ಶುಕ್ರವಾರ, ಮೇ 27, 2022
21 °C
ರಾಷ್ಟ್ರೀಯ ಕ್ರೀಡಾಭಿವೃದ್ಧಿ ಮಸೂದೆ -2013

ಕ್ರೀಡಾರಂಗದಲ್ಲಿ ನೈತಿಕ ಮೌಲ್ಯಗಳಿಗೆ ಆದ್ಯತೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಕ್ರೀಡಾಭಿವೃದ್ಧಿಗೆ ಸಂಬಂಧಿಸಿದ ಮಸೂದೆಯ ಕರಡು ಬಗ್ಗೆ ಇದೀಗ ದೇಶಾದ್ಯಂತ ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆ ನಡೆದಿದೆ.ಲೂಸಾನ್‌ನಲ್ಲಿ ಮೇ 15ರಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಪ್ರತಿನಿಧಿಗಳು ಮತ್ತು ಭಾರತದ ಕ್ರೀಡಾ ಸಚಿವರನ್ನೂ ಒಳಗೊಂಡ ನಿಯೋಗದ ನಡುವೆ ನಡೆದ ಮಾತುಕತೆಗೆ ಅನುಸಾರವಾಗಿ ಈ ಪರಿಷ್ಕೃತ ಕರಡಿನ ಪ್ರತಿಯನ್ನು ಐಒಸಿಗೆ ಕಳುಹಿಸಲಾಗಿದೆ. ಐಒಸಿ ಕೂಡಾ ಈ ಕರಡನ್ನು ಪರಿಶೀಲಿಸಿ ಸದ್ಯದಲ್ಲೇ ತನ್ನ ಅಭಿಪ್ರಾಯ ನೀಡಲಿದೆ.ಭಾರತದ ಕ್ರೀಡಾ ಇಲಾಖೆಯೂ ಈ ಕರಡುನಲ್ಲಿರುವ ಶಿಫಾರಸುಗಳ ಬಗ್ಗೆ ಜನಾಭಿಪ್ರಾಯ ಬಯಸಿದೆ.ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿಯು ಈ ಪರಿಷ್ಕೃತ ಕರಡನ್ನು ರೂಪಿಸಿದೆ.  ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ, ಭಾರತ ಹಾಕಿ ತಂಡದ ಮಾಜಿ ನಾಯಕ ವೀರೆನ್ ರಸ್ಕಿನಾ ಸೇರಿದಂತೆ ಕ್ರೀಡಾ ರಂಗದ ಅನೇಕ ಮಂದಿ ಅನುಭವಿಗಳು, ತಜ್ಞರು ಈ ಕರಡು ರೂಪಿಸಲು ಶ್ರಮಿಸಿದ್ದಾರೆ. ಈ ಕರಡನ್ನು ಜುಲೈ 10ರಂದು ಮುಕುಲ್ ಮುದ್ಗಲ್ ಅವರು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಸಲ್ಲಿಸಿದ್ದಾರೆ.ಈ ಕರಡುವಿನಲ್ಲಿರುವ ಕೆಲವು ಶಿಫಾರಸುಗಳ ಮುಖ್ಯಾಂಶಗಳನ್ನು ಆಯ್ದು ಇಲ್ಲಿ ನೀಡಲಾಗಿದೆ.ಮದ್ದು ಸೇವನೆಗೆ ತಡೆ:

ದೇಶದಲ್ಲಿ ಉದ್ದೀಪನಾ ಮದ್ದು ಸೇವನೆ ತಡೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕವು ಅತ್ಯುಚ್ಛ ಸಂಸ್ಥೆಯಾಗಿದೆ. ಆಗಿಂದಾಗ್ಗೆ ಇದು ಪರಿಷ್ಕರಿಸುತ್ತಿರುವ ನಿಯಮಗಳನ್ನು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮತ್ತು ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನುಸರಿಸಬೇಕು.ಈ ಘಟಕವು ಪರಿಷ್ಕರಿಸುವ ನಿಯಮಗಳು ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಗೊಳ್ಳಬೇಕು. ಇದು ತನ್ನ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಖರ್ಚುವೆಚ್ಚ ಭರಿಸಲು ಕೇಂದ್ರ ಸರ್ಕಾರವೇ ಧನ ಸಹಾಯ ನೀಡಬೇಕು.ಈ ಘಟಕವು ತಾನು ಪರಿಷ್ಕರಿಸುವ ನಿಯಮಗಳ ಬಗ್ಗೆ ಸರ್ಕಾರದ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು.ನೀತಿ ಆಯೋಗ:

ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೀತಿ ಸಂಹಿತೆ ಮತ್ತು ಭಾರತದ ಸಂವಿಧಾನದೊಳಗಿನ ಕೆಲವು ಕಾನೂನು ಮತ್ತು ನಿಯಮಗಳನ್ನು ಆಯ್ದು ಕ್ರೀಡಾ ನೀತಿ ಸಂಹಿತೆಯೊಂದನ್ನು ರಚಿಸಬೇಕು.ನೀತಿ ಆಯೋಗದಲ್ಲಿ 9 ಮಂದಿ ಸದಸ್ಯರು ಇರಬೇಕು. ಇವರಲ್ಲಿ ಮೂವರು ನ್ಯಾಯಾಂಗಕ್ಕೆ ಸೇರಿದವರಾಗಿರಬೇಕು. ಭಾರತ ಒಲಿಂಪಿಕ್ ಸಮಿತಿಯು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ಅಥವಾ ಅವರು ಸೂಚಿಸುವ ನ್ಯಾಯಮೂರ್ತಿಯವರೊಂದಿಗೆ ಚರ್ಚಿಸಿ ಈ ನೇಮಕ ಮಾಡಬೇಕು.ದೇಶದ ಮೂವರು ಪ್ರಸಿದ್ಧ ಅಥ್ಲಿಟ್‌ಗಳು ಈ ಸಮಿತಿಯಲ್ಲಿರಬೇಕು. ಇತರ ಮೂವರನ್ನು ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರೇ ನೇಮಕ ಮಾಡಬೇಕು. ಈ ಮೂವರು ಒಲಿಂಪಿಕ್ ಸಮಿತಿ ಅಥವಾ ಯಾವುದೇ ಕ್ರೀಡಾ ಫೆಡರೇಷನ್‌ನ ಕಾರ್ಯಕಾರಿ ಸಮಿತಿಯಲ್ಲಿರಬಾರದು.ಈ ಸಮಿತಿಯು ತಲಾ ಮೂವರು ಸದಸ್ಯರ ಮೂರು ಪೀಠಗಳನ್ನು ಹೊಂದಿರಬೇಕು. ಈ ಸದಸ್ಯರ ಅವಧಿಯು 4 ವರ್ಷಗಳಾಗಿರಬೇಕು. ಯಾವುದೇ ಸದಸ್ಯರು ಒಂದು ಅವಧಿಗಿಂತ ಹೆಚ್ಚು ವರ್ಷ ಅಧಿಕಾರದಲ್ಲಿರಬಾರದು. ಈ ಸದಸ್ಯರು ತಮ್ಮ ಅವಧಿ ಮುಗಿದ ಮೇಲೆ ಒಲಿಂಪಿಕ್ ಸಮಿತಿ ಅಥವಾ ಯಾವುದೇ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್‌ನ ಯಾವುದೇ ಹುದ್ದೆಯನ್ನು ಪಡೆಯುವಂತಿಲ್ಲ. ನೀತಿ ಆಯೋಗದ ಯಾವುದೇ ಸದಸ್ಯನನ್ನು ಕ್ರೀಡಾ ಮೇಲ್ಮನವಿ ಟ್ರಿಬ್ಯುನಲ್‌ನ ಒಪ್ಪಿಗೆ ಇಲ್ಲದೆ ರಾಷ್ಟ್ರೀಯ ಒಲಿಂಪಿಕ್ ಸಮಿತಿಯೇ ಏಕಪಕ್ಷೀಯವಾಗಿ ತೆಗೆಯುವಂತಿಲ್ಲ.ಯಾವುದೇ ಪ್ರಕರಣದಲ್ಲಿ ನೀತಿ ಆಯೋಗದ ತೀರ್ಪು ಸರಿ ಇಲ್ಲ ಎಂದು ಕಂಡು ಬಂದರೆ ಸಂಬಂಧಪಟ್ಟವರು ಕ್ರೀಡಾ ಮೇಲ್ಮನವಿ ಟ್ರಿಬ್ಯುನಲ್‌ಗೆ ಮನವಿ ಸಲ್ಲಿಸಬಹುದು.ಜನ್ಮದಿನ ಪ್ರಮಾಣ:

ಜನ್ಮದಿನ ಪ್ರಮಾಣ ಪತ್ರ ಒದಗಿಸುವುದಕ್ಕೆ ಸಂಬಂಧಿಸಿದಂತೆ ಕ್ರೀಡಾಪಟು ಅಥವಾ ಆತನ ಪೋಷಕರು, ಕೋಚ್ ಮುಂತಾದವರು ಹುಸಿ ದಾಖಲೆಪತ್ರಗಳನ್ನು ನೀಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು.

ಇಂತಹ ಪ್ರಕರಣಗಳನ್ನು ಭಾರತ ಕ್ರೀಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ತಡೆಯುವುದು ಸಂಬಂಧಪಟ್ಟ ಕ್ರೀಡೆಯ ರಾಷ್ಟ್ರೀಯ ಫೆಡರೇಷನ್‌ಗಳ ಜವಾಬ್ದಾರಿಯಾಗಿರಬೇಕು.ದೌರ್ಜನ್ಯ ತಡೆಗೆ ಆದ್ಯತೆ:

ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಂದು ಕ್ರೀಡೆಯ ರಾಷ್ಟ್ರೀಯ ಫೆಡರೇಷನ್, ಒಲಿಂಪಿಕ್ ಸಂಸ್ಥೆ, ಭಾರತ ಕ್ರೀಡಾ ಪ್ರಾಧಿಕಾರ ಸೇರಿದಂತೆ ದೇಶದ ಎಲ್ಲಾ ಕ್ರೀಡಾ ಸಂಸ್ಥೆ, ಸಂಘಟನೆಗಳ ಜವಾಬ್ದಾರಿಯಾಗಿದೆ.ಈ ಎಲ್ಲಾ ಸಂಸ್ಥೆಗಳು ಕ್ರೀಡಾಪಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳು ಮತ್ತು ಅನುಸರಿಸುತ್ತಿರುವ ಮಾರ್ಗದರ್ಶಿ ಸೂತ್ರಗಳ ಸಂಪೂರ್ಣ ವಿವರಗಳನ್ನು ಪ್ರಕಟಿಸಬೇಕು.ಕೋಚ್ ಮತ್ತು ಕ್ರೀಡಾಪಟುಗಳ ನಡುವೆ ಆರೋಗ್ಯಕರ ಸಂಬಂಧಕ್ಕೆ ಪೂರಕವಾದಂತಹ ವ್ಯವಸ್ಥೆಯೊಂದು ರೂಪುಗೊಳ್ಳಬೇಕು.

ಮಹಿಳಾ ತಂಡಗಳಿಗೆ ತರಬೇತಿ ನೀಡುವವರು ಮತ್ತು ಸಹಾಯಕ ಸಿಬ್ಬಂದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರನ್ನೇ ನೇಮಿಸಬೇಕು.ಪ್ರತಿಕೂಲ ಪರಿಸ್ಥಿತಿಯಿಂದ ತೊಂದರೆಗೆ ಒಳಗಾಗಿರುವ ಮಹಿಳಾ ಕ್ರೀಡಾಪಟುಗಳಿಗೆ ಸಮರ್ಪಕ ಕಾನೂನು ನೆರವು ಸಿಗಬೇಕು.

ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ದೂರು ನೀಡುವವರಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಸಮಿತಿಯ ನೇಮಕ. ಇಂತಹ ತನಿಖೆಯ ವೇಳೆ ಸಂಬಂಧಪಟ್ಟ ಸಂಸ್ಥೆಯೊಳಗಿನ ಯಾರೂ ಒತ್ತಡ ಹೇರದಂತೆ ಎಚ್ಚರ ವಹಿಸುವುದು.ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಇರುವ ಇತರ ಕಾನೂನುಗಳನ್ನು  ಬಳಸಿಕೊಂಡು  ಕ್ರೀಡಾರಂಗದಲ್ಲಿ ಲೈಂಗಿಕ ದೌರ್ಜನ್ಯ ನಡೆಯದಂತಹ ಭದ್ರತೆಯ ವಾತಾವರಣ ಮೂಡಿಸಬೇಕು. ಇಂತಹ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಪೂರಕವಾಗುವಂತಹ ಕಾನೂನು ರೂಪಿಸಬೇಕು.

(ಮುಂದುವರಿಯುವುದು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.