ಬುಧವಾರ, ಮೇ 18, 2022
21 °C

ಕೇರಳ: ಅಚ್ಯುತಾನಂದನ್ ಕೈಬಿಟ್ಟ ಸಿಪಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಐಎಎನ್‌ಎಸ್): ಏಪ್ರಿಲ್ 13 ರಂದು ಕೇರಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಸ್ಪರ್ಧಿಸುವುದಿಲ್ಲ; ಬದಲಿಗೆ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಚುನಾವಣಾ ಪ್ರಚಾರವನ್ನು ಮುನ್ನಡೆಸಲಿದ್ದಾರೆ ಎಂದು ಸಿಪಿಎಂ ಬುಧವಾರ ಪ್ರಕಟಿಸಿದೆ.ನಾಲ್ಕು ತಾಸುಗಳ ಕಾಲ ನಡೆದ ಸುದೀರ್ಘಾವಧಿಯ ಸಭೆ 87 ವರ್ಷದ ಅಚ್ಯುತಾನಂದನ್ ಅವರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಸೊರಗಿದ ಮೋರೆಯೊಂದಿಗೆ ಸಭೆಯಿಂದ ಹೊರಬಂದ ಅಚ್ಯುತಾನಂದನ್ ಈ ಬಗ್ಗೆ ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ‘ಹೇಳಿಕೆ ನೀಡುವ ಹೊಣೆ ಹೊತ್ತವರೇ ನಿಮಗೆ ತಿಳಿಸುತ್ತಾರೆ’ ಎಂದಷ್ಟೇ ಹೇಳಿದರು.ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಅವರನ್ನೂ ಕಣಕ್ಕೆ ಇಳಿಸದಿರಲು ಪಕ್ಷ ತೀರ್ಮಾನಿಸಿದ್ದು, ಈ ಎಲ್ಲ ನಿರ್ಧಾರಗಳಿಗೆ 81 ಸದಸ್ಯರ ರಾಜ್ಯ ಸಮಿತಿಯ ಅನುಮೋದನೆ ಪಡೆಯಬೇಕಾಗಿದೆ. 2006ರಲ್ಲೂ ಪಕ್ಷ ಅಚ್ಯುತಾನಂದನ್ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಆದರೆ ಕಾರ್ಯಕರ್ತರಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ತಮ್ಮ ನಿರ್ಧಾರ ಬದಲಿಸಿದ್ದರು.ಬಳಿಕ ಎಡರಂಗದ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಯಶಸ್ವಿಯಾಗಿದ್ದರು. ‘ಅಚ್ಯುತಾನಂದನ್ ಅವರು ಸ್ಪರ್ಧಿಸುವರೋ ಇಲ್ಲವೋ ಎಂಬುದು ನಮಗೆ ಅಮುಖ್ಯ’ ಎಂದು ಕಾಂಗ್ರೆಸ್ ನಾಯಕ ಆರ್ಯಾಡನ್ ಮೊಹ ಮ್ಮದ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.‘ಚುನಾವಣಾ ಆಯೋಗದ ಮಧ್ಯಪ್ರವೇಶ ಸರಿಯಲ್ಲ’

ಕೊಚ್ಚಿ ವರದಿ (ಪಿಟಿಐ): ಬಡತನ ರೇಖೆಗಿಂತ ಕೆಳಗಿರುವವರಿಗೆ 2 ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಕೊಡುವುದಾಗಿ ಕೇರಳ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮಧ್ಯಪ್ರವೇಶಿಸಿರುವುದು ಸರಿಯಲ್ಲ ಎಂದು ಬುಧವಾರ ಕೇರಳ ಹೈಕೋರ್ಟ್ ತಿಳಿಸಿದೆ.ಸರ್ಕಾರದ ಆದೇಶವನ್ನು ತಡೆಹಿಡಿದಿದ್ದ ಆಯೋಗದ ಕ್ರಮವನ್ನು ಪ್ರಶ್ನಿಸಿ ಶಾಸಕ ರಾಜಾಜಿ ಮ್ಯಾಥ್ಯೂ ಥಾಮಸ್ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿ ಜೆ.ಚಳಮೇಶ್ವರ ಅವರು ಈ ಅಭಿಪ್ರಾಯಪಟ್ಟಿದ್ದಾರೆ.ಚುನಾವಣಾ ಮಾದರಿ ನೀತಿಸಂಹಿತೆ ಜಾರಿಗೊಳಿಸುವುದಕ್ಕೂ ಮುನ್ನವೇ ಸರ್ಕಾರ ಇಂತಹದ್ದೊಂದು ಆದೇಶ ಹೊರಡಿಸಿತ್ತೋ ಇಲ್ಲವೋ ಎಂಬ ಬಗ್ಗೆ ಗುರುವಾರದ ಒಳಗೆ ಕೋರ್ಟ್‌ಗೆ ಹೇಳಿಕೆ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.2 ರೂಪಾಯಿಗೆ ಒಂದು ಕೆಜಿ ಅಕ್ಕಿ ವಿತರಿಸುವ ಯೋಜನೆ ಬಹಳಷ್ಟು ಜನರ ಹಿತಾಸಕ್ತಿಯನ್ನು ಒಳಗೊಂಡಿದೆ. ಬಡವರಿಗೆ ಲಾಭವಾಗುವ ಈ ಯೋಜನೆಯನ್ನು ಕೇವಲ ಮಾದರಿ ಚುನಾವಣಾ ನೀತಿಸಂಹಿತೆಯ ಹೆಸರಲ್ಲಿ ತಡೆ ಹಿಡಿದಿರುವುದು ಸಾಧುವಲ್ಲ ಎಂದು ಕೋರ್ಟ್ ಹೇಳಿದೆ.ಏಪ್ರಿಲ್ 13ರಂದು ನಡೆಯಲಿರುವ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಸರ್ಕಾರ ಈ ಆದೇಶ ಹೊರಡಿಸಿತ್ತು ಎಂದು ಅರ್ಜಿದಾರರು ಕೋರ್ಟ್‌ಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಿದ್ದರೂ ಅದು ಕೇಳಲಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.ಚುನಾವಣಾ ದಿನಾಂಕ ಘೋಷಿಸುವ ಆರು ದಿನಗಳ ಮೊದಲು ಅಂದರೆ ಫೆಬ್ರುವರಿ 23ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 40 ಲಕ್ಷ ಜನರಿಗೆ ಲಾಭವಾಗುವ ಈ ಯೋಜನೆ ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಚುನಾವಣಾ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದ ಅರ್ಜಿಗಳ ವಿತರಣೆ ಮತ್ತು ಪ್ರಚಾರ ಅಭಿಯಾನದ ಮೇಲೆ ನಿರ್ಬಂಧ ವಿಧಿಸಿದ್ದರು ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.ಇಂದು ಡಿಎಂಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚೆನ್ನೈ ವರದಿ (ಪಿಟಿಐ): ಆಡಳಿತಾರೂಢ ಡಿಎಂಕೆ ಅಭ್ಯರ್ಥಿಗಳ ಬಹುನಿರೀಕ್ಷಿತ ಪಟ್ಟಿ ಬಿಡುಗಡೆ ಕಾರ್ಯಕ್ರಮ ಗುರುವಾರಕ್ಕೆ ಮುಂದೂಡಲಾಗಿದೆ. ಕೆಲವು ಸ್ಥಾನಗಳ ಬಗ್ಗೆ ಮಿತ್ರ ಪಕ್ಷಗಳೊಂದಿಗೆ ಅಂತಿಮ ಹಂತದ ಮಾತುಕತೆ ನಡೆದಿರುವ ಹಿನ್ನೆಲೆಯಲ್ಲಿ ಬುಧವಾರ ಬಿಡುಗಡೆಯಾಗಬೇಕಿದ್ದ ಪಟ್ಟಿಯನ್ನು ಒಂದು ದಿನ ತಡವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು ಎಂದು ಪಕ್ಷದ ಮುಖವಾಣಿ ‘ಮುರಸೋಳಿ’ಗೆ ಡಿಎಂಕೆ ತಿಳಿಸಿದೆ.ಕಾಂಗ್ರೆಸ್ ಸೇರಿದಂತೆ ಪಿಎಂಕೆ, ವಿಸಿಕೆ ಮತ್ತು ಐಯುಎಂಎಲ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವಲ್ಲಿ ಪಕ್ಷ ಯಶಸ್ವಿಯಾಗಿದ್ದು, ಕೆಎಂಕೆ ಮತ್ತು ಎಂಎಂಕೆಗೆ 7 ಸ್ಥಾನಗಳನ್ನು ಬಿಟ್ಟುಕೊಡುವ ವಿಷಯ ಅಂತಿಮವಾಗಬೇಕಿದೆ.ಏಪ್ರಿಲ್ 13ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.