ಸೋಮವಾರ, ಮೇ 16, 2022
28 °C

ಕೇರಳದಲ್ಲಿ ಜಲವಿದ್ಯುತ್ ಭ್ರಷ್ಟಾಚಾರ: ಮಾಜಿ ಮಂತ್ರಿಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಇಡಮಲಯಾರ್ ಜಲಾಶಯದ ಭ್ರಷ್ಟಾಚಾರ ಪ್ರಕರಣದಲ್ಲಿ ಕೇರಳದ ಮಾಜಿ ವಿದ್ಯುತ್ ಸಚಿವ ಮತ್ತು ಕಾಂಗ್ರೆಸ್ ನಾಯಕ ಆರ್. ಬಾಲಕೃಷ್ಣನ್ ಪಿಳ್ಳೈ ಮತ್ತು ಇತರ ಇಬ್ಬರಿಗೆ ಸುಪ್ರೀಂಕೋರ್ಟ್ ಗುರುವಾರ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಕೇರಳ ಹೈಕೋರ್ಟ್ ನೀಡಿದ್ದ ಖುಲಾಸೆ ಆದೇಶಕ್ಕೆ ವಿರುದ್ಧವಾಗಿ ನ್ಯಾಯಮೂರ್ತಿಗಳಾದ ಪಿ. ಸದಾಶಿವಂ ಮತ್ತು ಬಿ.ಎಸ್. ಚೌಹಾಣ್ ಅವರನ್ನು ಒಳಗೊಂಡ ಪೀಠವು ಮಾಜಿ ಸಚಿವರನ್ನು ಅಪರಾಧಿ ಎಂದು ತೀರ್ಮಾನಿಸಿತು.

ಇದೇ ವೇಳೆ ಸುಪ್ರೀಂಕೋರ್ಟ್, ಎಲ್ಲಾ ವಿಚಾರಣಾ ನ್ಯಾಯಾಲಯಗಳು ಭ್ರಷ್ಟಾಚಾರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಹೈಕೋರ್ಟ್ ಇದರ ಮೇಲ್ವಿಚಾರಣೆ ವಹಿಸಬೇಕು ಹಾಗೂ ಇತ್ಯರ್ಥ ಪಡಿಸಿದ ಪ್ರಕರಣಗಳ  ಬಗ್ಗೆ ಮೂರು ತಿಂಗಳಿಗೊಮ್ಮೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿತು.

ಇಡಮಲಯಾರ್ ಜಲ ವಿದ್ಯುತ್ ಯೋಜನೆಗಾಗಿ ವಿದ್ಯುತ್ ಸುರಂಗಮಾರ್ಗಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಪೌಲೋಸ್ (ಈಗ ಮೃತರಾಗಿದ್ದಾರೆ) ಎಂಬುವರಿಗೆ ವಿಶೇಷವಾಗಿ ಅತಿ ಹೆಚ್ಚಿನ ದರದಲ್ಲಿ ಗುತ್ತಿಗೆಗಳನ್ನು ನೀಡಿ ಕೇರಳ ವಿದ್ಯುತ್ ಮಂಡಳಿಗೆ ಸುಮಾರು ರೂ ಎರಡು ಕೋಟಿಯಷ್ಟು ನಷ್ಟ ಉಂಟು ಮಾಡಿದ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ.

ಈ ಕಾರಣಕ್ಕೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕೆಂಬ ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಹಿಂದಿನ ಪ್ರತಿಪಕ್ಷದ ನಾಯಕ ಮತ್ತು ಪ್ರಸ್ತುತ ಮುಖ್ಯಮಂತ್ರಿ ಆಗಿರುವ ವಿ.ಎಸ್. ಅಚ್ಯುತಾನಂದನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ಫಿರ್ಯಾದಿದಾರರು ಒದಗಿಸಿದ್ದ ಸಾಕ್ಷ್ಯಗಳನ್ನು ಮತ್ತು ಕೇರಳದ ವಿಶೇಷ ನ್ಯಾಯಾಲಯ ಸರಿಯಾಗಿ ನೀಡಿದ್ದ ತೀರ್ಪನ್ನು ನಿರ್ಲಕ್ಷಿಸಿ ಹೈಕೋರ್ಟ್ ಗುರುತರವಾದ ತಪ್ಪು ಎಸಗಿದೆ ಎಂದು ಹೇಳಿದೆ.

ರಾಷ್ಟ್ರದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ಕೊನೆಯೇ ಇಲ್ಲವೆಂಬಂತೆ ಮಂದಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಪ್ರಕರಣದಲ್ಲಿ  ಹಗರಣ 1982ರಲ್ಲೇ ನಡೆದಿದ್ದರೂ 91ರಲ್ಲಿ ಕಾನೂನು ಕ್ರಮ ಜರುಗಿಸಲು ಆರಂಭಿಸಲಾಗಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತು.

‘ಪಿಳ್ಳೈ ಅವರ ಹಸ್ತಕ್ಷೇಪವನ್ನು ಸಮರ್ಥಿಸಲು ಯಾವುದೇ ರೀತಿಯಲ್ಲೂ ಸಾಧ್ಯವಿಲ್ಲ. ವಿದ್ಯುತ್ ಮಂಡಳಿಯು ಸರ್ಕಾರದ ನಿಯಂತ್ರಣದಲ್ಲಿ ಇಲ್ಲ ಎಂಬ ವಾಸ್ತವ ಸಂಗತಿಯ ನಡುವೆಯೂ ಗುತ್ತಿಗೆ ನೀಡಿರುವುದರಲ್ಲಿ ಪಿಳ್ಳೈ ಕೈವಾಡ ಇರುವುದು   ಸಾಬೀತಾಗಿದೆ’ ಎಂದು ಪೀಠ ಹೇಳಿದೆ.

 ಪ್ರಕರಣದಲ್ಲಿ ಒಟ್ಟು 11 ಮಂದಿ ಆರೋಪಿಗಳಿದ್ದು ವಿಶೇಷ ನ್ಯಾಯಾಲಯವು ಎಂಟು ಮಂದಿಯನ್ನು ಖುಲಾಸೆಗೊಳಿಸಿತ್ತು. ಪಿಳ್ಳೈ ಮತ್ತು ಇತರ ಇಬ್ಬರಿಗೆ  ಕಠಿಣ ಸೆರೆವಾಸ ವಿಧಿಸಿತ್ತು.

ಆದರೆ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಪಿಳ್ಳೈ ಮತ್ತು ಇತರ ಇಬ್ಬರನ್ನು ಹೈಕೋರ್ಟ್ ಆರೋಪದಿಂದ ಮುಕ್ತಗೊಳಿಸಿತ್ತು.  ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಮೇಲ್ಮನವಿ ಸಲ್ಲಿಸದ ಕಾರಣ ಆಗ ಪ್ರತಿಪಕ್ಷದ ನಾಯಕರಾಗಿದ್ದ ಅಚ್ಯುತಾನಂದನ್  ಅವರು ಖುಲಾಸೆ ಆದೇಶವನ್ನು ಪ್ರಶ್ನಿಸಿದ್ದರು.

ಕೋರ್ಟ್‌ಗೆ ಶರಣು- ಪಿಳ್ಳೈ

ತಿರುವನಂತಪುರಂ (ಪಿಟಿಐ): ಸಮನ್ಸ್ ಬಂದ ಕೂಡಲೇ ತಾವು ನ್ಯಾಯಾಲಯದ ಮುಂದೆ ಶರಣಾಗುವುದಾಗಿ ಬಾಲಕೃಷ್ಣನ್ ಪಿಳ್ಳೈ ಪ್ರತಿಕ್ರಿಯಿಸಿದ್ದಾರೆ.

‘ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ’ ಎಂದು 76 ವರ್ಷದ ಪಿಳ್ಳೈ ವರದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಸಮನ್ಸ್ ಪಡೆದ ಕೂಡಲೇ ಶರಣಾಗುತ್ತೇನೆ. ಈ ಎಲ್ಲಾ ವರ್ಷಗಳು ಜನರ ಸೇವೆ ಮಾಡಿದ್ದಕ್ಕೆ ಪಡೆದು ಉಡುಗೊರೆ ಇದು’ ಎಂದು ಕಾಂಗ್ರೆಸ್ ನೇತೃತ್ವದ  ಯುಡಿಎಫ್‌ನಲ್ಲಿ ಅಂಗ ಪಕ್ಷವಾಗಿರುವ ಕೇರಳ ಕಾಂಗ್ರೆಸ್ (ಬಿ) ಪಕ್ಷದ ಪಿಳ್ಳೈ ಹೇಳಿದ್ದಾರೆ.

ಎಚ್ಚರಿಕೆ: ತಮ್ಮ ನಿಲುವನ್ನು ಕೋರ್ಟ್‌ನ ಆದೇಶ ಸಮರ್ಥಿಸಿದೆ. ‘ಸಾರ್ವಜನಿಕರ ಹಣ ಕಬಳಿಸಿ ಏಳಿಗೆ ಹೊಂದುವವರಿಗೆ ಇದು ಒಂದು ಎಚ್ಚರಿಕೆ’ ಎಂದು ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಪ್ರತಿಕ್ರಿಯೆ ನೀಡಿದ್ದಾರೆ.ಇದೇ ಮೊದಲ ಬಾರಿಗೆ ಕೇರಳದ ಮಾಜಿ ಸಚಿವರೊಬ್ಬರು ಭ್ರಷ್ಟಾಚಾರ   ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.