ಸೋಮವಾರ, ಮೇ 10, 2021
25 °C

ಕೇಳಿದ್ದು 650 ಎಕರೆ, ಭೂಸ್ವಾಧೀನ 707.4 ಎಕರೆ!

ಪ್ರಜಾವಾಣಿ ವಾರ್ತೆ/ ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಇಲ್ಲಿನ ಗೋಕುಲ ಗ್ರಾಮದಲ್ಲಿ ವಿಮಾನ ನಿಲ್ದಾಣ ವಿಸ್ತರಣೆಗೆಂದು ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಹೆಚ್ಚುವರಿ 57.4 ಎಕರೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮುನ್ನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಜಿಲ್ಲಾಡಳಿತಕ್ಕೆ 3.31 ಕೋಟಿ ರೂಪಾಯಿ ಪಾವತಿ ಮಾಡಿದೆ.ಜಮೀನು ನೀಡುವ ಮುನ್ನ ಸ್ವಾಧೀನಗೊಂಡ ಪ್ರದೇಶದಲ್ಲಿ ವಾಸವಿದ್ದವರಿಗೆ ಪರಿಹಾರ ನೀಡಲು ಎಂದು ಈ ಹಣವನ್ನು ಕೆಐಎಡಿಬಿ 2009ರ ಜನವರಿ 2ರಂದು ಅಂದಿನ ಜಿಲ್ಲಾಧಿಕಾರಿ ಹೆಸರಿಗೆ ಹಣ ಪಾವತಿಸಿದೆ. ಇದಕ್ಕೆ ಬದಲಾಗಿದೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಹೆಚ್ಚುವರಿ ಜಮೀನನ್ನು ಮಂಡಳಿಯ ಸುಪರ್ದಿಗೆ ವಹಿಸಲಾಗಿದೆ. ಈ ಕುರಿತ ದಾಖಲೆಗಳು `ಪ್ರಜಾವಾಣಿ'ಗೆ ಲಭ್ಯವಾಗಿವೆ.ಎಎಐ ಕೇಳಿದ್ದು 650 ಎಕರೆ ಮಾತ್ರ: ದೇಶಾದ್ಯಂತ ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಯೋಜಿಸಿದ್ದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಗೋಕುಲ ಹಾಗೂ ಉಣಕಲ್ ಗ್ರಾಮಗಳ ವ್ಯಾಪ್ತಿಯ 650 ಎಕರೆ ಭೂಮಿ ಸ್ವಾಧೀನಪಡಿಸಿಕೊಡುವಂತೆ 2007ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರವನ್ನು ಕೋರಿತ್ತು. ಜಮೀನು ಸ್ವಾಧೀನದ ಹೊಣೆ ಹೊತ್ತಿದ್ದ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಆರಂಭಿಕ ಕಂತಾಗಿ ಎಎಐ ಆಗ 20 ಕೋಟಿ ರೂಪಾಯಿ ಪಾವತಿಸಿದೆ.ಪ್ರಾಧಿಕಾರ 650 ಎಕರೆ ಕೇಳಿದ್ದರೂ 2007ರ ಏಪ್ರಿಲ್ 24ರಂದು 711ಎಕರೆ ಭೂಮಿ ಸ್ವಾಧೀನಕ್ಕೆ ಸರ್ಕಾರ ಕೆಐಎಡಿಬಿ ಮೂಲಕ ಅಧಿಸೂಚನೆ ಹೊರಡಿಸಿದೆ. ಅಂತಿಮವಾಗಿ ಎಕರೆಗೆ 26 ಲಕ್ಷ ರೂಪಾಯಿ ಪರಿಹಾರ ನಿಗದಿಗೊಳಿಸಿ 707.4 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ನೀಡಿ ಉಳಿದ ಜಮೀನನ್ನು ಕೆಐಎಡಿಬಿಗೆ ಕೊಡಲು 2008ರ ಡಿಸೆಂಬರ್ 20ರಂದು ಅಂದಿನ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆ ಒಪ್ಪಿಗೆ ನೀಡಿದೆ. `ಹೆಚ್ಚುವರಿಯಾಗಿ ವಶಪಡಿಸಿಕೊಂಡ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು' ಎಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹೆಸರಿನಲ್ಲಿ 2009ರ ಮೇ 23ರಂದು ಮತ್ತೊಂದು ಆದೇಶ ಹೊರಡಿಸಿದ್ದಾರೆ.ಖಾಸಗಿಯವರಿಗೆ ಮಾರಾಟ: ಹೆಚ್ಚುವರಿ ಜಮೀನಿನ ಮಾಲೀಕತ್ವ ಪಡೆದ ಕೆಐಎಡಿಬಿ 2012ರ ಏಪ್ರಿಲ್ 11ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ಗೆ ವ್ಯಕ್ತಿತ್ವ ಕೌಶಲ್ಯವರ್ಧನ ಕೇಂದ್ರ ಸ್ಥಾಪನೆಗೆ 6.9 ಎಕರೆ ಜಮೀನು, ಉದ್ಯಮಿ ರಮೇಶ್ ಶೆಟ್ಟಿ ಅವರಿಗೆ ಐಷಾರಾಮಿ ಹೋಟೆಲ್ ನಿರ್ಮಾಣಕ್ಕೆ ಎರಡು ಎಕರೆ ಸೇರಿದಂತೆ ಖಾಸಗಿ ವ್ಯಕ್ತಿಗಳು, ಸಂಘ ಸಂಸ್ಥೆಗಳಿಗೆ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದೆ.`ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಎಂದು ಅಧಿಸೂಚನೆ ಹೊರಡಿಸಿ ಪಡೆದ ಜಮೀನನ್ನು ಬೇರೊಂದು ಉದ್ದೇಶಕ್ಕೆ ಬಳಸುವಂತೆಯೇ ಇಲ್ಲ. ವಾಣಿಜ್ಯ ಉದ್ದೇಶಕ್ಕೆ ಬಳಸಬಹುದು ಎಂದು ಮತ್ತೊಂದು ಆದೇಶ ಹೊರಡಿಸಿರುವುದು ಕಾನೂನು ಬಾಹಿರ.ಒಟ್ಟಾರೆ ಭೂಸ್ವಾಧಿನಕ್ಕೆ ಮುನ್ನವೇ ಹೆಚ್ಚಿನ ಭೂಮಿ ಪಡೆದು ರೈತರನ್ನು ವಂಚಿಸುವ ಪ್ರಯತ್ನ ಸರ್ಕಾರ ಮಾಡಿದೆ' ಎನ್ನುತ್ತಾರೆ ಗೋಕುಲ ರೈತರ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ವಕೀಲ ರಮೇಶ್ ನಾಯಕ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.