ಶನಿವಾರ, ಮೇ 28, 2022
26 °C

ಕೆರೆ ಏರಿ ಮ್ಯಾಲೆ ಕಾದವ್ನೇ ಜವರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಕೆರೆಗೆ ವಾಹನ ಉರುಳಿ ಪ್ರಯಾಣಿಕರು ಸಾವನ್ನಪ್ಪುತ್ತಿರುವ ಘಟನೆ ಅಲ್ಲಲ್ಲಿ ಸಂಭವಿಸುತ್ತಲೇ ಇವೆ. ಇಂತಹ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನಪ್ರತಿನಿಧಿಗಳಾಗಲೀ ಅಧಿಕಾರಿಗಳಾಗಲೀ ಮುಂದಾಗಿಲ್ಲ. ತಾಲ್ಲೂಕಿನಲ್ಲಿ ದೊಡ್ಡ ಕೆರೆಗಳು ಬಲಿಗಾಗಿ ಕಾಯುತ್ತಿವೆ.ಇದು ಕೊಳ್ಳೇಗಾಲ ತಾಲ್ಲೂಕಿನ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಬರುವ ದೊಡ್ಡರಂಗನಾಥ ಮತ್ತು ಚಿಕ್ಕರಂಗನಾಥ ಹಾಗೂ ಕೊಳ್ಳೇಗಾಲ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತೇರಂಬಳ್ಳಿ ಕೆರೆಗಳ ಸ್ಥಿತಿ.ಕೊಳ್ಳೇಗಾಲ- ಮಹದೇಶ್ವರಬೆಟ್ಟ ಹಾಗೂ ಕೊಳ್ಳೇಗಾಲ- ಮೈಸೂರು ರಸ್ತೆ ಅತಿಹೆಚ್ಚಿನ ವಾಹನದಟ್ಟಣಿ ರಸ್ತೆಯಾಗಿದೆ. ಪ್ರತಿವರ್ಷ ಹತ್ತಾರು ಹಬ್ಬಗಳ ಸಂದರ್ಭದಲ್ಲಿ ಈ ಎರಡೂ ರಸ್ತೆಗಳಲ್ಲಿ ಸಹಸ್ರಾರು ಜಾತ್ರಾ ವಿಶೇಷ ವಾಹನಗಳ ಸಂಚಾರ ಇದ್ದು ಒಂದಿಲ್ಲೊಂದು ಅಪಘಾತ ಕಟ್ಟಿಟ್ಟ ಬುತ್ತಿ. ಕೊಳ್ಳೇಗಾಲ- ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಬರುವ ಎರಡು ಕೆರೆಗಳು 2.5 ಕಿ.ಮೀ ಉದ್ದವಿದ್ದು ಕೊಳ್ಳೇಗಾಲದಿಂದ ಮಧುವನ ಹಳ್ಳಿಯ ವರೆಗೂ ಇದೆ.ಈ ಕೆರೆ ಏರಿ ಅತ್ಯಂತ ಇಕ್ಕಟ್ಟಾಗಿದ್ದು ರಸ್ತೆ ಹಳ್ಳಕೊಳ್ಳಗಳಿಂದ ತುಂಬಿದ್ದು ಫುಟ್ ಪಾತ್ ರಹಿತವಾಗಿದೆ. ನಡಿಗೆಯಲ್ಲಿ ಹೋಗುವ ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲೇ ಸಂಚರಿಸಬೇಕಾದ ಸ್ಥಿತಿ ಇದ್ದು ಅಪಾಯಕಾರಿಯಾಗಿದೆ.ಕೊಳ್ಳೇಗಾಲ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತೇರಂಬಳ್ಳಿ ಕೆರೆ ತೇರಂಬಳ್ಳಿ ಬಸ್‌ನಿಲ್ದಾಣದ ಬಳಿ ಕೆರೆ ಪ್ರಾರಂಭ ದಲ್ಲಿಯೇ ಅಪಾಯಕಾರಿ ತಿರುವಿನಿಂದ ಎದುರು ಬರುವ ವಾಹನಗಳು ಗೋಚರವಾಗುವವುದಿಲ್ಲ. ಇದೂ ಸಹ ಅತ್ಯಂತ ಅಪಾಯಕಾರಿಯಾಗಿದೆ.ಅಪಘಾತ: 2002ರಲ್ಲಿ ಖಾಸಗಿ ಬಸ್ ಮಧುವನಹಳ್ಳಿ ಸಮೀಪದ ಚಿಕ್ಕರಂಗನಾಥ ಕೆರೆಯ ಹಳ್ಳಕ್ಕೆ ಉರುಳಿ 3 ಜನರು ಸ್ಥಳದಲ್ಲೇ ಸಾವಿಗೀಡಾಗಿ 60 ಮಂದಿ ಗಾಯ ಗೊಂಡಿದ್ದರು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಜನತೆ ಕೆರೆ ಏರಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಆದರೆ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ತೇರಂಬಳ್ಳಿ ಕೆರೆ ಏರಿಯಲ್ಲೂ ಸಹ ಹಲವು ಅಪಘಾತಗಳು ಸಂಭವಿಸಿ ಕೆರೆ ಏರಿ ದುರಸ್ತಿಗೆ ರಸ್ತೆತಡೆ ಪ್ರತಿಭಟನೆ ನಡೆದದ್ದೂ ಆಗಿದೆ.ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರ ಅಧಿಕಗೊಂಡಿರುವುದರಿಂದ ಅಪಘಾತದ ನಂತರ ಎಚ್ಚೆತ್ತು ಕೊಳ್ಳುವುದರ ಬದಲು ಅಪಘಾತ ಸಂಭವಿಸುವ ಮುನ್ನವೇ ಕೆರೆ ಏರಿಗಳ ದುರಸ್ತಿಗೆ ಜನಪ್ರತಿನಿದಿಗಳು ಅಧಿಕಾರಿ ಗಳು ಕ್ರಮಕ್ಕೆ ಮುಂದಾಗಬೇಕು ಎಂಬುದು ಪ್ರಯಾಣಿಕರ ಮನವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.