ಶುಕ್ರವಾರ, ಜನವರಿ 17, 2020
22 °C

ಕೇಕ್ ಕಾಲ

–ಪವಿತ್ರಾ ಶೆಟ್ಟಿ,ರಮೇಶ ಕೆ. Updated:

ಅಕ್ಷರ ಗಾತ್ರ : | |

ಡಿಸೆಂಬರ್ ಎಂದರೆ ಕೇಕ್ ಹಬ್ಬದ ಮಾಸವೆಂದೇ ಕರೆಯಬಹುದು. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸ್ವಾಗತದ ಸಂಭ್ರಮ ಅರ್ಥಪೂರ್ಣವಾಗುವುದು ಕೇಕ್ ಹಾಜರಿಯಲ್ಲೇ. ಕ್ರಿಸ್‌ಮಸ್ ಹತ್ತಿರ ಬರುತ್ತಿದ್ದಂತೆ ಕೇಕ್‌ಗೆ ಅತೀವ ಬೇಡಿಕೆ. ಒಂದೇ ವಾರದೊಳಗೆ ಬರುವ ಹೊಸ ವರ್ಷವನ್ನು ಸ್ವಾಗತಿಸುವಾಗಲೂ ಕೇಕ್ ಬೇಕೇ ಬೇಕು.

ಹೀಗಾಗಿ ಡಿಸೆಂಬರ್ ತಿಂಗಳಿಡೀ ಕೇಕ್ ಉದ್ದಿಮೆಗಳಿಗೆ, ಬೇಕರಿಗಳಿಗೆ ಬಿಡುವಿಲ್ಲದ ಕೆಲಸ. ನಗರದಲ್ಲಿ ಕೇಕ್‌ಗಳಿಗೆಂದೇ ಅನೇಕ ಬೇಕರಿಗಳಿವೆ. ಜನರಿಗೆ ಇಷ್ಟವಾಗುವ ಬೇಕರಿಗಳು, ಈ ಮಾಸದಲ್ಲಿ ಹೆಚ್ಚು ಮಾರಾಟವಾಗುವ ಕೇಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. ಪ್ರಸಕ್ತ ವರ್ಷದ ಕ್ರಿಸ್‌ಮಸ್‌ಗಾಗಿ ಜಯನಗರ 4ನೇ ‘ಟಿ’ ಬ್ಲಾಕ್‌ನಲ್ಲಿರುವ ‘ಕೇಕ್‌ವಾಲ’ ಬೇಕರಿ ವಿಶೇಷವಾಗಿ ಸಿದ್ಧವಾಗಿದೆ.

ಡಿ. 24 ಮತ್ತು 25ರಂದು ಡ್ರೈ ಕೇಕ್‌ ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ಪೈನಾಪಲ್‌, ಕಿತ್ತಳೆ, ಚಾಕ್ಲೆಟ್‌, ಬ್ಲ್ಯೂಬೆರಿ ಹಾಗೂ ಎಳ್ಳಿನ ಸ್ವಾದ ಸೇರಿದಂತೆ 15 ವಿಧದ ಕೇಕ್‌ಗಳನ್ನು ಮಾರುತ್ತಿದ್ದಾರೆ.ಪ್ಲಮ್‌ಕೇಕ್‌ ಮಾಡುವ ವಿಧಾನ

ಕ್ರಿಸ್‌ಮಸ್‌ಗೆ ಮುಖ್ಯವಾಗಿ ಪ್ಲಮ್ ಕೇಕ್ ಇರಲೇಬೇಕು. ಅದಕ್ಕಾಗಿ ಕೇಕ್‌ವಾಲ ಆರು ತಿಂಗಳಿನಿಂದಲೇ ತಯಾರಿ ನಡೆಸಿದೆ. ಕರಬೂಜ, ಗೋಡಂಬಿ, ಚೆರ್ರಿ, ನಾಲ್ಕು ವಿಧದ ಜಾಮ್‌ ಹಾಗೂ ರಮ್‌, ವೈನ್‌ ಹಾಕಿ ಮಿಶ್ರಣ ಮಾಡಲಾಗುತ್ತದೆ. ಆರು ತಿಂಗಳ ನಂತರ ಬೇಕೆಂದಾಗ ಮೈದಾ ಮತ್ತು ಬೇಕಿಂಗ್ ಪೌಡರ್ ಹಾಕಿ ಕಲಸಿ. ಅದಕ್ಕೆ ಪ್ಲಮ್ ಮಿಶ್ರಣವನ್ನು ಸೇರಿಸಿ ಓವನ್‌ನಲ್ಲಿಟ್ಟು 375 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ 40 ನಿಮಿಷ ಬೇಕ್ ಮಾಡಬೇಕು.‘ಪ್ಲಮ್‌ ಮಿಶ್ರಣಕ್ಕೆ ಶೇ 2ರಿಂದ 5 ಪ್ರಮಾಣ ವೈನ್‌ ಹಾಕಬೇಕು. ವೈನ್ ಮಿಶ್ರಣದ ಪ್ರಮಾಣ ಅವರವರ ರುಚಿಗೆ ಬಿಟ್ಟದ್ದು. ಈ ಪ್ಲಮ್‌ ಕೇಕ್‌ ವಿದೇಶಿ ಮೂಲದ ಆಹಾರ ಸಂಸ್ಕೃತಿ. ಆದರೆ ಈಗ ಎಲ್ಲಾ ದೇಶಗಳಲ್ಲೂ ಅದನ್ನೇ ಪಾಲಿಸಿಕೊಂಡು ಬರುತ್ತಿದ್ದಾರೆ. ನಮ್ಮಲ್ಲೂ ಸಾಮಾನ್ಯ ಕೇಕ್‌ಗಿಂತ ರಿಚ್‌ ಪ್ಲಮ್‌ ಕೇಕ್‌ ಹೆಚ್ಚು ಇಷ್ಟಪಡುತ್ತಿದ್ದಾರೆ’ ಎನ್ನುತ್ತಾರೆ ಕೇಕ್‌ವಾಲ ಬೇಕರಿ ನಿರ್ದೇಶಕ ಸುಹಾಸ್‌ ಉಪಾಧ್ಯ.ಆಹಾರದ ವಿಷಯದಲ್ಲಿ ಜನರು ಹೊಸತನವನ್ನು ಬಯಸುತ್ತಲೇ ಇರುತ್ತಾರೆ. ಅದರಲ್ಲೂ ಕೇಕ್‌ಪ್ರಿಯರು ಹೊಸ ಹೊಸ ಫ್ಲೇವರ್ ಕೇಕ್‌ಗಳ ರುಚಿ ನೋಡಬೇಕೆಂಬ ಹುಡುಕಾಟದಲ್ಲಿ ಇರುತ್ತಾರೆ. ಮಕ್ಕಳು ಹೆಚ್ಚಾಗಿ ‘ಚಾಕ್ಲೆಟ್‌ ಟ್ರಫಲ್’, ‘ಚಾಕ್ಲೆಟ್‌ ಫ್ಯಾಂಟಸಿ’, ‘ರಿಚ್‌ ಚಾಕ್ಲೆಟ್‌’ ಸ್ವಾದದ ಪೇಸ್ಟ್ರೀಸ್‌ ಇಷ್ಟಪಟ್ಟರೆ, ದೊಡ್ಡವರು ಮಿಕ್ಸಡ್‌ ಫ್ರೂಟ್‌, ಸೇಬು, ಸ್ಟ್ರಾಬೆರಿ, ಬ್ಲೂಬೆರಿ, ಪೈನಾಪಲ್‌ ಫ್ಲೇವರ್‌ನ ಪೇಸ್ಟ್ರೀಸ್‌ಗಳನ್ನು ಹೆಚ್ಚು ತಿನ್ನುತ್ತಾರಂತೆ.ಪೇಸ್ಟ್ರೀಸ್‌ಗಳನ್ನು ಒಂದು ದಿನವಷ್ಟೇ ಇಡಬಹುದು. ಫ್ರಿಜ್‌ನಿಂದ ಹೊರತೆಗೆದ ಒಂದರಿಂದ ಎರಡು ಗಂಟೆಯೊಳಗೆ ತಿನ್ನಬೇಕು. ಪ್ಲಮ್‌ ಕೇಕ್‌ಅನ್ನು ಎರಡು ವಾರದವರೆಗೂ ಇಡಬಹುದು. ನಂತರ ಅದು ಗಡುಸಾಗುತ್ತದೆ. ಸಾಮಾನ್ಯ ಕೇಕನ್ನು ಬಟರ್‌ ಕ್ರೀಂ ಬಳಸಿ ಮಾಡಲಾಗುತ್ತದೆ.

ಸಾಮಾನ್ಯ ಮಟ್ಟದ ತಾಪಮಾನದಲ್ಲೂ ಇಡಬಹುದು. ಆದರೆ ಪೇಸ್ಟ್ರೀಸನ್ನು ನಾನ್‌ ಡೈರಿ ವಿಪ್‌ ಟಾಪಿಂಗ್‌ ಕ್ರೀಂ ಹಾಕಿ ಮಾಡಲಾಗುತ್ತದೆ. 2ರಿಂದ 9ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶದಲ್ಲಿ ಇಡಬೇಕಾಗುತ್ತದೆ. ಎರಡೂ ಮಾಡುವ ವಿಧಾನ ಬೇರೆಯಾಗಿರುತ್ತದೆ. ಇತ್ತೀಚೆಗೆ ಸಾಮಾನ್ಯ ಕೇಕ್‌ಗಿಂತ ಪೇಸ್ಟ್ರೀಸ್‌ ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಕೇಕ್‌ಪ್ರಿಯರು ಹೀಗಂತಾರೆ

ಎರಡು ವರ್ಷಗಳಿಂದ ಕುಟುಂಬ ಸಮೇತ ಕೇಕ್‌ವಾಲ ಬೇಕರಿಗೆ ಬರುತ್ತಿದ್ದೇವೆ. ನಮಗೆ ಚಾಕ್ಲೆಟ್‌, ಸ್ಟ್ರಾಬೆರಿ ಫ್ಲೇವರ್‌ ಪೇಸ್ಟ್ರೀಸ್‌ ತುಂಬಾ ಇಷ್ಟ. ಇಲ್ಲಿ ಸ್ವಚ್ಛತೆ, ರುಚಿ ಮತ್ತು ಸರ್ವೀಸ್‌ ಚೆನ್ನಾಗಿದೆ.

–ಉಷಾ,  ಜಯನಗರ 9ನೇ ಬ್ಲಾಕ್‌.

ಅಪ್ಪನ ಜತೆ ಕೇಕ್‌ ತಿನ್ನಲು ಇಷ್ಟ

ಏನೇ ಸಿಹಿ ತಿನಿಸು ತಿಂದರೂ ಕೇಕ್‌ ತಿನ್ನುವ ಮಜವೇ ಬೇರೆ. ನನಗೆ ಅನಾನಸ್‌ ಪೇಸ್ಟ್ರಿಸ್‌ ಎಂದರೆ ತುಂಬಾ ಇಷ್ಟ. ಎನ್‌.ಆರ್. ಕಾಲೋನಿಯಲ್ಲಿರುವ ‘ಸಮೀಪ್‌ ಬೇಕರಿ’ಯಲ್ಲಿ ಸಿಗುವ ಕೇಕ್‌ ನನಗೆ ಅಚ್ಚುಮೆಚ್ಚು.

ಸ್ನೇಹಿತರಿಗಿಂತ ಅಪ್ಪನ ಜತೆ ಹೋಗಿ ತಿನ್ನುವುದು ನನಗೆ ಹೆಚ್ಚು ಖುಷಿ ನೀಡುತ್ತದೆ. ತುಂಬಾ ಕೇಕ್ ತಿನ್ನುವುದಿಲ್ಲ. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ.

–ಆದಿತ್ಯ, ವಿದ್ಯಾರ್ಥಿ.

ಹೀಗೊಂದು ಪ್ರೇಮಾಭಿವ್ಯಕ್ತಿ

ಹೊಸ ಹೊಸ ಪ್ರಯೋಗಗಳನ್ನು ಸಿನಿಮಾದಲ್ಲಿ ತರುವ ರವಿಚಂದ್ರನ್‌ ತಮ್ಮ ‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ಜೂಹಿ ಚಾವ್ಲಾ ಹುಟ್ಟುಹಬ್ಬಕ್ಕೆ ವಿಶೇಷ ತಯಾರಿ ಮಾಡುತ್ತಾರೆ. ಆ ದೃಶ್ಯದಲ್ಲಿ ಜೂಹಿ ಚಾವ್ಲಾ ಶಯನ ಮಂಚ ಕೇಕ್‌ನಿಂದ ತಯಾರಾಗಿದ್ದು! ತುಂಬಾ ರೊಮ್ಯಾಂಟಿಕ್‌ ದೃಶ್ಯವದು. ಈ ದೃಶ್ಯದ ಬಗ್ಗೆ ರವಿಚಂದ್ರನ್‌ ಹೀಗೆನ್ನುತ್ತಾರೆ... ‘ಪ್ರತಿಯೊಬ್ಬ ಪ್ರೇಮಿಗೂ ತನ್ನ ಪ್ರಿಯತಮೆಗೆ ಹೊಸದೊಂದು ರೀತಿಯಲ್ಲಿ ಪ್ರೇಮನಿವೇದನೆ ಮಾಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಪ್ರೀತಿಯಲ್ಲಿ ಬಿದ್ದವರಲ್ಲಿ ಈ ತುಡಿತ ಸಹಜ. ನಾನು ಈ ಸಿನಿಮಾದಲ್ಲಿ ಪ್ರೇಮಿಯೊಬ್ಬನ ಆ ತುಡಿತವನ್ನೇ ದೃಶ್ಯವಾಗಿಸಿದ್ದೇನೆ. ಚಾಕೊಲೇಟ್‌ ಫ್ಲೇವರ್‌ ನನಗೆ ಇಷ್ಟವಾದ ಕೇಕ್‌. ಕೇಕನ್ನು ಮುಖಕ್ಕೆ ಮೆತ್ತುವುದು ಒಂದು ರೀತಿಯ ತುಂಟಾಟ. ಖುಷಿಯ ಕ್ಷಣವನ್ನು ಸಂಭ್ರಮಿಸುವುದಕ್ಕೆ ಹಾಗೆ ಮಾಡುತ್ತಾರೆ.’

ವರ್ಷದ ವ್ಯಾಪಾರ

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷ ಬಂದಾಗ ಜಾಸ್ತಿ ಕೇಕ್‌ ಮಾರಾಟವಾಗುತ್ತದೆ. ತ್ರಿಬಲ್‌ ಕ್ವೀನ್‌ ಕೇಕ್‌ ನಮ್ಮ ಸಿಗ್ನೇಚರ್‌ ಕೇಕ್‌. ತುಂಬಾ ಜನ ಇಷ್ಟಪಟ್ಟು ತೆಗೆದುಕೊಂಡು ಹೋಗುತ್ತಾರೆ.  ಇದರಲ್ಲಿ ಒಟ್ಟು ಮೂರು ಫ್ಲೇವರ್‌ಗಳಿವೆ. ಅವೇ ಗ್ಯಾಲಕ್ಸಿ, ಮ್ಯಾಂಗೋ ಮೌಸೆ, ಚಾಕೊಲೇಟ್‌ ಚೀಸ್‌. ವಿವಿಧ ಬಗೆಯ ಚೀಸ್‌ ಫ್ಲೇವರ್‌ಗಳು ನಮ್ಮಲ್ಲಿವೆ.

ಅವನ್ನು ಉಪಯೋಗಿಸುವುದರಿಂದ ಕೇಕ್‌ ಸಿಹಿ ಮತ್ತಷ್ಟು ಹೆಚ್ಚುತ್ತದೆ. 36 ಬಗೆಯ ಕೇಕ್‌ ನಮ್ಮಲ್ಲಿವೆ. ಪ್ಲಮ್‌ ಕೇಕ್‌, ಬ್ಲೂಬೆರ್ರಿ ಚೀಸ್‌ ಕೇಕ್‌ ನಮ್ಮಲ್ಲಿ ಹೆಚ್ಚು ಮಾರಾಟವಾಗುತ್ತವೆ. ಎರಡು ಮೂರು ದಿನಗಳ ಕಾಲ ಫ್ರಿಡ್ಜ್‌ನಲ್ಲಿ ಇಟ್ಟರೂ ಪೇಸ್ಟ್ರೀಸ್ ಏನೂ ಆಗುವುದಿಲ್ಲ. ತುಂಬಾ ಸಮಯ ಇಡಬಾರದು ಅಷ್ಟೇ. ಹಣ್ಣಿನ ಫ್ಲೇವರ್‌ ಕೇಕ್‌ ಎಂದರೆ ಮಕ್ಕಳಿಗೆ ಬಲು ಇಷ್ಟ.

ತಾಜಾ ಹಣ್ಣು ಮತ್ತು ಕ್ರೀಮ್ ಬಳಸಿ ಮಾಡುವ ಈ ಕೇಕ್‌ ಆರೋಗ್ಯಕ್ಕೆ ಹಾನಿಯಲ್ಲ. ನಾವು ಜನರ ಆರೋಗ್ಯದ ಬಗ್ಗೆ ಗಮನ ಹರಿಸುತ್ತೇವೆ. ಶುದ್ಧವಾದ ಕ್ರೀಮ್ ಉಪಯೋಗಿಸಿಯೇ ಕೇಕ್‌ ತಯಾರಿಸುತ್ತೇವೆ. ಹೊರಗಡೆಯಿಂದ ಕ್ರೀಮ್, ಚೀಸ್‌ ಫ್ಲೇವರನ್ನು ನಾವು ತರಿಸುವುದಿಲ್ಲ. ದಿನಕ್ಕೆ 500ರಿಂದ 600 ಕೇಕ್‌ಗಳು ಮಾರಾಟವಾಗುತ್ತವೆ. ಇದು ವರ್ಷದ ವ್ಯಾಪಾರದ ಕಾಲ.

–ಅಪ್ಪು, ಅಮ್ಮಾಸ್ ಬೇಕರಿ ವ್ಯವಸ್ಥಾಪಕ.

ಸಿಹಿ ಕಹಿಯ ಕೇಕ್

ತುಂಬಾ ಬೇಸರದಲ್ಲಿದ್ದಾಗ ಕೇಕ್‌ ಅಥವಾ ಇನ್ಯಾವುದೋ ಸಿಹಿ ತಿನಿಸು ತಿಂದರೆ ಮನಸ್ಸಿಗೆ ಖುಷಿಯಾಗುತ್ತದೆ. ಚಳಿಗಾಲದಲ್ಲಿ ಮನಸ್ಸು ಅಷ್ಟು ಖುಷಿಯಿಂದ ಇರುವುದಿಲ್ಲ. ಆಗ ಕೇಕ್‌ ತಿಂದಾಗ ಏನೋ ಒಂದು ರೀತಿ ರಿಲ್ಯಾಕ್ಸ್‌ ಆದಂತೆ ಅನಿಸುತ್ತದೆ. ಜತೆಗೆ ಇದರಲ್ಲಿ ಪೋಷಕಾಂಶ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹಣ್ಣುಗಳನ್ನು ಉಪಯೋಗಿಸಿಕೊಂಡು ಮಾಡುವ ವಿವಿಧ ಕೇಕ್‌ಗಳು ಈಗ ಹೆಚ್ಚುತ್ತಿವೆ. ಮಕ್ಕಳು ಈ ತರಹದ ಕೇಕ್‌ಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇವಿಷ್ಟು ಕೇಕ್‌ ತಿನ್ನುವುದರಿಂದ ಸಿಗುವ ಲಾಭಗಳು.ಇದರ ಜತೆಗೆ ಅನನುಕೂಲವೂ ಇದೆ. ಒಂದು ತುಂಡು ಕೇಕ್‌ ತಿಂದರೆ 250ರಿಂದ 300ರಷ್ಟು ಕ್ಯಾಲರಿ ದೇಹ ಸೇರುತ್ತದೆ. ಜತೆಗೆ ಮೈದಾ, ಸಕ್ಕರೆ, ಬೆಣ್ಣೆ ಇರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಿ. ಜೀರ್ಣಶಕ್ತಿ ಕಡಿಮೆ ಇರುವವರು, ಮಧುಮೇಹ ಇರುವವರು ಕೇಕ್‌ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಕೇಕ್ ಸೇವಿಸುವುದರಿಂದ ದೇಹದ ತೂಕ ಜಾಸ್ತಿಯಾಗುತ್ತದೆ. ಋತುಸ್ರಾವದ ಸಮಸ್ಯೆ ಇರುವವರು ಕಡಿಮೆ ತಿನ್ನುವುದು ಒಳಿತು.ಇನ್ನು ಮಕ್ಕಳು ಚಟುವಟಿಕೆಯಿಂದ ಇದ್ದಾಗ ಕೇಕ್‌ ತಿಂದರೆ ಸಮಸ್ಯೆಯಾಗುವುದಿಲ್ಲ. ಈಗಿನ ಮಕ್ಕಳಲ್ಲಿ ಚಟುವಟಿಕೆ ಕಡಿಮೆಯಾಗಿದೆ. ಏನಾದರೂ ತಿಂದು ಟೀವಿ ಮುಂದೆ ಕುಳಿತುಕೊಳ್ಳುತ್ತಾರೆ. ಇದರಿಂದ ದಪ್ಪಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ತುಂಡು ಕೇಕ್‌ ತಿನ್ನುವುದು ಒಳ್ಳೆಯದು. ಇಷ್ಟ ಎಂದು ಅತಿಯಾಗಿ ತಿಂದರೆ ಅಮೃತವೂ ವಿಷ.

–ಡಾ. ಅನಿತಾ.

ಪೇಸ್ಟ್ರೀಸ್  ತುಂಬಾ ಇಷ್ಟ

ವಸಂತನಗರದ ನೀಲಗಿರೀಸ್‌ನಲ್ಲಿ ಕೇಕ್ ಚೆನ್ನಾಗಿರುತ್ತದೆ. ಪೈನಾಪಲ್‌ ಫ್ಲೇವರ್‌ನ ಪೇಸ್ಟ್ರೀಸ್‌ ಇಷ್ಟ. ಹೇಳಿಕೇಳಿ ಇದು ಕ್ರಿಸ್‌ಮಸ್‌ ಸಂದರ್ಭ. ಪ್ಲಮ್‌ಕೇಕ್‌ ಇರಲೇಬೇಕು. ವಾರಕ್ಕೆ ಮೂರು ದಿನ ಪೇಸ್ಟ್ರೀಸ್‌ ತರುತ್ತೇವೆ. ಹೊಸವರ್ಷ ಆಚರಣೆಗೂ ಕೇಕ್ ಬೇಕು. ನಮ್ಮ ಮಗುವಿಗೂ ಪೇಸ್ಟ್ರೀಸ್‌ ಇಷ್ಟವಾಗುತ್ತದೆ.

–ಅರ್ಪಣಾ, ಮುತ್ಯಾಲನಗರ.

ಪ್ರತಿಕ್ರಿಯಿಸಿ (+)