ಭಾನುವಾರ, ಜನವರಿ 19, 2020
29 °C

ಕ್ರೀಡಾಂಗಣದಲ್ಲಿ ಮಾನವತೆಯ ಸೆಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೆಲ್ಸನ್‌ ಮಂಡೇಲಾ ಅವರು ಕ್ರೀಡಾಲೋಕದಲ್ಲಿನ್ನು ಅಚ್ಚಳಿಯದ ನೆನಪು. ಕ್ರೀಡಾ ಚಟುವಟಿಕೆಗಳನ್ನು ಕೇವಲ ‘ಫಿಟ್‌ನೆಸ್‌’ ಅಥವಾ ಸೋಲು ಗೆಲುವುಗಳ ಸೀಮಿತ ಚೌಕಟ್ಟಿನ ಲ್ಲಿಡದೆ, ಅವುಗಳನ್ನು ಜನಾಂಗೀಯ ಭೇದಭಾವಗಳ  ಗೋಡೆ ಒಡೆಯುವ ಆಂದೋಲನದಂತೆ ಪರಿಭಾವಿಸಿ ದವರು ನೆಲ್ಸನ್‌ ಮಂಡೇಲ.‘ಕ್ರೀಡಾ ಚಟುವಟಿಕೆಗಳು ವಿಭಿನ್ನ ಸಂಸ್ಕೃತಿ, ಜನಾಂಗಗಳ ಜನರನ್ನು ಒಗ್ಗೂಡಿಸಿ ಮಾನವತೆಯ ಮಹಾ ಪ್ರವಾಹದಲ್ಲಿ ಕೊಂಡೊಯ್ಯುತ್ತವೆ’ ಎಂದು ಮಂಡೇಲ ಎರಡು ದಶಕಗಳ ಹಿಂದೆಯೇ ನುಡಿದಿದ್ದರು. ಅವರ ನೇತೃತ್ವದ ಆಂದೋಲನ ವರ್ಣಭೇದ ನೀತಿ ಅನುಸರಿಸುತ್ತಿದ್ದ ಶ್ವೇತ ವರ್ಣೀಯ ಆಡಳಿತ ಗಾರರನ್ನು ಕೆಳಗಿಳಿಸಿತು, ನಿಜ. ಆದರೆ ನಂತರ ಕ್ರೀಡಾಂಗಣದಲ್ಲಿ ಬಿಳಿಯರು ಮತ್ತು ಕರಿಯರನ್ನೆಲ್ಲಾ ಒಗ್ಗೂಡಿಸಿ ಸ್ನೇಹದ ಮಧುರ ಬೆಸುಗೆಯಾಗಿ ಮಂಡೇಲಾ ಬದುಕಿದರು.ದಕ್ಷಿಣ ಆಫ್ರಿಕಾದ ಅಧಿಕಾರದ ಚುಕ್ಕಾಣಿ ಹಿಡಿದ ಮಂಡೇಲಾ ಮೊದಲಿಗೆ ದೇಶದಾದ್ಯಂತ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದರು.

1995ರಲ್ಲಿ ರಗ್ಬಿ ವಿಶ್ವಕಪ್‌ ಸಂಘಟಿಸುವಲ್ಲಿ ಮಂಡೇಲ ಅವರದೇ ಮುಖ್ಯ ಪಾತ್ರ. ಅದರ ಮರುವರ್ಷವೇ ಆಫ್ರಿಕಾ ದೇಶಗಳ ನಡುವಣ ‘ಆಫ್ರಿಕಾ ಕಪ್‌’ ಫುಟ್‌ಬಾಲ್‌ ಟೂರ್ನಿ ನಡೆಸಿದರು.ಇವರ ಪ್ರಯತ್ನದ ಫಲವಾಗಿಯೇ 2003ರಲ್ಲಿ ಕ್ರಿಕೆಟ್‌ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿತ್ತು. ಇವರು ವಿಶ್ವಕಪ್‌ ಫುಟ್‌ಬಾಲ್‌ಗೆ ಆತಿಥ್ಯ ವಹಿಸುವುದಕ್ಕೆ ಸಂಬಂಧಿಸಿದಂತೆ ನಡೆಸಿದ್ದ ಪ್ರಯತ್ನಗಳಂತೂ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಇವರು 2010ರ ವಿಶ್ವಕಪ್‌ ಫುಟ್‌ಬಾಲ್‌ ಸಂಘಟಿಸುವುದಕ್ಕೆ ಸಂಬಂಧಿಸಿದಂತೆ ‘ಬಿಡ್ಡಿಂಗ್‌’ನಲ್ಲಿ ಗೆದ್ದ ದಿನ ಹದಿ ಹರೆಯದ ತರುಣನಂತೆ ಕುಣಿದಿದ್ದರು. ಆಗ ಫಿಫಾ ಅಧ್ಯಕ್ಷರಾಗಿದ್ದ ಸೆಪ್‌ ಬ್ಲಾಟರ್‌ ಅವರು ಇದಕ್ಕೆ ಸಂಬಂಧಿಸಿದ ಲಕೋಟೆಯನ್ನು ತಂದು ಮಂಡೇಲಾ ಕೈಗಿತ್ತಾಗ ಮಂಡೇಲ ಅವರು ಬ್ಲಾಟರ್‌ ಅವರನ್ನು ಅಪ್ಪಿಕೊಂಡು ಆನಂದಭಾಷ್ಪ ಸುರಿಸಿದ್ದನ್ನು ಟೆಲಿವಿಷನ್‌ನಲ್ಲಿ ಅಂದು ಜನ ನೋಡಿದ್ದರು.2010ರಲ್ಲಿ ವಿಶ್ವಕಪ್‌ ಫುಟ್‌ಬಾಲ್‌ ನಡೆದಾಗ ದಕ್ಷಿಣ ಆಫ್ರಿಕದಾದ್ಯಂತ ಬಿಳಿಯರು, ಕರಿಯರೆನ್ನದೆ ಎಲ್ಲರೂ ಒಗ್ಗೂಡಿ ಆ ಕೂಟದ ಯಶಸ್ಸಿಗೆ ದುಡಿದಿದ್ದರು. ಆ ವರ್ಷ ಜುಲೈ 11ರಂದು ಹಾಲೆಂಡ್‌ ಮತ್ತು ಸ್ಪೇನ್‌ ನಡುವಣ ಫೈನಲ್‌ ಪಂದ್ಯ ನಡೆಯುವುದನ್ನು ವೀಕ್ಷಿಸಲು ಮಂಡೇಲ ಅವರು ಗಾಲಿಕುರ್ಚಿಯಲ್ಲೇ ಸಾಕರ್‌ಸಿಟಿಗೆ ತೆರಳಿದ್ದರು. ತೀವ್ರ ಅಸ್ವಸ್ಥರಾಗಿದ್ದ ಅವರು ಹಲವು ನಿಮಿಷ ಕ್ರೀಡಾಂಗಣದಲ್ಲಿದ್ದರು.ಶತಮಾನದ ಕಾಲ ವರ್ಣಭೇದದ ಹಾಲಾಹಲದ ಕುದಿಯುವಿಕೆ ಕಂಡಿದ್ದ ದಕ್ಷಿಣ ಆಫ್ರಿಕಾದಲ್ಲಿ ಅಂದು ಕ್ರೀಡಾಂಗಣದಲ್ಲಿ ಕಿಕ್ಕಿರಿದಿದ್ದ ಕರಿಯರು ಬಿಳಿಯರೆಲ್ಲರೂ ಎದ್ದು ನಿಂತು ಪರಸ್ಪರ ಒಕ್ಕೊರಲಿನಿಂದ ‘ಮಂಡೇಲ... ಮಂಡೇಲ...’ ಎಂದಿದ್ದರು. ಅಲ್ಲಿ ವಿಶ್ವಕಪ್‌ ಯಶಸ್ಸು ಕಂಡಿತ್ತು.

ಕ್ರೀಡಾ ಚಟುವಟಿಕೆಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿದ್ದ ಮಾನವತಾವಾದಿ ಮಂಡೇಲಾ ತಮ್ಮ ಜೀವಿತಾವಧಿಯಲ್ಲಿ ಪಾಲ್ಗೊಂಡಿದ್ದ ಕೊನೆಯ ಪ್ರಮುಖ ಸಾರ್ವಜನಿಕ ಸಭೆ ಅದು.ತಮಗೆ ಬಹಳ ಖುಷಿಯಾದಾಗ ಅಥವಾ ದುಃಖವಾದಾಗ ಮಂಡೇಲ ಮೈದಾನಕ್ಕೆ ಹೋಗುತ್ತಿದ್ದರು. ಮೈಮನಸ್ಸು ದಣಿಯುವಷ್ಟು ಫುಟ್‌ಬಾಲ್‌ ಆಡುತ್ತಿದ್ದರೆನ್ನುವುದು ಅವರ ಬದುಕಿನ ಕಥೆ ಓದಿದಾಗ ಗೊತ್ತಾಗುತ್ತದೆ. ರಾಬಿನ್‌ ದ್ವೀಪದಲ್ಲಿ ಅವರು ದಶಕಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾಗ ಅಲ್ಲಿ ಸಹ ಕೈದಿಗಳ ತಂಡ ಕಟ್ಟಿಕೊಂಡು ಫುಟ್‌ಬಾಲ್‌ ಆಡುತ್ತಿದ್ದರಂತೆ.ತಮ್ಮ ಬಿಡುವಿನ ವೇಳೆಯಲ್ಲಿ ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುವ ಫುಟ್‌ ಬಾಲ್‌ ಟೂರ್ನಿಯ ಪಂದ್ಯಗಳನ್ನು ಟೆಲಿವಿಷನ್‌ನಲ್ಲಿ ನೋಡುತ್ತಾ ಖುಷಿ ಪಡುತ್ತಿದ್ದರು. ಫುಟ್‌ಬಾಲ್‌ ಆಟವನ್ನು ಸಂಗೀತದಂತೆ ಅನುಭವಿಸುತ್ತಿದ್ದ   ಅವರು, ಕ್ರೀಡಾಚಟುವಟಿಕೆಗಳ ಮೂಲಕವೂ ಮಾನವತೆಯ ಕಂಪು ಪಸರಿಸಲು ಯತ್ನಿಸಿದ ಮಹಾಸಂತ.

‘ಕ್ರೀಡಾ ಚಟುವಟಿಕೆಗಳು ಜನಮನ ಗೆಲ್ಲುವಲ್ಲಿ ಸರ್ಕಾರಕ್ಕಿಂತಲೂ ಹೆಚ್ಚು ಶಕ್ತಿಶಾಲಿ. ಈ ಶಕ್ತಿಯನ್ನು ಬಳಸಿಕೊಂಡು ಮಾನವತೆಯ ಅಡಿಪಾಯದ ಮೇಲೆ ಹೊಸ ಸಮಾಜ    ಕಟ್ಟಲು ಸಾಧ್ಯ               –ನೆಲ್ಸನ್‌ ಮಂಡೇಲಾ

ಪ್ರತಿಕ್ರಿಯಿಸಿ (+)