ಮಂಗಳವಾರ, ಮೇ 18, 2021
30 °C

ಕ್ರಿಕೆಟ್: ಅಂತಿಮ ಪಂದ್ಯದಲ್ಲೂ ಇಂಗ್ಲೆಂಡ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಅಂತಿಮ ಪಂದ್ಯದಲ್ಲೂ ಇಂಗ್ಲೆಂಡ್ ಜಯಭೇರಿ

ಕಾರ್ಡಿಫ್: ಸೋಲಿನೊಂದಿಗೆ ಆರಂಭಗೊಂಡು, ಕಹಿ ಅನುಭವಗಳೊಂದಿಗೆ ಮುಂದುವರಿದ ಭಾರತ ತಂಡದ ಇಂಗ್ಲೆಂಡ್ ಪ್ರವಾಸಕ್ಕೆ ಸೋಲಿನೊಂದಿಗೆ ತೆರೆಬಿದ್ದಿದೆ. ಈ ಪ್ರವಾಸದಲ್ಲಿ ಗೆಲುವಿನ ಸಿಹಿ ಅನುಭವಿಸದೆಯೇ ತವರಿಗೆ ಮರಳುವ ದುರ್ಗತಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಎದುರಾಗಿದೆ.ಶುಕ್ರವಾರ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನ ಕನಸು ಕಂಡಿತ್ತು. ಆದರೆ ಅದೂ ಭಗ್ನಗೊಂಡಿದೆ. ಕಾರ್ಡಿರ್ಫ್‌ನಲ್ಲಿ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳ ಗೆಲುವು ಪಡೆದ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು 3-0 ರಲ್ಲಿ ತನ್ನದಾಗಿಸಿಕೊಂಡಿತು.ಮತ್ತೊಂದೆಡೆ `ಮಹಿ~ ಬಳಗಕ್ಕೆ ಇಂಗ್ಲೆಂಡ್ ಪ್ರವಾಸ ದುರಂತವಾಗಿ ಪರಿಣಮಿಸಿತು. ಮೊದಲು ಬ್ಯಾಟ್ ಮಾಡಿ 304 ರನ್ ಪೇರಿಸಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ. ಸೊಗಸಾದ ಪ್ರದರ್ಶನ ನೀಡಿದ ಅಲಸ್ಟರ್ ಕುಕ್ ನೇತೃತ್ವದ ತಂಡ ಅರ್ಹ ಜಯ ಪಡೆಯಿತು. ವೃತ್ತಿಜೀವನದ ಅಂತಿಮ ಏಕದಿನ ಪಂದ್ಯವನ್ನಾಡಿದ ರಾಹುಲ್ ದ್ರಾವಿಡ್‌ಗೆ ಗೆಲುವಿನ ಉಡುಗೊರೆ ನೀಡುವಲ್ಲಿ ಸಹ ಆಟಗಾರರು ವಿಫಲರಾದರು.ಇಂಗ್ಲೆಂಡ್‌ನ ಇನಿಂಗ್ಸ್ ವೇಳೆ ಮಳೆ ಅಡ್ಡಿಪಡಿಸಿತು. ಇದರಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆಲುವಿನ ಗುರಿಯಲ್ಲಿ ಮೂರು ಸಲ ಬದಲಾವಣೆ ತರಲಾಯಿತು. ಮೊದಲು 47 ಓವರ್‌ಗಳಲ್ಲಿ 295, ಆ ಬಳಿಕ 40 ಓವರ್‌ಗಳಲ್ಲಿ 270 ರನ್‌ಗಳ ಗುರಿ ನಿಗದಿಪಡಿಸಲಾಯಿತು. ಆದರೆ 10ನೇ ಓವರ್‌ನಲ್ಲಿ ಮತ್ತೆ ಮಳೆ        ಅಡ್ಡಿಪಡಿಸಿತು. ಈ ಕಾರಣ 34 ಓವರ್‌ಗಳಲ್ಲಿ 241 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು.ಅತಿಥೇಯ ತಂಡ ಇನ್ನೂ 10 ಎಸೆತಗಳು ಉಳಿದಿರುವಂತೆಯೇ 4 ವಿಕೆಟ್‌ಗೆ 241 ರನ್ ಗಳಿಸಿ ಗೆಲುವಿನ ನಗು ಬೀರಿತು. ಅಲಸ್ಟರ್ ಕುಕ್ (50, 54 ಎಸೆತ, 5 ಬೌಂ), ಜೊನಾಥನ್ ಟ್ರಾಟ್ (63, 60 ಎಸೆತ, 3 ಬೌಂ, 2 ಸಿಕ್ಸರ್) ಗಳಿಸಿದ ಅರ್ಧಶತಕ ಮತ್ತು ಜಾನಿ ಬೈಸ್ಟೋವ್ (ಔಟಾಗದೆ 41, 21 ಎಸೆತ, 1 ಬೌಂ, 3 ಸಿಕ್ಸರ್) ಹಾಗೂ ರವಿ ಬೋಪಾರ (ಔಟಾಗದೆ 37, 22 ಎಸೆತ, 3 ಬೌಂ, 1 ಸಿಕ್ಸರ್) ತೋರಿದ ಅಬ್ಬರದ ಬ್ಯಾಟಿಂಗ್ ಇಂಗ್ಲೆಂಡ್ ಗೆಲುವಿಗೆ ಕಾರಣ.ಚೊಚ್ಚಲ ಏಕದಿನ ಪಂದ್ಯದಲ್ಲೇ ಮಿಂಚಿದ ಜಾನಿ `ಪಂದ್ಯಶ್ರೇಷ್ಠ~ ಎನಿಸಿಕೊಂಡರು. ಇಂಗ್ಲೆಂಡ್ ಗೆಲುವಿಗೆ ಕೊನೆಯ 15 ಓವರ್‌ಗಳಲ್ಲಿ 130 ರನ್‌ಗಳು ಬೇಕಿದ್ದವು. ಈ ಹಂತದಲ್ಲಿ ಭಾರತಕ್ಕೆ ಗೆಲುವು ಪಡೆಯುವ ಉತ್ತಮ ಅವಕಾಶವಿತ್ತು.ಉತ್ತಮವಾಗಿ ಆಡುತ್ತಿದ್ದ ಟ್ರಾಟ್ ಮತ್ತು ಬೆಲ್ (26) ಆರು ರನ್‌ಗಳ ಅಂತರದಲ್ಲಿ ಪೆವಿಲಿಯನ್‌ಗೆ ಮರಳಿದಾಗಲೂ ಭಾರತ ಗೆಲುವಿನ ಕನಸು ಕಂಡಿತ್ತು. ಈ ವೇಳೆ ಇಂಗ್ಲೆಂಡ್ 26 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್ ಗಳಿಸಿತ್ತು.ಆದರೆ ಜಾನಿ ಮತ್ತು ಬೋಪಾರ ಮುರಿಯದ ಐದನೇ ವಿಕೆಟ್‌ಗೆ 40 ಎಸೆತಗಳಲ್ಲಿ 75 ರನ್‌ಗಳನ್ನು ಕಲೆಹಾಕಿ ರೋಚಕ ಗೆಲುವಿಗೆ ಕಾರಣರಾದರಲ್ಲದೆ, ಭಾರತದ ಜಯದ ಕನಸನ್ನು ಪುಡಿಗಟ್ಟಿದರು. ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಎದುರಿಸಿದ ಐದನೇ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ಜಾನಿ ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.ಮೊದಲು ಬ್ಯಾಟ್ ಮಾಡಿ 300 ಕ್ಕೂ ಅಧಿಕ ರನ್ ಪೇರಿಸಿದ್ದ ಭಾರತ ಗೆಲುವಿನ ಕನಸು ಕಂಡಿತ್ತು. ಆದರೆ ಅದು ನನಸಾಗಲಿಲ್ಲ. ವಿರಾಟ್ ಕೊಹ್ಲಿ ಗಳಿಸಿದ ಶತಕವೂ ವ್ಯರ್ಥವಾಯಿತು.ಭಾರತ ಈ ಪ್ರವಾಸದಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಯಿತು. ಅಭ್ಯಾಸ ಪಂದ್ಯಗಳಲ್ಲಿ ಜಯ ಪಡೆದದ್ದು ಮಾತ್ರ `ಮಹಿ~ ಬಳಗದ ಸಾಧನೆ. ಟೆಸ್ಟ್ ಸರಣಿಯಲ್ಲಿ 0-4 ರಲ್ಲಿ ಸೋಲು ಅನುಭವಿಸಿದ್ದ ತಂಡ ಏಕೈಕ ಟ್ವೆಂಟಿ-20 ಪಂದ್ಯದಲ್ಲೂ ನಿರಾಸೆ ಅನುಭವಿಸಿತ್ತು. ಆ ಬಳಿಕ ಐದು ಪಂದ್ಯಗಳ ಏಕದಿನ ಸರಣಿಯಲ್ಲೂ ಗೆಲುವು ಮರೀಚಿಕೆಯಾಗಿಯೇ ಉಳಿದುಕೊಂಡಿತು.ಕಳೆದ ಕೆಲ ವರ್ಷಗಳಲ್ಲಿ ಭಾರತ ಅನುಭವಿಸಿದ ಅತ್ಯಂತ ಕೆಟ್ಟ ಸೋಲು ಇದಾಗಿದೆ. ಇದರ ಪರಿಣಾಮ ಐಸಿಸಿ ಏಕದಿನ ಕ್ರಿಕೆಟ್ ರ‌್ಯಾಂಕಿಂಗ್‌ನಲ್ಲಿ ತಂಡ ಐದನೇ ಸ್ಥಾನಕ್ಕೆ ಕುಸಿತ ಕಂಡಿತು.

ಸ್ಕೋರ್ ವಿವರ:

ಭಾರತ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 304

ಇಂಗ್ಲೆಂಡ್: 32.2 ಓವರ್‌ಗಳಲ್ಲಿ

 4 ವಿಕೆಟ್‌ಗೆ 241

(ಡಕ್ವರ್ಥ್ ಲೂಯಿಸ್ ನಿಯಮದಂತೆ ಗೆಲುವಿನ ಗುರಿ 34 ಓವರ್‌ಗಳಲ್ಲಿ 241)

ಅಲಸ್ಟರ್ ಕುಕ್ ಬಿ ವಿರಾಟ್ ಕೊಹ್ಲಿ  50

ಕ್ರೆಗ್ ಕೀಸ್‌ವೆಟರ್ ಎಲ್‌ಬಿಡಬ್ಲ್ಯು ಬಿ ವಿನಯ್ ಕುಮಾರ್  21

ಜೊನಾಥನ್ ಟ್ರಾಟ್ ಸಿ ಸಿಂಗ್ ಬಿ ರವೀಂದ್ರ ಜಡೇಜ  63

ಇಯಾನ್ ಬೆಲ್ ಸಿ ತಿವಾರಿ (ಸಬ್) ಬಿ ಆರ್‌ಪಿ ಸಿಂಗ್  26

ರವಿ ಬೋಪಾರ ಔಟಾಗದೆ  37

ಜಾನಿ ಬೈಸ್ಟೋವ್ ಔಟಾಗದೆ  41

ಇತರೆ: (ಲೆಗ್‌ಬೈ-1, ವೈಡ್-1, ನೋಬಾಲ್-1) 03

ವಿಕೆಟ್ ಪತನ: 1-27 (ಕೀಸ್‌ವೆಟರ್; 4.1), 2-106 (ಕುಕ್; 17.5), 3-160 (ಬೆಲ್; 24.1), 4-166 (ಟ್ರಾಟ್; 25.4).

ಬೌಲಿಂಗ್: ಆರ್. ವಿನಯ್ ಕುಮಾರ್ 6.2-0-42-1, ಆರ್‌ಪಿ ಸಿಂಗ್ 7-0-51-0, ಮುನಾಫ್ ಪಟೇಲ್ 4-0-26-1, ಆರ್. ಅಶ್ವಿನ್ 4-0-25-0, ರವೀಂದ್ರ ಜಡೇಜ 5-0-52-1, ವಿರಾಟ್ ಕೊಹ್ಲಿ 6-0-44-1

ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದಂತೆ ಇಂಗ್ಲೆಂಡ್‌ಗೆ 6 ವಿಕೆಟ್ ಜಯ ಹಾಗೂ 3-0 ರಲ್ಲಿ ಸರಣಿ ಗೆಲುವು

ಪಂದ್ಯಶ್ರೇಷ್ಠ: ಬೈಸ್ಟೋವ್; ಸರಣಿ ಶ್ರೇಷ್ಠ: ಮಹೇಂದ್ರ ಸಿಂಗ್ ದೋನಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.