ಭಾನುವಾರ, ಮೇ 22, 2022
22 °C

ಕ್ಯಾಂಪಸ್‌ನಲ್ಲಿ ಭಿತ್ತಿ ಶಿಲ್ಪಗಳ ಮೋಡಿ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಕ್ಯಾಂಪಸ್‌ನಲ್ಲಿ ಭಿತ್ತಿ ಶಿಲ್ಪಗಳ ಮೋಡಿ...

`ಕಲೆ ಮಾನವನನ್ನು ಅತಿ ಮಾನವನನ್ನಾಗಿ ಮಾಡುತ್ತದೆ~ ಎಂಬುದು ಕಲಾಜಗತ್ತಿನಲ್ಲಿ ಪ್ರಚಲಿತವಾದ ನುಡಿ. ಕಲೆಯ ಮೋಡಿಗೆ ಸಿಕ್ಕವರು ಅದರಿಂದ ಹೊರಬರುವುದು ತುಸು ಕಷ್ಟವೇ. ಅದು ಬಾಹ್ಯಜಗತ್ತಿನಿಂದ ಸೃಜನಶೀಲ ಜಗತ್ತಿಗೆ ಕರೆದೊಯ್ಯುವ ಮಾಧ್ಯಮವೂ ಹೌದು. ಈ ಸೃಜನಶೀಲತೆಗೆ ತಾಜಾ ಉದಾಹರಣೆ ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು.ರಾಜ್ಯದ ಪುರಾತನ ಫೈನ್ ಆರ್ಟ್ಸ್ ಕಾಲೇಜು ಎಂದೇ ಖ್ಯಾತಿ ಪಡೆದಿರುವ ಲಲಿತಕಲಾ ಮಹಾವಿದ್ಯಾಲಯ ಅನೇಕ ಕಲಾವಿದರನ್ನು ಹುಟ್ಟುಹಾಕಿದೆ. ಇಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ಚಿತ್ರಕಲಾ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕೇಂದ್ರ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಕೆ.ಆರ್. ಸುಬ್ಬಣ್ಣ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಈ ಕಾಲೇಜಿನ ಕೊಡುಗೆ.ಇಂಥ ಅಪರೂಪದ ಹಿನ್ನೆಲೆ ಹೊಂದಿರುವ ಮಹಾವಿದ್ಯಾಲಯದ ಪ್ರಥಮ ಎಂಎಫ್‌ಎ (ಪೇಂಟಿಂಗ್ ವಿಭಾಗ) ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ತಮ್ಮಲ್ಲಿನ ಸೃಜನಶೀಲತೆಯನ್ನು ಅನುಪಯುಕ್ತ ವಸ್ತುಗಳ ಮೂಲಕ ಅನಾವರಣಗೊಳಿಸಿದ್ದಾರೆ.ಶಿವಮೊಗ್ಗ ಜಿಲ್ಲೆ ಶಂಕರಘಟ್ಟ ಗ್ರಾಮದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣಕ್ಕೆ ಭಿತ್ತಿಶಿಲ್ಪ, ಸಿಮೆಂಟ್ ಬಳಸಿ ಆನೆ, ಜಿರಾಫೆ, ಹುಲಿ ಇತ್ಯಾದಿ ನಿರ್ಮಿಸಿ ವಿವಿ ಆವರಣಕ್ಕೆ ಇದೇ ಕಾಲೇಜಿನ ವಿದ್ಯಾರ್ಥಿಗಳು ಜೀವ ತುಂಬಿದ್ದರು. ಇದನ್ನೇ ಮಾದರಿಯಾಗಿಟ್ಟುಕೊಂಡು ದಾವಣಗೆರೆ ವಿಶ್ವ ವಿದ್ಯಾಲಯದ ಆವರಣದಲ್ಲಿ ಕಲಾ ಕಾಲೇಜಿನ ಕೊಡುಗೆಯೆಂಬಂತೆ ಈ ವಿದ್ಯಾರ್ಥಿಗಳು ಅಪರೂಪದ ಎರಡು ಬೃಹತ್ ಭಿತ್ತಿಶಿಲ್ಪಗಳನ್ನು ರೂಪಿಸಿದ್ದಾರೆ.ಹಳೇ ಕುರ್ಚಿಗಳೀಗ `ಮೀನು~!

ಕಾಲೇಜಿನಲ್ಲಿ ಅನುಪಯುಕ್ತವಾಗಿ ಮೂಲೆ ಹಿಡಿದಿದ್ದ, ಮುರಿದು ಹೋಗಿದ್ದ ಹಳೇ ಕುರ್ಚಿಗಳನ್ನು ಬಳಸಿ `ಮೀನು~, ಹಳೇ ತಗಡು, ಅನುಪಯುಕ್ತ ವಸ್ತುಗಳಿಂದ `ಮಡಕೆ~ಯ ಭಿತ್ತಿಶಿಲ್ಪ ತಯಾರಿಸಿದ್ದಾರೆ. ಒಟ್ಟು 12 ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ತೊಡಗಿಕೊಂಡಿದ್ದು, ಕಾಲೇಜಿನ ಉಪನ್ಯಾಸಕ ಯು. ಹಜರತ್ ಅಲಿ ಮ್ಯೂರಲ್ ತಯಾರಿಕೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.ಭಿತ್ತಿಶಿಲ್ಪ ಕುರಿತು ಬೋಧಿಸುವ ಹಜರತ್ ಅಲಿ ಹೇಳುವಂತೆ, ಈ ಎರಡೂ ಭಿತ್ತಿಶಿಲ್ಪಗಳು ಅಪರೂಪದ ಮಾದರಿಯವು. ಮೂಲತಃ ಮ್ಯೂರಲ್‌ಗಳನ್ನು ಅನುಪಯುಕ್ತ ವಸ್ತುಗಳಿಂದಲೇ ಮಾಡುವುದು ವಾಡಿಕೆ. ಅಂತೆಯೇ, ಕಾಲೇಜಿನಲ್ಲಿ ಕೆಲಸಕ್ಕೆ ಬಾರದ ವಸ್ತುಗಳು ಎಂದು ಮೂಲೆಗುಂಪಾಗಿದ್ದ, ಅಟ್ಟ ಸೇರಿದ್ದ ವಸ್ತುಗಳನ್ನೇ ಬಳಸಿ `ಮೀನು~ ಮತ್ತು `ಮಡಕೆ~ಗಳನ್ನು ರೂಪಿಸಲಾಗಿದೆ.ಈ ಎರಡೂ ಭಿತ್ತಿಶಿಲ್ಪಗಳು ಹೊರಾಂಗಣ ಶಿಲ್ಪಗಳು. ಹಾಗಾಗಿ, ಗಟ್ಟಿಯಾಗಿರುವ ವಸ್ತುಗಳಿಂದಲೇ ರೂಪಿಸಲಾಗಿದೆ. ಈ ಭಿತ್ತಿಶಿಲ್ಪಗಳು ರೂಪುಗೊಳ್ಳುವ ಹಿಂದೆ ದಾವಣಗೆರೆ ವಿವಿ ಕುಲಪತಿ ಡಾ.ಎಸ್. ಇಂದುಮತಿ ಅವರ ಪ್ರೋತ್ಸಾಹವಿದೆ. ಅವರೂ ಕಲಾವಿದೆಯಾಗಿರುವುದರಿಂದ, ಇಂತಹ ಭಿತ್ತಿಶಿಲ್ಪಗಳನ್ನು ವಿವಿ ಆವರಣದಲ್ಲಿ ಅಳವಡಿಸುವ ಯೋಚನೆಗೆ ಅನುಮತಿ ದೊರೆತಿದೆ ಎನ್ನುತ್ತಾರೆ ಹಜರತ್.ಅಂದುಕೊಂಡಿದ್ದಕ್ಕಿಂತ ಚೆಂದ...


`ನಿಜ ಹೇಳಬೇಕಂದರೆ ನಾವು ಅಂದುಕೊಂಡಿದ್ದಕ್ಕಿಂತಲೂ ಮ್ಯೂರಲ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ವೈಯಕ್ತಿಕವಾಗಿ ಕೆಲಸ ಮಾಡುವುದಕ್ಕಿಂತ ಗುಂಪಿನ ಜತೆ ಕೆಲಸ ಮಾಡುವುದು ಭಿನ್ನ ಅನುಭವ. ಒಬ್ಬೊಬ್ಬರ ಸೃಜನಶೀಲತೆ, ಕಲ್ಪನೆಯೂ ಭಿನ್ನ. ಅವೆಲ್ಲವನ್ನೂ ಪರಸ್ಪರ ಪೂರಕವಾಗಿ ಒಂದೇ ಎಳೆಯಲ್ಲಿ ಬಳಸಿ, ಮ್ಯೂರಲ್ ರೂಪಿಸುವುದು ತುಸು ಕಷ್ಟ. ಆದರೂ, `ಫಿಶ್~ ಭಿತ್ತಿಶಿಲ್ಪ ತೃಪ್ತಿಕೊಟ್ಟಿದೆ.ಸಾಮಾನ್ಯವಾಗಿ ಕಲೆಗಳಲ್ಲಿ ಅದರಲ್ಲೂ ಅಮೂರ್ತ ಪೇಂಟಿಂಗ್ ಇಲ್ಲವೇ ಭಿತ್ತಿಶಿಲ್ಪಗಳಿದ್ದರೆ ಅದು ಜನಸಾಮಾನ್ಯರಿಗೆ ಅರ್ಥವಾಗದು ಎಂಬ ಆರೋಪವಿದೆ. ಆದರೆ, ಈ ಭಿತ್ತಿಶಿಲ್ಪ ಸಹಜತೆಗೆ ಹತ್ತಿರವಾಗಿದೆ. ಹಾಗಾಗಿ, ಜನಸಾಮಾನ್ಯರಿಗೂ ಅರ್ಥವಾಗಬಲ್ಲದು~ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ ಎಂಎಫ್‌ಎ ವಿದ್ಯಾರ್ಥಿನಿ ಎನ್.ಎಸ್. ಹೇಮಲತಾ. ಶೀಘ್ರದಲ್ಲೇ ಈ ಎರಡೂ ಭಿತ್ತಿಶಿಲ್ಪಗಳನ್ನು ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಕಲಾಪ್ರೇಮಿಗಳು ಕಾಣಬಹುದು.ವಿದ್ಯಾರ್ಥಿಗಳ ತಂಡ: ಎನ್.ಎಸ್. ಹೇಮಲತಾ, ಗೀತಾರಾಣಿ, ವನಜಾಕ್ಷಿ, ಭೀಮರಾಯನ ಗೌಡ, ವಿನಾಯಕ, ದೀಪಕ್‌ವಿಜಯ್, ಲೋಕೇಶ್, ಕೆ. ಮಂಜುನಾಥ, ಗಿರೀಶ, ಮಧುಸೂದನ, ಎಂ.ಜಿ. ವಿನಯ್ ಮತ್ತು ಪಿ.ಆರ್. ಮಂಜುನಾಥ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.