ಬುಧವಾರ, ಮಾರ್ಚ್ 3, 2021
23 °C
ಕ್ಯಾಂಪಸ್‌ ಕಲರವ

ಕೊನೇ ಬೆಂಚಿನ ಮೇಸ್ಟ್ರ ಪ್ರೀತಿ...

ರಾಧಾಮಣಿ ಜೆ.ಎಚ್‌. Updated:

ಅಕ್ಷರ ಗಾತ್ರ : | |

ಕೊನೇ ಬೆಂಚಿನ ಮೇಸ್ಟ್ರ ಪ್ರೀತಿ...

ಸಾರ್ ಇವರೆಲ್ಲ ಸರಿಯಾಗಿ ಪಾಠ ಮಾಡೊಲ್ಲ ಅಂತ ಕಂಪ್ಲೇಂಟ್ ಮಾಡ್ತಾರೆ. ಪಾಠ ಮಾಡುವಾಗ ಏನ್ ಮಾಡ್ತಾರೆ ಅಂತ ನೀವೇ ನೋಡಿ... ಪರಿಸರ ಅಧ್ಯಯನದ ಪಾಠ ಮಾಡುತ್ತಿದ್ದ ಮೇಡಮ್‌ ನಮ್ಮನ್ನೆಲ್ಲ ಕರೆದುಕೊಂಡು ಹೋಗಿ ಪ್ರಿನ್ಸಿಪಾಲರ ಮುಂದೆ ನಿಲ್ಲಿಸಿ ಹೀಗೆ ದೂರಿದರು.

ನಮಗೆ ಪ್ರಿನ್ಸಿಪಾಲರು ಹೊಡೆದಿದ್ದರೂ ಅಷ್ಟು ನೋವಾಗುತ್ತಿರಲಿಲ್ಲವೇನೊ. ಅದಕ್ಕಿಂತ ಹೆಚ್ಚಿನ ದುಃಖದ ಸಂಗತಿಯೆಂದರೆ ನಮ್ಮೆದುರಿಗೆ  ನಮ್ಮ ಅಚ್ಚುಮೆಚ್ಚಿನ ಸೋಷಿಯಲ್ ಮಾಸ್ಟರ್ ಜಗದೀಶ್ ಅವರು ಕುಳಿತಿದ್ದು!ಜಗದೀಶ್ ಮಾಸ್ಟರ್ ಎಂದರೆ ನಮಗೆಲ್ಲ ತುಂಬಾ ಇಷ್ಟ. ಅವರೂ ಇನ್ನೊಂದು ತರಗತಿಯಲ್ಲಿ ಕ್ಲಾಸು ಮುಗಿಸಿಕೊಂಡು ಆಗ ತಾನೇ ಬಂದು ಕುಳಿತಿದ್ದರು. ನಾವು ತಲೆ ತಗ್ಗಿಸಿ ನಿಲ್ಲುವುದಕ್ಕೂ ಸರಿಹೋಯ್ತು!ಅವರು ಯಾವಾಗಲೂ ಹಿಂದಿನ ಬೆಂಚಿನ ಹುಡುಗರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ‘ನಾನೂ ಹಿಂದಿನ ಬೆಂಚಿನ ಹುಡುಗನೇ, ಈಗ ನಿಮಗೇ ಪಾಠ ಮಾಡ್ತೀದ್ದೀನಿ ಅಂದ್ರೆ, ಅದೆಲ್ಲ ಹಿಂದಿನ ಬೆಂಚಿನ ಮಹಾತ್ಮೆ’ ಎಂದು ಹುರಿದುಂಬಿಸಿ, ನಗಿಸುತ್ತ, ಹಲವು ರೀತಿಯ ಉದಾಹರಣೆಗಳನ್ನು ನೀಡುತ್ತಾ ಪಾಠ ಮಾಡುವ ರೀತಿಯೇ ಚಂದ.ಅವರಿಗೆ ಇಡೀ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಹೆಸರುಗಳು ನೆನಪಿದ್ದವು. ಹೆಸರು ಕೂಗಿಯೇ ಮಾತನಾಡಿಸುತ್ತ, ನಲವತ್ತೈದರಂಚಿನ ಮಾಸ್ಟರ್ ಪಡ್ಡೆಹುಡುಗರಂತೆ ರೇಗಿಸುತ್ತಿದ್ದರೆ ಯಾರಿಗೆ ತಾನೆ ಇಷ್ಟವಾಗೋಲ್ಲ?‘ಕಾತ್ಯಾಯಿನಿ, ನಿಮ್ಮವ್ವ  ಹೊಟ್ಟೆಗೆ ಏನೂ ಮಾಡಿರಲಿಲ್ವಾ? ಅಂಗ್ಡೀಲಿ ಚಾಕ್ಲೇಟ್ ತಗೊಂಡು ಚೀಪ್ತಾ ಇದ್ಯಲ್ಲೇ ತಾಯಿ, ಅದೂ ಹೊಟ್ಟೆಗೆ ಹಿಟ್ಟಿಲ್ಲದೇ ಇರೋರ ಥರಾ...’ ಎಂದು ಅಭಿನಯಿಸಿ ತೋರಿಸುತ್ತ ತಾವೂ ನಕ್ಕು, ನಮ್ಮನ್ನೂ ನಗಿಸುವ ಪರಿಗೆ ನಾವೆಲ್ಲ ‘ಫಿದಾ’.ಕ್ಲರ್ಕ್ ಕ್ಲಾಸ್‌ರೂಮಿಗೆ  ಬಂದು, ‘ಸಾರ್ ನೀವೂ ಗಲಾಟೆ ಮಾಡ್ತೀರಿ, ಹುಡುಗರಿಂದಲೂ ಗಲಾಟೆ ಮಾಡಿಸ್ತೀರಾ’ ಎಂದು ಆರೋಪಿಸಿದರೂ ಒಂದಷ್ಟೂ ಬೇಸರ ಮಾಡಿಕೊಳ್ಳದೆ, ‘ಲೇ ಮಕ್ಳಾ ನಿಧಾನವಾಗಿ ಗಲಾಟೆ ಮಾಡ್ರೋ...’ ಎನ್ನುತ್ತಿದ್ದರು.ಸಮಯದ ಅರಿವಿಲ್ಲದೆ ಬೆಲ್ ಹೊಡೆದ ಮೇಲೆ ಪೀರಿಯಡ್ ಮುಗಿದಿದೆ ಎಂದು ತಿಳಿಯುತ್ತಿತ್ತು. ಕೊನೆಗೆ ಅವರೇ ಗಾಬರಿಯಾಗಿ, ‘ಮುಂದಿನ ಪಿರಿಯಡ್‌ನಿಂದ ಸೀರಿಯಸ್ಸಾಗಿ ಪಾಠ ಮಾಡ್ತೀನಿ ಮಕ್ಳೆ... ಇಟ್ಸ್‌ ಮೈ ಪ್ರಾಮಿಸ್...’ ಎನ್ನುತ್ತಿದ್ದರು. ಮುಂದಿನ ತರಗತಿಯಲ್ಲಿ  ಮತ್ತದೇ ಪುನರಾವರ್ತನೆ. ಅಂತೂ ಪರೀಕ್ಷೆ ಹೊತ್ತಿಗೆ ಪಾಠ ಮುಗಿಸುತ್ತಿದ್ದರು. ಜೊತೆಗೆ ಹುಡುಗರು ಯಾವ ವಿಷಯದಲ್ಲಿ ಫೇಲಾದರೂ ಈ ಮಾಸ್ಟರ್‌ ವಿಷಯದಲ್ಲಿ ಪಾಸಾಗುತ್ತಿದ್ದರು.ಯಾವತ್ತಾದರೂ ಯಾವುದೇ ಒಂದು ವಿಷಯದ ಲೆಕ್ಚರ್ ಇಲ್ಲ ಎಂದು ತಿಳಿದರೆ ಸಾಕು, ವಿದ್ಯಾರ್ಥಿಗಳೆಲ್ಲ ಕ್ಲರ್ಕ್ ಬಳಿ ಹೋಗಿ, ‘ಜಗದೀಶ್ ಸರ್ ಇದ್ದರೆ ನಮ್ ಕ್ಲಾಸಿಗೆ ಕಳುಹಿಸಿ’ ಎನ್ನುತ್ತಿದ್ದರು. ‘ಇವತ್ತು ಅವರ ಪೀರಿಯಡ್ ಇಲ್ಲ’ ಎಂದರೂ ಕೇಳದೆ, ‘ನಾವು ಅವರ ಬುಕ್ಸ್ ತಂದಿದ್ದೀವಿ, ಕಳಿಸಿ’ ಎಂದು ದುಂಬಾಲು ಬೀಳುತ್ತಿದ್ದರು.‘ಅದೇನ್ರೋ, ನನ್ನ ಕ್ಲಾಸ್‌ ಇಲ್ಲ ಅಂದ್ರೂ ಹೀಗೆ ಕಾಡಿ ಬೇಡಿ ಕರೆಸ್ಕೋತೀರಲ್ರೋ... ಹೋಗಲಿ ಬುಕ್ಸ್ ಕೊಡಿ’ ಎಂದು ಕೈಚಾಚುತ್ತಿದ್ದರು ಮಾಸ್ಟರ್‌. ‘ಸಾರ್ ನಾವು ಯಾರೂ ಬುಕ್ಸ್ ತಂದಿಲ್ಲ...’ ಎಂದು ಹಲ್ಲುಕಿರಿಯುತ್ತಿದ್ದೆವು.‘ಬುಕ್ಸ್ ತಂದಿಲ್ವಾ...? ಮತ್ತೆ? ನಾನೇನು ನಿಮ್ಮ ಕಣ್ಣಿಗೆ ಜೋಕರ್ ತರಹ ಕಂಡ್ನೋ ಅಥವಾ ವಜ್ರಮುನಿ ತರಹ ಕಂಡ್ನೋ?’ ಎಂದು ರೇಗಿಸುತ್ತಿದ್ದರು.‘ಸರ್,ನೀವು ವಜ್ರಮುನೀನಾ! ಚಾನ್ಸೇ ಇಲ್ಲ...’ ಎನ್ನುವ ಒಕ್ಕೊರಲಿನ ದನಿಗೆ, ‘ನಾನು ವಜ್ರಮುನಿ ರೋಲ್ ಮಾಡಿದ್ದೆ ಕಣ್ರೋ. ಸಂಪತ್ತಿಗೆ ಸವಾಲ್ ಪಾತ್ರದ್ದು... ನಾಟಕದಲ್ಲಿ, ನಂಗೆ ಫಸ್ಟ್‌ ಪ್ರೈಜ್’ ಎನ್ನುತ್ತಿದ್ದರು.‘ಸಾರ್ ನಿಮಗೆ ಆ ಪಾತ್ರ ಸೂಟಾಗಲ್ಲ ಬಿಡಿ...’ ಎಂದು ತಲೆಯಾಡಿಸಿದರೆ ಸಾಕು, ‘ಏ ವಜ್ರಮುನಿ ಅಂದ್ರೆ ಏನಂದುಕೊಂಡಿದ್ದೀರಾ? ತುಂಬಾ ಹೃದಯವಂತ, ನನಗಿಂತಾ ಒಳ್ಳೆಯ ಮನುಷ್ಯ, ಕೆಟ್ಟ ಪಾತ್ರಗಳನ್ನು ಕೆಟ್ಟವರೇ ಮಾಡ್ತಾರೆ ಅನ್ನೋದೆಲ್ಲ ಸುಳ್ಳು’ ಎಂದು ಒಮ್ಮೆ ಅವರನ್ನು ಬೇಟಿಯಾಗಿದ್ದ ಸಂದರ್ಭ ಹೇಳುತ್ತಿದ್ದರು.‘ಅವರು ತುಂಬಾ ಪ್ರತಿಭಾವಂತ. ಪ್ರತಿಭೆ ಯಾರಲ್ಲಿ ಯಾವ ರೂಪದಲ್ಲಿರುತ್ತೊ ಹೇಳಲಾಗದು. ‘ಬನ್ರಪ್ಪ, ಎಲ್ಲರೂ ನಿಮ್ಮ ನಿಮ್ಮ ಪ್ರತಿಭೆ ತೋರಿಸ ಬನ್ನಿ’ ಎಂದು ಹುರಿದುಂಬಿಸುತ್ತಿದ್ದರು.ಇದೆಲ್ಲ ಹಳೇ ಮಾತು. ಈಗ ಇಂತಹ ಜಗದೀಶ್‌ ಮಾಸ್ಟರ್‌ ಮುಂದೆ ನಾವು ತಪ್ಪು ಮಾಡಿ, ಸಿಕ್ಕಿಹಾಕಿಕೊಂಡು ತಲೆ ತಗ್ಗಿಸಿ ನಿಂತಿದ್ದೆವು. ತಪ್ಪು ಏನಂದ್ರೆ ಕ್ಲಾಸಿನಲ್ಲಿ ಕೈಗೆ ಮೆಹಂದಿ ಹಾಕುತ್ತ ಕುಳಿತಿದ್ದು ಮತ್ತು ಮೇಡಮ್‌ ಕೈಯಲ್ಲಿ ಸಿಕ್ಕು ಬಿದ್ದದ್ದು.ಪ್ರಿನ್ಸಿಪಾಲರು, ‘ನೋಡ್ರಿ ಜಗದೀಶ್, ಇವರು ವಿದ್ಯಾರ್ಥಿಗಳೇನ್ರಿ?’ ಎಂದು ಗುಟುರು ಹಾಕಿದರು. ಸೋಷಿಯಲ್ ಮಾಸ್ಟರ್ ಹತ್ತಿರ ಬಂದು ನಮ್ಮ ಕೈಗಳನ್ನು ವೀಕ್ಷಿಸಿದರು, ದೀರ್ಘವಾಗಿ ನೋಡಿದರು. ಇವರೇನು ನಮ್ಮ ಕೈಗಳನ್ನು ಹೀಗೆ ನೋಡುತ್ತಿದ್ದಾರಲ್ಲ ಎಂದು ನಮಗೆ ಸೋಜಿಗವೆನಿಸಿತು.ನಂತರ ಅವರು ಪ್ರಿನ್ಸಿಪಾಲರ ಕಡೆ ತಿರುಗಿ ‘ಸಾರ್, ಇವು ಉರ್ದು ಅಕ್ಷರಗಳು ಸಾರ್... ಹೆಣ್ಮಕ್ಕಳ ಮನೆಗಳಲ್ಲಿ ಉರ್ದು  ಕಲಿಯಲು ಅವಕಾಶವಿಲ್ಲವಲ್ಲ ಸಾರ್,  ಅದಕ್ಕೆ ಪಾಪ ಕೈಮೇಲೆ ಮೆಹಂದಿ ರೂಪದಲ್ಲಿ ಕಲ್ತುಕೋತಾವೆ...’ ಎನ್ನುತ್ತಿದ್ದಂತೆ ನಾವು ಕಣ್‌ಕಣ್ ಬಿಟ್ಟೆವು. ಮಂಕರಾಗಿ ‘ಹೂಂ’ ಎಂದು ತಲೆಯಾಡಿಸಿದೆವು.‘ಸರ್ ಅದು...’ ಮೇಡಂ ರಾಗ ತೆಗೆಯುತ್ತಿದ್ದರೂ ‘ಮೇಡಂ, ನಿಮಗೆ ಉರ್ದು ಬರುತ್ತದೆಯೇ?’ ಎಂದು ಕೇಳಿದರು. ಇಲ್ಲವೆಂದು ತಲೆಯಾಡಿಸಿದರು ಮೇಡಂ. ‘ನನಗೆ ಒಂಚೂರು ಉರ್ದು ಬರುತ್ತೆ, ಇವೇ ಸಾರ್ ಆ ಅಕ್ಷರಗಳು. ಗೆಳತಿಯರಿಗೆ ಉರ್ದು ಕಲಿಸುವ ಪ್ರಯತ್ನದಲ್ಲಿರುವ ಆ ಗೆಳತಿ ಯಾರಮ್ಮ? ಸಾಯಿರಾಬಾನು ನೀನೇನಾ?’ ಎನ್ನುತ್ತಿದ್ದಂತೆ ಪ್ರಿನ್ಸಿಪಾಲರು ‘ರೀ ಜಗದೀಶ್ ಅದು ನಿಜವಾಗಿಯೂ ಉರ್ದುನಾ...!’ ಎಂದು ಸಂಶಯಾಸ್ಪದವಾಗಿ ಕೇಳಿದರು.‘ಹೌದು ಸರ್, ಇದು ಉರ್ದು’ ಎಂದರು. ಪ್ರಿನ್ಸಿಪಾಲರು ನಮ್ಮತ್ತ ತಿರುಗಿ ‘ಉರ್ದು ಕಲಿಯೋದು ತಪ್ಪೇನಲ್ಲ, ಹೀಗೆ ಕದ್ದು–ಮುಚ್ಚಿ  ಕೈಮೇಲೆ ಬರೆದುಕೊಳ್ಳಬೇಡಿ. ಪುಸ್ತಕದ ಮೇಲೆ ಬರೆದುಕೊಳ್ಳಿ’ ಎಂದು ತಾಕೀತು ಮಾಡಿ ಕಳುಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.