ಬುಧವಾರ, ಜೂಲೈ 8, 2020
28 °C

ಕೊಡಚಾದ್ರಿ ವೈಭವದಲ್ಲಿ ಜಾನಪದ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಕೊಡಚಾದ್ರಿ ವೈಭವ ಉಳಿದ ದಿನಗಳಿಗಿಂತ ಬುಧವಾರ ವಿಶಿಷ್ಟವಾಗಿತ್ತು. ನೆಹರು ಕ್ರೀಡಾಂಗಣದಲ್ಲಿ ಇಳಿಹೊತ್ತಿನಲ್ಲಿ ಅಕ್ಷರಶಃ ಜಾನಪದ ಲೋಕವೇ ಅನಾವರಣಗೊಂಡಿತ್ತು. ಸ್ಥಳೀಯ ಕಲೆಗಳ ಅನಾವರಣದ ಜತೆಗೆ ಕನ್ನಡ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ವಿವಿಧ ಪ್ರಕಾರದ ವೈವಿಧ್ಯಮಯ ಜಾನಪದ ಪ್ರದರ್ಶನ ಕೊಡಚಾದ್ರಿ ವೈಭವಕ್ಕೆ ಮತ್ತಷ್ಟು ಮೆರಗು ನೀಡಿತು. ಕರ್ನಾಟಕದ ಮೂಲೆ ಮೂಲೆಗಳಿಂದ ಬಂದ ಸುಮಾರು 110 ಜನ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡು ಜಾನಪದ ಲೋಕವನ್ನು ಅನಾವರಣಗೊಳಿಸಿದರು.ಮೈಸೂರಿನ ಚಿಕ್ಕಮರಿಯಪ್ಪ, ತಮ್ಮ ಮಲೆಮಾದೇಶ್ವರ ತಂಡದೊಂದಿಗೆ ಪ್ರದರ್ಶಿಸಿದ ಕಂಸಾಳೆ ವಾದ್ಯ ಜನಮನ ಸೆಳೆಯಿತು. ತಾಳವನ್ನು ಹಿಡಿದು ಗತ್ತಿಗೆ ಲಯವಾಗಿ ಕಂಸಾಳೆಯವರು ಹಜ್ಜೆ ಹಾಕುತ್ತಾ, ನಡೆಸಿದ ಕಸರತ್ತುಗಳು ನಿಬ್ಬೆರಗುಗೊಳಿಸಿತು. ಅದೇ ರೀತಿ, ನಂತರ ಕಲಾವಿದ ಮಂಡ್ಯದ ಕೃಷ್ಣೇಗೌಡ ಅವರಿಂದ ಪ್ರದರ್ಶನಗೊಂಡ ಗಾರುಡಿಗೊಂಬೆ ಕುಣಿತ ಪ್ರದರ್ಶನ ಗಮನ ಸೆಳೆಯಿತು. ಗೊಂಬೆಗಳನ್ನು ಹೊತ್ತ ಕಲಾವಿದರು ತಮಟೆ, ಡೋಲು, ವಾಲಗ ಮತ್ತಿತರ ಹಿಮ್ಮೇಳದ ವಾದ್ಯಗಳ ಸದ್ದಿಗೆ ಅನುಗುಣವಾಗಿ ಬಳಕುತ್ತಾ ಬಂದ ರಾಕ್ಷಸಾಕಾರದ ಗೊಂಬೆಗಳು ಪ್ರೇಕ್ಷಕರಲ್ಲಿ ಪುಳಕವನ್ನುಂಟು ಮಾಡಿದವು.  ಬಿ. ಮಂಜಮ್ಮ ಜೋಗತಿ ಮತ್ತು ತಂಡದವರು ಪ್ರದರ್ಶಿಸಿದ ಸವದತ್ತಿ ಯಲ್ಲಮ್ಮನ ಮೂರ್ತಿಯನ್ನು ಹೊತ್ತ ಜೋಗತಿ ನೃತ್ಯ, ಚಿಕ್ಕೋಡಿ ತಾಲ್ಲೂಕಿನ ಲಕ್ಷ್ಮೀದೇವಿ ಸಂಘದ ಅಪ್ಪಾಸಾಹೇಬ್ ಮತ್ತು ತಂಡದ ದಟ್ಟಿ ಕುಣಿತ, ಕೊಡವರ ಉಮ್ಮತ್ತಾಟ್ ಜನಮನ ಸೆಳೆಯುವಲ್ಲಿ ಯಶಸ್ವಿಯಾದವು. ಈ ಕಲಾ ಉತ್ಸವದ ನೇತೃತ್ವವನ್ನು ಕವಿತಾ ಸಾಗರ್ ವಹಿಸಿದ್ದರು.ಇದಕ್ಕೂ ಮೊದಲು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಟೇಲ್ ಶಿವರಾಂ ಉದ್ಘಾಟಿಸಿದರು.ಎಂಪಿಎಂ ಅಧ್ಯಕ್ಷ ಅರಗ ಜ್ಞಾನೇಂದ್ರ, ಶಾಸಕ ಬಿ.ಕೆ. ಸಂಗಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮೃತ್ಯುಂಜಯ ಎಲಿಗಾರ ಮತ್ತಿತರರು ಉಪಸ್ಥಿತರಿದ್ದರು. ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸ್ವಾಗತಿಸಿದರು. ‘ಕೊಡಚಾದ್ರಿ ವೈಭವ-3’ರಲ್ಲಿ ಇಂದು

ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯ ಕಲಾವಿದರಿಂದ. ಸಂಜೆ 5ಕ್ಕೆ.‘ಕೊಡಚಾದ್ರಿ ವೈಭವ-3’ ಸಮಾರೋಪ ಸಮಾರಂಭ: ಸಮಾರೋಪ ಭಾಷಣ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ: ಸಹಕಾರ ಸಚಿವ ಲಕ್ಷ್ಮಣ ಸವದಿ. ಸ್ಮರಣ ಸಂಚಿಕೆ ಬಿಡುಗಡೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ್. ನೇತೃತ್ವ: ಪ್ರಸನ್ನನಾಥ ಸ್ವಾಮೀಜಿ. ಅತಿಥಿಗಳು: ಶಾಸಕ ಎಚ್. ಹಾಲಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮುರುಗನ್, ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಐ.ಎನ್.ಎಸ್. ಪ್ರಸಾದ್, ತಾಂತ್ರಿಕ ಸಲಹೆಗಾರ ಕೆ.ವಿ. ರಾಜು, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಿ. ಸಿದ್ದರಾಜು. ಅಧ್ಯಕ್ಷತೆ: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ. ಸಂಜೆ 6ಕ್ಕೆ. ರಸಮಂಜರಿ ಕಾರ್ಯಕ್ರಮ: ಹೃತ್ವಿಕ್ ಮತ್ತು ರೋಷನ್ ಹಾಗೂ ತಂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.