ಶುಕ್ರವಾರ, ಮೇ 27, 2022
30 °C
ಬೇರೆ ಗುಂಪಿನ ರಕ್ತ ನೀಡಿ ಪ್ರಮಾದ

ಕೆ.ಸಿ.ಜನರಲ್ ಆಸ್ಪತ್ರೆಯ ನಾಲ್ವರ ಅಮಾನತು: ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಒ- ಪಾಸಿಟಿವ್' ಗುಂಪಿನ ರಕ್ತದ ಬದಲು `ಬಿ-ಪಾಸಿಟಿವ್' ರಕ್ತ ನೀಡಿ ಯುವತಿಯ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿರುವ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರು, ಪ್ರಯೋಗಾಲಯದ ಸಿಬ್ಬಂದಿ, ನರ್ಸ್  ಸೇರಿದಂತೆ ನಾಲ್ವರನ್ನು ಕೂಡಲೇ ಅಮಾನತು ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ. ಖಾದರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.ರಕ್ತ ಹೀನತೆಯಿಂದ ಬಳಲುತ್ತಿದ್ದ ಮೃತ ರಾಜೇಶ್ವರಿಯನ್ನು ತಪಾಸಣೆ ನಡೆಸಿದ ಡಾ.ಸುರೇಶ್, ರಕ್ತ ನಿಧಿ ಅಧಿಕಾರಿ ಡಾ. ರೇಣುಕಾ, ಪ್ರಯೋಗಾಲಯದ ತಂತ್ರಜ್ಞರಾದ ಭಾಗ್ಯಲಕ್ಷ್ಮಿ ಹಾಗೂ ನರ್ಸ್ ಲಲಿತಾ ಅವರನ್ನು ಅಮಾನತು ಮಾಡಲಾಗಿದೆ.ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, `ಆಸ್ಪತ್ರೆಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯದಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಪ್ರಕರಣದಿಂದ ಆರೋಗ್ಯ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಸಿಬ್ಬಂದಿಯಿಂದ ಲೋಪವಾಗಿರುವುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದ್ದು, ಸಂಬಂಧಪಟ್ಟವರನ್ನು ಅಮಾನತು ಮಾಡಲಾಗಿದೆ' ಎಂದು ತಿಳಿಸಿದರು.`ನಾಗರಿಕರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಸದಾ ಬದ್ಧವಾಗಿರುತ್ತದೆ. ಆರೋಗ್ಯ ಸೇವೆಯೆಂಬುದು ಸದಾ ಜನಸ್ನೇಹಿಯಾಗಿರಬೇಕು.  ಬೇಜವಾಬ್ದಾರಿಯಿಂದ ವರ್ತಿಸುವ ಸಿಬ್ಬಂದಿಗಳಿಗೆ ಈ ಪ್ರಕರಣ ತಕ್ಕ ಪಾಠವಾಗಬೇಕು'ಎಂದು ಹೇಳಿದರು.`ಈಗಾಗಲೇ ಯುವತಿಯ ಮನೆಗೆ ತೆರಳಿ ಸಂಬಂಧಿಕರಿಗೆ ಸಾಂತ್ವನ ಹೇಳಲಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಮೃತಪಟ್ಟ ಯುವತಿಯ ಕುಟುಂಬಕ್ಕೆ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ' ಎಂದರು.

ಕಠಿಣ ಶಿಕ್ಷೆ ನೀಡಬೇಕು

`ಸಚಿವರು ಖುದ್ದು ಮನೆಗೆ ಬಂದು ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಸತತ ನಾಲ್ಕು ದಿನಗಳ ನರಳಾಟದ ನಂತರ ನನ್ನ ತಂಗಿ ಕೊನೆಯುಸಿರೆಳೆದಿದ್ದಾಳೆ. ಹಾಗಾಗಿ ತಪ್ಪಿತಸ್ಥರಿಗೆ ಯಾವುದೇ ವಿನಾಯಿತಿ ನೀಡದೇ ಕಠಿಣ ಶಿಕ್ಷೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಯಾಗಬೇಕು'

- ಜಯಲಕ್ಷ್ಮಿಮೃತಳ ಸಹೋದರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.