ಭಾನುವಾರ, ಜನವರಿ 19, 2020
26 °C

ಕೆಪಿಎಸ್‌ಸಿ: ಕೆಎಟಿ ಮೆಟ್ಟಿಲೇರಿದ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮರು ಮೌಲ್ಯ­ಮಾಪನ ಮತ್ತು ಮರು ಸಂದರ್ಶನ ನಡೆಸಲು ಸರ್ಕಾರ ಹೊರ­ಡಿ­ಸಿರುವ ಆದೇಶ ಪ್ರಶ್ನಿಸಿ ಚಂದನ್‌ ಕುಮಾರ್‌ ಮತ್ತು ಇತರರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ.ಈ ಪ್ರಕರಣದ ವಿಚಾರಣೆ ನಡೆಸಿದ ಕೆಎಟಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನೋಟಿಸ್‌ ಜಾರಿಗೆ ಆದೇಶಿ­ಸಿದ್ದು, ಮುಂದಿನ ವಿಚಾರಣೆಯನ್ನು ಜ. 21ಕ್ಕೆ ನಿಗದಿಪಡಿಸಿದೆ.‘ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಗೆ ಹಾಜ­ರಾಗಿದ್ದ ನಾವು ಉತ್ತಮ ಅಂಕ ಗಳಿಸಿದ್ದೇವೆ. ಆಯ್ಕೆ ಪಟ್ಟಿ ಪ್ರಕಟ­ಣೆಯ ನಿರೀಕ್ಷೆಯಲ್ಲಿದ್ದೇವೆ. ಆದರೆ ನೇಮಕಾತಿ ಪ್ರಕ್ರಿಯೆ-­ಯಲ್ಲಿ ಅಕ್ರಮ ನಡೆದಿದೆ ಎಂದು ಡಾ. ಮೈತ್ರಿ ಎಂಬುವರು ರಾಜ್ಯದ ಅಡ್ವೊಕೇಟ್‌ ಜನರಲ್‌ಗೆ ದೂರು ನೀಡಿದರು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.‘ದೂರು ಪಡೆದ ಅಡ್ವೊಕೇಟ್‌ ಜನರಲ್‌, ಸರ್ಕಾರಕ್ಕೆ ಕೆಲವು ಸಲಹೆ­ ನೀಡಿದರು. ಇದನ್ನು ಆಧರಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಿಐಡಿ ತನಿಖೆಗೆ ಆದೇಶಿ­ಸಿತು. ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಐಡಿ ಮಧ್ಯಂತರ ವರದಿ ನೀಡಿತು. ಇದರ ಆಧಾರದ ಮೇಲೆ  ಮರು ಮೌಲ್ಯಮಾಪನ– ಮರು ಸಂದರ್ಶನ ನಡೆ­ಸಲು ತೀರ್ಮಾನಿಸಲಾಗಿದೆ. ಮರು ಸಂದರ್ಶನದ ನಿರ್ಧಾರದಿಂದ, ಸರ್ಕಾರಿ ಸೇವೆಗೆ ಸೇರುವ ನಮ್ಮ ಕನಸುಗಳು ಚೂರಾಗಿವೆ’ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)