ಸೋಮವಾರ, ಏಪ್ರಿಲ್ 12, 2021
24 °C

ಕ್ಯಾಂಪ್ ಕಲಿಸಿದ ಪಾಠ

ಡಾ. ಭಾಗ್ಯಲಕ್ಷ್ಮಿ ವಿ. ಭಟ್ Updated:

ಅಕ್ಷರ ಗಾತ್ರ : | |

ಮೇಡಂ ನಾನು ಎರಡೇ ಎರಡು ಹಲಸಿನ ಹಣ್ಣು ತಿಂದಿದ್ದೆ (ತೊಳೆಯಲ್ಲ) ಎಂದು ಅವರು ಹೇಳಿದಾಗ, ಅವರಿಗೆ ಹೊಟ್ಟೆನೋವು ಬಂದದ್ದು ಯಾಕೆ ಎಂಬುದು ನನಗೆ ಅರ್ಥವಾಗಿತ್ತು!     

ಕ್ಲಿನಿಕ್ ಇಟ್ಟ ಆರಂಭದ ದಿನಗಳು. ಮೆಡಿಕಲ್ ಕ್ಯಾಂಪ್‌ಗಳಲ್ಲಿ ರೋಗಿಗಳನ್ನು ಮಾತನಾಡಿಸಿ ಗೊತ್ತಿತ್ತು. ಹಳ್ಳಿಗಳಲ್ಲೇ ಹೆಚ್ಚು ಕ್ಯಾಂಪ್‌ಗಳು ಇರುತ್ತಿದ್ದುದರಿಂದ ಕ್ಲಿನಿಕ್‌ಗೆ ಬರುವ ರೋಗಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಅರಿಯಲು ನನಗೆ ಹೆಚ್ಚು ಅನುಕೂಲವಾಯ್ತೇನೋ?

ನಾನು ಕ್ಲಿನಿಕ್ ಇಟ್ಟಿದ್ದು ಜಕ್ಕಸಂದ್ರ ಎಂಬ ಹಳ್ಳಿಯಲ್ಲಿ. ಆಯುರ್ವೇದದಲ್ಲಿ ಔಷಧಿಗಿಂತ ದಿನಚರ್ಯೆಗೇ ಹೆಚ್ಚು ಮಹತ್ವ. ಹಾಗಾಗಿ ಎಲ್ಲ ರೋಗಿಗಳ ದಿನಚರ್ಯೆ ಕೇಳುವುದನ್ನು ರೂಢಿ ಮಾಡಿಕೊಂಡಿದ್ದೆ. ಕ್ಯಾಂಪ್‌ನಲ್ಲಿದ್ದಾಗ ನಮ್ಮ ಗುರುಗಳು ಬೈಯ್ಯುತ್ತಿದ್ದರು `ತಲೆಗೆಲ್ಲ ಒಂದೇ ಮಂತ್ರ ಅನ್ನೋ ಹಾಗೆ, ಬೆಳಿಗ್ಗೆ ಸ್ನಾನಕ್ಕೆ ಮೊದ್ಲು ಎಣ್ಣೆ ಹಚ್ಬೇಕು, ಊಟದಲ್ಲಿ ತುಪ್ಪ ಇರ್ಬೇಕು ಅಂತೀರಲ್ಲ. ಅವ್ರ ಇದನ್ನೆಲ್ಲ ಮಾಡಕ್ಕಾಗುತ್ತಾ?' ಅಂತ.

ಇದರಿಂದ ನನ್ನ ರೋಗಿಗಳನ್ನು ಪ್ರಶ್ನೆ ಕೇಳುವಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕು, ಯಾವ ರೀತಿ ನಾಜೂಕಿನಿಂದ ಅವರಿಂದ ಉತ್ತರ ಪಡೆಯಬೇಕು ಎಂಬುದನ್ನು ನಾನು ಚೆನ್ನಾಗಿಯೇ ಕಲಿತುಕೊಂಡಿದ್ದೆ. `ಏನಮ್ಮೋ, ವಾರಕ್ಕೊಮ್ಮೆ ಸ್ನಾನ ಮಾಡ್ತೀರಾ?' (ಅವ್ರ ಮನಸ್ಸಿಗೆ ನೋವಾಗದ ರೀತಿಯಲ್ಲಿ ಪ್ರಶ್ನೆ ಇರುತ್ತಿತ್ತು) ಆಗ ಅವರು ಖುಷಿಯಾಗಿ `ಇಲ್ಲ ಡಾಕ್ಟ್ರೇ, ವಾರಕ್ಕೆ ಎರಡು ಸಾರಿ ಮಾಡ್ತೀನಿ' ಎನ್ನುತ್ತಿದ್ದರು. ಶಾಲೆಗೆ ಹೋಗುವ ಬಹುತೇಕ ಮಕ್ಕಳು ಸಹ ವಾರಕ್ಕೊಮ್ಮೆಯೇ ಸ್ನಾನ ಮಾಡುತ್ತಿದ್ದುದು.

ಆಮೇಲೆ ನನ್ನ ಡೈಲಾಗುಗಳನ್ನೇ ಬದಲಾಯಿಸಿಕೊಂಡೆ. `ನೀವು ಯಾವತ್ತು ಸ್ನಾನ ಮಾಡ್ತೀರೋ ಆ ದಿನ ಎಣ್ಣೆ ಹಚ್ಚಿ ಹತ್ತು ನಿಮಿಷ ಬಿಡಿ' ಎಂದು ಹೇಳಲು ಶುರು ಮಾಡಿದೆ.

ಮೊದಲು ರೋಗಿಯಾಗಿ ಈಗ ಆತ್ಮೀಯರಾಗಿರುವ ಒಬ್ಬ ಮಹಿಳೆ ಆರಂಭದಲ್ಲಿ `ಹೊಟ್ಟೆನೋವು' ಎಂದು ಬಂದಿದ್ದರು. ಪರೀಕ್ಷಿಸಿದಾಗ ಎಂದಿನಂತೆ ಆಹಾರದಲ್ಲಿ ವ್ಯತ್ಯಾಸವಾಗಿತ್ತು. `ಏನು ತಿಂದ್ರಿ?' ಎಂದೆ. `ಎರಡೇ ಎರಡು ಹಲಸಿನ ಹಣ್ಣು ಡಾಕ್ಟ್ರೇ' ಎಂದರು.

ಅವರ ಪ್ರಕಾರ ಹಲಸಿನ ಎರಡು ತೊಳೆ ಎಂದರ್ಥ. ಆದರೆ ನನ್ನ ಸುತ್ತ ಕುಳಿತಿದ್ದ ವೈದ್ಯರಲ್ಲಿ ಒಬ್ಬರಾದ ಡಾ. ವೀಣಾ ಕೈ ಸನ್ನೆ ಮೂಲಕ ಹೇಳುತ್ತಿದ್ದರು `ಮೇಡಂ, ಎರಡೇ ಎರಡು ಹಲಸಿನ ಹಣ್ಣು' ಅಂತ. ಯಾಕೆಂದರೆ ಎರಡೇ ತೊಳೆಗೆ ಅಷ್ಟು ತೀವ್ರವಾದ ನೋವು ಬರಲು ಸಾಧ್ಯವಿಲ್ಲವಲ್ಲ?!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.