ಮಂಗಳವಾರ, ಏಪ್ರಿಲ್ 13, 2021
25 °C

ಕೋಲಾರ: ಅತಿಥಿ ಉಪನ್ಯಾಸಕರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: 2005ರಿಂದ ಕಾರ್ಯನಿರ್ವಹಿಸುತ್ತಿರುವವರನ್ನು ಕಾಯಂ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾ ಶಾಖೆ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಿದರು.ಪ್ರವಾಸಿ ಮಂದಿರದಿಂದ ಮೆರವಣಿಗೆ ಆರಂಭಿಸಿದ ಉಪನ್ಯಾಸಕರು ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಧರಣಿ ನಡೆಸಿದರು.ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ, `ಅದು ಸೇವೆಯನ್ನು ಬಾಡಿಗೆಗೆ ತೆಗೆದುಕೊಂಡಂತಹುದು ಮಾತ್ರ~ ಎಂದು ಪ್ರಾಂಶುಪಾಲರು ಸ್ಪಷ್ಟವಾಗಿ ತಿಳಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯು ಜುಲೈ 30ರ ಸುತ್ತೋಲೆಯಲ್ಲಿ ಹೇಳಿರುವುದು ಅಮಾನವೀಯ. ಕೂಡಲೇ ಸುತ್ತೋಲೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ರಾಜ್ಯದ ಅನೇಕ ಸರ್ಕಾರಿ ಕಾಲೇಜುಗಳಲ್ಲಿ ಪೂರ್ಣಾವಧಿ ಉಪನ್ಯಾಸಕರಿಲ್ಲದೆ ಅತಿಥಿ ಉಪನ್ಯಾಸಕರೇ ಬಹುತೇಕ ಜವಾಬ್ದಾರಿ ಹೊರುತ್ತಿದ್ದಾರೆ. 2012-13ನೇ ಸಾಲಿಗೆ ನೇಮಕ ಸಂಬಂಧ ಜುಲೈ 30ರಂದು ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸೇವೆಯನ್ನು ಬಾಡಿಗೆಗೆ ಪಡೆಯುವುದು ಎಂಬ ವಾಕ್ಯವನ್ನು ಬಳಸಲಾಗಿದೆ. ಇದು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಅವಮಾನಕಾರಿಯಾದ ನಿಲುವು ಎಂದರು.ಅತಿಥಿ ಉಪನ್ಯಾಸಕರಿಗೆ ಬೇಸಿಗೆ ರಜೆ, ಮಧ್ಯಂತರ ರಜೆ ಅವಧಿ ಸೇರಿದಂತೆ ನೀಡಲಾಗುತ್ತಿದ್ದ 10 ತಿಂಗಳ ವೇತನವನ್ನು ನೀಡದಿರುವ ನಿರ್ಧಾರವನ್ನು ಕೈಗೊಂಡಿರುವುದು ಅಮಾನವೀಯ ಎಂದು ಪ್ರತಿಪಾದಿಸಿದರು.ಅಕ್ಕ-ಪಕ್ಕದ ರಾಜ್ಯಗಳಲ್ಲಿ ಇರುವಂತೆ ಕಾಯಂ ಉಪನ್ಯಾಸಕರ ನೇಮಕಾತಿ ಆಗುವವರೆಗೂ ಅತಿಥಿ ಉಪನ್ಯಾಸಕರ ಸೇವಾ ಹಿರಿತನವನ್ನು ಪರಿಗಣಿಸಿ ನೇಮಕಾತಿ ಮುಂದುವರಿಸಬೇಕು. ಪ್ರತಿ ವರ್ಷವೂ ಸಂದರ್ಶನ, ಆಯ್ಕೆ ಪ್ರಕ್ರಿಯೆಗಳನ್ನು ನಡೆಸಬಾರದು ಎಂದು ಆಗ್ರಹಿಸಿದರು.ಒಕ್ಕೂಟದ ಸಿ.ಮುನಿಯಪ್ಪ, ಯಲ್ಲಪ್ಪ, ಕೆ.ಎನ್.ನಾಗರಾಜ್, ಎಲ್.ನಾಗರಾಜ್, ಎಸ್.ಎಂ.ರಮಾನಂದ, ವನಿತಾ, ರಾಜೇಶ್ವರಿ, ವೀಣಾ, ರವಿ, ಅನಂತ್, ಚೌಡೇಗೌಡ, ರಂಗಪ್ಪ ಇತರರು ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.