ಶುಕ್ರವಾರ, ಏಪ್ರಿಲ್ 23, 2021
22 °C

ಕೊಪ್ಪಳ ಜಿಲ್ಲೆ ಶಾಸಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ಇರುವುದರಿಂದ ಅನ್ಯಾಯವಾಗಿದೆ ಎಂದು ಅಸಮಾಧಾನಗೊಂಡ ಆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಗುರುವಾರ ಬೆಳಿಗ್ಗೆ 9ಕ್ಕೆ ಸಂಪುಟ ಸೇರುವವರ ಪಟ್ಟಿ ಬಹಿರಂಗವಾಯಿತು. ಅದರಲ್ಲಿ ಕೊಪ್ಪಳ ಜಿಲ್ಲೆಯ ಶಾಸಕರ ಹೆಸರು ಇಲ್ಲದೆ ಇರುವುದನ್ನು ಕಂಡು ಆಕ್ರೋಶಗೊಂಡ ಕಾರ್ಯಕರ್ತರು ಶಾಸಕರಾದ ಕರಡಿ ಸಂಗಣ್ಣ, ಪರಣ್ಣ ಮುನವಳ್ಳಿ ಹಾಗೂ ಹಾಲಪ್ಪಾಚಾರ್ ನೇತೃತ್ವದಲ್ಲಿ ಪ್ರತಿಭಟಿಸಿದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.`ಇಂತಹವರನ್ನೇ ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ನಾವು ಕೇಳಿರಲಿಲ್ಲ. ಕೊಪ್ಪಳ ಜಿಲ್ಲೆಗೆ ಪ್ರಾತಿನಿಧ್ಯ ನೀಡಿ ಎಂದಷ್ಟೇ ನಾವು ಮನವಿ ಮಾಡಿದ್ದೇವು. ಅದಕ್ಕೆ ಶೆಟ್ಟರ್ ಅವರೂ ಒಪ್ಪಿಗೆ ಸೂಚಿಸಿದ್ದರು. ಆದರೆ ಈಗ ಪ್ರಕಟವಾಗಿರುವ ಪಟ್ಟಿಯಲ್ಲಿ ಜಿಲ್ಲೆಯ ಶಾಸಕರ ಹೆಸರು ಇಲ್ಲದೆ ಇರುವುದರಿಂದ ಬೇಸರವಾಗಿದೆ~ ಎಂದು ಸಂಗಣ್ಣ ತಿಳಿಸಿದರು.ಅಶೋಕ ಹೋಟೆಲ್‌ಗೆ ಮುತ್ತಿಗೆ

ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡದಿರುವ ನಿರ್ಧಾರದ ವಿರುದ್ಧವೂ ಅವರ ಬೆಂಬಲಿಗರು ಪ್ರತಿಭಟಿಸಿದರು. ಬಿಜೆಪಿ ವರಿಷ್ಠರು ತಂಗಿದ್ದ ಅಶೋಕ ಹೋಟೆಲ್‌ಗೆ ಮುತ್ತಿಗೆ ಹಾಕಿದ ಕಾರಜೋಳ ಬೆಂಬಲಿಗರು ಪಕ್ಷದ ವರಿಷ್ಠರ ವಿರುದ್ಧ ಘೋಷಣೆ ಕೂಗಿದರು.

ಎರಡು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿಸಲಾಗಿದ್ದರೂ, ಕಾರಜೋಳ ಅವರಿಗೆ ಅವಕಾಶ ನೀಡದೆ ಇರುವುದು ಸರಿಯಲ್ಲ. ಹಿರಿಯರಾದ ಅವರಿಗೆ ಇದುವರೆಗೆ ಸೂಕ್ತ ಖಾತೆಗಳನ್ನು ನೀಡಿಲ್ಲ. ಈಗಲಾದರೂ ಉತ್ತಮ ಖಾತೆಗಳನ್ನು ನೀಡಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸಂಪುಟಕ್ಕೆ ಸೇರ್ಪಡೆಯಾಗುವ ಸದಸ್ಯರ ಪಟ್ಟಿಯ ಬಗ್ಗೆ ಉಂಟಾಗಿದ್ದ ಅಸಮಾಧಾನದ ಬಗ್ಗೆ ಹಿರಿಯ ಮುಖಂಡರು ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರು ಏಕಾಏಕಿ ಮುತ್ತಿಗೆ ಹಾಕಿದ್ದರಿಂದ ಅವರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರು.ಪಾಟೀಲ ನಿವಾಸದಲ್ಲಿ ಅತೃಪ್ತರ ಸಭೆ

ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ ಎಂದು ಬೇಸರಗೊಂಡಿರುವ ಹತ್ತಕ್ಕೂ ಹೆಚ್ಚಿನ ಶಾಸಕರು ಮಾಜಿ ಸಚಿವ ಸಿ.ಸಿ.ಪಾಟೀಲ ನಿವಾಸದಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದರು.ಲಕ್ಷ್ಮಣ ಸವದಿ, ಶ್ರೀಶೈಲಪ್ಪ ಬಿದರೂರು, ಸುರೇಶ್‌ಗೌಡ, ಪರಣ್ಣ ಮುನವಳ್ಳಿ, ಚಂದ್ರಕಾಂತ ಬೆಲ್ಲದ, ಚಿಕ್ಕನಗೌಡರು, ಮೋಹನ್ ಲಿಂಬಿಕಾಯಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.