ಶನಿವಾರ, ಮೇ 28, 2022
31 °C

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪ .ಕೃಷಿ ಬಜೆಟ್‌ನಲ್ಲಿದೆ ರೈತರಿಗೆ ಮೋಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರೈತರಿಗೆ ಮತ್ತೊಮ್ಮೆ ಮೋಸ ಮಾಡುವ ಉದ್ದೇಶವಿಟ್ಟುಕೊಂಡೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಲು ಹೊರಟಿದ್ದಾರೆ. ಇದರಲ್ಲಿ ನಿಜವಾದ ರೈತರ ಕಾಳಜಿ ಇಲ್ಲ. ಇದು ರಾಜಕೀಯ ಲಾಭದ ನಿರೀಕ್ಷೆಯುಳ್ಳ ಜನಪ್ರಿಯ ಬಜೆಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹೇಳಿಕೊಳ್ಳುತ್ತಿರುವಂತೆ ಮತ್ತೊಂದು ಜನಪ್ರಿಯ ಬಜೆಟ್ ಅಷ್ಟೇ. ಈಗ ಎರಡೂವರೆ ವರ್ಷದಲ್ಲಿ ಮಂಡಿಸಿರುವ ಬಜೆಟ್ ಅನುಷ್ಠಾನಗೊಂಡಿಲ್ಲ. ಈಗಿನದ್ದು ಅದೇ ಸ್ಥಿತಿ. ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು ಎನ್ನುವ ಉದ್ದೇಶ ಇಟ್ಟುಕೊಂಡೇ ಇಂತಹ ಬಜೆಟ್‌ಗೆ ತಯಾರಿ ನಡೆಸಿಕೊಂಡಿದ್ದಾರೆ. ಇದಕ್ಕೆ ಅರ್ಥವೇ ಇಲ್ಲ ಎಂದು ಟೀಕಿಸಿದರು.



ಬಜೆಟ್‌ನಲ್ಲಿರುವ ಅಂಶಗಳು ಮತ್ತು ದಾಖಲೆಗಳನ್ನು ಗೋಪ್ಯವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಬಜೆಟ್ ಕಾಪಿಯನ್ನು ಬ್ರೀಫ್‌ಕೇಸ್‌ನಲ್ಲಿ ಭದ್ರ ವಾಗಿಟ್ಟುಕೊಂಡು ವಿಧಾನಸಭೆಗೆ ತರಲಾಗುತ್ತಿದೆ. ಆದರೆ, ಯಡಿಯೂರಪ್ಪ ಅವರು ಬುಟ್ಟಿಯೊಳಗಿನ ಒಂದೊಂದೇ ಹಾವನ್ನು ಹೊರ ಬಿಡುವಂತೆ ಬಜೆಟ್ ಅಂಶಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಫೆ.24 ಬರುವಷ್ಟರಲ್ಲಿ ಬಜೆಟ್‌ನಲ್ಲಿರುವ ಎಲ್ಲ ಅಂಶಗಳನ್ನು ಪ್ರಕಟಿಸುತ್ತಾರೆ ಎಂದು ವ್ಯಂಗ್ಯವಾಡಿದರು.



ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರೇ ಮುಖ್ಯಮಂತ್ರಿ ಹೋಗಬಹುದು, ಆದರೆ ಬಿಜೆಪಿ ಸರ್ಕಾರ ಹೋಗುವುದಿಲ್ಲ ಎನ್ನುತ್ತಾರೆ. ಎಲ್.ಕೆ.ಅಡ್ವಾಣಿ ಮುಖ್ಯಮಂತ್ರಿ ರಾಜೀನಾಮೆಗೆ ಪಟ್ಟುಹಿಡಿದಿದ್ದಾರೆ. ಇವೆಲ್ಲವನ್ನು ಗಮನಿಸಿದರೆ ಬಿಜೆಪಿಯಲ್ಲಿ ಗೊಂದಲ ತಾರಕಕ್ಕೇರಿದ್ದು, ಅಸ್ತಿರ ಸರ್ಕಾರವಾಗಿದೆ. ಯಾವಾಗ ಬೇಕಾದರೂ ಅಧಿಕಾರದಿಂದ ತೆಗೆದುಹಾಕಬಹುದು ಎನ್ನುವ ಅಂಜಿಕೆ ಯಡಿಯೂರಪ್ಪ ಅವರಿಗೂ ಇದೆ. ಕೇಂದ್ರ ಬಿಜೆಪಿ ನಾಯಕರೇ ರಾಜ್ಯ ಸರ್ಕಾರದ ಫಲಾನುಭವಿಗಳು ಆಗಿರುವುದರಿಂದ ಈ ಸರ್ಕಾರ ಇನ್ನೂ ಉಳಿದಿದೆ. ಆರೋಪ ಕೇಳಿಬಂದ ಮೇಲೆ ಕೃಷ್ಣಯ್ಯಶೆಟ್ಟಿ, ರಾಮಚಂದ್ರಗೌಡ, ಹಾಲಪ್ಪ ಅವರಿಂದ ರಾಜೀನಾಮೆ ಪಡೆದ ಮೇಲೆ, ಇನ್ನೂ ಮುಖ್ಯಮಂತ್ರಿಯಿಂದ ಏಕೆ ರಾಜೀನಾಮೆ ಪಡೆದಿಲ್ಲ. ಮುಖ್ಯಮಂತ್ರಿಗೊಂದು, ಸಚಿವರಿಗೊಂದು ಕಾನೂನು ಇದೆಯೇ? ಎಂದು ಪ್ರಶ್ನಿಸಿದರು.



ರಾಜ್ಯದಲ್ಲಿ ಲೂಟಿಯೇ ನಡೆಯುತ್ತಿದೆ. ಭ್ರಷ್ಟಾಚಾರದ ವಿರುದ್ಧ ಜಾತ್ಯತೀತ ಪಕ್ಷಗಳು ಒಂದೂಗೂಡಿ ಹೋರಾಟ ನಡೆಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಅಧಿಕಾರದ ಆಸೆಯಿಂದ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿ, ಬಿಜೆಪಿಯೊಂದಿಗೆ ಕೈಜೋಡಿಸಿದೆ. ಜೆಡಿಎಸ್‌ನ ಈ ನಡೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ.ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ ನಾವು ಬಿಜೆಪಿಯೊಂದಿಗೆ ಕೈಜೋಡಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.





ಜಿ.ಪಂ.ಚುನಾವಣೆ: ಸೋಲಿಗೆ ನಾಯಕತ್ವ ಕಾರಣ



ಕೊರಟಗೆರೆ: ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ಹಣ ಬಲ ಹಾಗೂ ಸ್ಥಳೀಯ ನಾಯಕತ್ವದ ಕೊರತೆಯಿಂದಾಗಿ ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನುಅನುಭವಿಸಬೇಕಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಾ.ಜಿ.ಪರಮೆಶ್ವರ್ ತಿಳಿಸಿದರು.ಪಟ್ಟಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿ.ಪಂ. ಹಾಗೂ ತಾ.ಪಂಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಉಂಟಾಗಿ ಸ್ಥಳೀಯ ನಾಯಕರ ಬೇಜವಾಬ್ದಾರಿತನದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು.



ಮುಂದಿನ ದಿನಗಳಲ್ಲಿ ಈ ರೀತಿ ಗೊಂದಲಗಳು ಉಂಟಾಗದಂತೆ ಎಚ್ಚರ ವಹಿಸಿ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಹೇಳಿದರು.ಮುಂದಿನ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಕೊರಟಗೆರೆ ಕ್ಷೇತ್ರದಾದ್ಯಂತ ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಕ್ಷೇತ್ರ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

ಕೊರಟಗೆರೆ ಮತದಾರರ ಆಶೀರ್ವಾದದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆತಿದ್ದು, ತಾವು ಈ ಉನ್ನತ ಸ್ಥಾನಕ್ಕೆ ಹೋಗಲು  ಕೊರಟಗೆರೆಯ ಜನತೆಯೇ ಕಾರಣ. ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಮತದಾರರ ಋಣ ತೀರಿಸುವೆ ಎಂದರು.ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಒಪ್ಪಿಕೊಂಡ ಅವರು ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದರು. ಕ್ಷೇತ್ರದ ಅಭಿವೃದ್ಧಿ ಕುಂಟಿತವಾಗಲು ಸರ್ಕಾರವೇ ನೇರ ಹೊಣೆ ಎಂದರು.ಬಿಜೆಪಿಯಲ್ಲಿ ಆಂತರಿಕ ಗೊಂದಲಗಳಿದ್ದು, ನಾಯಕರಲ್ಲಿ ಸಹಮತವಿಲ್ಲದೆ ಅಧಿಕಾರ ಬದಲಾವಣೆಯಾಗುವ ಅಥವಾ ಅಧಿಕಾರ ಕಳೆದುಕೊಳ್ಳುವ ಸಂಭವವಿದೆ ಎಂದು ಭವಿಷ್ಯ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.