ಭಾನುವಾರ, ಮೇ 22, 2022
26 °C

ಕ್ರಿಕೆಟ್ ತಿರುಕನ ಟಿಕೆಟ್ ಕನಸು

ಗೋಪಾಲಕೃಷ್ಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಗೇಟುಗಳ ಮುಂದೆ ಬೆಳಿಗ್ಗೆಯಿಂದಲೇ ಕ್ಯೂ ನಿಂತರೂ ಕೊನೆಗೂ ಟಿಕೆಟ್ ಸಿಗದೇ ಸುಸ್ತಾದ ‘ಕ್ರಿಕೆಟ್ ತಿರುಕ’ನೊಬ್ಬ ಪಕ್ಕದಲ್ಲೇ ಇದ್ದ ಕಬ್ಬನ್ ಪಾರ್ಕ್ ಒಳಗೆ ಹೋದ. ಹೋಗುವ ಮೊದಲು ಎದುರಿಗಿದ್ದ ಪ್ರೆಸ್ ಕ್ಲಬ್ ಗೇಟಿನ ಕಡೆಗೂ ಒಮ್ಮೆ ದೃಷ್ಟಿ ಹಾಯಿಸಿದ. ಪರಿಚಯದ ಪತ್ರಕರ್ತರು ಕಂಡಾರೆಯೇ ಎಂದು. ಮರದ ಕೆಳಗೆ ಹಾಗೆಯೇ ಒರಗಿದ ಆತ ಕನಸು ಕಂಡ. ‘ಭಾರತ ಮತ್ತು ಇಂಗ್ಲೆಂಡ್ ನಡುವಣ ವಿಶ್ವ ಕಪ್ ಕ್ರಿಕೆಟ್ ಪಂದ್ಯವನ್ನು ತನ್ನ ಗೆಳೆಯ, ಗೆಳತಿಯರೊಡನೆ ನೋಡುತ್ತಿದ್ದಾನೆ. ಕೈಯಲ್ಲಿ ಬಿಯರ್ ಮಗ್ ಹಿಡಿದುಕೊಂಡೇ ಸಚಿನ್ ಹೊಡೆದ ಬೌಂಡರಿಗೆ ಕುಣಿಯುತ್ತಿದ್ದಾನೆ.ಬರೀ ಬರ್ಮುಡಾ ಚಡ್ಡಿಯಲ್ಲಿ ಇರುವ ಆತನ ಜೊತೆ ಈಜುಡುಗೆಯಲ್ಲಿರುವ ಗೆಳತಿಯೂ ಆತನ ಕುಣಿತಕ್ಕೆ ಹೆಜ್ಜೆ ಹಾಕುತ್ತಿದ್ದಾಳೆ. ಭಾರತ ಗೆಲುವಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಜನರ ಹರ್ಷೋದ್ಗಾರ ಎಂ.ಜಿ. ರಸ್ತೆ ತುದಿವರೆಗೂ ಕೇಳುತ್ತಿದೆ. ಬಿಯರ್ ನಿಧಾನವಾಗಿ ತನ್ನ ಕರಾಮತ್ತು ತೋರುತ್ತಿದೆ. ಸ್ವರ್ಗ ಸಮಾನ ಸುಖ ಎಂದರೆ ಇದೇ ಇರಬೇಕು’ ಎಂದು ಭಾವಿಸುತ್ತಿದ್ದಾಗಲೇ ಯಾರೋ ಕೋಲಿನಿಂದ ತಿವಿದಂತಾಗುತ್ತದೆ. ‘ಯಾರ್ರೀ ಅದು’ ಎಂದು ಕಣ್ಣುಬಿಟ್ಟು ನೋಡಿದರೆ ಪೋಲಿಸಪ್ಪ ಎಬ್ಬಿಸುತ್ತಿದ್ದಾನೆ. ಕತ್ತಲಾಯಿತು, ನಡೀರಿ ಎಂದು ಲಾಠಿಯಿಂದ ಚುಚ್ಚುತ್ತಿದ್ದಾನೆ. ತಿರುಕನ ಕ್ರಿಕೆಟ್ ಕನಸು ಭಗ್ನವಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊನಲು ಬೆಳಕು ಕಣ್ಣಿಗೆ ಕುಕ್ಕುತ್ತದೆ.ಇಂಥ ಕ್ರಿಕೆಟ್ ತಿರುಕರು ನೂರಲ್ಲ, ಸಾವಿರವಲ್ಲ, ಲಕ್ಷಾಂತರ ಮಂದಿ ಇದ್ದಾರೆ. ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ನೋಡುತ್ತ ಮಜಾ ಅನುಭವಿಸುವ ಅವರ ಕನಸು ನನಸಾಗುವುದೇ ಇಲ್ಲ. ಯಾಕೆಂದರೆ ಅವರಿಗೆ ಟಿಕೆಟ್ ಸಿಗುವುದಿಲ್ಲ. ಸಿಕ್ಕರೂ ಪೊಲೀಸರ ಚಕ್ರವ್ಯೆಹವನ್ನು ದಾಟಿ ಕ್ರೀಡಾಂಗಣದೊಳಗೆ ಹೋಗುವಷ್ಟರಲ್ಲಿ ಆತನ ಉತ್ಸಾಹ ಅರ್ಧ ಕಡಿಮೆಯಾಗಿರುತ್ತದೆ. ಪಂದ್ಯ ಮುಗಿಯುವ ಹೊತ್ತಿಗೆ ‘ಇನ್ನೊಮ್ಮೆ ಕ್ರಿಕೆಟ್ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಹೋಗುವುದಿಲ್ಲ’ ಎಂದು ಆತ ಮನಸ್ಸಿನಲ್ಲೇ ಶಪಥ ಮಾಡಿರುತ್ತಾನೆ.ಹೌದು, ಭಾರತದ ಯಾವುದೇ ಕ್ರೀಡಾಂಗಣಕ್ಕೆ ಹೋದರೂ ಇದೇ ಕಥೆ. ಅದೊಂದು ಚಿತ್ರಹಿಂಸೆ. ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕ ಅಥವಾ ಆಸ್ಟ್ರೇಲಿಯದಲ್ಲಿ ಜನರು ಎಷ್ಟೊಂದು ಖುಷಿಯಿಂದ ಪಂದ್ಯ ನೋಡುವುದನ್ನು ನಾವು ಟಿವಿಯಲ್ಲಿ ನೋಡುತ್ತೇವೆ.ಗುಂಡು ಹಾಕುತ್ತ, ಬಾರ್ಬೆಕ್ಯೂ ಮಾಡುತ್ತ ಕುಟುಂಬದವರ ಜೊತೆ ಪಿಕ್ನಿಕ್‌ನಂತೆ ಅವರು ಕ್ರಿಕೆಟ್ ಸ್ವಾರಸ್ಯವನ್ನು ಸವಿಯುತ್ತಾರೆ. (ನಮ್ಮಲ್ಲಿ ಆ ರೀತಿಯ ಓಪನ್ ಕ್ರೀಡಾಂಗಣಗಳೂ ಇಲ್ಲ.) ನಮ್ಮಲ್ಲಿ ನೀರಿನ ಬಾಟ್ಲಿಯನ್ನು ಒಳಗೆ ತೆಗೆದುಕೊಂಡು ಹೋಗಲು ಬಿಟ್ಟರೆ ನಮ್ಮ ಪುಣ್ಯ. ಅವತ್ತು ಪೊಲೀಸರು, ಸಂಸ್ಥೆ ಅಧಿಕಾರಿಗಳು ಹಿಟ್ಲರನನ್ನು ಮೀರಿಸುವ ದರ್ಪವನ್ನು ತೋರುತ್ತಾರೆ. ದುಡ್ಡು ಕೊಟ್ಟು ಟಿಕೆಟ್ ಖರೀದಿಸುವ ಪ್ರೇಕ್ಷಕ ಮೂರ್ಖನಂತಾಗುತ್ತಾನೆ. ಆದರೂ ಟಿವಿ ಕಣ್ಣು ತನ್ನ ಕಡೆ ತಿರುಗಿದಾಗ ಅದರಲ್ಲಿ ಮುಖ ತೂರಿಸಲು ಹಲ್ಲು ಕಿರಿಯುತ್ತಾನೆ.ಭಾರತದಲ್ಲಿ ಯಾವುದೇ ಅಂತರರಾಷ್ಟ್ರೀಯ ಕ್ರೀಡಾಕೂಟವನ್ನು ಮುಕ್ತ ವಾತಾವರಣದಲ್ಲಿ ನೋಡಿ ಆನಂದಿಸುವ ವಾತಾವರಣ ಕೆಟ್ಟು ಹೋಗಿ ಹಲವು ವರ್ಷಗಳಾಗಿವೆ. ಇದಕ್ಕೆ ಜನರೂ ಕಾರಣರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ತನ್ನ ಹೆಂಡತಿ ಮಕ್ಕಳೊಡನೆ ಬ್ರಿಗೇಡ್ ರೋಡ್‌ನಲ್ಲಿ ಅಥವಾ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಆರಾಮವಾಗಿ ಶಾಪಿಂಗ್ ಮಾಡುತ್ತ ಓಡಾಡಲು ಸಾಧ್ಯವೇ? ಇಲ್ಲಿ ಬೇಡ, ಮುಂಬೈನಲ್ಲೇ ಮರೀನ್ ಡ್ರೈವ್‌ನಲ್ಲಿ ಖುಷಿಯಿಂದ ಪಾನಿಪುರಿ ತಿನ್ನುತ್ತ ಓಡಾಡಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಜನರು ಮುತ್ತಿಬಿಡುತ್ತಾರೆ. ಅತಿಯಾದ ಪ್ರೀತಿಯಲ್ಲಿ ಹಿಂಸಿಸುತ್ತಾರೆ. ನಮ್ಮಲ್ಲಿ ಎಲ್ಲವೂ ಅತಿ. ಭಾರತ ಸೋಲುವಂತೆ ಕಂಡರೆ ಕೈಗೆ ಸಿಕ್ಕಿದ್ದನ್ನು ಮೈದಾನದಲ್ಲಿ ಎಸೆಯುತ್ತಾರೆ. ಗಲಾಟೆ ಮಾಡುತ್ತಾರೆ. ಬೆತ್ತದ ರುಚಿ ತಿಂದ ಮೇಲೆಯೇ ತಣ್ಣಗಾಗುತ್ತಾರೆ.ಈ ಕಿರಿಕಿರಿ ಕ್ರಿಕೆಟ್ ವರದಿಗಾರರನ್ನೂ ಬಿಡುವುದಿಲ್ಲ. 1996ರ ವಿಶ್ವ ಕಪ್‌ನಲ್ಲಿ, ಭಾರತ-ವೆಸ್ಟ್‌ಇಂಡೀಸ್ ಪಂದ್ಯದ ವರದಿಗಾಗಿ ಗ್ವಾಲಿಯರ್ ಹೋಗಿದ್ದಾಗ ಆದ ಅನುಭವ ಇದು. ಸುಮಾರು ಒಂದು ಕಿಮಿ ದೂರದಲ್ಲಿ ಮೊದಲ ಗೇಟ್. ಪೊಲೀಸರು, ಮಿಲಿಟರಿಯವರಿಂದ ಬಿಗಿ ರಕ್ಷಣಾ ವ್ಯವಸ್ಥೆ ಇತ್ತು. ಮೈಯೆಲ್ಲ ತಡವಿ, ಲ್ಯಾಪ್‌ಟಾಪ್ ಚೆಕ್ ಮಾಡಿದ ಮೇಲೆ ಬ್ಯಾಗ್‌ನಲ್ಲಿ ಸಿಗರೇಟು ಮತ್ತು ಲೈಟರ್ ಸಿಕ್ಕಿತು. ಸಿಗರೇಟು ಬಿಟ್ಟು ಲೈಟರ್ ತೆಗೆದುಕೊಂಡ ಅಧಿಕಾರಿ ಒಳಗೆ ಹೋಗಬಹುದು ಎಂದ. ಅರೆ, ಸಿಗರೇಟು ಬಿಟ್ಟ ಮೇಲೆ ಲೈಟರ್ ಯಾಕೆ ಕೊಡುವುದಿಲ್ಲ ಎಂದು ಕೇಳಿದಾಗ, ‘ಅದು ಹಾಗೆಯೇ. ಅದನ್ನು ಹೊತ್ತಿಸಲು ಬೆಂಕಿ ಬೇಕು ತಾನೆ? ಅದನ್ನು ನಾವು ಬಿಡುವುದಿಲ್ಲ’ ಎಂದು ಆ ಅಧಿಕಾರಿ ದರ್ಪದಿಂದ ಹೇಳಿದ. ಒಳಗೆ ಹೋದರೆ ಎಲ್ಲರೂ ಆರಾಮವಾಗಿ ಸಿಗರೇಟು ಸೇದುತ್ತಿ ದ್ದಾರೆ. ಅವರೆಲ್ಲ ಹೇಗೆ ಬೆಂಕಿಪೊಟ್ಟಣ ಒಳಗೆ ದಾಟಿಸಿದರು ಎಂಬ ಯೋಚನೆ ಮೂಡಿದರೂ, ಆ ರಕ್ಷಣಾ ವ್ಯವಸ್ಥೆ ಎಷ್ಟು ದುರ್ಬಲ ಹಾಗೂ ಹಾಸ್ಯಾಸ್ಪದ ಎನಿಸಿತು.ಇನ್ನು ಕ್ರಿಕೆಟ್ ಪಂದ್ಯಗಳಿಗೆ ಟಿಕೆಟ್ ಪಡೆಯು ವುದೂ ಒಂದು ದೊಡ್ಡ ಸಾಹಸವೇ ಆಗಿರುತ್ತದೆ. ಈಗೆಲ್ಲ ಆನ್‌ಲೈನ್ ಮೇಲೆ ಟಿಕೆಟ್ ಮಾರಲಾಗು ತ್ತದೆ. ಮೊದಲೆಲ್ಲ ಕ್ಯೂ ನಿಂತು ತೆಗೆದುಕೊಳ್ಳ ಬೇಕು. ಅಥವಾ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳಿಗೆ ಸಲಾಮು ಹೊಡೆಯಬೇಕಿತ್ತು. ಅಥವಾ ಕಾಳಸಂತೆಯಲ್ಲಿ ಖರೀದಿಸಬೇಕಿತ್ತು. ಈಗಲೂ ಕಾಳಸಂತೆಯಲ್ಲಿ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತದೆ.

ಸಾಮಾನ್ಯವಾಗಿ ಶೇಕಡಾ 40ರಿಂದ 50ರಷ್ಟು ಟಿಕೆಟ್‌ಗಳನ್ನು ಮಾತ್ರ ಸಾರ್ವಜನಿಕರಿಗೆ ಮಾರಲಾಗುತ್ತದೆ. ಪ್ರಾಯೋಜಕರು, ರಾಜಕಾರಣಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಮಾಜಿ ಆಟಗಾರರು, ಮಂಡಳಿ ಅಧಿಕಾರಿಗಳು ಹೀಗೆ ಸಾವಿರಾರು ಜನರಿಗೆ ಪಾಸುಗಳನ್ನು ಕೊಡಬೇಕಾ ಗುತ್ತದೆ. ಸಾರ್ವಜನಿಕರಿಗೆ ಮಾರಬೇಕಾದ ಟಿಕೆಟ್‌ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಿಡಕಿ ತೆರೆಯುವ ಮೊದಲೇ ಮಾಯವಾಗಿರುತ್ತವೆ. ಅವು ಕಾಳಸಂತೆಯಲ್ಲಿ ಸಿಗುತ್ತವೆ. ನಿಜವಾದ ಕ್ರಿಕೆಟ್‌ಪ್ರೇಮಿ ನಿರಾಶನಾಗುವ ಸಾಧ್ಯತೆಯೇ ಹೆಚ್ಚು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, 1993ರಲ್ಲಿ ನಡೆದ ಭಾರತ-ಇಂಗ್ಲೆಂಡ್ ಪಂದ್ಯದ ಸಮಯ ದಲ್ಲಿ ಹೀಗೆಯೇ ಆಯಿತು. ನಕಲಿ ಟಿಕೆಟ್‌ಗಳ ಹಾವಳಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಮರ್ಯಾದೆ ಯನ್ನೇ ಹಾಳು ಮಾಡಿತು. ನಿಜವಾದ ಟಿಕೆಟ್ ಹೊಂದಿದವನು ಕ್ರೀಡಾಂಗಣದೊಳಗೆ ಹೋಗಲು ಆಗಲಿಲ್ಲ. ದೊಡ್ಡ ಗಲಾಟೆಯೇ ಆಯಿತು. ಲಾಠಿ ಪ್ರಹಾರದಲ್ಲಿ ನೂರಾರು ಮಂದಿ ಪೆಟ್ಟು ತಿಂದರು. ಒಳಗೆ ಹೋಗಲಾಗದ ಸಾವಿರಾರು ಜನರಿಗೆ ಮರುದಿನ ಹಣ ವಾಪಸ್ಸು ಕೊಡಲಾಯಿತು. ಆದರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿಲ್ಲ. ಕ್ರಿಕೆಟ್ ಜಾತ್ರೆಯಲ್ಲಿ ಉಂಡವನೇ ಜಾಣ ಎಂಬ ಗಾದೆ ಪ್ರಚಲಿತಕ್ಕೆ ಬಂದು ಬಹಳ ವರ್ಷಗಳಾಗಿವೆ.ನಿಜ ಹೇಳಬೇಕೆಂದರೆ, ಕ್ರಿಕೆಟ್ ಪಂದ್ಯವನ್ನು ಟಿವಿಯಲ್ಲಿ ನೋಡುವುದೇ ಚೆಂದ. ಬ್ಯಾಟು ಚೆಂಡಿನ ಸೆಣಸಾಟವನ್ನು ಎಲ್ಲ ಕೋನಗಳಿಂದಲೂ ನೋಡಬಹುದು. ಮನೆಯಲ್ಲಿ ಅನುಮತಿ ಸಿಕ್ಕರೆ ಮೈದಾನದ ಮಸ್ತಿಯನ್ನು ಮನೆಯಲ್ಲೂ ಮಾಡ ಬಹುದು. ಆದರೆ ಗುಂಪಿನಲ್ಲಿ ಮೋಜು ಮಾಡುವ ಸುಖವೇ ಬೇರೆ ಎಂದು ಭಾವಿಸುವ ಜನರು ಎಲ್ಲ ರೀತಿಯ ಕಿರಿಕಿರಿಗೆ ತಯಾರಾಗಿರ ಬೇಕು. ಎರಡೂ ಇಲ್ಲವಾದರೆ ಹೇಗೂ ಕಬ್ಬನ್ ಪಾರ್ಕ್ ಇದ್ದೇ ಇದೆ, ಕನಸು ಕಾಣಲು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.