ಶನಿವಾರ, ಮೇ 15, 2021
24 °C

ಕೊನೆಗೂ ಬೆಳಗಿದ ರಾಜಬೀದಿ

ಚಿದಂಬರಪ್ರಸಾದ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಅನೇಕ ರಾಜ ವಂಶಗಳ ಆಡಳಿತಕ್ಕೆ ಒಳಪಟ್ಟ ಐತಿಹಾಸಿಕ ನಗರ ಯಾದಗಿರಿಯಲ್ಲಿ ಮತ್ತೆ ವೈಭವ ಮರುಕಳಿಸುತ್ತಿದೆ. ವಿಸ್ತಾರವಾದ ರಸ್ತೆಗಳಲ್ಲಿ ಬೀದಿದೀಪಗಳು ಹೊನಲು ಬೆಳಕನ್ನು ಚೆಲ್ಲುತ್ತಿವೆ. ರಸ್ತೆಗಳ ಜೊತೆಗೆ ನಗರದ ಸೌಂದರ್ಯವನ್ನೂ ಹೆಚ್ಚಿಸುತ್ತಿವೆ.ಹೌದು, ಕಳೆದ ಒಂದು ವರ್ಷದಿಂದ ಆರಂಭವಾಗಿದ್ದ ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಇದೀಗ ರಸ್ತೆಗಳಲ್ಲಿನ ಬೀದಿ ದೀಪಗಳು ಬೆಳಗಲು ಆರಂಭಿಸಿವೆ. ಯಾದಗಿರಿಯ ರಸ್ತೆಗಳಲ್ಲಿ ಹಾದು ಹೋಗುವ ಜನರು, ಇದೀಗ ಇದಪ್ಪ ಜಿಲ್ಲಾ ಕೇಂದ್ರ ಎನ್ನುವಂತಾಗಿದೆ.ಶಹಾಪುರ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ರಸ್ತೆ ಮಧ್ಯದ ಬೀದಿಗಳ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ ಯಾದಗಿರಿಯು ಜಿಲ್ಲಾ ಕೇಂದ್ರವಾಗಿ ನಾಲ್ಕು ವರ್ಷ ಕಳೆದರೂ, ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದಂತಾಗಿತ್ತು. ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಅವರ ಅವಧಿಯಲ್ಲಿ ನಗರದ ರಸ್ತೆಗಳ ವಿಸ್ತಾರ ಕಾರ್ಯ ಕೈಗೆತ್ತಿಕೊಳ್ಳಲಾಯಿತು. ಅದರ ಜೊತೆಗೆ ರಸ್ತೆ ವಿಭಜಕ ಹಾಗೂ ಮಧ್ಯದಲ್ಲಿ ಬೀದಿ ದೀಪಗಳ ಅಳವಡಿಕೆ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಯಿತು. 

ನಂತರ ಬಂದ ಜಿಲ್ಲಾಧಿಕಾರಿ ಗುರುನೀತ್ ತೇಜ್ ಮೆನನ್‌ರ ಅವಧಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಯನ್ನು ಚುರುಕುಗೊಳಿಸಲಾಯಿತು. ಆದರೆ ದೀಪಗಳು ಮಾತ್ರ ಉರಿಯಲಿಲ್ಲ. ನಂತರ ಬಂದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಈ ದೀಪಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಿದರು. ಇನ್ನೇನು ಬೀದಿ ದೀಪಗಳು ಉರಿಯಬೇಕು ಎನ್ನುವಷ್ಟರಲ್ಲಿ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಯಿತು.ಆದರೆ ಈಗ ಚುನಾವಣೆ ಮುಗಿದಿದ್ದು, ರಾಜ ಬೀದಿಯ ದೀಪಗಳು ಬೆಳಗುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳದಿಂಗಳಂಥ ಬೆಳಕನ್ನು ಚೆಲ್ಲುತ್ತಿವೆ. ಇದರಿಂದಾಗಿ ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುವ ಜನರು ನಿರ್ಭಯವಾಗಿ ತಿರುಗಾಡುವಂತಾಗಿದೆ. “ನಮ್ಮೂರಾಗ ಎಲ್ಲ ಕೆಲಸ ಲೇಟ್ ನೋಡ್ರಿ. ನಾಕ ವರ್ಷ ಆತು, ಈ ಲೈಟ್ ಹತ್ತಾಕ. ಆದ್ರು ಈಗ್ಲಾದ್ರು ಹತ್ತಿದು ಅಲ್ರಿ. ಜಿಲ್ಲಾ ಆದ್ರು, ಇಲ್ಲಿನ ರಸ್ತಾದಾಗ ಲೈಟ್ ಇರಲಿಲ್ಲ. ಹಿಂಗಾಗಿ ರಾತ್ರಿ ಹೊರಗ ಬರೂದಂದ್ರ ಭಾಳ ತೊಂದ್ರಿ ಆಗಿತ್ತು.ಈಗ ಏನ್ ತ್ರಾಸ್ ಇಲ್ಲ ನೋಡ್ರಿ. ಬ್ಯಾಸಿಗ್ಯಾಗ, ರಾತ್ರಿ ವಾಕಿಂಗ್ ಹೋಗಾಕ ಭಾಳ ಛೋಲೋ ಆಗೇತಿ. ಅದರ ಕೂಡ ಛಂದ ಕಾಣಾಕತ್ತೇತಿ” ಎಂದು ನಗರದ ಹೊಸಳ್ಳಿ ಕ್ರಾಸ್ ನಿವಾಸಿ ರಾಘವೇಂದ್ರ ತಮ್ಮ ಸಂತಸ ಹಂಚಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.