ಬುಧವಾರ, ಮಾರ್ಚ್ 29, 2023
32 °C

ಕ್ರಿಕೆಟ್: ಭಾರತ ತಂಡದ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್: ಭಾರತ ತಂಡದ ಪರದಾಟ

ಸೆಂಚೂರಿಯನ್: ಅಗ್ರಪಟ್ಟದ ತಂಡ ಭಾರತವೀಗ ಸೋಲು ತಪ್ಪಿಸಿಕೊಳ್ಳಲು ಪವಾಡವೇ ನಡೆಯಬೇಕು. ಅಂತಹ ಪರಿಸ್ಥಿತಿಗೆ ದೋನಿ ಪಡೆ ಬಂದು ಸಿಲುಕಿದೆ. ಇದಕ್ಕೆ ಕಾರಣ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಅಮೋಘ ಪ್ರದರ್ಶನ. ಸೂಪರ್‌ಸ್ಪೋರ್ಟ್ ಪಾರ್ಕ್ ಅಂಗಳದಲ್ಲಿ ಗ್ರೇಮ್ ಸ್ಮಿತ್ ಪಡೆಯ ದರ್ಬಾರಕ್ಕೆ ಪ್ರವಾಸಿಗರು ದಿಕ್ಕೆಟ್ಟು ಹೋಗಿದ್ದಾರೆ. ಇಲ್ಲಿ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 484 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರುವ ದಕ್ಷಿಣ ಆಫ್ರಿಕಾ ಪೂರ್ಣ ಪಾರಮ್ಯ ಸಾಧಿಸಿದೆ.ಆದರೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 44.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 190 ರನ್ ಸೇರಿಸಿದೆ. ಆತಿಥೇಯ ತಂಡದ ಮೊದಲ ಇನಿಂಗ್ಸ್ ಮೊತ್ತ ದಾಟಿ ನಿಲ್ಲಲು ಇನ್ನೂ 294 ರನ್ ಗಳಿಸಬೇಕಾಗಿದೆ. ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಭರ್ಜರಿ ಆಟದ ಮೂಲಕ ತಿರುಗೇಟು ನೀಡಲು ಪ್ರಯತ್ನಿಸಿದರು. ಆದರೆ ದಿನದಾಟ ಮುಗಿಯಲು ಕೆಲವೇ ಓವರ್‌ಗಳು ಬಾಕಿಯಿದ್ದಾಗ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು ಭಾರತ ಅಪಾಯದ ಮಡುವಿನಲ್ಲಿ ಸಿಲುಕಿದೆ.ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗಂಭೀರ್ (80; 124 ಎಸೆತ, 10 ಬೌಂಡರಿ) ಹಾಗೂ ಸೆಹ್ವಾಗ್ (63; 79 ಎಸೆತ, 9 ಬೌಂಡರಿ, 1 ಸಿಕ್ಸ್) ವೇಗದ ಆಟಕ್ಕೆ ಮೊರೆ ಹೋದರು. ಇವರಿಬ್ಬರು ಮೊದಲ ವಿಕೆಟ್‌ಗೆ 137 ರನ್ ಸೇರಿಸಿದಾಗ ಕೊಂಚ ಭರವಸೆ ಮೂಡಿತ್ತು. ಆದರೆ 33 ರನ್‌ಗಳ ಅಂತರದಲ್ಲಿ ಇವರಿಬ್ಬರು ಔಟ್ ಆದರು. ಬಳಿಕ ರಾಹುಲ್ ದ್ರಾವಿಡ್ (ಬ್ಯಾಟಿಂಗ್ 28) ಹಾಗೂ ನೈಟ್ ವಾಚ್‌ಮನ್ ಇಶಾಂತ್ ಶರ್ಮ ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ.ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ರನ್‌ಗಳ ಹೊಳೆಯನ್ನೇ ಹರಿಸಿತು. ಎದುರಾಳಿಯನ್ನು ನಿಯಂತ್ರಿಸಲು ಭಾರತದ ಬೌಲರ್‌ಗಳು ನಡೆಸಿದ ಯಾವುದೇ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಪರಿಣಾಮ ಸ್ಮಿತ್ ಪಡೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 130.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 620 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಮೂರನೇ ದಿನದ ವಿಶೇಷವೆಂದರೆ ಜಾಕ್ ಕಾಲಿಸ್ ಅವರ ಚೊಚ್ಚಲ ದ್ವಿಶತಕ ಹಾಗೂ ಎಬಿ ಡಿವಿಲಿಯರ್ಸ್ ಕೇವಲ 75 ಎಸೆತಗಳಲ್ಲಿ ಗಳಿಸಿದ ಶತಕ. ಇದು ದಕ್ಷಿಣ ಆಫ್ರಿಕಾ ಪರ ದಾಖಲೆ ಕೂಡ. ಈ ಹಿಂದೆ ಈ ದೇಶದ ಜಾಂಟಿ ರೋಡ್ಸ್. ಡೆನಿಸ್ ಲಿಂಡ್ಸೆ ಹಾಗೂ ಶಾನ್ ಪೊಲಾಕ್ 96 ಎಸೆತಗಳಲ್ಲಿಶತಕ ಗಳಿಸಿದ್ದರು.140 ರನ್ ಗಳಿಸಿದ ಹಾಶೀಮ್ ಆಮ್ಲಾ ಅವರನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸುವಲ್ಲಿ ವೇಗಿ ಇಶಾಂತ್ ಶರ್ಮ ಯಶಸ್ವಿಯಾದರು. ಆದರೆ ನಾಲ್ಕನೇ ವಿಕೆಟ್‌ಗೆ ಜೊತೆಗೂಡಿದ ಕಾಲಿಸ್ (ಔಟಾಗದೆ 201; 270 ಎಸೆತ, 15 ಬೌಂಡರಿ, 5 ಸಿಕ್ಸರ್) ಹಾಗೂ ಡಿವಿಲಿಯರ್ಸ್ (129; 112 ಎಸೆತ, 12 ಬೌಂಡರಿ, 5 ಸಿಕ್ಸ್) ತಡೆಗೋಡೆಯಾದರು. ಇವರಿಬ್ಬರು 224 ರನ್ ಕಲೆಹಾಕಿದರು.ಸ್ಕೋರು ವಿವರ:ಭಾರತ ಮೊದಲ ಇನಿಂಗ್ಸ್: 38.4 ಓವರ್‌ಗಳಲ್ಲಿ 136

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 130.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 620 ಡಿಕ್ಲೇರ್ಡ್

(ಶುಕ್ರವಾರ 87 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 366)

ಹಾಶೀಮ್ ಆಮ್ಲಾ ಸಿ ಎಂ.ಎಸ್.ದೋನಿ ಬಿ ಇಶಾಂತ್ ಶರ್ಮ  140

ಜಾಕ್ ಕಾಲಿಸ್ ಔಟಾಗದೆ  201

ಎಬಿ ಡಿವಿಲಿಯರ್ಸ್ ಸಿ ಎಂ.ಎಸ್.ದೋನಿ ಬಿ ಇಶಾಂತ್ ಶರ್ಮ  129

ಇತರೆ (ಬೈ-2, ಲೆಗ್‌ಬೈ-3. ವೈಡ್-2, ನೋಬಾಲ್-4)  11

ವಿಕೆಟ್ ಪತನ: 1-111 (ಸ್ಮಿತ್; 26.3); 2-166 (ಪೀಟರ್ಸನ್; 40.1); 3-396 (ಆಮ್ಲಾ; 92.3); 4-620 (ಡಿವಿಲಿಯರ್ಸ್; 130.1).

ಬೌಲಿಂಗ್: ಎಸ್.ಶ್ರೀಶಾಂತ್ 24-1-97-0 (ನೋಬಾಲ್-2, ವೈಡ್-1), ಇಶಾಂತ್ ಶರ್ಮ 27.1-2-120-2, ಜೈದೇವ್ ಉನದ್ಕತ್ 26-4-101-0 (ನೋಬಾಲ್-2), ಹರಭಜನ್ ಸಿಂಗ್ 36-2-169-2, ಸುರೇಶ್ ರೈನಾ 7-0-77-0, ಸಚಿನ್ ತೆಂಡೂಲ್ಕರ್ 10-1-51-0 (ವೈಡ್-1).

ಭಾರತ ಎರಡನೇ ಇನಿಂಗ್ಸ್ 44.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 190

ಗೌತಮ್ ಗಂಭೀರ್ ಎಲ್‌ಬಿಡಬ್ಲ್ಯು ಬಿ ಡೆಲ್ ಸ್ಟೇಯ್ನೆ  80

ವೀರೇಂದ್ರ ಸೆಹ್ವಾಗ್ ಸಿ ಗ್ರೇಮ್ ಸ್ಮಿತ್ ಬಿ ರ್ಯಾನ್ ಹ್ಯಾರಿಸ್  63

ರಾಹುಲ್ ದ್ರಾವಿಡ್ ಬ್ಯಾಟಿಂಗ್  28

ಇಶಾಂತ್ ಶರ್ಮ ಬ್ಯಾಟಿಂಗ್  07

ಇತರೆ (ಬೈ-8, ಲೆಗ್‌ಬೈ-1, ವೈಡ್-1, ನೋಬಾಲ್-2)  12

ವಿಕೆಟ್ ಪತನ: 1-137 (ಸೆಹ್ವಾಗ್; 29.3); 2-170 (ಗಂಭೀರ್; 39.2).

ಬೌಲಿಂಗ್: ಡೆಲ್ ಸ್ಟೇಯ್ನಾ 12-4-38-1 (ವೈಡ್-1), ಮಾರ್ನ್ ಮಾರ್ಕೆಲ್ 11-1-38-0 (ನೋಲ್-1), ಲೋನ್ವಬೊ ಸೊಸುಬೆ 9.1-1-48-0, ಪಾಲ್ ಹ್ಯಾರಿಸ್ 8-0-34-1, ಜಾಕ್ ಕಾಲಿಸ್ 4-1-23-0 (ನೋಬಾಲ್-1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.