ಗುರುವಾರ , ಜನವರಿ 23, 2020
28 °C

ಕೊಳವೆಬಾವಿ ಕೊರೆಸಲು ಅಧಿಕಾರಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ತಾಲ್ಲೂಕಿನ ಗ್ರಾಮಾಂತರ ಪ್ರದೇಶ ಗಳಲ್ಲಿ ಕುಡಿಯುವ ನೀರು ಕುರಿತು ತಾಲ್ಲೂಕು ಪಂಚಾಯತಿ ಸ್ಥಾಯಿ ಸಮಿತಿ ಸಭೆಯಲ್ಲಿ ಶುಕ್ರವಾರ ಚರ್ಚೆ ನಡೆಸಿ ಅಗತ್ಯವಿರುವ ಕಡೆ ಕೊಳವೆಬಾವಿಗಳನ್ನು ಕೊರೆಯಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ತ್ರಿವೇಣಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೆಲವು ಗ್ರಾಮಗಳಲ್ಲಿ ಅಗತ್ಯಕಿಂತ ಹೆಚ್ಚಿನ ನೀರು ಕೊಳವೆ ಬಾವಿಗಳಲ್ಲಿ ಲಭ್ಯವಿದ್ದರೆ, ಕೆಲವು ಗ್ರಾಮಗಳಲ್ಲಿ ನೀರಿನ ಬರ ಇರುವುದೆಂದು ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಡಾ.ವೆಂಕಟಸ್ವಾಮಿ ಸಭೆಗೆ ತಿಳಿಸಿದರು. ತೀವ್ರ ನೀರಿನ ಬರ ಎದುರಿಸುತ್ತಿರುವ 13 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ರೈತರಿಂದಲೂ ಸಹ ನೀರು ಪಡೆದು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.ಕುಡಿಯುವ ನೀರಿನ ಕೊಳವೆಬಾವಿ ಕೊರೆಯಿಸಿರುವ ಕಡೆ ತಕ್ಷಣ ಪಂಪ್‌ಸೆಟ್ ಹಾಗೂ ಪೈಪ್‌ಲೈನ್ ವ್ಯವಸ್ಥೆ ಮಾಡಬೇಕೆಂದು ಸಭೆ ಸೂಚಿಸಿತು. ತಾಲ್ಲೂಕಿನ ರಾಮನಾಯಕನಕೋಟಿ ಗ್ರಾಮದಲ್ಲಿ ಹಲವಾರು ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಾಣವಾಗಿದ್ದು, ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡದಿರುವ ಬಗ್ಗೆ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಎಂ.ಎಸ್. ಶ್ರೀನಿವಾಸರೆಡ್ಡಿ ಅಸಮಾಧಾನವ್ಯಕ್ತಪಡಿಸಿದರು.ತಾಲ್ಲೂಕು ಅಂಗನವಾಡಿ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿರುವುದಿಲ್ಲವೆಂದು ಸದಸ್ಯ ರಾಮಪ್ಪ ದೂರಿದರು. 136 ಗ್ರಾಮಗಳಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದ್ದು, 5 ಕಡೆ ಕಟ್ಟಡಗಳ ನಿರ್ಮಾಣವಾಗುತ್ತಿದೆ ಎಂದು ಅಂಗನವಾಡಿ ಅಧಿಕಾರಿಗಳು ಸಭೆಗೆ ತಿಳಿಸಿದರು. ಸದಸ್ಯರಾದ ಲಕ್ಷ್ಮಿದೇವಮ್ಮ, ರಾಜಣ್ಣ ಮುಂತಾದವರು ಸಭೆಯಲ್ಲಿ ಮಾತನಾಡಿದರು.ಗುತ್ತಿಗೆ ವೈದ್ಯರ ನೇಮಕ

ಕೋಲಾರ:ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಮತ್ತು ಮಾಲೂರು ತಾಲ್ಲೂಕಿನ ತೊರಲಕ್ಕಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಲಾ ಒಂದು ವೈದ್ಯಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಸರ್ಕಾರ ಅನುಮತಿ ನೀಡಿದೆ. ಅರ್ಹ ಎಂಬಿಬಿಎಸ್ ಪದವೀಧರರು ಸ್ವವಿವರ, ಪ್ರಮಾಣಪತ್ರಗಳೊಡನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಫೆ. 9ರ ಒಳಗೆ ಅರ್ಜಿ ಸಲ್ಲಿಸಬೇಕು. ರೋಸ್ಟರ್ ಕಂ ಮೆರಿಟ್ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)