ಬುಧವಾರ, ಮಾರ್ಚ್ 3, 2021
18 °C

ಕ್ರಿಕೆಟ್: ಟೆಸ್ಟ್‌ಗೆ ಮುನ್ನ ಬಲ ಹೆಚ್ಚಿಸಿಕೊಳ್ಳುವ ಆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಟೆಸ್ಟ್‌ಗೆ ಮುನ್ನ ಬಲ ಹೆಚ್ಚಿಸಿಕೊಳ್ಳುವ ಆಸೆ

ಕಿಂಗ್‌ಸ್ಟನ್, ಜಮೈಕ: ಯಶಸ್ಸಿನ ಓಟದ ನಡುವೆ ಅಲ್ಪ ಹಿನ್ನಡೆ ಅನುಭವಿಸಿದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿದೆ.ಸುರೇಶ್ ರೈನಾ ನೇತೃತ್ವದ ತಂಡ ಸತತ ಮೂರು ಗೆಲುವು ಪಡೆದ ಬಳಿಕ ನಾಲ್ಕನೇ ಏಕದಿನ ಪಂದ್ಯದಲ್ಲಿ ದೊಡ್ಡ ಅಂತರದ ಸೋಲು ಅನುಭವಿಸಿತ್ತು. ಇದೀಗ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯುವ ಅಂತಿಮ ಹಣಾಹಣಿಯಲ್ಲಿ ಗೆಲುವಿನ ಕನಸು ಕಾಣುತ್ತಿದೆ.ಏಕದಿನ ಸರಣಿಯ ಬಳಿಕ ಉಭಯ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆದ್ದರಿಂದ ಗುರುವಾರ ಗೆದ್ದು ಟೆಸ್ಟ್‌ಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿಯನ್ನು ಉಭಯ ತಂಡಗಳು ಹೊಂದಿವೆ. ಭಾರತ ಜಯ ಸಾಧಿಸಿದರೆ ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಳ್ಳಲಿದೆ.ಪ್ರವಾಸಿ ತಂಡದ ಕೆಲವು ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಸರಣಿಯ ಮೇಲೆ ಕಣ್ಣಿಟ್ಟು ಅಂತಿಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ. ಇವರ ಬದಲು ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಯುವ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ.ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಟೆಸ್ಟ್ ಪಂದ್ಯದಲ್ಲಿ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಹೆಚ್ಚುಕಡಿಮೆ ಖಚಿತ. ಸುಬ್ರಮಣ್ಯಂ ಬದರೀನಾಥ್ ಕೂಡಾ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಲು ಸ್ಪರ್ಧೆಯಲ್ಲಿದ್ದಾರೆ. ಆದರೆ ತಮಿಳುನಾಡಿನ ಈ ಬ್ಯಾಟ್ಸ್‌ಮನ್ ನಾಲ್ಕು ಏಕದಿನ ಪಂದ್ಯಗಳಲ್ಲಿ ಕೇವಲ 40 ರನ್ ಮಾತ್ರ ಕಲೆಹಾಕಿದ್ದಾರೆ.ಆದ್ದರಿಂದ ಬದರೀನಾಥ್ ಅವರಿಗೆ ಸಾಮರ್ಥ್ಯ ತೋರಿಸಿಕೊಡಲು ಈ ಪಂದ್ಯ ಕೊನೆಯ ಅವಕಾಶ ಎನಿಸಿದೆ. ದೇಸಿ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆಯನ್ನೇ ಹರಿಸುವ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಾಗ ವಿಫಲರಾಗುತ್ತಿದ್ದಾರೆ. ಜೊತೆಗೆ ಯೂಸುಫ್ ಪಠಾಣ್ ಕೂಡಾ ತಮಗೆ ದೊರೆತ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಂಡಿಲ್ಲ.ಪಠಾಣ್‌ಗೆ ಕಳೆದ ಎರಡು ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಲು ಅತ್ಯುತ್ತಮ ಅವಕಾಶ ಲಭಿಸಿತ್ತು. ಮೂರು ಮತ್ತು ನಾಲ್ಕನೇ ಏಕದಿನ ಪಂದ್ಯಗಳಲ್ಲಿ ಅವರು ಕ್ರಮವಾಗಿ 22 ಹಾಗೂ 28ನೇ ಓವರ್‌ನಲ್ಲಿ ಕ್ರೀಸ್‌ಗೆ ಆಗಮಿಸಿದ್ದರು. ಸಾಕಷ್ಟು ಓವರ್‌ಗಳು ಅವರ ಮುಂದಿದ್ದವು. ಆದರೆ ಅದರ ಲಾಭ ಎತ್ತಿಕೊಳ್ಳುವಲ್ಲಿ ಎಡವಿದ್ದರು.ಭಾರತ ತಂಡ ಅಂತಿಮ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆಯಿದೆ. ಅಮಿತ್ ಮಿಶ್ರಾ ಅವರು ಹರಭಜನ್ ಸಿಂಗ್ ಜೊತೆ ಸ್ಪಿನ್ ವಿಭಾಗಕ್ಕೆ ಬಲ ನೀಡಲಿದ್ದಾರೆ. ಮಿಶ್ರಾ ಆಡಿದ ನಾಲ್ಕು ಪಂದ್ಯಗಳಿಂದ ಒಟ್ಟು ಒಂಬತ್ತು ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಸರಣಿಯ ವೇಳೆಯೂ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಗಿಟ್ಟಿಸಲು ಅವರು ಸ್ಪರ್ಧೆಯಲ್ಲಿದ್ದಾರೆ.ಗೇಲ್‌ಗೆ ಅವಕಾಶ ಇಲ್ಲ:  ವೆಸ್ಟ್ ಇಂಡೀಸ್ ಈ ಪಂದ್ಯಕ್ಕೆ ಅಡ್ರಿಯಾನ್ ಭರತ್ ಮತ್ತು ರವಿ ರಾಂಪಾಲ್ ಅವರನ್ನು ತಂಡಕ್ಕೆ ಮತ್ತೆ ಕರೆಸಿಕೊಂಡಿದೆ. ಕಿರ್ಕ್ ಎಡ್ವರ್ಡ್ಸ್ ಮತ್ತು ಡಂಜಾ ಹಯಾಟ್ 13 ಆಟಗಾರರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಕ್ರಿಸ್ ಗೇಲ್ ಅವರನ್ನು ಈ ಪಂದ್ಯಕ್ಕೂ ಪರಿಗಣಿಸಲಾಗಿಲ್ಲ.ಕಳೆದ ಪಂದ್ಯದಲ್ಲಿ ಜಯ ದೊರೆತ ಕಾರಣ ಡೆರೆನ್ ಸಮಿ ನೇತೃತ್ವದ ತಂಡದಲ್ಲಿ ಅಲ್ಪ ಹುಮ್ಮಸ್ಸು ಕಂಡುಬಂದಿದೆ. ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿ ಸೋಲಿನ ಅಂತರವನ್ನು ತಗ್ಗಿಸುವುದು ಆತಿಥೇಯ ತಂಡದ ಗುರಿ.ತಂಡಗಳು

ಭಾರತ: ಸುರೇಶ್ ರೈನಾ (ನಾಯಕ), ಆರ್. ಅಶ್ವಿನ್, ಎಸ್.  ಬದರೀನಾಥ್, ಹರಭಜನ್ ಸಿಂಗ್, ವಿರಾಟ್ ಕೊಹ್ಲಿ, ಪ್ರವೀಣ್ ಕುಮಾರ್, ಅಮಿತ್ ಮಿಶ್ರಾ, ಮುನಾಫ್ ಪಟೇಲ್, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ವೃದ್ಧಿಮನ್ ಸಹಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ವಿನಯ್ ಕುಮಾರ್, ಮನೋಜ್ ತಿವಾರಿ, ಶಿಖರ್ ಧವನ್.ವೆಸ್ಟ್ ಇಂಡೀಸ್: ಡರೆನ್ ಸಮಿ (ನಾಯಕ), ಕಾರ್ಲ್‌ಟನ್ ಬಾಗ್, ದೇವೇಂದ್ರ ಬಿಶೂ, ಡರೆನ್ ಬ್ರಾವೊ, ಅಡ್ರಿಯಾನ್ ಭರತ್, ರವಿ ರಾಂಪಾಲ್, ಆಂಥೋಣಿ ಮಾರ್ಟಿನ್, ಕೀರನ್ ಪೊಲಾರ್ಡ್, ಕೆಮರ್   ರಾಚ್, ಆಂಡ್ರೆ ರಸೆಲ್, ಮಾರ್ಲಾನ್ ಸ್ಯಾಮುಯೆಲ್ಸ್, ರಾಮನರೇಶ್ ಸರವಣ, ಲೆಂಡ್ಲ್ ಸಿಮಾನ್ಸ್.

ಪಂದ್ಯದ ಆರಂಭ: (ಭಾರತೀಯ ಕಾಲಮಾನ) ಸಂಜೆ: 7.30ಕ್ಕೆ

ನೇರ ಪ್ರಸಾರ: ಟೆನ್ ಕ್ರಿಕೆಟ್ ಮತ್ತು ಡಿಡಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.