ಬುಧವಾರ, ಸೆಪ್ಟೆಂಬರ್ 30, 2020
23 °C

ಕ್ಯಾನ್ಸರ್ ಮುದುಡದಿರಲಿ ಮನಸ್ಸು

ಡಾ. ಕೆ.ಎಸ್.ಪವಿತ್ರ Updated:

ಅಕ್ಷರ ಗಾತ್ರ : | |

ಕ್ಯಾನ್ಸರ್ ಮುದುಡದಿರಲಿ ಮನಸ್ಸು

ಸ್ತನ ಕ್ಯಾನ್ಸರ್‌ಗೆ ಸಿಲುಕಿದ ಕಾವ್ಯ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ- `40 ವರ್ಷದ ನನಗೆ ಸ್ತನ ಕ್ಯಾನ್ಸರ್ ಬಂದಿದೆ ಎಂದು ಗೊತ್ತಾಗುವ ಮೊದಲು  ಬದುಕು ಅದೆಷ್ಟು ಸುಂದರ ಎನಿಸಿತ್ತು. ಅದೇ ಕ್ಯಾನ್ಸರ್ ಇದೆ ಎಂದು ಗೊತ್ತಾದಾಕ್ಷಣ ಆದ ಆಘಾತ ಅಷ್ಟಿಷ್ಟಲ್ಲ.ಕೀಮೊಥೆರಪಿ, ಸರ್ಜರಿ, ರೇಡಿಯೊ ಥೆರಪಿ ಎಲ್ಲ ಚಿಕಿತ್ಸೆಗಳೂ ಲಭ್ಯವಿದ್ದು, ರೋಗ ಇನ್ನೂ ಮೊದಲ ಹಂತದಲ್ಲೇ ಇದ್ದರೂ ನನ್ನ ಆತಂಕ ತಪ್ಪೀತೆ? ಕ್ಯಾನ್ಸರ್ ಮರುಕಳಿಸಿದರೆ? ನನ್ನ `ಸ್ತ್ರೀತನ~ಕ್ಕೂ ಲೈಂಗಿಕ ಜೀವನಕ್ಕೂ ಈ ಕ್ಯಾನ್ಸರ್ ತಂದ ಸಮಸ್ಯೆಗಳನ್ನು ನಾನು ಯಾರ ಜೊತೆ ಹಂಚಿಕೊಳ್ಳಬೇಕು?

 

ಜನರ ಅನುಕಂಪ- ಕುತೂಹಲದ ದೃಷ್ಟಿಯನ್ನು ಹೇಗೆ ಎದುರಿಸಲಿ?  ಔಷಧಿ- ಶಸ್ತ್ರಚಿಕಿತ್ಸೆಗಳು ಕ್ಯಾನ್ಸರ್‌ನ್ನು ನಿರ್ಮೂಲ ಮಾಡಲು ನೆರವಾಗಬಹುದು. ಆದರೆ ನನ್ನ ಮನಸ್ಸಿನ ಭಾವನೆ, ನೋವುಗಳಿಗೆ ಪರಿಹಾರ ಏನು?~ರಕ್ತದ ಕ್ಯಾನ್ಸರ್‌ನಿಂದ ಮಗಳನ್ನು ಕಳೆದುಕೊಂಡ ಗೀತಾ ತಮ್ಮ ನೋವನ್ನು ಮರೆಯಲು ಕಂಡುಕೊಂಡ ಪರಿಹಾರ ಇಲ್ಲಿದೆ.`ನಮ್ಮ ಮಗಳನ್ನು ಉಳಿಸಿಕೊಳ್ಳಲು ನಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಯಾವುದೂ ಫಲಕಾರಿಯಾಗಲಿಲ್ಲ. ಮಗಳನ್ನು ಕಳೆದುಕೊಂಡ ದುಃಖ ನನಗೆ ಸುಲಭವಾಗಿರಲಿಲ್ಲ. ಅದಕ್ಕಾಗಿ ನಾನು ಕಂಡುಕೊಂಡದ್ದು ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ, ಮಾರ್ಗದರ್ಶನ ನೀಡುವ, ಅದರ ಬಗ್ಗೆ ಅಲ್ಲಲ್ಲಿ ಸ್ವ-ಸಹಾಯ ಗುಂಪುಗಳನ್ನು ಹುಟ್ಟು ಹಾಕುವ ಒಂದು ಸಾರ್ಥಕ ಕಾರ್ಯ.

 

ನನ್ನಂತೆ ಸರಿಯಾದ ಸಮಯಕ್ಕೆ ರೋಗವನ್ನು ಗುರುತಿಸಲಾಗದೆ ಮಕ್ಕಳನ್ನು ಕಳೆದುಕೊಳ್ಳುವ ದುಃಖ ಬೇರೆ ತಾಯಂದಿರಿಗೆ ಬರದಿರಲಿ, ಈಗಿರುವ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನೂ ಬಳಸಿಕೊಂಡು ಮಕ್ಕಳ ಜೀವ ಉಳಿಯಲಿ ಎಂಬುದು ನನ್ನ ಧ್ಯೇಯ~ ಎನ್ನುತ್ತಾರೆ ಅವರು.ಹತ್ತು ವರ್ಷಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಂತೋಷದಿಂದಲೇ ತಮ್ಮ ಅನುಭವ ಹಂಚಿಕೊಳ್ಳುವ 60 ವರ್ಷದ ಉಮಾ `ಬದುಕಲು ಕೆಲವೊಮ್ಮೆ ಆಹಾರಕ್ಕಿಂತ ಕಥೆ ಹಾಗೂ ಬೇರೆಯವರ ಜೀವನ ದೃಷ್ಟಾಂತಗಳು ಮುಖ್ಯವಾಗುತ್ತವೆ. 10 ವರ್ಷದ ಹಿಂದೆ ಕ್ಯಾನ್ಸರ್‌ನಿಂದ ಬದುಕೇ ಬೇಡ ಎಂದು ತೀರ್ಮಾನಿಸುವ ಹಂತಕ್ಕೆ ಬಂದಾಗ ನನ್ನನ್ನು ಉಳಿಸಿದ್ದು ನನ್ನ ಕುಟುಂಬ ವೈದ್ಯರು ಓದುವಂತೆ ಹೇಳಿದ ಪುಸ್ತಕಗಳು. ಕ್ಯಾನ್ಸರ್‌ಗೆ ಒಳಗಾಗಿಯೂ ಉತ್ತಮ ಜೀವನ ನಡೆಸಿದ, ಈ ರೋಗದೊಂದಿಗೆ ದಿಟ್ಟವಾಗಿ ಹೋರಾಟ ನಡೆಸಿದ ಕಣ್ಣೀರು ತರಿಸುವ ಕಥಾನಕಗಳು ಅವು.

 

`ಚಿಕನ್‌ಸೂಪ್ ಫಾರ್ ದ ಸೋಲ್~ ಎಂಬ ಪುಸ್ತಕದಲ್ಲಿ ರೋಗಿಗಳ ಕುಟುಂಬದವರು ಬರೆದಿರುವ ಅನುಭವಗಳು ಜಗತ್ತಿನಲ್ಲಿ ಕ್ಯಾನ್ಸರ್ ಬಂದಿರುವುದು ನನಗೊಬ್ಬಳಿಗೇ ಅಲ್ಲ, ನನಗಿಂತ ಕಷ್ಟದಲ್ಲಿರುವವರು ಸಾವಿರಾರು ಜನ ಇದ್ದಾರೆ ಎಂಬ ಅರಿವು ಮೂಡಿಸಿತು. ನನಗೆ ಗೊತ್ತು, ಕ್ಯಾನ್ಸರ್‌ನಿಂದಾಗಿ ಇತರರಿಗಿಂತ ಬೇಗ ನನಗೆ ಸಾವು ಬರಬಹುದು. ಆದರೆ ಬದುಕಿರುವಷ್ಟು ಸಮಯ ನನ್ನದು ತಾನೇ? ಕರುಣಾಮಯಿ ವೈದ್ಯ ಮತ್ತು ಕ್ಯಾನ್ಸರ್ ಔಷಧಗಳ ಮುಖಾಂತರ ದೇವರು ನನ್ನ ಆಯುಷ್ಯದ ಮೇಲೆ ಒಂದಷ್ಟು ಬೋನಸ್ ಕೊಟ್ಟಿದ್ದಾನೆ ಅಂದುಕೊಳ್ಳುತ್ತೇನೆ ಅಷ್ಟೆ!~ಮನೋ ವೈದ್ಯಕೀಯ ಚಿಕಿತ್ಸೆ

ಈ ಮೇಲಿನ ಎಲ್ಲ ಉದಾಹರಣೆಗಳೂ ಕ್ಯಾನ್ಸರ್ ದೇಹದ ಯಾವುದೇ ಭಾಗದಲ್ಲಿ ಕಂಡುಬಂದಾಗ, ಕುಟುಂಬದ ಯಾವ ಸದಸ್ಯರಿಗಾದರೂ ಬಂದಾಗ ಅದು ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಗಮನ ಸೆಳೆಯುತ್ತವೆ. ಆಳವಾದ ಅಧ್ಯಯನಗಳು ಕ್ಯಾನ್ಸರ್‌ಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟನ್ನು ದೃಢಪಡಿಸಿವೆ. `ಸೈಕೋ ಆಂಕಾಲಜಿ~ ಎಂಬ ಹೊಸತೊಂದು ವೈದ್ಯಕೀಯ ಶಾಖೆಯನ್ನೇ ಅದು ಹುಟ್ಟುಹಾಕಿದೆ. ಅಂದರೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮನೋವೈದ್ಯಕೀಯ ಚಿಕಿತ್ಸಾ ಅಂಶಗಳನ್ನು ಅಳವಡಿಸಬೇಕಾದ ಅಗತ್ಯವನ್ನು ಅವು ಒತ್ತಿ ಹೇಳುತ್ತವೆ.ಕ್ಯಾನ್ಸರ್ ಇದೆ ಎಂಬ ವಿಷಯವನ್ನು ರೋಗಿಗೆ ಹೇಗೆ ಹೇಳಬೇಕು, ಅವರಿಗೆ ಕಾಯಿಲೆಯ ಸಂಪೂರ್ಣ ಮಾಹಿತಿಯನ್ನು ಹೇಗೆ ನೀಡಬೇಕು, ನೀಡಬೇಕೇ/ ಬೇಡವೇ, ಚಿಕಿತ್ಸೆ ಇರದಾಗ ಅಥವಾ ಸಾವು ಸಮೀಪದಲ್ಲಿದ್ದರೆ ಅದರ ಬಗ್ಗೆ ವಿವರಿಸುವುದು ಹೇಗೆ, ಚಿಕಿತ್ಸೆಯ ವಿವಿಧ ಹಂತಗಳಲ್ಲಿ ತಲೆದೋರಬಲ್ಲ ಖಿನ್ನತೆ, ಕುಸಿಯಬಲ್ಲ ಮನೋಸ್ಥೈರ್ಯ ಇವುಗಳನ್ನು ಹೇಗೆ ನಿಭಾಯಿಸಬೇಕು, ರೋಗಿಯ ಆರೈಕೆ ಮಾಡುವವರಲ್ಲಿ ಉಂಟಾಗಬಹುದಾದ ದಣಿವು, ಖಿನ್ನತೆ- ಹೀಗೆ ಈ ಎಲ್ಲ ವಿಷಯಗಳನ್ನು ವಿವರಿಸುವಲ್ಲಿ ಸೈಕೋ ಆಂಕಾಲಜಿ ಉಪಯುಕ್ತ.ಆದರೆ ನಮ್ಮ ದೇಶದಲ್ಲಿ ಸಾಮಾನ್ಯ ವೈದ್ಯರ ಸಂಖ್ಯೆಯೇ ಜನಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿಲ್ಲ. ಇನ್ನು ಮನೋವೈದ್ಯರ, ಅದರಲ್ಲೂ ಕ್ಯಾನ್ಸರ್ ಮನೋವೈದ್ಯ ಶಾಸ್ತ್ರದ ಪರಿಣತರು ಅಗತ್ಯ ಸಂಖ್ಯೆಯಲ್ಲಿ ಲಭ್ಯವಿರಲು ಸಾಧ್ಯವೇ? ಜೊತೆಗೆ ಶೇಕಡ 80ರಷ್ಟು ಕ್ಯಾನ್ಸರ್ ರೋಗಿಗಳು ವೈದ್ಯರ ಬಳಿ ಬರುವುದೇ ರೋಗ ಕೊನೆಯ ಹಂತದಲ್ಲಿದ್ದಾಗ. ಆಗ ಜೀವ ಉಳಿಸುವುದಷ್ಟೇ ಮುಖ್ಯವಾಗಿ ಔಷಧಿ, ಶಸ್ತ್ರಚಿಕಿತ್ಸೆಗಳೇ ಅಸ್ತ್ರಗಳಾದಾಗ ಮನಸ್ಸಿನ ಬಗ್ಗೆ ಚಿಂತಿಸಲು ಸಮಯವೇ ಇರಲಾರದು. ರೋಗಿಗಳು, ಅವರ ಕುಟುಂಬದವರು, ಕೊನೆಗೆ ವೈದ್ಯರ ತಂಡ ಹೀಗೆ ಎಲ್ಲರ ಗಮನವೂ ಜೀವ ಉಳಿಸುವುದರತ್ತ ಮಾತ್ರಕೇಂದ್ರೀಕೃತವಾಗುವುದು ಈ ಸಂದರ್ಭದಲ್ಲಿ ಸಹಜವೇ. ಆದರೆ ಕ್ಯಾನ್ಸರ್ ಹಂತ ಯಾವುದೇ ಇರಲಿ, ರೋಗಿಯ ಭಾವನೆಗಳ ಬಗ್ಗೆ ವೈದ್ಯ- ಸ್ವತಃ ರೋಗಿ ಇಬ್ಬರೂ ಗಮನಹರಿಸಬೇಕಾಗುತ್ತದೆ.ಚಿಕಿತ್ಸೆಯಿಂದ ಉಂಟಾಗುವ ನಿರೀಕ್ಷೆಗಳು, ಸಾವಿನ ಭಯ, ಅಡ್ಡಪರಿಣಾಮಗಳ ಭಯ, ಪ್ರತಿಕ್ರಿಯೆ ಈ ಎಲ್ಲವುಗಳ ಬಗ್ಗೆಯೂ ಚರ್ಚಿಸಬೇಕಾಗುತ್ತದೆ.  ರೋಗಿಯ ಮಾನಸಿಕ ನೆಮ್ಮದಿ, ರೋಗವನ್ನು ಒಪ್ಪಿಕೊಳ್ಳುವ ಮನೋಭಾವ ಕ್ಯಾನ್ಸರ್ ಚಿಕಿತ್ಸೆ ಫಲಕಾರಿಯಾಗುವಲ್ಲಿ ಮತ್ತು ಜೀವನದ ಗುಣಮಟ್ಟ ಹೆಚ್ಚಿಸುವಲ್ಲಿ ಸಹಾಯಕ.ಸಾವು ಅನಿವಾರ್ಯವೇ ಆದರೂ ಜೀವನದ ಗುಣಮಟ್ಟ ಸುಧಾರಣೆಯಿಂದ ಸಾವನ್ನು ಹೆಚ್ಚು ಶಾಂತಿಯುತವಾಗಿ ಮಾಡಲು ಸಾಧ್ಯ.  ಕೆಲವೊಮ್ಮೆ, ಒಂದೆರಡು ವರ್ಷಗಳ ಮಟ್ಟಿಗಾದರೂ ಸಾವನ್ನು ಮುಂದೂಡುವ ರೀತಿಯಲ್ಲಿ ರೋಗಿಯ ರೋಗ ನಿರೋಧಕ ಶಕ್ತಿಯನ್ನು ವರ್ಧಿಸಬಹುದು.ಕ್ಯಾನ್ಸರ್ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಎರಡರಲ್ಲೂ ಮಾನಸಿಕ ಸ್ಥೈರ್ಯ ಮತ್ತು ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತವೆ. ಹಲವು ಕ್ಯಾನ್ಸರ್‌ಗಳಿಗೆ ಕಾರಣವಾದ ತಂಬಾಕು ಸೇವನೆ, ವ್ಯಾಯಾಮ ಇರದ ಜೀವನ ಶೈಲಿಯ ನಿಯಂತ್ರಣವೂ ನಮ್ಮ ಕೈಯ್ಯಲ್ಲೇ ಇರುತ್ತದೆ. ಒಮ್ಮೆ ಕ್ಯಾನ್ಸರ್ ಬಂದ ನಂತರ ಅದರ ನಿಯಂತ್ರಣ ಹಾಗೂ ದೀರ್ಘಾಯುಷ್ಯ ಮನಸ್ಸಿಗೆ ಸಂಬಂಧಿಸಿದ್ದು. ಆದ್ದರಿಂದ ಕ್ಯಾನ್ಸರ್ ರೋಗಿಗಳು, ವೈದ್ಯರು, ಕುಟುಂಬದವರು ಎಲ್ಲರೂ ಕ್ಯಾನ್ಸರ್ ನಿಯಂತ್ರಣದಲ್ಲಿ ಮಾನಸಿಕ ಸ್ಥೈರ್ಯದ ಪಾತ್ರವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.