ಕೈ–ಕಾಲು ಕಟ್ಟಿ, ಜೀವಂತವಾಗಿ ಹೂತಿದ್ದರು!

ಬೆಂಗಳೂರು: ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆ ತನ್ನ ಪತ್ನಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಖಾಸಗಿ ಕಂಪೆನಿ ಉದ್ಯೋಗಿಯನ್ನು ಸಹಚರರ ನೆರವಿನಿಂದ ಅಪಹರಣ ಮಾಡಿದ್ದ ಪ್ರತಾಪ್ ಎಂಬಾತ, ಕೈ–ಕಾಲು ಕಟ್ಟಿ ಹಾಕಿ ಅವರನ್ನು ಜೀವಂತ ವಾಗಿ ಹೂತು ಹಾಕಿದ್ದ ಸಂಗತಿ ತನಿಖೆ ಯಿಂದ ಬಯಲಾಗಿದೆ.
ಜಯನಗರ ಆರನೇ ಬ್ಲಾಕ್ನ ಯೋಗೇಶ್ (26) ಕೊಲೆ ಪ್ರಕರಣ ಸಂಬಂಧ ಐದು ಮಂದಿಯನ್ನು ಬಂಧಿಸಿರುವ ಜಯನಗರ ಪೊಲೀಸರು, ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ರಹಸ್ಯ ಸಂಗತಿಗಳೂ ಬೆಳಕಿಗೆ ಬಂದಿವೆ.
‘ಪ್ರಕರಣ ಸಂಬಂಧ ಅತ್ತಿಂಗೆರೆ ಗ್ರಾಮದ ಪ್ರತಾಪ್, ಆತನ ಪತ್ನಿ ವಿ.ಚಂದ್ರಿಕಾ, ಗೆಳೆಯರಾದ ನರಸಿಂಹಮೂರ್ತಿ, ದೀಪಕ್ ಹಾಗೂ ಕರಗಮಂಗಲ ಗ್ರಾಮದ ವೆಂಕಟೇಶ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
‘ವಿಲ್ಸನ್ ಗಾರ್ಡನ್ನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಯೋಗೇಶ್ ಅವರಿಗೆ, ಫೇಸ್ಬುಕ್ ಮೂಲಕ ಶ್ರೀರಂಗಪಟ್ಟಣದ ಚಂದ್ರಿಕಾಳ ಪರಿಚಯವಾಗಿತ್ತು. ಕ್ರಮೇಣ ಇಬ್ಬರ ನಡುವೆ ಪ್ರೇಮಾಂಕುರವಾಗಿ, ದೈಹಿಕ ಸಂಪರ್ಕ ಕೂಡ ನಡೆದಿತ್ತು.’
‘ಈ ನಡುವೆ ಫೇಸ್ಬುಕ್ನಲ್ಲಿ ಪ್ರತಾಪ್ನನ್ನು ಪರಿಚಯ ಮಾಡಿಕೊಂಡ ಚಂದ್ರಿಕಾ, ಈತನ ಬಳಿಯೂ ಪ್ರೇಮ ನಿವೇದನೆ ಮಾಡಿಕೊಂಡಿದ್ದಳು. ಪೋಷಕರ ಒಪ್ಪಿಗೆ ಪಡೆದು ಆರು ತಿಂಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಮದುವೆ ನಂತರವೂ, ಯೋಗೇಶ್–ಚಂದ್ರಿಕಾ ನಡುವಿನ ಅಕ್ರಮ ಸಂಬಂಧ ಮುಂದುವರಿದಿತ್ತು.’
‘ಇತ್ತೀಚೆಗೆ ಚಂದ್ರಿಕಾ, ತನ್ನಿಂದ ದೂರವಾಗುವಂತೆ ಯೋಗೇಶ್ಗೆ ಮನವಿ ಮಾಡಿದ್ದರು. ಅದಕ್ಕೆ ಒಪ್ಪದ ಅವರು, ಅಂತರ ಕಾಯ್ದುಕೊಂಡರೆ ತಮ್ಮ ಸಂಬಂಧವನ್ನು ಪತಿ ಬಳಿ ಹೇಳುವುದಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಕಾಟ ವಿಪರೀತವಾದಾಗ ದಿಕ್ಕು ತೋಚದಂತಾದ ಚಂದ್ರಿಕಾ, ನಡೆದ ಘಟನೆಯನ್ನು ಪತಿ ಬಳಿ ಹೇಳಿಕೊಂಡಿದ್ದಳು. ಇದರಿಂದ ಕೆರಳಿದ ಆತ, ಯೋಗೇಶ್ ಹತ್ಯೆಗೆ ಸಂಚು ರೂಪಿಸಿಕೊಂಡ.’
‘ಜುಲೈ 19ರ ಬೆಳಿಗ್ಗೆ ಸೌತ್ ಎಂಡ್ ವೃತ್ತಕ್ಕೆ ಬಂದ ಆರೋಪಿಗಳು, ಪೊಲೀಸರ ಸೋಗಿನಲ್ಲಿ ಯೋಗೇಶ್ ಅವರ ಬೈಕನ್ನು ಅಡ್ಡಗಟ್ಟಿದ್ದರು. ನಂತರ ಅವರನ್ನು ಕಾರಿನಲ್ಲಿ ಅಪಹರಿಸಿ, ಅತ್ತಿಂಗೆರೆಯಲ್ಲಿರುವ ಪ್ರತಾಪ್ನ ತೋಟದ ಮನೆಗೆ ಕರೆದೊಯ್ದಿದ್ದರು. ಅಲ್ಲಿ ಕೈ–ಕಾಲು ಕಟ್ಟಿ, ಇಡೀ ದಿನ ಚಿತ್ರಹಿಂಸೆ ನೀಡಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪತ್ನಿಯನ್ನೂ ಗುಂಡಿಗೆ ತಳ್ಳಿದ್ದ: ಮರು ದಿನ ಚಂದ್ರಿಕಾಳನ್ನೂ ತನ್ನ ತೋಟದ ಮನೆಗೆ ಕರೆಸಿಕೊಂಡ ಪ್ರತಾಪ್, ಆಕೆಯ ಎದುರೇ ಯೋಗೇಶ್ನ ಮರ್ಮಾಂಗಕ್ಕೆ ಒದ್ದಿದ್ದ. ನಂತರ ಇಬ್ಬರನ್ನೂ ಗುಂಡಿಗೆ ತಳ್ಳಿ ಮಣ್ಣು ಮುಚ್ಚಲು ಮುಂದಾಗಿದ್ದ. ಈ ವೇಳೆ ಕಿರುಚಾಡುತ್ತಾ ಕ್ಷಮೆಯಾಚಿಸಿದ್ದರಿಂದ ಆಕೆಯನ್ನು ಮೇಲೆತ್ತಿ, ಯೋಗೇಶ್ ಅವರನ್ನು ಜೀವಂತವಾಗಿ ಹೂತು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಡಿಆರ್ ಸುಳಿವು
‘ಯೋಗೇಶ್ ಕಾಣೆಯಾದ ಸಂಬಂಧ ಅವರ ಭಾವ ಜುಲೈ 19ರಂದು ಜಯನಗರ ಠಾಣೆಗೆ ದೂರು ಕೊಟ್ಟಿದ್ದರು. ಅವರ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಚಂದ್ರಿಕಾಳ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾ ಯಿತು. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.