ಗುರುವಾರ , ಏಪ್ರಿಲ್ 15, 2021
24 °C

ಕೊಡಗಿನಲ್ಲಿ ಕಕ್ಕಡ ಹದಿನೆಂಟರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ನೆರೆಯ ತುಳುನಾಡಿನಲ್ಲಿ ಆಟಿ ಹದಿನೆಂಟು ಎಂದು ಆಟಿ ತಿಂಗಳ ವಿಶೇಷವನ್ನು ಆಚರಿಸಿದರೆ ಕೊಡಗು ಜಿಲ್ಲೆಯ ಜನರು ಕೃಷಿ ಚಟುವಟಿಕೆಯ ಭಾಗವಾಗಿ ಕಕ್ಕಡ ಹದಿನೆಂಟನ್ನು ಶುಕ್ರವಾರ ಜಿಲ್ಲೆಯಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಿದರು. ನಾಪೋಕ್ಲುವಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಮದ್ದುಸೊಪ್ಪಿನ ಪಾಯಸ ತಯಾರಿಸಿ ಸೇವಿಸಲಾಯಿತು. ತೋಟಗಳಿಂದ ಸಂಗ್ರಹಿಸಿ ತಂದ ಮದ್ದು ಸೊಪ್ಪನ್ನು ಶುಕ್ರವಾರ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಕಕ್ಕಡ ಮಾಸ ಅಥವಾ ಆಟಿ ತಿಂಗಳ ಹದಿನೆಂಟನೇ ದಿನದಂದು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಬ್ಬ ಆಚರಿಸಲಾಗುತ್ತಿದೆ. ಅನಂತರ ಮದ್ದು ಸೊಪ್ಪಿನ ಪಾಯಸ ಮಾತ್ರವಲ್ಲ ಹಲ್ವ, ಸಿಹಿ ಅನ್ನ, ಮತ್ತಿತರ ಖಾದ್ಯಗಳನ್ನು ತಯಾರಿಸಿ ಸೇವಿಸುವ ಕ್ರಮವೂ ಅಲ್ಲಲ್ಲಿ ರೂಢಿಯಲ್ಲಿದೆ.ಮದ್ದು ಸೊಪ್ಪು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಕಕ್ಕಡ ತಿಂಗಳ ಆರಂಭದ ದಿನದಿಂದ ಮದ್ದುಬನದ ಗಿಡದಲ್ಲಿ ಒಂದೊಂದೇ ಔಷಧೀಯ ಗುಣಗಳು ಸೇರಲಾರಂಭಿಸುತ್ತವೆ ಎಂಬ ನಂಬಿಕೆ ಇದೆ.ಹದಿನೆಂಟನೇ ದಿನದಂದು ಹದಿನೆಂಟು ಬಗೆಯ ಔಷಧೀಯ ಗುಣಗಳು ಸೇರಿದ ಆ ಸೊಪ್ಪನ್ನು ಬಳಸಿ ಪಾಯಸ ಇಲ್ಲವೇ ಅನ್ನದ ಅಡುಗೆ ತಯಾರಿಸಿ ಸವಿಯುತ್ತಾರೆ.ಮದ್ದು ಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಆ ನೀರನ್ನು ಸೋಸಿ ಕಡು ನೇರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ ರವೆ, ಸಕ್ಕರೆ ಮತ್ತು ತುಪ್ಪ ಸೇರಿಸಿ ಬಾತ್ ತಯಾರಿಸಲಾಗುತ್ತದೆ. ಇಲ್ಲವೇ ಆ ನೀರಿನಲ್ಲಿ ಅಕ್ಕಿ ಬೆಲ್ಲ ಕಾಯಿತುರಿ ಸೇರಿಸಿ ಪಾಯಸ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ, ಔಷಧೀಯ ಗುಣಗಳಿವೆ ಎಂಬ ಕಾರಣಕ್ಕಾಗಿಯೇ ಮದ್ದು ಸೊಪ್ಪಿನ ಪಾಯಸವಾಗಲಿ, ಬರ್ಫಿಯಾಗಲಿ ಮಕ್ಕಳಾದಿಯಾಗಿ ಹಿರಿಯರಿಗೂ ಇಷ್ಟವಾಗುತ್ತದೆ.ಕೊಡಗಿನ ಶೀತ ಹವಾಮಾನದಲ್ಲಿ ಮಳೆಯ ಕೃಷಿ ಚಟುವಟಿಕೆಯ ನಡುವೆ ಮದ್ದು ಸೊಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂಬ ಕಾರಣದಿಂದ ಎಲ್ಲೆಡೆ ಅದನ್ನು ಬಳಸಲಾಗುತ್ತದೆ ಎನ್ನುತ್ತಾರೆ ಹಿರಿಯರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.