ಸೋಮವಾರ, ಮೇ 10, 2021
25 °C

ಕೊಡವ ಕುಟುಂಬಗಳ ಹಾಕಿ ನಮ್ಮೆ

ಪ್ರಜಾವಾಣಿ ವಾರ್ತೆ/ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕಾಫಿ ನಾಡು ಕೊಡಗು ಹಾಕಿ ಕ್ರೀಡೆಗೂ ಹೆಸರುವಾಸಿ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರತಿಭಾನ್ವಿತ ಹಾಕಿ ಪಟುಗಳನ್ನು ನೀಡಿದ ಹೆಗ್ಗಳಿಕೆ ಈ ಪುಟ್ಟ ಜಿಲ್ಲೆಗೆ ಇದೆ. ಜಿಲ್ಲೆಯ ಹಾಕಿ ರಂಗಕ್ಕೆ ಕಳಶವಿಟ್ಟಂತೆ ಕೊಡವ ಕೌಟುಂಬಿಕ ಹಾಕಿ ಉತ್ಸವ ಪ್ರತಿ ವರ್ಷ ನಡೆಯುತ್ತದೆ.ಈ ಸಲ ನಡೆಯುತ್ತಿರುವ 16ನೇ ಕೊಡವ ಹಾಕಿ ಉತ್ಸವವು ಏ 21ರಿಂದ ಮೇ 13ರವರೆಗೆ ನಡೆಯಲಿದೆ. ಈ ಉತ್ಸವದ ಆತಿಥ್ಯವನ್ನು ಐಚೆಟ್ಟಿರ್ ಕುಟುಂಬವು ವಹಿಸಿಕೊಂಡಿದ್ದು, ಅಮ್ಮತ್ತಿಯ ಪ್ರೌಢಶಾಲಾ ಮೈದಾನ ಹಾಗೂ ಪ್ರಾಥಮಿಕ ಶಾಲಾ ಮೈದಾನವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ.ಮೇಲ್ನೋಟಕ್ಕೆ ಇದು ಕ್ರೀಡಾಕೂಟದಂತೆ ಕಂಡುಬಂದರೂ ಮೂಲತಃ ಇದು ಕೊಡವರ ಪಾಲಿಗೆ ಹಬ್ಬ, ಜಾತ್ರೆ ಇದ್ದಂತೆ. ಇಲ್ಲಿ ಸೋಲು, ಗೆಲವು ಮುಖ್ಯವಲ್ಲ. ಎಲ್ಲ ಕುಟುಂಬದವರು ಪಾಲ್ಗೊಳ್ಳಬೇಕೆನ್ನುವುದು ಮುಖ್ಯ ಉದ್ದೇಶವಾಗಿರುತ್ತದೆ.ಒಂದು ಜನಾಂಗದ ವಿವಿಧ ಕುಟುಂಬಗಳು ಸೇರಿ ಕ್ರೀಡಾಕೂಟವೊಂದನ್ನು ನಡೆಸುತ್ತಿರುವುದು ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದಲ್ಲಿಯೇ ವಿಶಿಷ್ಟ ಎನ್ನಬಹುದು. ಇದೇ ಕಾರಣಕ್ಕಾಗಿ ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿದೆ. ಇದಲ್ಲದೇ, ಗಿನ್ನೆಸ್ ದಾಖಲೆ ಪುಸ್ತಕದಲ್ಲೂ ದಾಖಲಿಸಲು ಪ್ರಯತ್ನಗಳು ನಡೆದಿವೆ.ಒಗ್ಗಟ್ಟು ಮೂಡಿಸುವುದು ತಂತ್ರಕೊಡಗಿನಲ್ಲಿ ಹಾಕಿ ಪ್ರೋತ್ಸಾಹಿಸುವುದಷ್ಟೇ ಈ ಉತ್ಸವದ ಉದ್ದೇಶವಲ್ಲ. ಮುಖ್ಯವಾಗಿ ಕೊಡವರ ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವುದು ಇದರ ಹಿಂದಿನ ಉದ್ದೇಶವಾಗಿದೆ.ಜಗತ್ತು ಬೆಳೆದಂತೆ ಕೊಡವರ ಹಲವು ಕುಟುಂಬಗಳು ವಿವಿಧ ಕಡೆ ಚದುರಿಹೋದವು. ಇವುಗಳ ನಡುವೆ ಸಂಪರ್ಕ, ಸಮನ್ವಯತೆ ತರುವುದು ಹಾಗೂ ಇವುಗಳ ನಡುವೆ ಒಗ್ಗಟ್ಟು ಮೂಡಿಸುವ ತಂತ್ರವಾಗಿ ಕೊಡವರ ಕೌಟುಂಬಿಕ ಹಾಕಿ ಉತ್ಸವವನ್ನು 1997ರಲ್ಲಿ ಪಾಂಡಂಡ ಕುಟ್ಟಣ್ಣಿ ಅವರು ಆರಂಭಿಸಿದರು.ಈ ಉತ್ಸವಗಳ ಮತ್ತೊಂದು ಮಹತ್ವ ಪೂರ್ಣವಾದ ಪ್ರಯೋಜನವೆಂದರೆ ವೈವಾಹಿಕ ಸಂಬಂಧಗಳು ಸಹ ಏರ್ಪಡುತ್ತವೆ.ವಿವಿಧ ರಂಗಗಳಲ್ಲಿ ಸಾಧನೆ ಮಾಡುತ್ತ ಕೊಡವರ ಕುಟುಂಬಗಳು ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗಿವೆ. ಹಾಕಿ ಉತ್ಸವವನ್ನು ವೀಕ್ಷಿಸುವ ನೆಪದಲ್ಲಿ ಈ ಕುಟುಂಬಗಳು ಮರಳಿ ಕೊಡಗಿಗೆ ಬರುತ್ತವೆ. ಬರುವಾಗ ಕುಟುಂಬದ ಯಜಮಾನ ತನ್ನ ಜೊತೆ ಇಡೀ ಕುಟುಂಬದ ಎಲ್ಲ ಸದಸ್ಯರನ್ನು ಕರೆದುಕೊಂಡು ಬರುತ್ತಾನೆ.ಮದುವೆ ವಯಸ್ಸಿಗೆ ಬಂದಂತಹ ಈ ಕುಟುಂಬಗಳ ಯುವಕ, ಯುವತಿಯರಿಗೆ ತಮ್ಮ ಜೀವನ ಸಂಗಾತಿಯನ್ನು  ಹುಡುಕಿಕೊಳ್ಳಲು ಸಹ ಇದು ವೇದಿಕೆಯಾಗುತ್ತದೆ. ಹೀಗೆ ಹಾಕಿ ಉತ್ಸವ ಕೊಡವರ ಜೀವನ ಪದ್ಧತಿಯಲ್ಲಿ ಮೀಳಿತವಾಗಿ ಬಿಟ್ಟಿದೆ.ಹಾಕಿ ಉತ್ಸವ ಆರಂಭಗೊಂಡ ವರ್ಷದಿಂದ ಇಂದಿನವರೆಗೆ ಸತತವಾಗಿ 15 ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಒಂದೊಂದು ಕುಟುಂಬದವರು ಕ್ರೀಡಾಕೂಟದ ಆತಿಥ್ಯವನ್ನು ವಹಿಸುತ್ತವೆ. ಈ ಆತಿಥ್ಯವನ್ನು ವಹಿಸಿಕೊಳ್ಳು ನಾ ಮುಂದೆ, ತಾ ಮುಂದೆ ಎನ್ನುವಂತೆ ಕುಟುಂಬಗಳ ನಡುವೆ ಸ್ಪರ್ಧೆ ನಡೆಯುತ್ತದೆ.ಇದರ ಮುಂದುವರಿದ ಭಾಗವಾಗಿ ಈ ಸಲದ 16ನೇ ವರ್ಷದ ಕೊಡವರ ಹಾಕಿ ಉತ್ಸವವನ್ನು ಐಚೆಟ್ಟಿರ ಕುಟುಂಬವು ಆಯೋಜಿಸಿದೆ. ಸುಮಾರು 217 ಕೌಟುಂಬಿಕ ತಂಡಗಳ 3200 ಆಟಗಾರರು ಈ ಬಾರಿ ಪಾಲ್ಗೊಳ್ಳುತ್ತಿದ್ದಾರೆ.ಕೊಡವ ಹಾಕಿ ಅಕಾಡೆಮಿ ಮೂಲಕ ರೂಪಿಸಲಾಗಿರುವ  ನೀತಿ- ನಿಯಮಗಳಂತೆ ಇಲ್ಲಿ  ಪಂದ್ಯಾಟಗಳು ನಡೆಯುತ್ತವೆ. ಆಟದ ಸಂದರ್ಭದಲ್ಲಿ ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘಿಸಿದಾಗ ಅಕಾಡೆಮಿಯೇ ದಂಡ, ಶಿಕ್ಷೆಯನ್ನು ಕೂಡ ವಿಧಿಸುತ್ತದೆ. ಕೊಡವ ಹಾಕಿ ತೀರ್ಪುಗಾರರ ಸಂಸ್ಥೆಯಲ್ಲಿರುವ ತೀರ್ಪುಗಾರರೇ ಪಂದ್ಯಗಳ  ಅಂಪೈರ್‌ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗೆ ಪ್ರತಿಯೊಂದು ನಡೆ ವ್ಯವಸ್ಥಿತವಾಗಿ ನಡೆಯುತ್ತದೆ ಎನ್ನುವುದು ವಿಶೇಷ.ಶಿಸ್ತಿನ ಆಟದ ಫಲವಾಗಿಯೇ ರಾಷ್ಟ್ರೀಯ ಹಾಕಿ ತಂಡಕ್ಕೆ ಅತ್ಯುತ್ತಮ ಹಾಕಿಪಟುಗಳನ್ನು ನೀಡಿದ ಹೆಮ್ಮೆ ಈ ಜಿಲ್ಲೆಗೆ ಇದೆ.

ಜಿಲ್ಲೆಯಲ್ಲಿ ಇನ್ನಷ್ಟು ಮೂಲಸೌಕರ್ಯಗಳು ದೊರೆತರೆ ಇನ್ನು ಹಲವು ಹಾಕಿಪಟುಗಳು ರೂಪುಗೊಳ್ಳಬಹುದು.ಮುಖ್ಯವಾಗಿ ಅಸ್ಟ್ರೋಟರ್ಫ್ ಮೈದಾನದ ಅವಶ್ಯಕತೆ ಬಹಳವಿದೆ. ಈಗ ಮಡಿಕೇರಿಯಲ್ಲಿ ಮಾತ್ರ ಇಂತಹ ಮೈದಾನವಿದೆ. ನಾಪೋಕ್ಲು, ಅಮ್ಮತ್ತಿ, ಪೊನ್ನಂಪೇಟೆ, ವಿರಾಜಪೇಟೆ    ಹಾಗೂ ಮಾದಾಪುರದಲ್ಲಿಯೂ ಅಸ್ಟ್ರೋಟರ್ಫ್ ಮೈದಾನಗಳನ್ನು ನಿರ್ಮಿಸಬೇಕು ಎನ್ನುವುದು ನಾಗರಿಕರ ಒತ್ತಾಯ.

ಐಚ್ಚೆಟ್ಟಿರ ಹಾಕಿ ಕಪ್ 2012 ವಿಶೇಷತೆಗಳು*  217 ಕೊಡವ ಕುಟುಂಬಗಳ ತಂಡ, 3255 ಹಾಕಿ ಆಟಗಾರರ ಸಂಗಮ.*  ಮೈದಾನದಲ್ಲಿ ನಡೆಯಲಿರುವ ಒಟ್ಟು ಪಂದ್ಯಗಳ ಸಂಖ್ಯೆ 213.*  ಹಾಕಿ ಅಭಿವೃದ್ಧಿಗಾಗಿ ಕೊಡಗು ಹಾಕಿ ಫೌಂಡೇಶನ್ ರಚನೆ*  ರಾಷ್ಟ್ರೀಯ ಹಾಕಿ ತಂಡ ಇಂಡಿಯನ್‌ಇಲೆವನ್-ಕೊರ್ಗ್ ಇಲೆವನ್ ತಂಡದ ನಡುವೆ ಪ್ರದರ್ಶನ ಪಂದ್ಯಾಟ*  1975ರ ನಂತರ ಜಿಲ್ಲೆಗೆ ಆಗಮಿಸುತ್ತಿರುವ ಭಾರತದ ರಾಷ್ಟ್ರೀಯ ಹಾಕಿ ತಂಡ.*  ರಾಷ್ಟ್ರೀಯ ಹಾಕಿ ತಂಡದ ಮುಖ್ಯ ತರಬೇತುದಾರ ಮೈಕಲ್ ನೋಬ್ಸ್ ಆಗಮನ.*  16ನೇ ಕೌಟುಂಬಿಕ ಹಾಕಿ ಆಯೋಜನೆಗೆ ಒಟ್ಟು 72 ಲಕ್ಷ ವೆಚ್ಚ*  ರೂ.5ಲಕ್ಷ ಬಹುಮಾನ ಮೊತ್ತ. ವಿಜೇತ ತಂಡಕ್ಕೆ ರೂ.1.5ಲಕ್ಷ. ಪ್ರತಿಭಾನ್ವಿತ ಮೂರು ಆಟಗಾರರಿಗೆ ರೂ.20ಸಾವಿರ.*   ಫೈನಲ್ ಪಂದ್ಯ ವೀಕ್ಷಣೆಗೆ ಮುಖ್ಯಮಂತ್ರಿ ಸೇರಿದಂತೆ ಹಲವು ಒಲಂಪಿಯನ್‌ಗಳ ಆಗಮನದ ನಿರೀಕ್ಷೆ.*  60ಸಾವಿರ ಕ್ರೀಡಾಭಿಮಾನಿಗಳು ಪಂದ್ಯ ವೀಕ್ಷಿಸಲು ಸಜ್ಜುಗೊಂಡಿರುವ ತಾತ್ಕಾಲಿಕ ಗ್ಯಾಲರಿ.*   23ದಿನಗಳಲ್ಲಿ 2ಲಕ್ಷಕ್ಕೂ ಹೆಚ್ಚು ಜನರು ಪಂದ್ಯ ವೀಕ್ಷಿಸುವ ನಿರೀಕ್ಷೆ.*  ಮೈದಾನದಲ್ಲಿ ಎಲ್.ಇ.ಡಿ. ಡಿಸ್‌ಪ್ಲೆಯ ಬೃಹತ್ ಪರದೆಯಲ್ಲಿ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಹಾಗೂ ಪಂದ್ಯಾವಳಿಯ ನೇರ ಪ್ರಸಾರ.*  ಹಿರಿಯ ನಾಗರಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ. ಸುಸಜ್ಜಿತ ಮಾಹಿತಿ ಕೇಂದ್ರ.*  ಮಡಿಕೇರಿಯ ಕೂರ್ಗ್ ಡಯಲ್ ಕಾಲ್ ಸೆಂಟರ್ ಮುಖಾಂತರವೂ ಕ್ಷಣಕ್ಷಣದ ಮಾಹಿತಿ ಲಭ್ಯ.*  ಮೊಬೈಲ್ ಫೋನ್‌ಗಳಿಗೆ ಎಸ್.ಎಂ.ಎಸ್.ಮುಖಾಂತರ ಪಂದ್ಯಾವಳಿಯ ನಿರಂತರ ಮಾಹಿತಿ.*  ಕೌಟುಂಬಿಕ ಹಾಕಿಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಿಂದ ಗಿನ್ನಿಸ್ಸ್ ಬುಕ್  ಆಫ್ ರೆಕಾರ್ಡ್ಸ್‌ಗೆ ಬಡ್ತಿ ಹೊಂದುವ ನಿರೀಕ್ಷೆ.ಬೋಪಯ್ಯ ಉದ್ಘಾಟನೆಉತ್ಸವದ ಉದ್ಘಾಟನಾ ಸಮಾರಂಭವು ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಏ.21ರಂದು ಬೆಳಿಗ್ಗೆ 8.55ಕ್ಕೆ ಆರಂಭಗೊಳ್ಳಲಿದೆ. ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಅಡಗೂರು ಎಚ್.ವಿಶ್ವನಾಥ್, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನಪರಿಷತ್ತಿನ ಸದಸ್ಯರಾದ ಎಂ.ಸಿ. ನಾಣಯ್ಯ ಹಾಗೂ ಟಿ.ಜಾನ್ ಭಾಗವಹಿಸಲಿದ್ದಾರೆ.

 

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕೊಡಗು ಹಾಕಿ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಪಿ.ಕುಟ್ಟಪ್ಪ, ಹಾಕಿ ಇಂಡಿಯಾ ಅಧ್ಯಕ್ಷ ಮರಿಯಮ್ಮ ಕೋಷಿ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಎ. ಪೊನ್ನಪ್ಪ, ಕಾವೇರಿ ಗ್ರೂಪ್‌ನ ಅಧ್ಯಕ್ಷ ಅರುಣ್ ಕಾರ್ಯಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ಮೈದಾನದಲ್ಲಿ ಸುಮಾರು 30,000 ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗಿದೆ. ಇದಲ್ಲದೇ, ಮೂರು ಕಡೆ ಎಲ್‌ಸಿಡಿ ಪರದೆಗಳನ್ನು ಹಾಕಲಾಗಿದೆ.ಕೊಡಗು ಹಾಕಿ ಫೌಂಡೇಷನ್ ಸ್ಥಾಪನೆಕೊಡಗು ಹಾಕಿ ಫೌಂಡೇಷನ್ ಸ್ಥಾಪಿಸುವ ಮೂಲಕ ಜಿಲ್ಲೆಯ ಉತ್ಸಾಹಿ ಯುವ ಹಾಕಿ ಪಟುಗಳಿಗೆ ಶಿಷ್ಯವೇತನ, ಶೈಕ್ಷಣಿಕ ವೆಚ್ಚ, ವಿವಿಧ ಹಾಕಿ ತಜ್ಞರಿಂದ ತರಬೇತಿ, ದೇಶದ ವಿವಿಧ ವೃತಿಪರ ತಂಡಗಳೊಂದಿಗೆ ಆಡುವ ಅವಕಾಶ ನೀಡಲಾಗುವುದು ಎಂದು ಐಚೆಟ್ಟಿರ್ ಕುಟುಂಬದ ಮುಖ್ಯಸ್ಥ ಐ.ಪಿ. ಕುಟ್ಟಪ್ಪ ತಿಳಿಸಿದರು.  ಫಿಷಿಯೋಥೆರಾಪಿ, ಡೈಟಿಷಿಯನ್, ಮನೋವೈದ್ಯರ ಸಲಹೆ ಸೇರಿದಂತೆ ಪ್ರತಿ ಆಟಗಾರನಿಗೆ ವಾರ್ಷಿಕ ವೆಚ್ಚ ರೂ.50 ಸಾವಿರ ಭರಿಸಲು  ಕೆ.ಎಚ್.ಎಫ್ ರೂಪುಗೊಂಡಿದೆ. ಕೆ.ಎಚ್.ಎಫ್.ನ ಆಯ್ಕೆ ಸಮಿತಿ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯನ್ನು ಪಾಲಿಸಲು ತೀರ್ಮಾನಿಸಿದೆ.ಆಯ್ಕೆ ಸಮಿತಿಯಲ್ಲಿ ನಿವೃತ್ತ ಆಟಗಾರರು, ರಾಷ್ಟ್ರ ಮಟ್ಟದ ಹಾಕಿ ತಜ್ಞರು, ಭಾರತ ಹಾಕಿ ತಂಡದ ಆಟಗಾರರು ಸದಸ್ಯರಾಗಿದ್ದು ಪ್ರತಿ ಆಟಗಾರನ ನಿಪುಣತೆಯನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಿದರು.ಕೆ.ಎಚ್.ಎಫ್.ದಾನಿಗಳಿಗೆ ಮುಕ್ತ ಅವಕಾಶ ನೀಡಿದ್ದು ಆಟಗಾರರ ತರಬೇತುದಾರನ ಪ್ರಾಯೋಜಕತ್ವ, ಹಾಕಿ ಕಿಟ್ ಹಾಗೂ ಸಾಮಗ್ರಿಗಳ ಪ್ರಾಯೋಜಕತ್ವ, ವೈದ್ಯಕೀಯ ವೆಚ್ಚಗಳ ನಿರ್ವಹಣೆ ಸೇರಿದಂತೆ ಪ್ರಯಾಣದ ವೆಚ್ಚ ಭರಿಸುವ ಒಪ್ಪಂದಕ್ಕೆ ಕೆ.ಎಚ್.ಎಫ್.ಸಿದ್ದವಾಗಿದೆ ಎಂದರು.ವಿಶೇಷ ಆಕರ್ಷಣೆಈ ಸಲದ ಹಾಕಿ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಒಲಿಂಪಿಕ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ ತಂಡದ ಸದಸ್ಯರನ್ನೊಳಗೊಂಡ ಹಾಕಿ ಇಂಡಿಯಾ ಎಲೆವನ್ ತಂಡ ಹಾಗೂ ಕೊಡಗಿನ ಆಟಗಾರರನ್ನು ಹೊಂದಿರುವ ಕೂರ್ಗ್ ಎಲೆವನ್ ತಂಡದ ನಡುವಿನ ಪ್ರದರ್ಶನ ಪಂದ್ಯವಾಗಿದೆ.ಭರತ್ ಚೆಟ್ರಿ ನೇತೃತ್ವದ ಭಾರತ ಹಾಕಿ ತಂಡದ ಸದಸ್ಯರು ಶುಕ್ರವಾರ ರಾತ್ರಿ ಪಾಲಿಬೆಟ್ಟದ ಖಾಸಗಿ ಹೋಟೆಲ್‌ವೊಂದಕ್ಕೆ ಬಂದಿಳಿದ್ದಾರೆ. ಕೂರ್ಗ್ ಎಲೆವನ್ ತಂಡದಲ್ಲಿ ಬಿ.ಸಿ. ಪೂಣಚ್ಚ, ಪಿ.ಇ. ಪೊನ್ನಣ್ಣ, ವಿ.ಆರ್. ರಘುನಾಥ್, ಪಿ.ಬಿ. ಅಯ್ಯಪ್ಪ, ಎಸ್.ಕೆ. ಬಿದ್ದಪ್ಪ, ಕೆ.ಡಿ. ಬಿದ್ದಪ್ಪ, ಕೆ.ಎಂ. ಸೋಮಣ್ಣ, ಜಿತಿನ್ ಕಾಳಪ್ಪ, ಎಸ್.ವಿ. ಸುನೀಲ್, ಪ್ರಧಾನ್ ಸೋಮಣ್ಣ, ಪಿ.ಎಲ್. ತಿಮ್ಮಯ್ಯ, ನಿತಿನ್ ತಮ್ಮಯ್ಯ, ಎಂ.ಜಿ. ಪೂಣಚ್ಚ ಎಂ.ಬಿ. ಅಯ್ಯಪ್ಪ ಹಾಗೂ ಎಂ.ಎ. ಮುದ್ದಪ್ಪ  ಇದ್ದಾರೆ.72 ಲಕ್ಷ ವೆಚ್ಚಈ ಸಲದ ಹಾಕಿ ಉತ್ಸವಕ್ಕೆ ಸುಮಾರು 72 ಲಕ್ಷ ರೂಪಾಯಿ ವೆಚ್ಚವಾಗುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರದಿಂದ ರೂ 30 ಲಕ್ಷ ಅನುದಾನ ದೊರೆತಿದ್ದು, ಇನ್ನುಳಿದ ಹಣವನ್ನು ದಾನಿಗಳು ಹಾಗೂ ಕಂಪೆನಿಗಳ ಪ್ರಾಯೋಜಕತ್ವದಿಂದ ಸಂಗ್ರಹಿಸಲಾಗುವುದು ಎಂದು ಉತ್ಸವದ ಆತಿಥ್ಯ ವಹಿಸಿರುವ ಐಚೆಟ್ಟಿರ ಕೆ. ಅನಿಲ್ ತಿಳಿಸಿದರು.ಪ್ರತಿ ವಿಭಾಗದಲ್ಲೂ ಬಹುಮಾನಗಳನ್ನು ಇಡಲಾಗಿದ್ದು, ಒಟ್ಟು ಮೊತ್ತ ರೂ 5 ಲಕ್ಷ ಇದಾಗಿದೆ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.