (ನಾಯಕ), ರಿಜ್ವಾನ್ ಚೀಮಾ, ಹರ್ವಿರ್ ಬೈಡ್ವಾನ್, ನಿತೀಶ್ ಕುಮಾರ್, ಹೀರಲ್ ಪಟೇಲ್, ಟೈಸನ್ ಗೊರ್ಡಾನ್, ಹೆನ್ರಿ ಒಸಿಂಡೆ, ಜಾನ್ ಡೇವಿಸನ್, ರವಿಂದು ಗುಣಶೇಕರ, ಪಾರ್ಥ್ ದೇಸಾಯಿ, ಖುರ್ರಮ್ ಚೋಹಾನ್, ಜಿಮ್ಮಿ ಹಂಸ್ರಾ, ಜುಬಿನ್ ಸುಕಾರಿಯಾ ಮತ್ತು ಬಾಲಾಜಿ ರಾವ್.
ಅಂಪೈರ್ಗಳು: ಶಾವೀರ್ ತಾರಾಪುರ (ಭಾರತ) ಮತ್ತು ಬ್ರೂಸ್ ಆಕ್ಸೆನ್ಫೋರ್ಡ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ).
ಮ್ಯಾಚ್ರೆಫರಿ: ರೋಷನ್ ಮಹನಾಮಾ (ಶ್ರೀಲಂಕಾ). ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00; 1.45ರಿಂದ ಪಂದ್ಯ ಮುಗಿಯುವವರೆಗೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.