ಗುರುವಾರ , ಮೇ 13, 2021
24 °C

ಕೊಳವೆಬಾವಿ ಬತ್ತುವ ಭೀತಿ

ಪ್ರಜಾವಾಣಿ ವಾರ್ತೆ/ ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳಿಗೆ ನಿಗದಿತ ಅವಧಿಯಲ್ಲಿ ವಿದ್ಯುದೀಕರಣ ಕಲ್ಪಿಸದಿರುವ ಪರಿಣಾಮ ಅಂತರ್ಜಲಮಟ್ಟ ಬತ್ತಿಹೋಗುವ ಆತಂಕ ಎದುರಾಗಿದೆ.ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡುವ ಯೋಜನೆಯ ಉದ್ದೇಶ ಜಿಲ್ಲೆಯಲ್ಲಿ ಹಳ್ಳ ಹಿಡಿದಿದೆ. ನಿಗದಿತ ಅವಧಿಯಲ್ಲಿ ಸೆಸ್ಕ್‌ನಿಂದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದೇ ಇದಕ್ಕೆ ಮೂಲ ಕಾರಣ.ಎರಡು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿಲ್ಲ. ಈ ಅವಧಿಯಲ್ಲೂ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕೊಳವೆಬಾವಿ ಕೊರೆಯಲಾಗಿದೆ. ಆದರೆ, ಸಕಾಲದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಪರಿಣಾಮ ಈ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದಿರುವ ಸಾಧ್ಯತೆಯೂ ಇದೆ ಎನ್ನುವುದು ಫಲಾನುಭವಿಗಳ ಆತಂಕ.ಅಂಬೇಡ್ಕರ್ ನಿಗಮ- 696, ಡಿ. ದೇವರಾಜ ಅರಸು ನಿಗಮ- 164 ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕೊರೆದಿರುವ 17 ಕೊಳವೆಬಾವಿ ಸೇರಿದಂತೆ ಒಟ್ಟು 877 ಅರ್ಜಿ ಬಾಕಿ ಉಳಿದಿವೆ. ಇವುಗಳಲ್ಲಿ ಕೇವಲ 262 ಕೊಳವೆಬಾವಿಗಳಿಗೆ ವಿದ್ಯುದೀಕರಣ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಕೊಳವೆಬಾವಿಗಳ ಕಾಮಗಾರಿ ಇಂದಿಗೂ ಆರಂಭಗೊಂಡಿಲ್ಲ!ಚಾಮರಾಜನಗರ ಸೆಸ್ಕ್ ವಿಭಾಗದಲ್ಲಿ ಅಂಬೇಡ್ಕರ್ ನಿಗಮದ 412 ಅರ್ಜಿ ಬಾಕಿಯಿವೆ. ಇವುಗಳಲ್ಲಿ ಪರಿಶಿಷ್ಟ ಜಾತಿ- 125 ಹಾಗೂ ಪರಿಶಿಷ್ಟ ಪಂಗಡದ 34 ಅರ್ಜಿ ಸೇರಿದಂತೆ ಒಟ್ಟು 159 ಕೊಳವೆಬಾವಿಗಳಿಗೆ ವಿದ್ಯುದೀಕರಣ ಕಾಮಗಾರಿ ಪ್ರಾರಂಭಿಸಬೇಕಿದೆ. ಜತೆಗೆ, 124 ಕೊಳವೆಬಾವಿಗಳಿಗೆ ಇನ್ನೂ ಸೆಸ್ಕ್‌ನಿಂದ ಅಂದಾಜುಪಟ್ಟಿ ಸಿದ್ಧಪಡಿಸಿ ನಿಗಮಕ್ಕೆ ಸಲ್ಲಿಸಿಲ್ಲ. ಒಟ್ಟು 129 ಕಾಮಗಾರಿ ಮಾತ್ರ ಪ್ರಗತಿಯಲ್ಲಿವೆ.ಕೊಳ್ಳೇಗಾಲ ಸೆಸ್ಕ್ ವಿಭಾಗದಲ್ಲಿ 284 ಅರ್ಜಿ ಬಾಕಿಯಿವೆ. ಇವುಗಳಲ್ಲಿ ಎಸ್‌ಸಿ- 83 ಹಾಗೂ ಎಸ್‌ಟಿ- 31 ಅರ್ಜಿ ಸೇರಿದಂತೆ 114 ಕೊಳವೆಬಾವಿ ಕಾಮಗಾರಿ ಆರಂಭಿಸಬೇಕಿದೆ. ಜತೆಗೆ, ಈ ವಿಭಾಗದಲ್ಲಿ ಇನ್ನೂ 98 ಕೊಳವೆಬಾವಿಗೆ ಅಂದಾಜುಪಟ್ಟಿ ಸಿದ್ಧಪಡಿಸಿಲ್ಲ. ಒಟ್ಟು 72 ಕಾಮಗಾರಿ ಮಾತ್ರ ಪ್ರಗತಿಯಲ್ಲಿವೆ.ದೇವರಾಜ ಅರಸು ನಿಗಮ: ಚಾಮರಾಜನಗರ `ಸೆಸ್ಕ್' ವಿಭಾಗದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕೊರೆದಿರುವ 82 ಕೊಳವೆಬಾವಿಗಳು ವಿದ್ಯುದೀಕರಣಗೊಂಡಿಲ್ಲ. ಮೇ ತಿಂಗಳಿನಲ್ಲಿ ಎರಡು ಅರ್ಜಿಗಳು ನೋಂದಣಿಯಾಗಿವೆ. 31 ಕಾಮಗಾರಿ ಪ್ರಗತಿಯಲ್ಲಿದ್ದು, 17 ಕಾಮಗಾರಿಗಳನ್ನು ಇನ್ನೂ ಪ್ರಾರಂಭಿಸಬೇಕಿದೆ. ಅಲ್ಲದೇ, ಸೆಸ್ಕ್‌ನಿಂದ 16 ಕೊಳವೆಬಾವಿಗಳಿಗೆ ಅಂದಾಜುಪಟ್ಟಿ ಸಿದ್ಧಪಡಿಸಿಲ್ಲ. 15 ಅರ್ಜಿಗಳು ಕಂಪೆನಿಯ ನಿಯಮ ಪಾಲಿಸಿಲ್ಲ. 1 ಅರ್ಜಿ ಮಂಜೂರಾತಿ ಹಂತದಲ್ಲಿದೆ.ಕೊಳ್ಳೇಗಾಲದ ವಿಭಾಗದಲ್ಲೂ 82 ಅರ್ಜಿ ಬಾಕಿ ಉಳಿದಿವೆ. ಇವುಗಳಲ್ಲಿ 22 ಕಾಮಗಾರಿ ಪ್ರಗತಿಯಲ್ಲಿವೆ. 31 ಕಾಮಗಾರಿ ಕೈಗೆತ್ತಿಕೊಳ್ಳಬೇಕಿದ್ದು, 1 ಅರ್ಜಿ ಅಂದಾಜುಪಟ್ಟಿ ತಯಾರಿಕೆ ಹಂತದಲ್ಲಿದೆ. 21 ಅರ್ಜಿಗಳಿಗೆ ನಿಗಮದಿಂದ ನಿಬಂಧನೆ ಪಾಲನೆಯಾಗಿಲ್ಲ. ಅಂದಾಜುಪಟ್ಟಿ ತಯಾರಿಸದಿರುವ ಅರ್ಜಿಗಳ ಸಂಖ್ಯೆ 7.ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿ ಕೊರೆದಿರುವ ಚಾಮರಾಜನಗರ- 4 ಹಾಗೂ ಕೊಳ್ಳೇಗಾಲ ಸೆಸ್ಕ್ ವಿಭಾಗದಲ್ಲಿ 13 ಅರ್ಜಿ ಬಾಕಿಯಿವೆ.ಉಪಕರಣ ಪೂರೈಕೆ ಕೊರತೆ

`ಒಂದು ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಂಬ, ತಂತಿ, ವಿದ್ಯುತ್ ಪರಿವರ್ತಕ ಸೇರಿದಂತೆ ಸುಮಾರು 25 ಉಪಕರಣ ಬೇಕಿದೆ. ಯಾವುದೇ, ಒಂದು ಉಪಕರಣ ಇಲ್ಲದಿದ್ದರೂ ವಿದ್ಯುದೀಕರಣ ಕಲ್ಪಿಸಲು ಸಾಧ್ಯವಿಲ್ಲ. ನಮ್ಮ ವಿಭಾಗಕ್ಕೆ ಅಗತ್ಯ ಉಪಕರಣ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬವಾಗಿದೆ' ಎನ್ನುವುದು ಸೆಸ್ಕ್ ಅಧಿಕಾರಿಗಳ ವಿವರಣೆ.`ರಾಜ್ಯ ಸರ್ಕಾರದ ಮಟ್ಟದಲ್ಲಿ ಸಮರ್ಪಕವಾಗಿ ವಿದ್ಯುತ್ ಉಪಕರಣ ಪೂರೈಸಲು ವಿದ್ಯುತ್ ಸರಬರಾಜು ಕಂಪೆನಿಗಳ ಪ್ರಧಾನ ವ್ಯವಸ್ಥಾಪಕರು ಹಾಗೂ ಸಂಬಂಧಪಟ್ಟ ಸಚಿವರು ಚರ್ಚಿಸಬೇಕಿದೆ. ಇಲ್ಲವಾದರೆ ಕೊಳವೆಬಾವಿ ಕೊರೆದರೂ ಪ್ರಯೋಜನವಿಲ್ಲದಂತಾಗುತ್ತದೆ. ಮತ್ತೊಂದೆಡೆ ಮಳೆ ಕೊರತೆಯಿಂದ ಕೊಳವೆಬಾವಿಯಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ತ್ವರಿತವಾಗಿ ಅಗತ್ಯ ವಿದ್ಯುತ್ ಉಪಕರಣ ಪೂರೈಸಲು ಸರ್ಕಾರ ಕ್ರಮಕೈಗೊಳ್ಳಬೇಕು' ಎನ್ನುವುದು ಫಲಾನುಭವಿಗಳ ಒತ್ತಾಯ.`ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ಸೆಸ್ಕ್ ವಿಭಾಗದ ವ್ಯಾಪ್ತಿ ನಿಗಮದಿಂದ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿ ಅವರು ಕೂಡ ತ್ವರಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ವಿಭಾಗಕ್ಕೆ ಸೂಚಿಸಿದ್ದಾರೆ.ವಿದ್ಯುತ್ ಉಪಕರಣ ಪೂರೈಕೆಯಾದರೆ ಸಮಸ್ಯೆ ಬಗೆಹರಿಯಲಿದೆ' ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಮಕೃಷ್ಣ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.