ಕೇಳಲಾರೆ ತಾಳಲಾರೆ...

ದೇಶದ ಮಹಾನಗರಗಳ ಸಮಸ್ಯೆ ಬಗ್ಗೆ ಮಾತನಾಡುವಾಗ ಶಬ್ದ ಮಾಲಿನ್ಯದ ಬಗ್ಗೆ ಹೇಳಲೇಬೇಕು. ಈ ಬಗ್ಗೆ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ, ಮತ್ತೆಮತ್ತೆ ಚರ್ಚೆಗೊಳಗಾಗುವ ವಿಷಯವಿದು. ನಗರದ ಸಂಸ್ಥೆಯೊಂದು ಐದು ಪ್ರದೇಶಗಳಲ್ಲಿ ಶಬ್ದಮಾಲಿನ್ಯ ಪ್ರಮಾಣದ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಕ್ಯಾಂಪಸ್ನಲ್ಲಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ಸಿಎಸ್ಟಿ) ಮಲ್ಲೇಶ್ವರದ ಸರ್ಕಲ್ ಮಾರಮ್ಮ ವೃತ್ತ, ಸೆಕ್ಯುರಿಟಿ ಗೇಟ್, ಮುಖ್ಯ ದ್ವಾರ (ಐಐಎಸ್ಸಿ ಕ್ಯಾಂಪಸ್), ಸದಾಶಿವನಗರ ಪೊಲೀಸ್ ಠಾಣೆ, ಎಂ.ಎಸ್.ರಾಮಯ್ಯ ಆಸ್ಪತ್ರೆ ಪಕ್ಕದ ಗೇಟ್ ಬಳಿ ಸಮೀಕ್ಷೆ ನಡೆಸಿದೆ.
ಸಮೀಕ್ಷೆ ನೇತೃತ್ವ ವಹಿಸಿದ್ದವರು ಕೆಎಸ್ಸಿಎಸ್ಟಿ ಸಲಹೆಗಾರ ಮಹೇಶ್ ಕಶ್ಯಪ್, ಇವರೊಂದಿಗೆ ಇಬ್ಬರು ಪರಿಸರ ವಿಜ್ಞಾನಿಗಳು ಹಾಗೂ ಬಿಎಂಎಸ್ ಕಾಲೇಜಿನ ಆರು ಮಂದಿ ಎಂಟೆಕ್ ವಿದ್ಯಾರ್ಥಿಗಳು ಜೊತೆಗೊಡಿದ್ದರು. ಜನವರಿಯಲ್ಲಿ ಈ ಸಮೀಕ್ಷೆ ಆರಂಭಗೊಂಡಿತ್ತು.
ಪೀಕ್ ಅವರ್ ಹಾಗೂ ನಾನ್ ಪೀಕ್ ಅವರ್ನಲ್ಲಿ ಎಷ್ಟು ಪ್ರಮಾಣದ ಶಬ್ದಮಾಲಿನ್ಯವಿರುತ್ತದೆ ಎಂಬುದನ್ನು ಲೆಕ್ಕ ಹಾಕಿದ್ದಾರೆ. ಒಂದು ಗಂಟೆ ಅವಧಿಯಲ್ಲಿ ಈ ಪ್ರದೇಶಗಳಲ್ಲಿ ಎಷ್ಟು ಆಟೊ, ಬಸ್, ಸ್ಕೂಟರ್, ಟ್ಯಾಕ್ಸಿಗಳು ಓಡಾಡಿವೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಅಧ್ಯಯನ ನಡೆಸಿದ ಪ್ರತಿ ಪ್ರದೇಶದಲ್ಲಿಯೂ ತಲಾ ಎರಡು ಡೆಸಿಬಲ್ ಮೀಟರ್ಗಳನ್ನು (ಶಬ್ದದ ಪ್ರಮಾಣ ಅಳೆಯುವ ಸಾಧನ) ಬಳಸಿಕೊಂಡಿದ್ದರು.
ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಬಳಿ ನಾನ್ ಪೀಕ್ ಅವರ್ನಲ್ಲಿ (ಬೆಳಿಗ್ಗೆ 11ರಿಂದ 4) 5000ಕ್ಕೂ ಹೆಚ್ಚು ವಾಹನಗಳು ಸಂಚರಿಸಿವೆ, ಶಬ್ದ ಮಾಲಿನ್ಯದ ಕನಿಷ್ಠ ಮಟ್ಟ ಇಲ್ಲಿ 61.7 ಡಿ.ಬಿ. (ಡೆಸಿಬಲ್) ದಾಖಲಾಗಿದೆ.
ಪೀಕ್ ಅವರ್ನಲ್ಲಿ (ಬೆಳಿಗ್ಗೆ8ರಿಂದ 12 ಹಾಗೂ ಮಧ್ಯಾಹ್ನ 4ರಿಂದ 7) ಮಾರಮ್ಮ ಸರ್ಕಲ್ ಮೂಲಕ 6500 ವಾಹನಗಳು ಸಂಚರಿಸಿವೆ, ನಾನ್ ಪೀಕ್ ಅವರ್ನಲ್ಲಿ 4000 ವಾಹನಗಳು ಸಂಚರಿಸಿವೆ. ಶುಕ್ರವಾರ ಮತ್ತು ಶನಿವಾರ ದೇವಸ್ಥಾನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿರುತ್ತದೆ, ಸೈಲೆನ್ಸರ್ ಶಬ್ದ ಹಾಗೂ ಹಾರ್ನ್ ಮಾಡುವುದರಿಂದ ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತದೆ. ಇದು ಯಶವಂತಪುರ, ಸ್ಯಾಂಕಿಕೆರೆ ಮಾರ್ಗೋಸಾ ರಸ್ತೆಯ ಮಖ್ಯ ಜಂಕ್ಷನ್.
ಎಟಿಎಂ ಸೆಕ್ಯೂರಿಟಿ ಗೇಟ್ ಬಳಿ ನಾನ್ ಪೀಕ್ ಅವರ್ನಲ್ಲಿ 4500 ವಾಹನಗಳು ಸಂಚರಿಸಿವೆ. ಮುಖ್ಯ ಗೇಟಿನ ಬಳಿ ಪೀಕ್ ಅವರ್ನಲ್ಲಿ 3000 ವಾಹನಗಳು ಸಂಚರಿಸಿದರೆ, ನಾನ್ ಪೀಕ್ ಅವರ್ನಲ್ಲಿ 2400 ವಾಹನಗಳು ಸಂಚರಿಸಿವೆ.
ಎಂ.ಎಸ್.ರಾಮಯ್ಯ ಗೇಟ್ ಬಳಿ ಪೀಕ್ ಅವರ್ನಲ್ಲಿ (ಬೆಳಿಗ್ಗೆ ಮತ್ತು ಸಂಜೆ) 3000ಕ್ಕೂ ಹೆಚ್ಚು ವಾಹನಗಳು ಸಂಚರಿಸಿವೆ. ಇದು ನಿಶ್ಶಬ್ದ ವಲಯವಾಗಿದ್ದರೂ ನಾನ್ ಪೀಕ್ ಅವರ್ನಲ್ಲಿ 74.1 ಡಿ.ಬಿ ಮಟ್ಟ, ಪೀಕ್ ಅವರ್ನಲ್ಲಿ 108.3 ಡಿ.ಬಿ.ವರೆಗೂ ಶಬ್ದದ ಪ್ರಮಾಣ ದಾಖಲಾಗಿದೆ. ‘ಡೀಸೆಲ್ ಜನರೇಟರ್, ವಾಹನಗಳ ಹಾರ್ನ್, ಕಟ್ಟಡ ನಿರ್ಮಾಣ, ವಾಹನಗಳ ಎಂಜಿನ್ ಶಬ್ದ ಶಬ್ದಮಾಲಿನ್ಯಕ್ಕೆ ಮುಖ್ಯ ಕಾರಣ.
‘ಪೀಕ್ ಅವರ್ನಲ್ಲಿ ಸರ್ಕಲ್ ಮಾರಮ್ಮ ವೃತ್ತದ ಫುಟ್ಪಾತ್ ಮೇಲೆ ನಿಂತು ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ಅಚ್ಚರಿಯ ವಿಷಯ ಬೆಳಕಿಗೆ ಬಂತು. ಒಂದು ಕಡೆ 72 ಡೆಸಿಬಲ್ನಷ್ಟು ಶಬ್ದವಿದ್ದರೆ ಇನ್ನೊಂದು ಕಡೆ 59 ಡೆಸಿಬಲ್ನಷ್ಟು ಶಬ್ದವಿತ್ತು. ನಾವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ನೂರು ಮೀಟರ್ ವ್ಯಾಪ್ತಿಯಲ್ಲಿ ಎರಡು ಕಡೆ ಸಮೀಕ್ಷೆ ಮಾಡುತ್ತೇವೆ. ನಮ್ಮ ಸಮೀಕ್ಷೆಯಲ್ಲಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ನಲ್ಲಿ ಹೆಚ್ಚು ಶಬ್ದದ ಮಟ್ಟ ದಾಖಲಾಗಿತ್ತು’ ಎಂದು ಸಮೀಕ್ಷೆಯ ಮಾಹಿತಿ ನೀಡುತ್ತಾರೆ ಮಹೇಶ್ ಕಶ್ಯಪ್.
ಶಬ್ದ ಮಾಲಿನ್ಯ ತಡೆಗೆ ಅಧ್ಯಯನ ತಂಡ ನೀಡಿರುವ ಸಲಹೆಗಳು
*ಸಾರಿಗೆ ಇಲಾಖೆ ಹಾಗೂ ಸಂಚಾರ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಬೇಕು.
* ಚಾಲಕರಿಗೆ ಶಬ್ದಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು
* ‘ನೋ ಹಾರ್ನ್’ ವಲಯದ ಫಲಕವನ್ನು ರಸ್ತೆ ಬದಿಯಲ್ಲಿ, ವಾಹನ ಚಾಲಕರಿಗೆ ಕಾಣುವಂತೆ ಹಾಕಬೇಕು.
* ವಾಹನಗಳ ಹಿಂದೆ ‘ಶಬ್ದಮಾಡಿ ದಾರಿ ಕೇಳಿ’, ‘ಸೌಂಡ್ ಹಾರ್ನ್’ ಎಂಬ ಬರಹ ಇರಬಾರದು.
* ಸಿಗ್ನಲ್ಗಳಲ್ಲಿ ನಿಂತ ವಾಹನಗಳು ಹಸಿರು ದೀಪ ಕಂಡೊಡನೆ ಅನಗತ್ಯ ಹಾರ್ನ್ ಮಾಡಬಾರದು.
* ಬೈಕ್, ಕಾರುಗಳ ಸೈಲೆನ್ಸರ್ ಪರಿವರ್ತಿಸುವುದು, ಕರ್ಕಶ ಹಾರ್ನ್ ಹಾಕಿಸುವುದು ತಪ್ಪಬೇಕು.
* ಪದೇಪದೆ ತಪ್ಪು ಮಾಡುವ ವಾಹನಗಳ ವಿಮೆಯನ್ನು ರದ್ದುಮಾಡಬೇಕು.
* ಎರಡು ಸ್ಟ್ರೋಕ್ ಆಟೊಗಳನ್ನು ಬಳಸಬಾರದು. ಹಳೆ ವಾಹನಗಳ ನಿರ್ವಹಣೆ ಸರಿಯಾಗಿರಬೇಕು, ಎಂಜಿನ್ ಶಬ್ದ ಹೆಚ್ಚಿರಬಾರದು.
* ಮತ್ತೊಬ್ಬರಿಗೆ ತೊಂದರೆ ಆಗುವಂತೆ ವಾಹನಗಳಲ್ಲಿ ಮ್ಯೂಸಿಕ್ ಹಾಕಬಾರದು.
(ವರದಿ ಮತ್ತು ಶಿಫಾರಸ್ಸನ್ನು ನಿಯಂತ್ರಣ ಮಂಡಳಿಗೆ ಸಲ್ಲಿಸಲಾಗಿದೆ)
ಕಾನೂನು ಬಿಗಿಯಾಗಬೇಕು
ಬೆಂಗಳೂರಿನವರೇ ಆದ ಮಹೇಶ್ ಕಶ್ಯಪ್ ಅಮೆರಿಕದಲ್ಲಿ ಪರಿಸರ ಎಂಜಿನಿಯರಿಂಗ್ ಓದಿದ್ದಾರೆ. ಕೆನಡಾ ಸರ್ಕಾರದ ಪರಿಸರ ವಿಭಾಗದಲ್ಲಿ ಹಿರಿಯ ಎಂಜಿನಿಯರ್ ಆಗಿ 12 ವರ್ಷ ಸೇವೆ ಸಲ್ಲಿಸಿದ್ದಾರೆ.
‘ಕೆನಡಾದಲ್ಲಿ ಇಲ್ಲಿರುವಷ್ಟು ಮಾಲಿನ್ಯವಿಲ್ಲ. ಅಲ್ಲಿನ ಜನ, ಕೈಗಾರಿಕೆ ಮಾಲೀಕರು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಾರೆ. ನಮ್ಮಲ್ಲೂ ಕಾನೂನು ಬಿಗಿಯಾಗಬೇಕು’ ಎಂದು ಸಲಹೆ ನೀಡುತ್ತಾರೆ ಮಹೇಶ್ ಕಶ್ಯಪ್.
***
ಅರಿವು ಮೂಡಿಸುವುದೊಂದೇ ಮಾರ್ಗ
ಮನೆಯಿಂದ ನಾವು ಕಚೇರಿಗೆ ಹೊರಟರೆ ಎಷ್ಟೊಂದು ಸಿಗ್ನಲ್ಗಳು ಸಿಗುತ್ತವೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಲ್ಲಿ ನೀವು ಒಮ್ಮೆಯಾದರೂ ಸಿಲುಕಿಕೊಂಡಿರುತ್ತೀರಿ.
ಶಬ್ದಮಾಲಿನ್ಯದಿಂದ ನಿಮಗೂ ಕಿರಿಕಿರಿ ಆಗಿರುತ್ತದೆ. ಸಿಗ್ನಲ್ನಲ್ಲಿ ಅನಗತ್ಯವಾಗಿ ಹಾರ್ನ್ ಮಾಡುತ್ತಾರೆ. ಕೆಲವರಿಗೆ ಅದು ಅಭ್ಯಾಸ ಆಗಿರುತ್ತದೆ. ಇದರಿಂದ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುವಂತಾಗುತ್ತದೆ. ಇದು ಕಿವಿಗಳ ಆರೋಗ್ಯಕ್ಕೂ ಮಾರಕವಾಗಿವೆ.
ನಮ್ಮ ಕಿವಿ ತಮಟೆಗಳು ಒಂದು ಹಂತದವರೆಗೂ ಶಬ್ದ ಮಾಲಿನ್ಯವನ್ನು ತಡೆದುಕೊಳ್ಳುತ್ತವೆ. ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ತತ್ಕ್ಷಣ ಪರಿಣಾಮ ಆಗದಿದ್ದರೂ ನಿಧಾನವಾಗಿ ಕಿವಿಯ ಆರೋಗ್ಯ ಹದಗೆಡುತ್ತದೆ.
ಅನಗತ್ಯ ಹಾರ್ನ್ ಸಲ್ಲದು ಎಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಸಂಚಾರ ಪೊಲೀಸ್ ಅಥವಾ ಸಾರಿಗೆ ಇಲಾಖೆಯವರು ಇತ್ತ ಗಮನ ಹರಿಸಬೇಕು.
ಕೆಲ ಸೆಲೆಬ್ರಿಟಿಗಳ ಮೂಲಕ ಘೋಷಣಾ ವಾಕ್ಯಗಳನ್ನು ಜನಪ್ರಿಯಗೊಳಿಸಬೇಕು. ಹೀಗೆ ಮಾಡುವುದರಿಂದ ಪರಿಣಾಮಕಾರಿಯಾದ ಫಲಿತಾಂಶ ನಿರೀಕ್ಷಿಸಬಹುದು.
ಅಧಿಕಾರಿಗಳು ನಿಯಮಿತವಾಗಿ ಬಸ್ ಡಿಪೊಗಳಿಗೆ ಭೇಟಿ ನೀಡಿ, ಚಾಲಕರಿಗೆ ಈ ಬಗ್ಗೆ ಶಿಕ್ಷಣ ನೀಡಬೇಕು. ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳ ನೆರವಿನೊಂದಿಗೆ ಸಭೆ ನಡೆಸಿ, ಜಾಗೃತಿ ಮೂಡಿಸಬೇಕು.
-ಕೆ.ಎಸ್.ಚಂದ್ರಶೇಖರ್,
ಅಕ್ಷಯ ನೇತ್ರಾಲಯ, ನಾಗರಬಾವಿ ವೃತ್ತ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.