ಗುರುವಾರ , ಮೇ 6, 2021
27 °C

ಕೋರಮಂಗಲದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮನೆ ನಿರ್ಮಾಣ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯೂಎಸ್) ಕೋರಮಂಗಲದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ ಪ್ರಸ್ತಾವದ ದಾಖಲೀಕರಣಕ್ಕೆ ಬುಧವಾರ ನಡೆದ ಬಿಬಿಎಂಪಿ ಸಭೆಯಲ್ಲಿ ಜೆಡಿಎಸ್ ವಿರೋಧದ ನಡುವೆಯೂ ಒಪ್ಪಿಗೆ ನೀಡಲಾಯಿತು.ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಅದನ್ನು ಪಾಲಿಕೆಯಲ್ಲಿ ದಾಖಲೀಕರಿಸಲು ಸಂಬಂಧಪಟ್ಟ ಪ್ರಸ್ತಾವವನ್ನು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಅವರು ಸಭೆಯಲ್ಲಿ ಮಂಡಿಸಿದಾಗ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, `ಈ ಯೋಜನೆಯಿಂದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿ ಖಾಸಗಿಯವರ ಪಾಲಾಗಲಿದೆ. ಬದಲಿಗೆ `ನರ್ಮ್~ ಯೋಜನೆಯಡಿ ಸಾವಿರಾರು ಮನೆಗಳನ್ನು ನಿರ್ಮಿಸಿ ಈ ಜನರಿಗೆ ಹಂಚಿಕೆ ಮಾಡಿದರೆ ಅಮೂಲ್ಯವಾದ ಆಸ್ತಿ ಪಾಲಿಕೆಯಲ್ಲೇ ಉಳಿಯಲಿದೆ.

 

ಈ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಂಡು ಮೇಯರ್ ಅವರು ನಾಳೆಯೇ ಶಂಕುಸ್ಥಾಪನೆ ನೆರವೇರಿಸಲಿ~ ಎಂದು ಒತ್ತಾಯಿಸಿದರು.`ಹಾಗಾಗಿ ಈ ಉದ್ದೇಶಿತ ಯೋಜನೆಯ ಪ್ರಸ್ತಾವವನ್ನು ಮರು ಪರಿಶೀಲನೆಗೆ ಸರ್ಕಾರಕ್ಕೆ ವಾಪಸ್ ಕಳುಹಿಸಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು~ ಎಂದರು.ಶಾಸಕ ಎನ್.ಎ. ಹ್ಯಾರಿಸ್, `ಕೋರಮಂಗಲದ ಆ ಜನತೆ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಶೀಘ್ರವಾಗಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು. ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು. ಬಳಿಕ ಈ ಯೋಜನೆಯ ಪ್ರಸ್ತಾವವನ್ನು ಪಾಲಿಕೆಯಲ್ಲಿ ದಾಖಲೀಕರಣ ಮಾಡಲು ಸಭೆ ಒಪ್ಪಿಗೆ ನೀಡಿತು.ಯೋಜನೆ ಬಗ್ಗೆ ಒಂದಿಷ್ಟು ವಿವರ: ಪಾಲಿಕೆಯು 1987ರಿಂದ 1992ರ ಅವಧಿಯಲ್ಲಿ ಕೋರಮಂಗಲದಲ್ಲಿ ಇಡಬ್ಲ್ಯೂಎಸ್ ಕುಟುಂಬಗಳಿಗೆ 42 ಬಹುಮಹಡಿ ಕಟ್ಟಡಗಳಲ್ಲಿ 1,512 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿತ್ತು. ಆದರೆ, ಶಿಥಿಲಗೊಂಡಿದ್ದ ಕೆಲವು ಕಟ್ಟಡ ಸಮುಚ್ಚಯಗಳು ಕುಸಿದು ಬಿದ್ದವು. ಆ ಹಿನ್ನೆಲೆಯಲ್ಲಿ ಈ ಕಟ್ಟಡಗಳನ್ನು ಕೆಡವಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು.ಅದರಂತೆ ಒಟ್ಟು 15 ಎಕರೆ ಪ್ರದೇಶದ ಪೈಕಿ 8 ಎಕರೆ ಪ್ರದೇಶದಲ್ಲಿ 1640 ಮನೆಗಳನ್ನು ನಿರ್ಮಿಸುವುದು. ಬಾಕಿ ಉಳಿದ ಏಳು ಎಕರೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ರೂಪಿಸಲಾಯಿತು. ವಸತಿ ಗೃಹಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು 30 ವರ್ಷಗಳ ಅವಧಿಗೆ ಪಾಲುದಾರ ಖಾಸಗಿ ಸಂಸ್ಥೆಯೇ ನಿರ್ವಹಿಸುವುದಕ್ಕೆ ಷರತ್ತು ವಿಧಿಸಲು ತೀರ್ಮಾನಿಸಲಾಗಿತ್ತು.30 ವರ್ಷಗಳ ಬಳಿಕ ವಸತಿ ಸಂಕೀರ್ಣದಲ್ಲಿ ಶೇ 50ರಷ್ಟು ಭಾಗವನ್ನು ಯಥಾಸ್ಥಿತಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಬೇಕು. ಬಾಕಿ ಉಳಿದ ಶೇ 50ರಷ್ಟು ಭಾಗವನ್ನು ಖಾಸಗಿ ಬಿಡ್‌ದಾರರಿಗೆ ಬಿಟ್ಟುಕೊಡಲು ಉದ್ದೇಶಿಸಲಾಗಿತ್ತು.ಈ ಯೋಜನೆಗೆ ಸಂಬಂಧಪಟ್ಟಂತೆ 12-10-2004ರಂದು ಪಾಲಿಕೆ ಟೆಂಡರ್ ಪ್ರಕಟಣೆ ಹೊರಡಿಸಿತ್ತು. ಈ ಯೋಜನೆಯ ಪ್ರಸ್ತಾವವನ್ನು ಹಿಂದಿನ ರಾಜ್ಯಪಾಲ ರಾಮೇಶ್ವರ ಠಾಕೂರ್ ತಿರಸ್ಕರಿಸಿದ್ದರು ಎನ್ನಲಾಗಿದೆ. ಟೆಂಡರ್ ಹಾಗೂ ಇತರೆ ಪ್ರಕ್ರಿಯೆಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆ ನಡೆದಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲು ಏರಿತ್ತು.ಅಂತಿಮವಾಗಿ ರಾಜ್ಯ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದ್ದು, ಪ್ರಸ್ತಾಪಿತ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು 12-10-2010ರಂದು ಒಪ್ಪಿಗೆ ನೀಡಿದೆ. ಈ ಆದೇಶವನ್ನು ಪಾಲಿಕೆಯಲ್ಲಿ ದಾಖಲಾತಿ ಮಾಡಿಕೊಳ್ಳಲು ಪಾಲಿಕೆಗೆ ರವಾನಿಸಿದೆ.ಮುಖ್ಯಾಂಶಗಳು

ಜೆಡಿಎಸ್ ವಿರೋಧದ ನಡುವೆಯೂ ಪ್ರಸ್ತಾವದ ದಾಖಲೀಕರಣಕ್ಕೆ ಒಪ್ಪಿಗೆ

ಆಡಳಿತ ಪಕ್ಷದ ನಾಯಕರಿಂದ ಸಭೆಯಲ್ಲಿ ಮಂಡನೆ

ನರ್ಮ ಯೋಜನೆಯಡಿ ಮನೆಗಳನ್ನು ನಿರ್ಮಿಸಿ, ಹಂಚಲಿ- ಪದ್ಮನಾಭ ರೆಡ್ಡಿ

ಶೀಘ್ರ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬೇಕು- ಶಾಸಕ ಎನ್.ಎ.ಹ್ಯಾರಿಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.