ಭಾನುವಾರ, ಜೂನ್ 13, 2021
23 °C

ಕೊಬ್ಬರಿ ಬೆಲೆ ರಾಜಕಾರಣಕ್ಕೆ ಚುನಾವಣಾ ವಿರಾಮ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಇದು ಬರದ ವರ್ಷ. ಆದರೆ ತಿಪಟೂರಿನ ಮಾರುಕಟ್ಟೆಗೆ (ಎಪಿಎಂಸಿ) ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಬಂದಿದೆ. ಕ್ವಿಂಟಾಲಿಗೆ ನಾಲ್ಕೂವರೆ ಸಾವಿರದ ಆಸುಪಾಸಿನಲ್ಲಿಯೇ ಓಡಾಡುತ್ತಿದ್ದ ಬೆಲೆ ಈಗ ಎಂಟೂವರೆ ಸಾವಿರಕ್ಕೆ ಏರಿದೆ. ದೂರದೂರಿನ ವರ್ತಕರೂ ಈಗ ಖರೀದಿಯಲ್ಲಿ ಭಾಗವಹಿ­ಸು­ತ್ತಿದ್ದಾರೆ. ಆದರೆ ತಿಪಟೂರಿನ ಕೊಬ್ಬರಿ ಮಂಡಿ­ಗಳ ವರ್ತಕರು ಮತ್ತು ಕಮಿಷನ್ ಏಜೆಂಟರು ಮಾತ್ರ ಈ ತಿಂಗಳ ಮೊದಲ ದಿನದಿಂದ ಹತ್ತೊಂಬತ್ತು ದಿನ ಮಂಡಿ ತೆರೆಯದೆ ಕುಳಿತಿದ್ದರು.ಇಷ್ಟಾಗಿಯೂ ಯಾವುದೇ ರಾಜಕಾರಣಿ ಈ ವಿವಾದ ಬಗೆಹರಿಸಲು ಬಹಿರಂಗವಾಗಿ ಮುಂದಾಗ­ಲಿಲ್ಲ. ಹಿಂದೆಲ್ಲಾ ಎಪಿಎಂಸಿ ಅಧಿಕಾರಿ­ಗಳು ಬಿಗಿಯಾಗಿದ್ದಾಗ ವರ್ತಕರು ಹೀಗೆ ಒತ್ತಡ ಹೇರಿದ್ದರೆ ಅದು ತಕ್ಷಣ ಪರಿಣಾಮ ಬೀರುತ್ತಿತ್ತು. ‘ರೈತರು ಮತ್ತು ವರ್ತಕರ ಹಿತ ಕಾಪಾಡುವ’ ತಿಪ್ಪೆಸಾರಿಸುವಿಕೆಗೆ ರಾಜಕಾರಣಿಗಳು ಬರುತ್ತಿ­ದ್ದರು. ಲೋಕಸಭಾ ಚುನಾವಣೆಗಳು ಘೋಷಣೆ­ಯಾದ ಪರಿಣಾಮ ಈ ನಾಟಕ ನಡೆಯಲಿಲ್ಲ­ ಎಂಬಂತೆ ಕಾಣಿಸುತ್ತದೆ. ಕೊಬ್ಬರಿಗೆ ಒಳ್ಳೆಯ ಬೆಲೆ ಬಂದಿರುವ ಈ ಕಾಲದಲ್ಲಿ ಸ್ಥಳೀಯ ವರ್ತಕರ ಮುನಿಸು ಆಶ್ಚರ್ಯ ಹುಟ್ಟಿಸುತ್ತದೆ. ಅವರು ಇದಕ್ಕೆ ನೀಡುವ ಕಾರಣ, ಕರ್ನಾಟಕ ಸರ್ಕಾರ ಕಳೆದ ಮೂರು ವರ್ಷಗಳಿಂದ ಜಾರಿಗೆ ತಂದಿರುವ ಇ–ಟೆಂಡರಿಂಗ್ ವ್ಯವಸ್ಥೆ ರೈತ ಸ್ನೇಹಿಯಾಗಿಲ್ಲ. ಆದರೆ ಈ ಮಾತನ್ನು ಯಾವ ರೈತರೂ ಹೇಳುತ್ತಿಲ್ಲ.ವರ್ತಕರ ಪ್ರಕಾರ ಇ- ಟೆಂಡರಿಂಗ್‌ಗೆ ಎಪಿಎಂಸಿ ಒದಗಿಸಿರುವ ತಂತ್ರಾಂಶ ದೋಷದಿಂದ ಕೂಡಿದೆ. ತಪ್ಪಾಗಿ ನಮೂದಿಸಿದ್ದನ್ನು ತಿದ್ದಲೂ ಸಾಧ್ಯವಿಲ್ಲ. ಬ್ಯಾಂಕ್ ಖಾತೆಯ ಜೊತೆಗಿನ ಸಂಪರ್ಕವೂ ಸರಿಯಾಗಿಲ್ಲ. ರೈತರಿಗೆ ದುಡ್ಡು ಕೊಡುವುದಕ್ಕೇ ಕಷ್ಟವಾಗುತ್ತದೆ. ಇದನ್ನೆಲ್ಲಾ ಸರಿಪಡಿಸಬೇಕು.ಆದರೆ ಜೈಪುರದ ಸಿಸಿಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಸಂಸ್ಥೆಯ ಸಂಶೋಧನಾಧಿಕಾರಿ ಡಾ.ಶಾಲೇಂದ್ರ ಅವರು ಕರ್ನಾಟಕದ ಎಪಿಎಂಸಿ­ಗಳಲ್ಲಿ ನಡೆಸಿದ ಸಂಶೋಧನೆ ಹೇಳುವಂತೆ ಇ–ಟೆಂಡರಿಂಗ್ ಪ್ರಕ್ರಿಯೆ ಬಹಳ ಪರಿಣಾಮ­ಕಾರಿಯಾಗಿದೆ. ಅವರ ಸಂಶೋಧನಾ ಕ್ಷೇತ್ರ ಕಾರ್ಯದ ಫಲಿತಾಂಶಗಳು ಹೇಳುತ್ತಿರುವಂತೆ ಶೇಕಡಾ 93ರಷ್ಟು ವರ್ತಕರು ಪಾವತಿ ಈಗ ಸುಲಭವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ತಿಪಟೂರಿನ ರೈತರ ಜೊತೆ ಮಾತನಾಡಿದರೂ ಇದೇ ಅಂಶ ಸ್ಪಷ್ಟವಾಗುತ್ತದೆ. ಮಾಕಳ್ಳಿಯ ರೈತ ಗಂಗಾಧರಯ್ಯನವರು ಹೇಳುವಂತೆ ‘ಇ–ಟೆಂಡರಿಂಗ್‌ನಿಂದ ರೈತರಿಗೇನೂ ತೊಂದರೆ­ಯಾಗಿಲ್ಲ. ಟೆಂಡರ್ ಮುಗಿದು ಖರೀದಿಗೆ ಒಪ್ಪಿಕೊಂಡ ಮೇಲೆ ದುಡ್ಡು ನಮ್ಮ ಬ್ಯಾಂಕ್ ಖಾತೆಗಳಿಗೇ ಬಂದುಬಿಡುತ್ತದೆ. ವರ್ತಕರೇಕೆ ರೈತರಿಗೆ ತೊಂದರೆಯಾಗುತ್ತದೆ ಎನ್ನುತ್ತಿ­ದ್ದಾರೆಂದು ಅರ್ಥವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ರೈತ ಪರವಾಗಿರುವ ಯಾವುದು ಬಂದರೂ ಅದನ್ನು ರೈತರಿಗೆ ತೊಂದರೆ ಎಂದು ಹೇಳಿ ಇಲ್ಲವಾಗಿಸುತ್ತಾರೆ. ಈಗಿನದ್ದೂ ಅದೇ ತಂತ್ರ’.ತಿಪಟೂರಿನ ಕೊಬ್ಬರಿ ಮಾರುಕಟ್ಟೆಗೆ ದೊಡ್ಡ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವ ಕಾಲ­ದಲ್ಲಿಯೇ ಕೊಬ್ಬರಿಗೆ ಇದೊಂದು ಪ್ರಮುಖ ಮಾರುಕಟ್ಟೆ. ಅದರಿಂದಾಗಿಯೇ ಸ್ವಾತಂತ್ರ್ಯ ಬಂದದ್ದರ ಹಿಂದೆಯೇ ಇಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘದ ಉಸ್ತುವಾರಿಯ ಮಾರುಕಟ್ಟೆಯೂ ಆರಂಭವಾಯಿತು.ತುಮಕೂರು ಲೋಕಸಭಾ ಕ್ಷೇತ್ರದ ರಾಜಕಾರಣಕ್ಕೂ ತೆಂಗಿನ ಬೆಲೆಯ ಏರಿಳಿತಕ್ಕೂ ನೇರ ಸಂಬಂಧವಿದೆ. ಆದರೆ ಈ ವಿಷಯದಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶ ಮಾಡು­ತ್ತಾರೆಂದರೆ ಅದು ವರ್ತಕರ ಪರವಾಗಿ ಎಂಬ ಸಂಶಯ ರೈತರದ್ದು. ಈ ತಿಂಗಳಲ್ಲಿ ಸ್ಥಳೀಯ ವರ್ತಕರು ಖರೀದಿ ನಿಲ್ಲಿಸಿ 19 ದಿನಗಳ ನಂತರ ಸಂಧಾನ ಸಭೆ ನಡೆದಾಗ ರೈತರಿಗೆ ಇದೇ ಸಂಶಯವಿತ್ತು. ಆದರೆ ಎಪಿಎಂಸಿ ಅಧಿಕಾರಿಗಳ ಆಸಕ್ತಿ, ರೈತ ಸಂಘಟನೆಗಳ ಒತ್ತಡದಿಂದ ಅಂಥ­ದ್ದೇನೂ ಸಂಭವಿಸಲಿಲ್ಲ.ಕೆಲವು ರಾಜಕಾರಣಿ­ಗಳೂ ರೈತರ ಪರವಾಗಿಯೇ ನಿಂತರು. ಹತ್ತೊಂಬತ್ತು ದಿನಗಳ ಅವಧಿಗೆ ಸ್ಥಳೀಯ ವರ್ತಕರು ಖರೀದಿ ನಿಲ್ಲಿಸಿದ್ದಾಗ ಎಪಿಎಂಸಿಯ ಅಧಿಕಾರಿಗಳ ಆಸಕ್ತಿಯಿಂದ ಖರೀದಿ ಪ್ರಕ್ರಿಯೆ ನೋಡಿಕೊಂಡಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರಿಯುತ್ತದೆ ಎಂದಾದಾಗ ‘ಮಾತು­ಕತೆ’ಯ ಮೂಲಕ ಬಗೆಹರಿಸಿಕೊಂಡು ತಮ್ಮ ಮೂಗಿಗೆ ಮಣ್ಣು ಮೆತ್ತಲಿಲ್ಲ ಎಂದುಕೊಂಡರು.ಇಷ್ಟಕ್ಕೂ ವರ್ತಕರಿಗೇಕೆ ಇ–ಟೆಂಡರಿಂಗ್ ಬೇಡ? ರೈತರು ಹೇಳುವಂತೆ ಈಗಿನ ವ್ಯವಸ್ಥೆಯಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ತೂಕಕ್ಕಾಗಿ ಎಲೆಕ್ಟ್ರಾನಿಕ್ ತಕ್ಕಡಿಗಳಿವೆ. ಮಾರುಕಟ್ಟೆಯೊಳಕ್ಕೆ ಬರುವ ಕೊಬ್ಬರಿಯ ಲೆಕ್ಕಾಚಾರ ಸರಿಯಾಗಿ­ರುತ್ತದೆ. ಇದರಿಂದ ತೆರಿಗೆ ತಪ್ಪಿಸುವುದಕ್ಕೆ ಆಗುವುದಿಲ್ಲ. ಖರೀದಿ ನಡೆದಾಗ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಬರುತ್ತದೆ. ಕಮಿಷನ್ ಏಜೆಂಟರಿಗೆ ಸಿಗುವುದು ಅವರ ನ್ಯಾಯಬದ್ಧ ಕಮಿಷನ್ ಮಾತ್ರ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಟೆಂಡರಿಂಗ್ ಪ್ರಕ್ರಿಯೆ ಪಾರದರ್ಶಕವಾಗಿದೆ.ಈ ಹಿಂದಿದ್ದ ವ್ಯವಸ್ಥೆಯಲ್ಲಿ ವರ್ತಕರು ರೈತರಿಗೆ ಸಾಲ ಕೊಡುತ್ತಿದ್ದರು. ಅದಕ್ಕೆ ಬಡ್ಡಿಯನ್ನೂ ವಸೂಲು ಮಾಡುತ್ತಿದ್ದರು. ಜೊತೆಗೆ ಕಮಿಷನ್ ಕೂಡಾ ಪಡೆಯುತ್ತಿದ್ದರು. ಈಗ ನೇರವಾಗಿ ಬ್ಯಾಂಕ್ ಖಾತೆಗೆ ಹೋಗುವುದರಿಂದ ಬ್ಯಾಂಕು­ಗಳೂ ರೈತರಿಗೆ ಸಾಲ ಕೊಡುವುದಕ್ಕೆ ಧೈರ್ಯ ಮಾಡುತ್ತಿವೆ. ವರ್ತಕರಿಗೆ ರೈತರ ಮೇಲಿದ್ದ ಹಿಡಿತ ತಪ್ಪಿದೆ. ಹೊಸ ವ್ಯವಸ್ಥೆಯಲ್ಲಿ ಕೌಟು, ಚೀಲ ಇತ್ಯಾದಿಗಳೆಂದು ಬೇಕಾಬಿಟ್ಟಿ ಕಡಿತ ಮಾಡುವು­ದಕ್ಕೂ ವರ್ತಕರಿಗೆ ಮತ್ತು ಕಮಿಷನ್ ಏಜೆಂಟರಿಗೆ ಸಾಧ್ಯವಾಗುತ್ತಿಲ್ಲ.2010ರಲ್ಲಿ ಇ–ಟೆಂಡರಿಂಗ್ ವ್ಯವಸ್ಥೆ ಕಾರ್ಯರೂಪಕ್ಕೆ ಬಂದ ಮೇಲೆ ಪ್ರತೀ ವರ್ಷ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿ ಪ್ರಮಾಣ­ದಲ್ಲಿ ಗಮನಾರ್ಹ ಹೆಚ್ಚಳ ಉಂಟಾಗಿದೆ. 2013–14ರ ಸಾಲಿನಲ್ಲಿ ತಿಪಟೂರು ಎಪಿಎಂಸಿಯ ವ್ಪಾಪ್ತಿಯ ಪ್ರದೇಶದಲ್ಲಿ ಬರ ಪರಿಸ್ಥಿತಿಯಿದ್ದರೂ 6.17ಲಕ್ಷ ಕ್ವಿಂಟಲ್ ಕೊಬ್ಬರಿ ಮಾರುಕಟ್ಟೆಗೆ ಬಂದಿದೆ.

2012–13ರ ಸಾಲಿನಲ್ಲಿ ಇದು 5.79 ಲಕ್ಷ ಕ್ವಿಂಟಲ್‌ನಷ್ಟಿತ್ತು. 2010–11ರ ಸಾಲಿನಲ್ಲಿ ಇದು 4.46 ಲಕ್ಷ ಕ್ವಿಂಟಲ್‌ನಷ್ಟಿತ್ತು. ಇದಕ್ಕೂ ಹಿಂದೆ 2009–10ರ ಸಾಲಿನಲ್ಲಿ 3.38 ಲಕ್ಷ ಕ್ವಿಂಟಲ್‌ನಷ್ಟಿತ್ತು.ತಿಪಟೂರು ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ ನ್ಯಾಮಗೌಡ ಅವರ ದೃಷ್ಟಿಯಲ್ಲಿ ಈ ಹೆಚ್ಚಳಕ್ಕೆ ಮುಖ್ಯ ಕಾರಣ ರೈತರಿಗೆ ಎಂಪಿಎಂಸಿಯ ವ್ಯವಹಾರದ ಮೇಲೆ ನಂಬಿಕೆ ಹೆಚ್ಚಾದದ್ದು. ಇದನ್ನವರು ವಿವರಿಸುವುದು ಹೀಗೆ ‘ಇ–ಟೆಂಡರಿಂಗ್ ಬರುವುದರ ಜೊತೆಗೆ ಅನೇಕ ಬದಲಾವಣೆಗಳು ಬಂದವು. ಎಲ್ಲದಕ್ಕಿಂತ ಹೆಚ್ಚಾಗಿ ಉತ್ತರ­ದಾಯಿತ್ವವನ್ನು ಹೆಚ್ಚಿಸಿದ್ದು. ಮಾರುಕಟ್ಟೆಯೊಳಕ್ಕೆ ಬರುವ ಪ್ರತೀ ಗ್ರಾಂ ಉತ್ಪನ್ನವೂ ಈಗ ದಾಖಲಾಗುತ್ತದೆ. ಮಾರಾಟ, ಖರೀದಿ ಎಲ್ಲವೂ ಪಾರದರ್ಶಕ.ದೂರದೂರಿನಲ್ಲಿರುವ ಕಂಪೆನಿ­ಗಳೂ ಈಗ ಟೆಂಡರಿಂಗ್‌ನಲ್ಲಿ ಭಾಗವಹಿಸುತ್ತವೆ. ಪರಿಣಾಮ­ವಾಗಿ ಬೆಲೆಯೂ ಹೆಚ್ಚು ಸಿಗುತ್ತದೆ. ತೆಂಗು ಒಂದು ದೀರ್ಘಕಾಲೀನ ಬೆಳೆ. ವರ್ಷದಿಂದ ವರ್ಷಕ್ಕೆ ಉತ್ಪನ್ನ ಭಾರೀ ಪ್ರಮಾಣದಲ್ಲೇನೂ ಹೆಚ್ಚುವುದಿಲ್ಲ. ಇದನ್ನು ನಮ್ಮ ಮಾರುಕಟ್ಟೆಗೆ ಬರುತ್ತಿರುವ ಕೊಬ್ಬರಿಯ ಪ್ರಮಾಣ ಹೆಚ್ಚಾಗಿದೆ ಎಂದಷ್ಟೇ ಹೇಳಬಹುದು. ಇದಕ್ಕೆ ಕಾರಣ ನಮ್ಮ ಮೇಲಿನ ನಂಬಿಕೆ ಹೆಚ್ಚಿದ್ದು’.ಇದನ್ನು ರೈತರೂ ಖಾತರಿ ಪಡಿಸುತ್ತಾರೆ. ಸ್ಥಳೀಯ ವರ್ತಕರು ಹಲವು ದಿನಗಳ ಕಾಲ ವ್ಯವಹಾರ ನಡೆಸದೇ ಇದ್ದಾಗಲೂ ಟೆಂಡರ್‌ಗಳು ಬರುತ್ತಿದ್ದುದು ಎಪಿಎಂಸಿ ವ್ಯವಸ್ಥೆಯ ಬಗ್ಗೆ ರೈತರಿಗೆ ಭರವಸೆಯನ್ನೇನೋ ಮೂಡಿಸಿದೆ. ಆದರೆ ಅವರೊಳಗೊಂದು ಅವ್ಯಕ್ತ ಭಯವೂ ಇದೆ. ಇದಕ್ಕೆ ಮುಖ್ಯ ಕಾರಣ ಹತ್ತಿರದಲ್ಲೇ ಇರುವ ಅರಸೀಕೆರೆಯ ಎಪಿಎಂಸಿಯಲ್ಲಿ ಇ–ಟೆಂಡರಿಂಗ್ ವ್ಯವಸ್ಥೆ ಇಷ್ಟೊಂದು ದಕ್ಷವಾಗಿಲ್ಲ. ಚುನಾವಣೆ ಮುಗಿದದ್ದರ ಹಿಂದೆಯೇ ತಿಪಟೂರಿನ ಸ್ಥಿತಿಯೂ ಇದೇ ಆಗಬಹುದೆಂಬುದು ರೈತರಿಗಿರುವ ಅನುಮಾನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.