ಸೋಮವಾರ, ಮೇ 23, 2022
25 °C

ಕೊಪ್ಪಳ: ಅವಕಾಶ ಹೇರಳ-ಸೌಲಭ್ಯ ವಿರಳ

ಪ್ರಜಾವಾಣಿ ವಾರ್ತೆ/ ಭೀಮಸೇನ ಚಳಗೇರಿ Updated:

ಅಕ್ಷರ ಗಾತ್ರ : | |

ಕೊಪ್ಪಳ: ಅವಕಾಶ ಹೇರಳ-ಸೌಲಭ್ಯ ವಿರಳ

ಕೊಪ್ಪಳ: ಕೈಗಾರಿಕೆ ಸ್ಥಾಪನೆಗಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ರೈತರಿಗೆ ಭೂಮಿ ಮರಳಿಸುವಂತೆ ಹೈಕೋರ್ಟ್‌ನ ಧಾರವಾಡ ಸಂಚಾರಿ ಪೀಠ ಆದೇಶಿಸಿದ ಮೊದಲ ಪ್ರಕರಣಕ್ಕೆ ಜಿಲ್ಲೆ ಸಾಕ್ಷಿಯಾಗಿದೆ.ಎಂಎಸ್‌ಪಿಎಲ್ ಕಾರ್ಖಾನೆಗಾಗಿ ಕೆಎಐಡಿಬಿ ಮೂಲಕ ತಾಲ್ಲೂಕು ಹಾಲವರ್ತಿ ಬಳಿ 1,034 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಸ್ವಾಧೀನ ಪ್ರಕ್ರಿಯೆ ವಿರುದ್ಧ ರೈತರು ಹೈಕೋರ್ಟ್ ಮೊರೆ ಹೋಗಿದ್ದರು. ಈಗಾಗಲೇ ಕಬ್ಬಿಣ ಅದಿರು ಸಂಸ್ಕರಣ ಘಟಕ ಸ್ಥಾಪನೆ ಮಾಡಿರುವ 118 ಎಕರೆ ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಮರಳಿಸುವಂತೆ ಧಾರವಾಡದಲ್ಲಿರುವ ಹೈಕೊರ್ಟ್ ಸಂಚಾರಿ ಪೀಠ ಮಾರ್ಚ್ 22ರಂದು ತೀರ್ಪು ನೀಡಿದ್ದು ಇತಿಹಾಸ.ಕೈಗಾರಿಕೆಗಳ ತ್ಯಾಜ್ಯದಿಂದ ಭೂಮಿ ಫಲವತ್ತತೆ ಹಾಳಾಗುತ್ತಿದೆ. ಬೆಳೆ ನಾಶವಾಗುತ್ತಿದೆ ಎಂದು ರೈತರು ಧರಣಿ ನಡೆಸುವುದು ಒಂದೆಡೆಯಾದರೆ, ಬೆಳೆ ಹಾನಿ ಹಿನ್ನೆಲೆಯಲ್ಲಿ ಎಕರೆಗೆ ಇಂತಿಷ್ಟು ಪರಿಹಾರಧನ ನೀಡಿ ಪರಿಸರ-ಜಮೀನು-ಫಸಲಿಗೆ ಹಾನಿಯಾಗುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿರುವ ಕೈಗಾರಿಕೆಗಳು ಇನ್ನೊಂದೆಡೆ.ಇಂಥ ಸನ್ನಿವೇಶ ಎದುರಿಸುತ್ತಿರುವ ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕೆ ಆರಂಭಿಸುವಂತೆ ಉದ್ದಿಮೆದಾರರನ್ನು ಆಹ್ವಾನಿಸಲು ಜಿಲ್ಲೆ ಮತ್ತೊಂದು ಜಾಗತಿಕ ಹೂಡಿಕೆದಾರರ ಸಮಾವೇಶದತ್ತ ಮುಖ ಮಾಡಿದೆ.ಬೃಹತ್-ಮಧ್ಯಮ ಕೈಗಾರಿಕೆಗಳಲ್ಲಿ ಜಿಲ್ಲೆಯಲ್ಲಿ ಸದ್ಯ 15 ಕಬ್ಬಿಣ ಅದಿರು ಸಂಸ್ಕರಣ ಘಟಕಗಳಿವೆ. 6 ವಿದ್ಯುತ್ ಉತ್ಪಾದನಾ ಘಟಕಗಳಿದ್ದರೆ, ತಲಾ ಒಂದು ಸಿಮೆಂಟ್, ತಂಪು ಪಾನೀಯ ಹಾಗೂ ಅಕ್ಕಿ ಗಿರಣಿ ಇವೆ.ಬಳ್ಳಾರಿ ಜಿಲ್ಲೆ ಎನ್‌ಎಂಡಿಸಿಯಿಂದ ಅದಿರು ಪೂರೈಕೆಯಾಗುತ್ತಿರುವುದರಿಂದ ಈ ಘಟಕಗಳ ಉತ್ಪಾದನೆ ಈ ಮುಂಚಿನಷ್ಟು ಇಲ್ಲ. ಜಿಲ್ಲೆಯಲ್ಲಿ ಕುಷ್ಟಗಿಯಲ್ಲಿ ಮಾತ್ರ ಕೈಗಾರಿಕಾ ಪ್ರದೇಶ ಇದೆ. ಇಲ್ಲಿ ಗ್ರಾನೈಟ್ ಉದ್ದಿಮೆಗಳು ಮಾತ್ರ ಇವೆ.

 

ಗಂಗಾವತಿಯಲ್ಲಿ 80ಕ್ಕೂ ಹೆಚ್ಚು ಅಕ್ಕಿ ಗಿರಣಿ ಇವೆ. ಕೊಪ್ಪಳ ತಾಲ್ಲೂಕಿನಲ್ಲಿ ಕಬ್ಬಿಣ ಅದಿರು ಸಂಸ್ಕರಣಾ ಘಟಕಗಳೇ ಹೆಚ್ಚು. ಯಲಬುರ್ಗಾ ತಾಲ್ಲೂಕಿನ ಕುಕನೂರಿನಲ್ಲಿ ಕೆಲವು ಗ್ರಾನೈಟ್ ಉದ್ದಿಮೆಗಳಿವೆ.ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ(ಜಿಮ್) ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿರುವ ಸಂಸ್ಥೆಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಗುರುತಿಸಿದೆ. 2ಗಾರ್ಮೆಂಟ್, 2ಗ್ರಾನೈಟ್ ಹಾಗೂ 1 ಇಡ್ಲಿ ರವೆ ತಯಾರಿಕೆ ಘಟಕಗಳಿಂದ ಜಿಲ್ಲೆಯಲ್ಲಿ ರೂ 18 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಜತೆಗೆ 325 ಉದ್ಯೋಗ ಸೃಷ್ಟಿ ಅಂದಾಜಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಗಾರ್ಮೆಂಟ್ ಉದ್ದಿಮೆ ಬರುತ್ತಿರುವುದು ವಿಶೇಷ.ಆದರೆ, 2010ರ `ಜಿಮ್~ನಲ್ಲಿ ಜಿಲ್ಲೆಯಲ್ಲಿ ಒಟ್ಟು ರೂ 1,726.51 ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿತ್ತು. ಒಟ್ಟು 9 ಬೃಹತ್ ಕಂಪೆನಿ  ಗಳಿಗೆ ಉದ್ದಿಮೆ ಸ್ಥಾಪಿಸಲು ಪರವಾನಗಿ ನೀಡಲಾಗಿದೆ. ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಈ ಕಾರ್ಖಾನೆಗಳು ಉತ್ಪಾದನೆ ಆರಂಭಿಸಿಲ್ಲ.ಕುಷ್ಟಗಿಯಲ್ಲಿ ಗ್ರಾನೈಟ್ ಉದ್ದಿಮೆ ಸ್ಥಾಪಿಸಲು ಅವಕಾಶ ಇದೆ. ತಾಲ್ಲೂಕಿನ ಭಾಗ್ಯನಗರದಲ್ಲಿ ಕೂದಲು ಸಂಸ್ಕರಣಾ ಘಟಕ ಸ್ಥಾಪಿಸಬಹುದು. `ಬತ್ತದ ಕಣಜ~ ಗಂಗಾವತಿಯಲ್ಲಿ ಅಕ್ಕಿ ಗಿರಣಿ, ಇಡ್ಲಿ ರವಾ ತಯಾರಿಕೆ ಘಟಕ ಸ್ಥಾಪನೆಗೆ ಅವಕಾಶ ಇದೆ ಎನ್ನುತ್ತಾರೆ ಕೊಪ್ಪಳ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ಗುಪ್ತಾ.ಕುಷ್ಟಗಿ ಗ್ರಾನೈಟ್ ಉದ್ದಿಮೆದಾರರಿಗೆ ಅನುಕೂಲವಾಗುವಂತೆ ಕೊಪ್ಪಳ ಇಲ್ಲವೇ ಗಿಣಿಗೇರಾದಲ್ಲಿ `ಡಂಪಿಂಗ್ ಯಾರ್ಡ್~ ನಿರ್ಮಿಸಬೇಕು, ಕೈಗಾರಿಕೆಗಳಿಗೆ ನಿರಂತರ ವಿದ್ಯುತ್‌ಗಾಗಿ ಪ್ರತ್ಯೇಕ ಫೀಡರ್, ಕೈಗಾರಿಕೆಗಳಿಗೆ ನೀರು ಪೂರೈಸಲು ಪ್ರತ್ಯೇಕ ಪೈಪ್‌ಲೈನ್ ಅಳವಡಿಸಬೇಕು. ರೈತರೊಂದಿಗೆ ಸಂಘರ್ಷ ಏರ್ಪಡದ ರೀತಿ ಭೂ ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡಬೇಕು ಎಂಬುದೂ ಜಿಲ್ಲೆಯ ಉದ್ಯಮಿಗಳ ಒತ್ತಾಸೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.